Budget 2021 | ದೇಶದ ಮೊದಲ ಬಜೆಟ್​ಗಿದ್ದ ಆದಾಯ ನಿರೀಕ್ಷೆ ₹ 171 ಕೋಟಿ

1947ರಲ್ಲಿ ರಚನೆಯಾದ ಸ್ವತಂತ್ರ ಭಾರತದ ಮೊದಲ ಸಂಪುಟಕ್ಕೆ ಆರ್.ಕೆ.ಷಣ್ಮುಗಂ ಚೆಟ್ಟಿ ಅವರನ್ನು ಸೇರಿಸಿಕೊಳ್ಳುವುದು ಪ್ರಧಾನಿ ಜವಹರಲಾಲ್ ನೆಹರೂರಿಗೆ ಸುತಾರಾಂ ಇಷ್ಟವಿರಲಿಲ್ಲ. ಮಹಾತ್ಮಾ ಗಾಂಧೀಜಿಯವರ ಒತ್ತಾಸೆಯ ಮೇರೆಗೆ ಷಣ್ಮುಗಂ ಚೆಟ್ಟಿ ಹಣಕಾಸು ಸಚಿವರಾದರು ಎನ್ನುತ್ತದೆ ಇತಿಹಾಸ.

  • ಗುರುಗಣೇಶ ಭಟ್ ಡಬ್ಗುಳಿ
  • Published On - 20:05 PM, 28 Jan 2021
Budget 2021 | ದೇಶದ ಮೊದಲ ಬಜೆಟ್​ಗಿದ್ದ ಆದಾಯ ನಿರೀಕ್ಷೆ ₹ 171 ಕೋಟಿ
ಸ್ವತಂತ್ರ ಭಾರತದ ಮೊದಲ ಬಜೆಟ್ ಮಂಡಿಸಿದ ಆರ್​.ಕೆ.ಷಣ್ಮುಗಂ ಚೆಟ್ಟಿ

1947ರಲ್ಲಿ ಸ್ವಾತಂತ್ರ್ಯ ಗಳಿಸಿದ ಭಾರತ, ಅದೇ ವರ್ಷ ತನ್ನ ಸ್ವತಂತ್ರ ಬಜೆಟ್ ‌ ಮಂಡಿಸಿತು. ಮೊದಲ  ಪ್ರಧಾನಿ ಜವಹರಲಾಲ್ ನೆಹರೂರವರನ್ನು ನೆನಪಿಸಿಕೊಳ್ಳುವಂತೆಯೇ ನೆನೆಯಬೇಕಾದ ಇನ್ನೋರ್ವ ಮಹನೀಯರಿದ್ದಾರೆ. ಅವರೇ ಮೊದಲ ಸ್ವತಂತ್ರ ಭಾರತದ ಮೊದಲ ಹಣಕಾಸು ಸಚಿವರಾಗಿ ಮೊದಲ ಬಜೆಟ್ ಮಂಡಿಸಿದ ಆರ್.ಕೆ.ಷಣ್ಮುಗಂ ಚೆಟ್ಟಿ.

ಭಾರತ ಆಗಷ್ಟೇ ಸ್ವತಂತ್ರ ಪಡೆದ ಹಸುಗೂಸು. ಎದುರಿಗಿದ್ದದ್ದು ಸಾಲುಸಾಲು ಸವಾಲು. ಯಾವುದನ್ನು ಮೊದಲು ಯಾವುದನ್ನು ನಂತರ ಸುಧಾರಿಸಬೇಕು ಎಂಬುದೇ ಆಗಿನ ಬಹುದೊಡ್ಡ ಸವಾಲು. ಎಷ್ಟು ಎಚ್ಚರವಿದ್ದರೂ ಕಡಿಮೆಯೇ ಎಂಬ ಸ್ಥಿತಿಯಲ್ಲಿ ಮೊದಲ ಬಜೆಟ್ ಮಂಡಿಸಿದರು ತಮಿಳುನಾಡಿನ ಕೊಯಮತ್ತೂರಿನ ರಾಮಸಾಮಿ ಚೆಟ್ಟಿ ಕಂದಸ್ವಾಮಿ ಷಣ್ಮುಗಂ ಚೆಟ್ಟಿ. ಅವರು 1935ರಿಂದ 1941ರವರೆಗೆ ಕೊಚ್ಚಿ ಸಂಸ್ಥಾನದ ದಿವಾನರಾಗಿಯೂ ಸೇವೆ ಸಲ್ಲಿಸಿದ್ದರು ಎಂಬುದು ವಿಶೇಷ.

ಆರ್ಥಿಕವಾಗಿ ಸಬಲ ಕುಟುಂಬದಲ್ಲಿ ಜನಿಸಿದ್ದ ಆರ್.ಕೆ.ಷಣ್ಮುಗಂ ಚೆಟ್ಟಿಯವರು ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿಂದ ಅರ್ಥಶಾಸ್ತ್ರ ಮತ್ತು ಕಾನೂನಿಲ್ಲಿ ಪದವಿ ಪಡೆದರು. ಆ ಶಿಕ್ಷಣದ ನಂತರ ತಕ್ಷಣ ರಾಜಕೀಯ ರಂಗ ಸೇರಿದ ಅವರು ಭಾರತೀಯ ಕಾಂಗ್ರೆಸ್ ಸೇರಿ ಕೆಲಕಾಲದ ನಂತರ ಅಂದಿನ ಮದ್ರಾಸ್​ನ ಜಸ್ಟೀಸ್ ಪಾರ್ಟಿ ಸೇರಿದರು. ಕೊಯಮತ್ತೂರು ಮುನ್ಸಿಪಲ್, ಮದ್ರಾಸ್ ಶಾಸನಸಭೆಗೆ ಸಹ ಆಯ್ಕೆಯಾದರು. ಅವರ ಶೈಕ್ಷಣಿಕ ಸಾಮರ್ಥ್ಯ, ಬುದ್ಧಿಮತ್ತೆಯನ್ನು ಅರಿತು ಬ್ರಿಟಿಷ್ ಆಡಳಿತ ಅವರನ್ನು ಹಲವು ಸಮಿತಿಗೆ ಸದಸ್ಯರನ್ನಾಗಿ ನೇಮಿಸಿತು.

