G20 Meeting: ಫೆ. 22-25, ಬೆಂಗಳೂರಿನಲ್ಲಿ 2 ಪ್ರಮುಖ ಜಿ20 ಸಭೆಗಳು
Bangalore to Host 2 Important G20 Meetings: ಇದೇ ಫೆಬ್ರುವರಿ 22ರಿಂದ 25ರವರೆಗೆ ಬೆಂಗಳೂರಿನಲ್ಲಿ ಎರಡು ಪ್ರಮುಖ ಜಿ20 ಸಭೆಗಳು ನಡೆಯಲಿವೆ. ಮೊದಲ ಜಿ20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರುಗಳ ಸಭೆ (ಎಫ್ಎಂಸಿಬಿಜಿ) ನಡೆಯಲಿದೆ. ಜೊತೆಗೆ, ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟಿ (ಎಫ್ಸಿಬಿಡಿ) ಸಭೆ ಕೂಡ ನಡೆಯಲಿದೆ.
ನವದೆಹಲಿ: ಇದೇ ಫೆಬ್ರುವರಿ 22ರಿಂದ 25ರವರೆಗೆ ಬೆಂಗಳೂರಿನಲ್ಲಿ ಎರಡು ಪ್ರಮುಖ ಜಿ20 ಸಭೆಗಳು (G20 Meet) ನಡೆಯಲಿವೆ. ಮೊದಲ ಜಿ20 ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರುಗಳ ಸಭೆ (G20 FMCBG) ನಡೆಯಲಿದೆ. ಜೊತೆಗೆ, ಜಿ20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟಿ (G20 FCBD) ಸಭೆ ಕೂಡ ನಡೆಯಲಿದೆ. ಇವೆರಡೂ ಕೂಡ ಬೆಂಗಳೂರಿನಲ್ಲೇ ನಡೆಯಲಿದೆ. ಕೇಂದ್ರ ಹಣಕಾಸು ಸಚಿವಾಲಯ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಮೊದಲಿಗೆ ಫೆಬ್ರುವರಿ 22ರಂದು ಜಿ20 ಎಫ್ಸಿಬಿಡಿ ಸಭೆ ಆಗಲಿದ್ದು, ಆರ್ಬಿಐನ ಡೆಪ್ಯೂಟಿ ಗವರ್ನರ್ ಡಾ. ಮೈಕೇಲ್ ಡಿ ಪಾತ್ರ ಮತ್ತು ಕೇಂದ್ರ ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ ಅಜಯ್ ಸೇಠ್ ಜಂಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಜಿ20 ದೇಶಗಳ ಹಣಕಾಸು ಇಲಾಖೆ ಉನ್ನತ ಸ್ತರದ ಅಧಿಕಾರಿಗಳು ಮತ್ತು ಸೆಂಟ್ರಲ್ ಬ್ಯಾಂಕು ಡೆಪ್ಯೂಟಿ ಗವರ್ನರುಗಳ ಸಭೆ ಆಗಲಿದೆ. ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ, ಯುವಜನ ವ್ಯವಹಾರ ಹಾಗು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಸಭೆಯ ಉದ್ಘಾಟನೆ ಮಾಡಲಿದ್ದಾರೆ.
ಇದಕ್ಕಿಂತ ಪ್ರಮುಖವಾದ ಜಿ20 ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರುಗಳ ಸಭೆ ಫೆಬ್ರುವರಿ 24 ಮತ್ತು 25ರಂದು ನಡೆಯಲಿದೆ. ಇದು ಜಿ20 ಗುಂಪಿನ ಅಧ್ಯಕ್ಷತೆ ಭಾರತಕ್ಕೆ ಸಿಕ್ಕ ಬಳಿಕ ನಡೆಯುತ್ತಿರುವ ಮೊದಲ ಸಭೆಯಾಗಿದೆ. ಈ 20 ದೇಶಗಳ ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರುಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಇದರ ಜೊತೆಗೆ ಆಹ್ವಾನಿತ ಸದಸ್ಯರು, ಹಾಗೂ ಕೆಲ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಭೆಗೆ ಬರಲಿದ್ದಾರೆ. ಒಟ್ಟು 72 ಪ್ರತಿನಿಧಿಗಳು ಬೆಂಗಳೂರಿನಲ್ಲಿ ನಡೆಯಲಿರುವ ಜಿ20 ಎಫ್ಎಂಸಿಬಿಜಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಬಿಐ ಗವರ್ನರ್ ಡಾ. ಶಕ್ತಿಕಾಂತ ದಾಸ್ ಜಂಟಿ–ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.
