Budget 2021: ಏನಿದು ಆರ್ಥಿಕ ಸಮೀಕ್ಷೆ? ಏನಿದರ ಮಹತ್ವ?

ದೇಶದ ಆರ್ಥಿಕ ಸ್ಥಿತಿಗತಿಗಳ ಕುರಿತು ಕೇಂದ್ರ ಸರ್ಕಾರದ ಅಧಿಕೃತ ನಿಲುವುಗಳನ್ನು ಆರ್ಥಿಕ ವರದಿ ಉಲ್ಲೇಖಿಸುತ್ತದೆ. ದೇಶದಲ್ಲಿ ಹಣದ ಹರಿವಿನ ಪ್ರಮಾಣ, ಹೂಡಿಕೆ, ಉದ್ಯೋಗ ನಿರುದ್ಯೋಗಗಳ ಸ್ಥಿತಿ ಅಧ್ಯಯನಕ್ಕೆ ಅಗತ್ಯ ಸರಕನ್ನು ಆರ್ಥಿಕ ವರದಿ ಒಳಗೊಂಡಿರುತ್ತದೆ.

  • ಗುರುಗಣೇಶ ಭಟ್ ಡಬ್ಗುಳಿ
  • Published On - 18:19 PM, 28 Jan 2021
Budget 2021: ಏನಿದು ಆರ್ಥಿಕ ಸಮೀಕ್ಷೆ? ಏನಿದರ ಮಹತ್ವ?
ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೃಷ್ಣಮೂರ್ತಿ ಸುಬ್ರಮಣಿಯನ್.

ಅದು ಮನೆಯೇ ಇರಲಿ.. ದೇಶವೇ ಇರಲಿ.. ಆರ್ಥಿಕ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಬದಲಾಗುವುದು ಸಾಮಾನ್ಯ ಸಂಗತಿ. ಒಮ್ಮೆ ಜೇಬು ತುಂಬಿರಬಹುದು ಅಥವಾ ಒಮ್ಮೆ ತೂತು ಬಿದ್ದಿರಬಹುದು. ಈ ತಿಂಗಳ ಸಂಬಳದಲ್ಲಿ ಎಷ್ಟು ಉಳಿಸಿದ್ದೇವೆ, ಎಷ್ಟು ಕಳೆದಿದ್ದೇವೆ ಎಂದು ಒಂದು ಇಳಿಹೊತ್ತು ಕುಳಿತು ಯೋಚಿಸುತ್ತೇವೆ ತಾನೇ? ಹಾಗೇ, ದೇಶದ ಆರ್ಥಿಕ ಸ್ಥಿತಿ, ಭವಿಷ್ಯದಲ್ಲಿ  ಬೊಕ್ಕಸವನ್ನು ಹೇಗೆ ಭದ್ರಪಡಿಸಬಹುದು? ಯಾವ ಯೋಜನೆಯಿಂದ ಎಷ್ಟು ಪ್ರಯೋಜನ.. ಎಂಬೆಲ್ಲ ಸಾವಿರಸಾವಿರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವೇ ದೇಶದ ಆರ್ಥಿಕ ಸಮೀಕ್ಷೆ Economic Survey.

ದೇಶದ ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದಲ್ಲಿ ಹಣಕಾಸು ಇಲಾಖೆ ಆರ್ಥಿಕ ಸಮಿಕ್ಷೆಯ ವರದಿಯನ್ನು ಸಿದ್ಧಪಡಿಸುತ್ತದೆ. ಹಣಕಾಸು ಇಲಾಖೆಯ ಮುಖ್ಯ ಹಣಕಾಸು ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ನೇತೃತ್ವದಲ್ಲಿ ಪ್ರಸ್ತಕ ಸಾಲಿನ ಆರ್ಥಿಕ ವರದಿ ಸಿದ್ಧಗೊಂಡಿದೆ. 2019ರಲ್ಲಿ ತಮ್ಮ ಮೊದಲ ಬಾರಿಗೆ ಆರ್ಥಿಕ ವರದಿಯನ್ನು ಸಲ್ಲಿಸಿದ್ದ ಮುಖ್ಯ ಹಣಕಾಸು ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್, ಶೇ 8ರಷ್ಟು ಸುಸ್ತಿರ ಜಿಡಿಪಿಯೊಂದಿಗೆ 2024-25ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್ ಆರ್ಥಿಕತೆಯ ಸಾಧ್ಯತೆಯನ್ನು ತೆರೆದಿಟ್ಟಿತ್ತು.