ಮೊದಲ ಬಜೆಟ್ ಹೇಗಿತ್ತು?
ಸ್ವಾತಂತ್ರ್ಯಾನಂತರದ ಮೊದಲ ಬಜೆಟ್ ಬಗ್ಗೆ ಹೇಳಲೇಬೇಕು. ಮೊದಲ ಬಜೆಟ್​ನಲ್ಲಿ ಯಾವುದೇ ತೆರಿಗೆಯನ್ನು ವಿಧಿಸಿರಲಿಲ್ಲ. ₹ 171.15 ಕೋಟಿ ಆದಾಯ, ₹ 24.59 ಕೋಟಿ ಹಣಕಾಸು ಕೊರತೆಯನ್ನು ಘೋಷಿಸಲಾಗಿತ್ತು. ಒಟ್ಟು ₹ 92.74 ಕೋಟಿಯನ್ನು ರಕ್ಷಣಾ ಕ್ಷೇತ್ರಕ್ಕೆ ಮೀಸಲಿಡಲಾಗಿತ್ತು. ಮೊದಲ ಬಜೆಟ್ ಭಾಷಣ ಮಾಡಿದ ಷಣ್ಮಗಂ, ಸ್ವತಂತ್ರ ದೇಶದ ಆಯವ್ಯಯ ಮಮಡಿಸುತ್ತಿರುವ ನಾನು ಕೃತಜ್ಞನಾಗಿದ್ದೇನೆ. ಜತೆಗೆ ಇಡೀ ದೇಶಕ್ಕೆ ಉತ್ತರದಾಯಿಯಾಗಿರುತ್ತೇನೆ ಎಂದಿದ್ದರು.

ಚೆಟ್ಟಿ ಹಣಕಾಸು ಸಚಿವರಾಗುವುದು ನೆಹರೂಗೆ ಇಷ್ಟವಿರಲಿಲ್ಲ!
1947ರಲ್ಲಿ ರಚನೆಯಾದ ಸ್ವತಂತ್ರ ಭಾರತದ ಮೊದಲ ಸಂಪುಟಕ್ಕೆ ಷಣ್ಮುಗಂ ಚೆಟ್ಟಿಯವರನ್ನು ಸೇರಿಸಿಕೊಳ್ಳುವುದು ಪ್ರಧಾನಿ ಜವಹರಲಾಲ್ ನೆಹರೂರಿಗೆ ಸುತಾರಾಂ ಇಷ್ಟವಿರಲಿಲ್ಲ ಎನ್ನುತ್ತದೆ ಇತಿಹಾಸ. ಮಹಾತ್ಮಾ ಗಾಂಧೀಜಿಯವರ ಒತ್ತಾಸೆಯ ಮೇರೆಗೆ ಷಣ್ಮುಗಂ ಚೆಟ್ಟಿಯವರನ್ನು ಹಣಕಾಸು ಸಚಿವರನ್ನಾಗಿ ನೆಹರೂ ನೇಮಿಸಿದರಂತೆ.‌ ನೆಹರೂ ಚಿಂತನೆಗಳಿಗೂ ಚೆಟ್ಟಿಯವರ ಚಿಂತನೆಗಳಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಚೆಟ್ಟಿಯವರ ಚಿಂತನೆಗಳು ಬ್ರಿಟಿಷರ ಚಿಂತೆಗಳನ್ನು ಹೋಲುತ್ತಿದ್ದವು ಎಂಬ ಆರೋಪಗಳೂ ಕೇಳಿಬಂದಿದ್ದವು. ಸಂವಿಧಾನ ರಚನಾ ಸಮಿತಿಯಿಂದ ಅವರನ್ನು ಹೊರಗಿಡಲೂ ಇದೇ ಕಾರಣ ಎಂದು ಹೇಳಲಾಗುತ್ತದೆ. ತಮಿಳು ಇಸಾಯಿ ಚಳುವಳಿಯಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದ ಅವರು, ಪೆರಿಯಾರ್ ಚಿಂತನೆಗಳನ್ನು ಪ್ರತಿಪಾದಿಸುತ್ತಿದ್ದರು. ಕಾಂಗ್ರೆಸ್ಸೇತರ ಪಕ್ಷದ ಪ್ರತಿನಿಧಿಯಾಗಿ ಭಾರತದ ಮೊದಲ ಸರ್ಕಾರದಲ್ಲಿ ವಿತ್ತ ಸಚಿವರಾಗಿ ಸೇವೆ ಸಲ್ಲಿಸಿದರು.

Budget 2021 ನಿರೀಕ್ಷೆ | ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಆಸರೆ ಸಿಗಬೇಕಿದೆ