Fake message: ಪ್ಯಾನ್ ಅಪ್​ಡೇಟ್ ಮಾಡಲು ಎಸ್​ಬಿಐ ಹೆಸರಲ್ಲಿ ನಕಲಿ ಮೆಸೇಜ್; ಕ್ಲಿಕ್ ಮಾಡಿ ಮೋಸ ಹೋಗದಿರಿ ಹುಷಾರ್…

|

Updated on: Nov 27, 2024 | 3:10 PM

PAN upgrade scam alert: ಕ್ಯೂಆರ್ ಕೋಡ್ ಇರುವ ಹೊಸ ಪ್ಯಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ವಿತರಿಸಲಿದೆ. ಹಳೆಯ ಪ್ಯಾನ್ ಕಾರ್ಡ್ ಬದಲು ಹೊಸ ಕಾರ್ಡ್ ಪಡೆಯಬೇಕು ಎನ್ನುವ ಸುದ್ದಿ ಇದೆ. ಇದರ ಬೆನ್ನಲ್ಲೇ ವಂಚಕರು ನಕಲಿ ಮೆಸೇಜ್​ಗಳ ಮೂಲಕ ಅಮಾಯಕರನ್ನು ಯಾಮಾರಿಸುವ ಕೆಲಸ ಮಾಡುತ್ತಿದ್ದಾರೆ. ಹೊಸ ಪ್ಯಾನ್ ಕಾರ್ಡ್ ಅಪ್​ಡೇಟ್ ಮಾಡಬೇಕೆಂದು ಎಪಿಕೆ ಫೈಲ್ ಡೌನ್​ಲೋಡ್ ಮಾಡುವ ಲಿಂಕ್ ಅನ್ನು ಕಳುಹಿಸಲಾಗುತ್ತಿದೆ. ಗ್ರಾಹಕರು ಎಚ್ಚರದಿಂದರಬೇಕು.

Fake message: ಪ್ಯಾನ್ ಅಪ್​ಡೇಟ್ ಮಾಡಲು ಎಸ್​ಬಿಐ ಹೆಸರಲ್ಲಿ ನಕಲಿ ಮೆಸೇಜ್; ಕ್ಲಿಕ್ ಮಾಡಿ ಮೋಸ ಹೋಗದಿರಿ ಹುಷಾರ್...
ಎಸ್​ಬಿಐ ಯೋನೋ
Follow us on

ಬೆಂಗಳೂರು, ನವೆಂಬರ್ 27: ಈಗ ಅಪ್​ಗ್ರೇಡೆಡ್ ಪಾನ್ ಕಾರ್ಡ್ ಅನ್ನು ಆದಾಯ ತೆರಿಗೆ ಇಲಾಖೆ ನೀಡಲಿದೆ. ಹಳೆಯ ಪ್ಯಾನ್ ಕಾರ್ಡ್ ಹೊಂದಿರುವವರು ಹೊಸ ಕಾರ್ಡ್ ಪಡೆಯಬೇಕಾಗುತ್ತದೆ. ಈ ಸುದ್ದಿಯನ್ನು ವಂಚಕರು ದುರಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ನಿಮ್ಮ ಹಳೆಯ ಪ್ಯಾನ್ ಕಾರ್ಡ್​ನಿಂದಾಗಿ ಅಕೌಂಟ್ ನಿಷ್ಕ್ರಿಯವಾಗುತ್ತಿದೆ. ಅದನ್ನು ಆ್ಯಕ್ಟಿವೇಟ್ ಮಾಡಲು ಪ್ಯಾನ್ ಕಾರ್ಡ್ ಅನ್ನು ಅಪ್​​ಡೇಟ್ ಮಾಡಬೇಕು ಎಂದು ಹೇಳಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆಸರಿನಲ್ಲಿ ಮೆಸೇಜ್​ಗಳು ಬರುತ್ತಿವೆ. ಈ ರೀತಿಯ ಮೆಸೇಜ್​ಗಳು ತಮಗೆ ಬಂದಿರುವುದಾಗಿ ಹಲವು ಜನರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಪ್ಯಾನ್ ಕಾರ್ಡ್ ಅಪ್​ಗ್ರೇಡ್ ಮಾಡಲು ಒಂದು ಎಪಿಕೆ ಫೈಲ್ ಅನ್ನು ಡೌನ್​ಲೋಡ್ ಮಾಡಬೇಕೆಂದು ಒಂದು ಲಿಂಕ್ ಅನ್ನೂ ಆ ಮೆಸೇಜ್​ನಲ್ಲಿ ನೀಡಲಾಗಿದೆ. ಅಕಸ್ಮಾತ್ ಯಾರಾದರೂ ಅಮಾಯಕ ಗ್ರಾಹಕರು ಆ ಎಪಿಕೆ ಫೈಲ್ ಅನ್ನು ಡೌನ್​ಲೋಡ್ ಮಾಡಿ ತಮ್ಮ ಮೊಬೈಲ್​ಗೆ ಇನ್ಸ್​ಟಾಲ್ ಮಾಡಿದಲ್ಲಿ ಅವರ ಡಾಟಾವೆಲ್ಲವೂ ವಂಚಕರ ಪಾಲಾಗಬಹುದು. ಎಸ್​ಬಿಐ ಆಗಲೀ ಯಾವುದೇ ಬ್ಯಾಂಕ್ ಆಗಲೀ ಎಪಿಕೆ ಫೈಲ್ ಅನ್ನು ಡೌನ್​ಲೋಡ್ ಮಾಡಲು ಕೇಳುವುದಿಲ್ಲ.