ಪ್ರತಿವರ್ಷವು ದೇಶದ ಬಜೆಟ್ ಮಂಡನೆಯ ಹಿಂದಿನ ದಿನ ಆರ್ಥಿಕ ಸಮೀಕ್ಷೆ ಮಂಡನೆಯಾಗುವುದು ವಾಡಿಕೆ. ನಾಳೆ (ಜ.29) ಆರ್ಥಿಕ ಸಮೀಕ್ಷೆಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮಾತನಾಡಲಿದ್ದಾರೆ.

ಇದನ್ನೂ ಓದಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಹಲ್ವಾ ಸಮಾರಂಭ

ಲಿಂಗಸಮಾನತೆಗೆ ಸರ್ಕಾರದ ಬದ್ಧತೆ ಸಾರಿಹೇಳುವ ಉದ್ದೇಶದಿಂದ 2018-19ರ ಆರ್ಥಿಕ ಸಮೀಕ್ಷೆಯ ದಾಖಲೆಯನ್ನು ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುತ್ತಿಡಲಾಗಿತ್ತು.

ಏನಿದು ಆರ್ಥಿಕ ವರದಿ?
ದೇಶದ ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಈ ವರದಿ ಭವಿಷ್ಯದಲ್ಲಿ ದೇಶ ತನ್ನ ಆರ್ಥಿಕ ಸಂಪನ್ಮೂಲಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅವಲೋಕಿಸಲಿದೆ. ಅಗತ್ಯ ವಸ್ತುಗಳ ಉತ್ಪಾದನೆ, ಆಮದು, ರಫ್ತು, ವಿದೇಶಿ ವಿನಿಮಯ, ದಿನಬಳಕೆಯ ವಸ್ತುಗಳ ಬೆಲೆಗಳ ಏರಿಳಿತ, ಹೂಡಿಕೆ ಸೇರಿದಂತೆ ಆರ್ಥಿಕತೆಯ ಹಲವು ಆಯಾಮಗಳನ್ನು ಆರ್ಥಿಕ ವರದಿ ಪರಿಶೀಲಿಸುತ್ತದೆ. ದೇಶದ ಆರ್ಥಿಕ ಸ್ಥಿತಿಗತಿಗಳ ಕುರಿತು ಕೇಂದ್ರ ಸರ್ಕಾರದ ಅಧಿಕೃತ ನಿಲುವುಗಳನ್ನು ಆರ್ಥಿಕ ವರದಿ ಉಲ್ಲೇಖಿಸುತ್ತದೆ. ದೇಶದಲ್ಲಿ ಹಣದ ಹರಿವಿನ ಪ್ರಮಾಣ, ಹೂಡಿಕೆ, ಉದ್ಯೋಗ ನಿರುದ್ಯೋಗಗಳ ಸ್ಥಿತಿಯ ಅಧ್ಯಯನಕ್ಕೆ ಅಗತ್ಯ ಸರಕನ್ನು ಆರ್ಥಿಕ ವರದಿ ಒಳಗೊಂಡಿರುತ್ತದೆ. ಬಂಡವಾಳ ಸಂಚಯನಕ್ಕೆ ತೆಗೆದುಕೊಳ್ಳಬಹುದಾದ ನಿರ್ಧಾರಗಳನ್ನು ಸಹ ಈ ವರದಿ ಉಲ್ಲೇಖಿಸುತ್ತದೆ.

1950ರಿಂದಲೂ ಮಂಡನೆಯಾಗುತ್ತಿದೆ ಆರ್ಥಿಕ ಸಮಿಕ್ಷೆ
1950-51ರ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ ಆರ್ಥಿಕ ವರದಿ ಮಂಡಿಸಲಾಯಿತು. 1964ರವರೆಗೂ ಬಜೆಟ್​ನ ದಿನವೇ ಮಂಡಿಸಲಾಗುತ್ತಿದ್ದ ಆರ್ಥಿಕ ವರದಿಯನ್ನು ನಂತರದ ವರ್ಷಗಳಲ್ಲಿ ಬಜೆಟ್​ನ ಮುನ್ನಾದಿನ ಮಂಡಿಸಲು ಪ್ರಾರಂಭಿಸಲಾಯಿತು. ಕಳೆದ ವರ್ಷದವರೆಗೂ ಇದು ಹೀಗೆಯೇ ನಡೆದು ಬಂದಿತ್ತು.

