ಭಾರತದ ಬಾಹ್ಯಾಕಾಶ ಉದ್ಯಮದ ಭವಿಷ್ಯದ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಿದ ಇಸ್ರೋ ಮುಖ್ಯಸ್ಥ ಸೋಮನಾಥ್
Bengaluru Tech Summit 2024: ನವೆಂಬರ್ 19ರಿಂದ ನಡೆಯುತ್ತಿರುವ ಬೆಂಗಳೂರು ಟೆಕ್ ಸಮಿಟ್ 2024 ಕಾರ್ಯಕ್ರಮದಲ್ಲಿ ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಮಾತನಾಡಿದರು. ಭಾರತದ ಬಾಹ್ಯಾಕಾಶ ಉದ್ಯಮದ ಮುಂದಿನ ದಾರಿಗಳೇನು ಎಂಬುದನ್ನು ಅವರು ವಿವರಿಸಿದರು. ಖಾಸಗಿ ವಲಯ ಮತ್ತು ಎಫ್ಡಿಐನ ಪಾತ್ರವು ಭಾರತದ ಬಾಹ್ಯಾಕಾಶ ಉದ್ಯಮಕ್ಕೆ ಎಷ್ಟು ಮಹತ್ವದ್ದು ಎಂಬುದನ್ನು ತಿಳಿಸಿದರು.
ಬೆಂಗಳೂರು, ನವೆಂಬರ್ 20: ಮುಂಬರುವ ದಿನಗಳಲ್ಲಿ ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಪ್ರಯತ್ನ ತೀವ್ರವಾಗಲಿದೆ. ಈಗ ಜಾಗತಿಕ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಭಾರತದ ಪಾಲು ಶೇ. 2ರಷ್ಟಿದೆ. ಮುಂದಿನ ಎರಡು ದಶಕದಲ್ಲಿ ಇದು ಶೇ. 10ಕ್ಕೆ ಏರಿಸುವ ಗುರಿ ಇದೆ ಎಂದು ಇಸ್ರೋ ಛೇರ್ಮನ್ ಎಸ್ ಸೋಮನಾಥ್ ಹೇಳಿದ್ದಾರೆ. ಇಲ್ಲಿ ನಡೆಯುತ್ತಿರುವ 2024ರ ಬೆಂಗಳೂರು ಟೆಕ್ ಸಮಿಟ್ ಕಾರ್ಯಕ್ರಮದ ಒಂದು ಸೆಷನ್ನಲ್ಲಿ ಮಾತನಾಡುತ್ತಿದ್ದ ಸೋಮನಾಥ್, ಮುಂದಿನ ಎರಡು ದಶಕಗಳ ಗುರಿ, ಹಾಗೂ ಆ ಸಾಧನೆಗೆ ತೆಗೆದುಕೊಳ್ಳಲಾಗುವ ಕ್ರಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.
ಗುರಿ ಸಾಧನೆಯ ಹಾದಿಯಲ್ಲಿ ಮುಖ್ಯವಾದ ಮೂರು ಸೆಗ್ಮೆಂಟ್ಗಳು
ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಭಾರತದ ಬಾಹ್ಯಾಕಾಶ ಕ್ಷೇತ್ರ ಬೆಳವಣಿಗೆಯಲ್ಲಿ ಮೂರು ಪ್ರಮುಖ ವಿಭಾಗಗಳನ್ನು ಪ್ರಸ್ತಾಪಿಸಿದ್ದಾರೆ. ಮೊದಲನೆಯದು ಅಪ್ಸ್ಟ್ರೀಮ್, ಎರಡನೆಯದು ಮಿಡ್ಸ್ಟ್ರೀಮ್, ಮತ್ತು ಮೂರನೆಯದು ಡೌನ್ಸ್ಟ್ರೀಮ್.