ಇದನ್ನೂ ಓದಿ: ಅಮೆರಿಕದ ಚಾರ್ಜ್​ಶೀಟ್​ನಲ್ಲಿ ಗೌತಮ್ ಅದಾನಿ ವಿರುದ್ಧ ಲಂಚದ ಆರೋಪವಿಲ್ಲ: ಅದಾನಿ ಗ್ರೀನ್ ಸ್ಪಷ್ಟನೆ

ಎಸ್​​ಬಿಐ ಹೆಸರಿನಲ್ಲಿ ಬಂದ ಮೆಸೇಜ್ ಹೀಗಿದೆ…

‘ಪ್ರಿಯ ಗ್ರಾಹಕರೆ, ಹಳೆಯ ಪ್ಯಾನ್ ಕಾರ್ಡ್ ಇರುವುದರಿಂದ ನಿಮ್ಮ ಎಸ್​ಬಿಐ ಯೋನೋ ಅಕೌಂಟ್ ಅನ್ನು ಇವತ್ತು ತಡೆಹಿಡಿಯಲಾಗುತ್ತದೆ. ನಿಮ್ಮ ಪ್ಯಾನ್ ಕಾರ್ಡ್ ದಾಖಲೆಗಳನ್ನು ಎಸ್​ಬಿಐ ಯೋನೋ ಆ್ಯಪ್​ನಲ್ಲಿ ಅಪ್​ಲೋಡ್ ಮಾಡಿರಲಾಗುತ್ತದೆ. ಈಗ ಡಬ್ಲ್ಯುಬಿಐ ಎಪಿಕೆ ಅನ್ನು ಇನ್ಸ್​ಟಾಲ್ ಮಾಡಿ, ನಿಮ್ಮ ಆ ಪ್ಯಾನ್ ದಾಖಲೆಗಳು ಸರಿಯಾಗಿವೆಯಾ ಎಂದು ಪರಿಶೀಲಿಸಿ’ ಎಂದು ಈ ಮೆಸೇಜ್​ನಲ್ಲಿ ಬರೆಯಲಾಗಿದೆ.

ಹಾಗೆಯೇ, ‘ಯೋನೋ ಎಸ್​ಬಿಐ ಸೆಲ್ಫ್ ಪ್ಯಾನ್ ಅಪ್​ಡೇಟ್’ ಎನ್ನುವ ಹೆಸರಿನಲ್ಲಿ ಎಪಿಕೆ ಫೈಲ್​ನ ಅಟ್ಯಾಚ್ಮೆಂಟ್ ಅನ್ನೂ ಮತ್ತೊಂದು ಮೆಸೇಜ್​ನಲ್ಲಿ ಲಗತ್ತಿಸಲಾಗಿದೆ. ಇದು ವಂಚಕರ ಜಾಲ.