ಜಾಗತಿಕ ಆರ್ಥಿಕ ವಿಚಾರಗಳನ್ನು ಈ ಸಭೆಯಲ್ಲಿ ಪರಾಮರ್ಶಿಸಲಾಗುತ್ತದೆ. ಫೆಬ್ರುವರಿ 24-25, ಈ ಎರಡು ದಿನಗಳ ಕಾಲ ಮೂರು ಸೆಷನ್ನಲ್ಲಿ ಸಭೆ ಆಗಲಿದ್ದು, ನಗರಗಳನ್ನು ಸುಸ್ಥಿರವಾಗಿ ಬೆಳೆಸುವ ನಿಟ್ಟಿನಲ್ಲಿ ಹಣಕಾಸು ವ್ಯವಸ್ಥೆ ಹೇಗೆ ರೂಪಿಸುವುದು ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸುವ ನಿರೀಕ್ಷೆ ಇದೆ. ಅಂತರರಾಷ್ಟ್ರೀಯ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ನಿಟ್ಟಿನಲ್ಲಿ ಚಿಂತನೆಗಳಾಗಬಹುದು.
ಇದನ್ನೂ ಓದಿ: GST: ಜಿಎಸ್ಟಿ ಪರಿಹಾರದ ಎಲ್ಲಾ 16,982 ಕೋಟಿ ರೂ ಬಾಕಿ ಹಣ ಕೇಂದ್ರದಿಂದಲೇ ಪಾವತಿ
ಇವು ಈ ಸಭೆಯ ಪ್ರಮುಖ ಅಜೆಂಡಾ ಆಗಿದ್ದರೂ, ಅದೇ ಹೊತ್ತಿನಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್, ಅಂತರದೇಶೀಯ ಪಾವತಿಯಲ್ಲಿ ನ್ಯಾಷನಲ್ ಪೇಮೆಂಟ್ ಸಿಸ್ಟಂ ಪಾತ್ರ ಇತ್ಯಾದಿ ವಿಚಾರಗಳ ಬಗ್ಗೆ ಜಿ20 ದೇಶಗಳ ಸಚಿವರು, ಗವರ್ನರುಗಳು ಮತ್ತಿತರ ಪ್ರತಿನಿಧಿಗಳು ವಿವಿಧ ಸ್ತರಗಳಲ್ಲಿ ಚರ್ಚಿಸಲಿದ್ದಾರೆ.
ಜಿ20 ಸಭೆಗೆ ಬರುವ ಪ್ರತಿನಿಧಿಗಳು ಇದೇ ವೇಳೆ ಬೆಂಗಳೂರಿನಲ್ಲಿರುವ ಐಐಎಸ್ಸಿಗೆ ಹೋಗಿ ಅಲ್ಲಿನ ತಂತ್ರಜ್ಞಾನ ಅವಿಷ್ಕಾರಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಜಿ20 ದೇಶಗಳು ಎದುರಿಸುತ್ತಿರುವ ಸವಾಲುಗಳಿಗೆ ಸಮರ್ಪಕವಾದ ಪರಿಹಾರ ಒದಗಿಸಲು ಕೆಲಸ ಮಾಡುತ್ತಿರುವವರೂ ಈ ಸಂದರ್ಭದಲ್ಲಿ ಬರಲಿದ್ದಾರೆ.
