BSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ

|

Updated on: Jul 09, 2023 | 12:54 PM

Interesting History of Bombay Stock Exchange: ಏಷ್ಯಾದ ಮೊದಲ ಸ್ಟಾಕ್ ಎಕ್ಸ್​ಚೇಂಜ್ ಬಿಎಸ್​ಇ 1875ರ ಜುಲೈ 9ರಂದು ಆರಂಭವಾಗಿದ್ದು. ಇವತ್ತಿಗೆ ಸರಿಯಾಗಿ 148 ವರ್ಷಗಳಾದವು. 1855ರಲ್ಲಿ 22 ಷೇರುಬ್ರೋಕರುಗಳು ಆಲದಮರದ ಕೆಳಗೆ ಆರಂಭಿಸಿದ ಬಿಎಸ್​ಇ ಕೇಂದ್ರದ ಬಗ್ಗೆ ಒಂದು ಲೇಖನ...

BSE 148 Years: ಆಲದ ಮರದ ಕೆಳಗೆ ಶುರುವಾದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ 148 ವರ್ಷಗಳ ಇಂಟರೆಸ್ಟಿಂಗ್ ಇತಿಹಾಸ
ಬಾಂಬೆ ಸ್ಟಾಕ್ ಎಕ್ಸ್​ಚೇಂಜ್
Follow us on

ಮುಂಬೈ: ಭಾರತದ ಹಾಗೂ ಏಷ್ಯಾದ ಮೊತ್ತಮೊದಲ ಸ್ಟಾಕ್ ಎಕ್ಸ್​ಚೇಂಜ್ ಎನಿಸಿರುವ ಬಿಎಸ್​ಇ ಆರಂಭವಾಗಿ ಇವತ್ತಿಗೆ (ಜುಲೈ 9) ಸರಿಯಾಗಿ 148 ವರ್ಷಗಳು ಗತಿಸಿವೆ. ಹಾಗೆ ನೋಡಿದರೆ ಬಾಂಬೆ ಸ್ಟಾಕ್ ಎಕ್​​ಚೇಂಜ್ (BSE- Bombay Stock Exchange) ಇತಿಹಾಸ 168 ವರ್ಷಗಳಷ್ಟು ಹಳೆಯದು. ಆಲದ ಮರದ ಕೆಳಗೆ ಶುರುವಾದ ಈ ಷೇರುಪೇಟೆ ಇದೀಗ ವಿಶ್ವದ ಅತಿದೊಡ್ಡ ಸ್ಟಾಕ್ ಎಕ್ಸ್​ಚೇಂಜ್​ಗಳ ಪೈಕಿ ಒಂದಾಗಿದೆ. 5,200ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಲಿಸ್ಟ್ ಆಗಿವೆ. ಇಲ್ಲಿರುವ ಕಂಪನಿಗಳ ಒಟ್ಟೂ ಷೇರುಸಂಪತ್ತು ಹತ್ತಿರಹತ್ತಿರ 300 ಲಕ್ಷಕೋಟಿ ರೂನಷ್ಟಿದೆ. ಭಾರತದಲ್ಲಿ ಈ ಹಿಂದೆ ಹಲವು ಷೇರುಪೇಟೆಗಳು ಅಸ್ತಿತ್ವದಲ್ಲಿದ್ದರೂ ಸದ್ಯ ಬಿಎಸ್​ಇ ಮತ್ತು ಎನ್​ಎಸ್​ಇ ಎರಡು ಮಾತ್ರ ಅಧಿಕೃತವಾಗಿ ಇರುವುದು. ಇವೆರಡೂ ಕೂಡ ಮುಂಬೈನಲ್ಲಿವೆ. ಎನ್​ಎಸ್​ಇನಲ್ಲಿ ಲಿಸ್ಟ್ ಆಗಿರುವ ಕಂಪನಿಗಳು ಕಡಿಮೆ ಆದರೂ ಒಟ್ಟು ಷೇರುಸಂಪತ್ತು ಬಿಎಸ್​ಇಗಿಂತ ಹೆಚ್ಚಿದೆ. ಬಿಎಸ್​ಇ ಮತ್ತು ಎನ್​ಎಸ್​ಇ ಎರಡಕ್ಕೂ ಬಹಳ ಕುತೂಹಲ ಮೂಡಿಸುವ ಇತಿಹಾಸ ಇದೆ.

