ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಿಂದ ಸರ್ಕಾರಕ್ಕೆ ಸಿಗುವ ಜಿಎಸ್ಟಿ ಮೊತ್ತ 400 ಕೋಟಿ ರೂ?
GST collection from Ayodhya Ram temple construction: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದಿಂದ ಸರ್ಕಾರಕ್ಕೆ ಸಿಗುವ ತೆರಿಗೆ ಮೊತ್ತ ಅಂದಾಜು 400 ಕೋಟಿ ರೂ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. 70 ಎಕರೆ ವಿಶಾಲ ಪ್ರದೇಶದಲ್ಲಿ ರಾಮಮಂದಿರ ಸೇರಿ ಒಟ್ಟು 18 ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಇವುಗಳ ಒಟ್ಟು ನಿರ್ಮಾಣ ವೆಚ್ಚ 1,800 ಕೋಟಿ ರೂ ಎಂಬ ಅಂದಾಜಿದೆ.
ಭೋಪಾಲ್, ಸೆಪ್ಟೆಂಬರ್ 10: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ ರಾಮ ಮಂದಿರದಿಂದ 400 ಕೋಟಿ ರೂನಷ್ಟು ತೆರಿಗೆ ಸಂಗ್ರಹ ಆಗಬಹುದು ಎಂದು ಅಂದಾಜಿಸಲಾಗಿದೆ. ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಈ ಮಾಹಿತಿ ನೀಡಿದ್ದಾರೆ. ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ದೇವಸ್ಥಾನದ ಸಂಕೀರ್ಣ ಪೂರ್ಣವಾಗಿ ಸಿದ್ಧವಾದ ಬಳಿಕ ತೆರಿಗೆ ಮೊತ್ತ ಎಷ್ಟೆಂಬುದು ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ಈ ಮಂದಿರ ಸಮುಚ್ಚಯದಲ್ಲಿ ಒಟ್ಟು 18 ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಒಟ್ಟಾರೆ ವೆಚ್ಚ 1,800 ಕೋಟಿ ರೂ ಆಗಬಹುದು ಎಂಬ ಅಂದಾಜಿದೆ.
‘ರಾಮ ಮಂದಿರ ಕಟ್ಟಡ ನಿರ್ಮಾಣದಿಂದ ಸರ್ಕಾರಕ್ಕೆ 400 ಕೋಟಿ ರೂ ಜಿಎಸ್ಟಿ ಆದಾಯ ಸಿಗಬಹುದು ಎಂಬುದು ನನ್ನ ಅಂದಾಜು. 70 ಎಕರೆ ಜಾಗದಲ್ಲಿರುವ ಕಾಂಪ್ಲೆಕ್ಸ್ನಲ್ಲಿ ಒಟ್ಟು 18 ದೇವಸ್ಥಾನಗಳನ್ನು ಕಟ್ಟಲಾಗುತ್ತಿದೆ. ಇದರಲ್ಲಿ ಮಹರ್ಷಿ ವಾಲ್ಮೀಕಿ, ಶಬರಿ, ತುಳಸೀದಾಸರ ದೇವಸ್ಥಾನಗಳೂ ಇರುತ್ತವೆ. ನೂರಕ್ಕೆ ನೂರು ತೆರಿಗೆ ಕಟ್ಟುತ್ತೇವೆ. ಒಂದು ರುಪಾಯಿಯೂ ಚೌಕಾಸಿ ಮಾಡೋದಿಲ್ಲ,’ ಎಂದು ಚಂಪತ್ ರಾಯ್ ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಚಂದ್ರನಲ್ಲಿ ಪರಮಾಣು ಶಕ್ತಿ ಸ್ಥಾವರ ನಿರ್ಮಿಸಲು ರಷ್ಯಾ, ಚೀನಾ ಕೈಜೋಡಿಸಲಿರುವ ಭಾರತ
ಇನ್ನೂ ಪೂರ್ಣವಾಗಿ ನಿರ್ಮಾಣವಾಗದೇ ಹೋದರೂ 2024ರ ಜನವರಿ 22ರಂದು ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರೇ ಖುದ್ದಾಗಿ ಪ್ರಾಣ ಪ್ರತಿಷ್ಠಾಪನೆ ಮಾಡಿದ್ದರು.