ಜಿ20 ದೇಶಗಳ್ಯಾವುವು?
ವಿಶ್ವದಲ್ಲಿ ವಿವಿಧ ದೇಶಗಳ ವಿವಿಧ ಗುಂಪುಗಳಿವೆ. ಅದರಲ್ಲಿ ಜಿ20ಯೂ ಒಂದು. ಇದರಲ್ಲಿ ಭಾರತವಲ್ಲದೇ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಐರೋಪ್ಯ ಒಕ್ಕೂಟ, ಫ್ರಾನ್ಸ್, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ಸೌತ್ ಆಫ್ರಿಕಾ, ಸೌತ್ ಕೊರಿಯಾ, ಟರ್ಕಿ, ಬ್ರಿಟನ್ ಮತ್ತು ಅಮೆರಿಕ ದೇಶಗಳಿವೆ.
ಇದನ್ನೂ ಓದಿ: Liquor Policy Case: ಮದ್ಯ ನೀತಿ ಹಗರಣ ವಿಚಾರಣೆ ಕುರಿತು ಮನೀಶ್ ಸಿಸೋಡಿಯಾ ಮನವಿಗೆ ಒಪ್ಪಿದ ಸಿಬಿಐ
ಅಂತರರಾಷ್ಟ್ರೀಯ ಆರ್ಥಿಕ ಮತ್ತು ಹಣಕಾಸು ಕ್ಷೇತ್ರದ ಪ್ರಮುಖ ಅಂಶಗಳಲ್ಲಿ ಸಮನ್ವಯತೆ ಸಾಧಿಸುವುದು ಈ ಗುಂಪಿನ ಅಸ್ತಿತ್ವದ ಅಜೆಂಡಾ ಆಗಿದೆ. ವಿಶ್ವದ ಅತಿಪ್ರಬಲ ಆರ್ಥಿಕತೆಯ ದೇಶಗಳು ಮತ್ತು ಉದಯೋನ್ಮುಖ ಆರ್ಥಿಕತೆಯ ದೇಶಗಳು ಈ ಗುಂಪಿನಲ್ಲಿವೆ. ವಿಶ್ವದ ಶೇ. 80ರಷ್ಟು ಜಿಡಿಪಿ ಮತ್ತು ವ್ಯಾಪಾರ ಈ 20 ದೇಶಗಳಲ್ಲಿ ಇದೆ. ಆದ್ದರಿಂದ ಜಿ20 ಗುಂಪು ಜಾಗತಿಕವಾಗಿ ಮಹತ್ವ ಪಡೆದಿದೆ.
ಭಾರತದ ಅಧ್ಯಕ್ಷತೆ
ಕಳೆದ ಬಾರಿಯ ಜಿ20 ಶೃಂಗಸಭೆಯ ಅಧ್ಯಕ್ಷತೆ ಚೀನಾದಲ್ಲಿ ಆಗಿತ್ತು. ಈ ಬಾರಿ ಭಾರತಕ್ಕೆ ಅಧ್ಯಕ್ಷ ಸ್ಥಾನ ಸಿಕ್ಕಿದೆ. 2023 ಸೆಪ್ಟೆಂಬರ್ 9-10ರಂದು ದೆಹಲಿಯಲ್ಲಿ ಶೃಂಗಸಭೆ ನಡೆಯಲಿದೆ. ಅದಕ್ಕೂ ಮುನ್ನ 200ಕ್ಕೂ ಹೆಚ್ಚು ಪೂರ್ವಭಾವಿ ಸಭೆಗಳು ದೇಶಾದ್ಯಂತ ಜರುಗಲಿವೆ. ಅದರ ಭಾಗವಾಗಿಯೇ ಬೆಂಗಳೂರಿನಲ್ಲಿ ಈ ತಿಂಗಳು ಎರಡು ಸಭೆಗಳು ನಡೆಯುತ್ತಿರುವುದು.
Published On - 4:52 pm, Sun, 19 February 23