ಆಲದ ಮರದ ಕೆಳಗೆ ಶುರುವಾದ ಬಿಎಸ್​ಇ

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಎಂಬುದು ಸರ್ಕಾರದಿಂದ ನಿರ್ವಹಿಸುವ ಷೇರುಪೇಟೆಯಲ್ಲ. ಖಾಸಗಿ ಒಡೆತನದಲ್ಲಿರುವ ವಿನಿಮಯ ಕೇಂದ್ರ. 19ನೇ ಶತಮಾನದಲ್ಲಿ ಭಾರತದ ಕಾಟನ್ ಕಿಂಗ್ ಎನಿಸಿದ್ದ ಪ್ರೇಮಚಂದ್ ರಾಯಚಂದ್ ಎಂಬುವವರು ಸ್ಥಾಪಿಸಿದ ಸ್ಟಾಕ್ ಎಕ್ಸ್​ಚೇಂಜ್ ಇದು. 1875ರ ಜುಲೈ 9ರಂದು ಭಾರತದ ಷೇರುಬ್ರೋಕರ್​ಗಳು ಮತ್ತು ಷೇರುಗಳನ್ನು ಉಳಿಸಲು ಬಾಂಬೆ ಬ್ರೋಕರ್​ಗಳ ಸಂಘವೊಂದು ನಿರ್ಣಯ ಹೊರಡಿಸಿತು.

ಇದನ್ನೂ ಓದಿGreenchef IPO: ಬೆಂಗಳೂರಿನ ಗ್ರೀನ್​ಚೆಫ್ ಷೇರುಪೇಟೆಗೆ ಭರ್ಜರಿ ಎಂಟ್ರಿ; 53.62 ಕೋಟಿ ರೂ ಐಪಿಒ ಯಶಸ್ವಿ; ತುಮಕೂರಿನಲ್ಲಿ ಹೊಸ ಫ್ಯಾಕ್ಟರಿ ಸ್ಥಾಪನೆಗೆ ವಿನಿಯೋಗ

ಆದರೆ, ಇದಕ್ಕೂ ಹಿಂದಿನ 20 ವರ್ಷಗಳಿಂದಲೇ ಇದರ ಚಟುವಟಿಕೆಗಳು ಆರಂಭವಾಗಿದ್ದವು. ಅಂದಿನ ಬಾಂಬೆಯ ದಕ್ಷಿಣ ಭಾಗದಲ್ಲಿದ್ದ ಟೌನ್​ಹಾಲ್​ನ ಬಳಿಯ ಆಲದ ಮರದ ಕೆಳಗೆ 1855ರಲ್ಲಿ 22 ಷೇರುಬ್ರೋಕರ್​ಗಳು ಒಟ್ಟು ಸೇರಲು ಆರಂಭಿಸುತ್ತಾರೆ. ಅಲ್ಲಿ ತಮ್ಮ ಷೇರುಗಳ ಮಾರಾಟ ಮತ್ತು ಖರೀದಿ ನಡೆಸುತ್ತಿರುತ್ತಾರೆ. ಅಂದರೆ ಅದೊಂದು ರೀತಿಯಲ್ಲಿ ಷೇರುಸಂತೆಯಾಗಿತ್ತು. ಏಷ್ಯಾದಲ್ಲೇ ಇಂಥ ಷೇರುವಿನಿಮಯ ಮಾರುಕಟ್ಟೆ ಶುರುವಾಗಿದ್ದು ಅದೇ ಮೊದಲು. ಪ್ರೇಮಚಂದ್ ರಾಯಚಂದ್ ಈ ಮಾರುಕಟ್ಟೆಯ ಸೂತ್ರಧಾರ.

ದಲಾಲ್ ಸ್ಟ್ರೀಟ್​ಗೆ ಸ್ಥಳ ಬದಲಾವಣೆ

ವರ್ಷಗಳುರುಳುತ್ತಿರುವಂತೆ ಬ್ರೋಕರ್​ಗಳ ಸಂಖ್ಯೆ ಹೆಚ್ಚಾಗತೊಡಗುತ್ತದೆ. ಸಂಖ್ಯೆ ದೊಡ್ಡದಾಗುತ್ತಿದ್ದಂತೆಯೇ ಬೇರೆ ಸ್ಥಳಗಳಿಗೆ ಇವರ ಸ್ಥಳವೂ ವರ್ಗವಾಗುತ್ತಿರುತ್ತದೆ. ಕೊನೆಗೆ 1874ರಲ್ಲಿ ಇವತ್ತಿನ ದಲಾಲ್ ಸ್ಟ್ರೀಟ್ ರಸ್ತೆಗೆ ಇವರ ಅಡ್ಡೆ ವರ್ಗವಾಗುತ್ತದೆ. 1875ರಲ್ಲಿ ಇವರು ನೇಟಿವ್ ಷೇರ್ ಅಂಡ್ ಸ್ಟಾಕ್ ಬ್ರೋಕರ್ಸ್ ಅಸೋಷಿಯೇಶನ್ ಎಂದು ಸಂಸ್ಥೆಗೆ ಹೆಸರಿಸುತ್ತಾರೆ. ಈ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಅನ್ನು ಭಾರತ ಸರ್ಕಾರ 1957ರ ಆಗಸ್ಟ್ ಮಾನ್ಯ ಮಾಡುತ್ತದೆ. 1980ರಲ್ಲಿ ದಲಾಲ್ ಸ್ಟ್ರೀಟ್​ನಲ್ಲಿರುವ 22 ಮಹಡಿಗಳ ಪಿಜೆ ಟವರ್ಸ್​ಗೆ ಬಿಎಸ್​ಇ ಕೇಂದ್ರವು ವರ್ಗವಾಗುತ್ತದೆ.