ಬಾಬ್ರಿ ಮಸೀದಿ ಇದ್ದ ಜಾಗ ರಾಮನ ಜನ್ಮಸ್ಥಾನ ಎನ್ನುವ ಹಿಂದೂಗಳ ನಂಬಿಕೆಯನ್ನು ಸುಪ್ರೀಂಕೋರ್ಟ್ ನ್ಯಾಯಪೀಠ ಪುರಸ್ಕರಿಸಿ, ಆ ಜಾಗದಲ್ಲ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ನೂರಾರು ವರ್ಷಗಳಿಂದ ಹಿಂದೂ ಮತ್ತು ಮುಸ್ಲಿಮ್ ನಡುವೆ ಇದ್ದ ವ್ಯಾಜ್ಯಕ್ಕೆ ಕೋರ್ಟ್ ತೆರೆ ಎಳೆಯಿತು. ಅದಕ್ಕೆ ಮುನ್ನ ಹಲವು ವರ್ಷಗಳಿಂದ ರಾಮಜನ್ಮಭೂಮಿ ನಿರ್ಮಾಣಕ್ಕೆ ಸಾರ್ವಜನಿಕವಾಗಿ ಚಂದಾ ಎತ್ತಿ ಹಣ ಸಂಗ್ರಹಿಸಲಾಗಿತ್ತು. ಯಾವುದೇ ಸರ್ಕಾರದ ಅನುದಾನ ಇಲ್ಲದೇ ರಾಮ ಮಂದಿರ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಂದ ಕೆಲ ಕಿಮೀ ದೂರದಲ್ಲಿ ಮಸೀದಿ ನಿರ್ಮಾಣ ಆಗಲಿದೆ. ಎರಡು ಲಕ್ಷ ಭಕ್ತರು ಒಮ್ಮೆಲೇ ಹೋಗಬಹುದಾದಷ್ಟು ವಿಶಾಲ ಸ್ಥಳವನ್ನು ರಾಮ ಮಂದಿರ ಹೊಂದಿರುವುದು ವಿಶೇಷ.
‘ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ದೇವಸ್ಥಾನ ಕಟ್ಟುವ ಕಾರ್ಯದಲ್ಲಿ ಅದೆಷ್ಟು ಜನರು ಸಂಕಷ್ಟ ಅನುಭವಿಸಿದರೋ ಗೊತ್ತಿಲ್ಲ. ಇದೊಂದು ಯಾಗವೇ ಆಗಿದೆ. ಸಾವಿರ ವರ್ಷದ ಸ್ವಾತಂತ್ರ್ಯ ಹೋರಾಟಕ್ಕೆ ಇದು ಕಡಿಮೆ ಏನಿಲ್ಲ,’ ಎಂದು ಚಂಪತ್ ರಾಯ್ ಹೇಳಿದ್ದಾರೆ.
ಇದನ್ನೂ ಓದಿ: ಜಿಎಸ್ಟಿ ಕೌನ್ಸಿಲ್ 54ನೇ ಸಭೆ: ತೆರಿಗೆ ಹೆಚ್ಚಳ, ಇಳಿಕೆ, ವಿನಾಯಿತಿ ಸಿಕ್ಕಿದ್ದು ಯಾವ್ಯಾವಕ್ಕೆ? ಇಲ್ಲಿದೆ ಪಟ್ಟಿ
ಅಯೋಧ್ಯೆಯ ಮಂದಿರ ಸಂಕೀರ್ಣದಲ್ಲಿ ಶಿವನ ದೇವಸ್ಥಾನದ ನಿರ್ಮಾಣಕ್ಕೆ ಶಿವಲಿಂಗ ಬೇಕಾಗಿದೆ. ಈ ಲಿಂಗಕ್ಕಾಗಿ ಚಂಪತ್ ರಾಯ್ ಅವರು ಮಧ್ಯಪ್ರದೇಶದ ಖರ್ಗೋನೆ ಜಿಲ್ಲೆಯ ಬಕವಾ ಗ್ರಾಮಕ್ಕೆ ಹೋಗಿದ್ದರು. ಈ ಗ್ರಾಮವು ಶಿವಲಿಂಗ ನಿರ್ಮಾಣಕ್ಕೆ ಬಹಳ ಹೆಸರುವಾಸಿಯಾಗಿದೆ. ದೇಶ ವಿದೇಶಗಳಲ್ಲಿನ ದೇವಸ್ಥಾನಗಳಿಗೆ ಪ್ರತಿಷ್ಠಾಪಿಸಲು ಇಲ್ಲಿಂದಲೇ ಶಿವಲಿಂಗ ಕೊಳ್ಳಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