ಇದನ್ನೂ ಓದಿ: ಪ್ಯಾನ್ 2.0 ಘೋಷಿಸಿದ ಸರ್ಕಾರ; ಹಳೆಯ ಪ್ಯಾನ್ ಕಾರ್ಡ್ ಅಸಿಂಧುಗೊಳ್ಳುತ್ತಾ? ಕ್ಯೂಆರ್ ಕೋಡ್ ಇರುವ ಪ್ಯಾನ್ ಪಡೆಯುವುದು ಹೇಗೆ?

ಆನ್​ಲೈನ್ ಪ್ಲಾಟ್​ಫಾರ್ಮ್​ಗಳಲ್ಲಿ ನಿಮ್ಮನ್ನು ವಂಚಿಸಲು ಸಾಕಷ್ಟು ದಾರಿಗಳನ್ನು ದುರುಳರು ಹುಡುಕುವುದುಂಟು. ಈಗ ಬಹಳ ಸಾಮಾನ್ಯವಾಗಿ ಬಳಸಲಾಗುವ ಮಾರ್ಗ ಎಂದರೆ ಅದು ವಂಚಕ ಲಿಂಕ್​ಗಳದ್ದು. ಮೊಬೈಲ್​ಗೆ ಮೆಸೆಂಜರ್​ನಲ್ಲಿ ಟೆಕ್ಸ್ಟ್ ಮೆಸೇಜ್ ಮೂಲಕವೋ ಅಥವಾ ವಾಟ್ಸಾಪ್, ಟೆಲಿಗ್ರಾಮ್​ಗಳಲ್ಲಿ ಟೆಕ್ಸ್ಟ್ ಮೆಸೇಜ್ ಮೂಲಕವೋ ಲಿಂಕ್ ಕಳುಹಿಸಲಾಗುತ್ತದೆ. ಮೂಲ ಯುಆರ್​ಎಲ್ ಅನ್ನು ಮರೆಮಾಚಿದ ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ವೈರಸ್ ಇರುವ ಫೈಲ್ ನಿಮ್ಮ ಮೊಬೈಲ್ ಅಥವಾ ಸಿಸ್ಟಂಗೆ ಇನ್ಸ್​ಟಾಲ್ ಆಗುತ್ತದೆ.

ಇನ್ನು ಎಪಿಕೆ ಫೈಲ್​ಗಳೂ ಕೂಡ ವಂಚಕರಿಗೆ ಪ್ರಬಲ ಅಸ್ತ್ರಗಳಾಗಿರುತ್ತವೆ. ಇವುಗಳು ಮೊಬೈಲ್​ನ ಸಂಪೂರ್ಣ ನಿಯಂತ್ರಣವನ್ನು ವಂಚಕರಿಗೆ ಕೊಡುತ್ತವೆ. ಒಂದು ವೇಳೆ ನೀವು ಪ್ಯಾನ್ ಕಾರ್ಡ್ ಬಗ್ಗೆ ಮಾಹಿತಿ ತಿಳಿಯಬೇಕಿದ್ದರೆ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್​ಸೈಟ್​ಗೆ ಹೋಗಬಹುದು. ಅಥವಾ ಇಲಾಖೆಯ ಅಧಿಕೃತ ಸೋಷಿಯಲ್ ಮೀಡಿಯಾ ಹ್ಯಾಂಡಲ್​ಗಳಿಗೆ ಹೋಗಿ ಅಪ್​​ಡೇಟ್ಸ್ ತಿಳಿಯಬಹುದು. ಇದು ಐಟಿ ಸಂಬಂಧಿಸಿದಂತೆ ಮಾತ್ರವಲ್ಲ, ಯಾವುದೇ ಮಾಹಿತಿಯಾದರೂ ಅಧಿಕೃತ ಮೂಲಗಳಿಂದ ಪಡೆಯುವುದು ಸರಿಯಾದ ವಿಧಾನ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