ಇದನ್ನೂ ಓದಿBSE Share Buyback: ಟೆಂಡರ್ ಮೂಲಕ ಷೇರುದಾರರಿಂದ ಹೆಚ್ಚಿನ ಬೆಲೆಗೆ ಷೇರು ಖರೀದಿಸಲಿರುವ ಬಿಎಸ್​ಇ

22 ಬ್ರೋಕರ್​ಗಳಿದ್ದ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಇವತ್ತು 1,300ಕ್ಕೂ ಹೆಚ್ಚು ಅಧಿಕೃತ ಷೇರುಬ್ರೋಕರುಗಳನ್ನು ಹೊಂದಿದೆ. ಲಿಸ್ಟ್ ಆಗಿರುವ ಎಲ್ಲಾ ಕಂಪನಿಗಳ ಒಟ್ಟು ಷೇರುಮೌಲ್ಯ 299 ಲಕ್ಷ ಕೋಟಿ ರೂಗೂ ಹೆಚ್ಚಿದೆ. ಬಿಎಸ್​ಇ ಸೆನ್ಸೆಕ್ಸ್ ಸೇರಿದ ನಾಲ್ಕೈದು ಪ್ರಮುಖ ಸೂಚ್ಯಂಕಗಳಿವೆ. ಸೆನ್ಸೆಕ್ಸ್ ಎಂಬುದು ಭಾರತದ ಷೇರುಮಾರುಕಟ್ಟೆಗೆ ಪ್ರಮುಖ ಕೈಗನ್ನಡಿಯಂತಿದೆ. ಇದರಲ್ಲಿ 30 ಆಯ್ದ ಕಂಪನಿಗಳ ಷೇರುಗಳ ಪಟ್ಟಿ ಮಾಡಲಾಗಿದೆ.

ಎನ್​ಎಸ್​ಇ ಸ್ಥಾಪನೆ ಯಾಕೆ?

ಎಂಬತ್ತರದ ದಶಕ ಮತ್ತು ತೊಂಬತ್ತರ ದಶಕದ ಆರಂಭದಲ್ಲಿ ಹರ್ಷದ್ ಮೆಹ್ತಾ ಮೊದಲಾದ ಹಲವು ಹಗರಣಗಳು ಬಿಎಸ್​ಇಗೆ ಕಳಂಕ ತರುತ್ತವೆ. ಆಗ ಸರ್ಕಾರಕ್ಕೆ ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ಗೆ ಒಂದು ಪರ್ಯಾಯ ಬೇಕೆಂದು ಅನಿಸುತ್ತದೆ. ಬ್ರೋಕರ್​ಗಳ ನಿಯಂತ್ರಣದಲ್ಲಿ ಬಿಎಸ್​ಇ ಇತ್ತು. ಭ್ರಷ್ಟಾಚಾರಕ್ಕೆ ವಿಫುಲ ಅವಕಾಶಗಳಿದ್ದವು. ಇದನ್ನು ತಪ್ಪಿಸಲು ಕಂಪ್ಯೂಟರೈಸ್ಡ್ ಆಗಿರುವ ಆಧುನಿಕ ತಂತಜ್ಞಾನ ಹೊಂದಿದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಕೇಂದ್ರದ ಸ್ಥಾಪನೆಯಾಯಿತು. ಇದರ ವಹಿವಾಟು ವ್ಯವಸ್ಥೆ ಬಿಎಸ್​ಇಗಿಂತಲೂ ಬಹಳ ಸರಳವಾಗಿತ್ತು. ಆರಂಭದಲ್ಲಿ ಕೆಲ ಪ್ರಮುಖ ಷೇರುಬ್ರೋಕರುಗಳಿಂದ ಎನ್​ಎಸ್​ಇಗೆ ವಿರೋಧ ಬಂದರೂ ದಿನೇದಿನೇ ಎನ್​ಎಸ್​ಇ ಜನಪ್ರಿಯತೆ ಹೆಚ್ಚತೊಡಗಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