ಇದನ್ನೂ ಓದಿ: ಕರ್ನಾಟಕದಿಂದ ಹೊಸ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಸ್ ನೀತಿ; ಬೇರೆ ಬೇರೆ ಜಿಲ್ಲೆಗಳಲ್ಲಿ ಟೆಕ್ ವಲಯ ಅಭಿವೃದ್ಧಿಗೆ ಯೋಜನೆ
ಅಪ್ಸ್ಟ್ರೀಮ್ನಲ್ಲಿ ಸೆಟಿಲೈಟ್ಗಳ ತಯಾರಿಕೆ ಮತ್ತು ಉಡಾವಣೆ ಬರುತ್ತದೆ. ಮಿಡ್ಸ್ಟ್ರೀಮ್ನಲ್ಲಿ ಬಾಹ್ಯಾಕಾಶ ಉದ್ಯಮಕ್ಕೆ ಬೇಕಾದ ಸೌಕರ್ಯ ವ್ಯವಸ್ಥೆ ಹಾಗೂ ಅಪ್ಲಿಕೇಶನ್ಗಳಿರುತ್ತವೆ. ಡೌನ್ಸ್ಟ್ರೀಮ್ನಲ್ಲಿ ದತ್ತಾಂಶ ಪ್ರೇರಿತ ಪರಿಹಾರಗಳಿರುತ್ತವೆ. ಇಸ್ರೋ ಅಧ್ಯಕ್ಷರು ಡೌನ್ಸ್ಟ್ರೀಮ್ ಚಟುವಟಿಕೆಗಳ ಬಗ್ಗೆ ಹೆಚ್ಚು ಆಶಯ ವ್ಯಕ್ತಪಡಿಸಿದ್ದಾರೆ. ಕೌಶಲ್ಯ ಅಭಿವೃದ್ಧಿಗೆ ಗಮನ ಕೊಟ್ಟರೆ ಸ್ಪೇಸ್ ಟೆಕ್ನಾಲಜಿಯ ಸರ್ವಾಂಗೀಣ ಬೆಳವಣಿಗೆಗೆ ಎಡೆ ಮಾಡಿಕೊಡಬಹುದು ಎನ್ನುವುದು ಅವರ ಅನಿಸಿಕೆ.
ಇಸ್ರೋ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಭಾರತದ ಬಾಹ್ಯಾಕಾಶ ಉದ್ಯಮಕ್ಕೆ ಖಾಸಗಿ ಕ್ಷೇತ್ರದ ಕೊಡುಗೆ ಮತ್ತು ಎಫ್ಡಿಐ ಹೂಡಿಕೆಗಳು ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಅಮೆರಿಕ, ಜಪಾನ್ ಮೊದಲಾದ ದೇಶಗಳ ಜೊತೆ ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುವುದು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಒಂದು ವಿಶೇಷ ಸ್ಥಾನ ತರಲು ಹೇಗೆ ಸಹಾಯವಾಗುತ್ತದೆ ಎಂಬುದನ್ನೂ ಅವರು ವಿವರಿಸಿದ್ದಾರೆ.
ಇದನ್ನೂ ಓದಿ: ಕೃಷಿ ಕ್ಷೇತ್ರಕ್ಕೂ ಕಾಲಿಟ್ಟ ಎಐ: ಮಣ್ಣಿಲ್ಲದೆ ನೀರಿನಲ್ಲೇ ಬಾಲ್ಕನಿ, ಟೆರಸ್ ಮೇಲೆ ಬೆಳೆಯಬಹುದು ಸೊಪ್ಪು-ತರಕಾರಿ!
ಚಂದ್ರಯಾನ-3 ಯೋಜನೆ, ಆದಿತ್ಯ-ಎಲ್1 ಸೋಲಾರ್ ಅಬ್ಸರ್ವೇಟರಿ ಯೋಜನೆಗಳ ಯಶಸ್ಸನ್ನು ಪ್ರಸ್ತಾಪಿಸಿದ ಎಸ್ ಸೋಮನಾಥ್, ಇಸ್ರೋದ ಭವಿಷ್ಯದ ಯೋಜನೆಗಳೂ ಕೂಡ ಯಶಸ್ಸು ಗಳಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2026ರ ವೇಳೆಗೆ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವುದು, 2028ಕ್ಕೆ ಭಾರತದ್ದೇ ಒಂದು ಬಾಹ್ಯಾಕಾಶ ನಿಲ್ದಾಣ ಸ್ಥಾಪಿಸುವುದು, 2040ರೊಳಗೆ ಚಂದ್ರನಲ್ಲಿ ಮನುಷ್ಯನನ್ನು ಇಳಿಸುವುದು ಇವೆಲ್ಲಾ ಗುರಿಗಳನ್ನು ಸೋಮನಾಥ್ ಅವರು ಬೆಂಗಳೂರು ಟೆಕ್ ಸಮಿಟ್ನಲ್ಲಿ ಪ್ರಸ್ತಾಪಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