2021ನೇ ಸಾಲಿನ ಆರ್ಥಿಕ ವರದಿಗೆ ಎಲ್ಲಿಲ್ಲದ ಮಹತ್ವವಿದೆ. ಕೊರೊನಾ ಕಾಲದಲ್ಲಿ ಇಳಿಮುಖವಾದ ಸರ್ಕಾರದ ಆದಾಯ, ನಿರುದ್ಯೋಗದಲ್ಲಿ ಹೆಚ್ಚಳ ಮುಂತಾದವುಗಳ ಕುರಿತು ನಾಳೆ ಬಿಡುಗಡೆಯಾಗಲಿರುವ ವರದಿ ಹೇಗೆ ವಿಶ್ಲೇಷಣೆ ನಡೆಸಲಿದೆ ಎಂದು ಕಾದುನೋಡಬೇಕಿದೆ. ಕೊರೊನಾ ಪಿಡುಗು ದೇಶದ ಎಲ್ಲ ಆರ್ಥಿಕ ವಹಿವಾಟುಗಳಿಗೂ ಬಿಸಿಮುಟ್ಟಿಸಿದೆ. 2020ರ ಜೂನ್-ಎಪ್ರಿಲ್ ಅವಧಿಯೊಳಗೆ ದೇಶದ ಆರ್ಥಿಕತೆ ಶೇ 23.9ರಷ್ಟು ಕುಸಿತಕಂಡಿತ್ತು. ಕಳೆದ 40 ವರ್ಷಗಳಲ್ಲೇ ಕಂಡುಕೇಳರಿಯದ ಆರ್ಥಿಕ ಕುಸಿತ ಎಂಬ ಹಣೆಪಟ್ಟಿಗೆ ಇದು ಗುರಿಯಾಗಿತ್ತು.

ಏಕಿಷ್ಟು ಪ್ರಾಮುಖ್ಯತೆ?
ದೇಶದ ಆರ್ಥಿಕ ಸ್ಥಿತಿಗತಿಯ ಚಿತ್ರಣ ಈ ಸಮೀಕ್ಷಾ ವರದಿಯಲ್ಲಿ ಸಿಗುತ್ತದೆ. ಇದರ ಜೊತೆಗೆ ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ, ಲಿಂಗ ಸಮಾನತೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಕೆಲವೊಮ್ಮೆ ಸರ್ಕಾರದ ಮಟ್ಟದಲ್ಲಿ ಬದಲಾದ ಧೋರಣೆಯನ್ನೂ ಪ್ರತಿನಿಧಿಸುತ್ತದೆ. ಉದಾಹರಣೆಗೆ 2018-19ರಲ್ಲಿ ಗುಲಾಬಿ ಬಣ್ಣದ (ಪಿಂಕ್) ಬಟ್ಟೆಯಲ್ಲಿ ಆರ್ಥಿಕ ಸಮೀಕ್ಷೆಯ ದಾಖಲೆಯನ್ನು ಸುತ್ತಿಡಲಾಗಿತ್ತು. ಹೀಗೆ ಮಾಡುವ ಮೂಲಕ ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಕೃಷ್ಣಮೂರ್ತಿ ಸುಬ್ರಮಣಿಯನ್ ಲಿಂಗ ಸಮಾನತೆಯ ಬಗ್ಗೆ ಸರ್ಕಾರದ ಒಲವನ್ನು ಸಾರಿಹೇಳಿದ್ದರು.

ನಾಳೆ ಮಂಡನೆಯಾಗಲಿರುವ ಆರ್ಥಿಕ ವರದಿಯಲ್ಲಿ ಫೆಬ್ರವರಿ 1ರಂದು ಮಂಡನೆಯಾಗಲಿರುವ ಬಜೆಟ್​ ಬುತ್ತಿಯ ಸುಳುಹುಗಳನ್ನಂತೂ ನಿರೀಕ್ಷಿಸಬಹುದು.

Budget 2021: ಬಜೆಟ್ ಮಂಡನೆ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಬಹುದು?

Union Budget 2021 ನಿರೀಕ್ಷೆ | ಕೋವಿಡ್ ಆಘಾತದಿಂದ ತತ್ತರಿಸಿದ ರಿಯಲ್ ಎಸ್ಟೇಟ್ ವಲಯಕ್ಕೆ ಬೇಕಿದೆ ಸುಧಾರಣೆಗಳ ಟಾನಿಕ್

Budget 2021 ನಿರೀಕ್ಷೆ | ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಆಸರೆ ಸಿಗಬೇಕಿದೆ