Hormuz Strait: ಇರಾನ್ಗೆ ಹಾರ್ಮೂಜ್ ಜಲಮಾರ್ಗ ಬಂದ್ ಮಾಡಲು ಆಗುತ್ತಾ? ತಡೆದುಬಿಟ್ಟರೆ ಯಾರಿಗೆಷ್ಟು ಹಾನಿ?
Can Iran block Hormuz Strait? ತನ್ನ ಮೂರು ಪರಮಾಣು ಸ್ಥಳಗಳ ಮೇಲೆ ಅಮೆರಿಕ ದಾಳಿ ಮಾಡಿದಕ್ಕೆ ಪ್ರತೀಕಾರವಾಗಿ ಇರಾನ್ ಹಾರ್ಮೂಜ್ ಸ್ಟ್ರೇಟ್ ಅನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದೆ. ಪರ್ಷಿಯಲ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ಮಧ್ಯೆ ಇರುವ ಹಾರ್ಮೂಜ್ ಸ್ಟ್ರೇಟ್ ಕಿರಿದಾದ ಜಲಮಾರ್ಗ ಹೊಂದಿದೆ. ಹಾರ್ಮೂಜ್ ಸ್ಟ್ರೇಟ್ನ ಉತ್ತರ ಭಾಗವು ಇರಾನ್ ನಿಯಂತ್ರಣದಲ್ಲಿದೆ. ದಕ್ಷಿಣವು ಓಮನ್ ನಿಯಂತ್ರಣದಲ್ಲಿದೆ. ಭಾರತಕ್ಕೆ ಆಮದಾಗಿ ಬರುವ ಹೆಚ್ಚಿನ ತೈಲವು ಈ ಮಾರ್ಗದಿಂದಲೇ ಬರುತ್ತದೆ ಎಂಬುದು ವಿಶೇಷ.

ನವದೆಹಲಿ, ಜೂನ್ 23: ಇರಾನ್ ತಾನು ಹಾರ್ಮೂಜ್ ಸ್ಟ್ರೇಟ್ ಅಥವಾ ಜಲಸಂಧಿಯನ್ನು (Hormuz Strait) ಬಂದ್ ಮಾಡುವ ಬೆದರಿಕೆ ಹಾಕಿದೆ. ಅಲ್ಲಿಯ ಸಂಸತ್ತು ಈ ಪ್ರಸ್ತಾಪಕ್ಕೆ ಬೆಂಬಲ ನೀಡಿದೆ. ಅಲ್ಲಿಯ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿ (Iran’s Supreme National Security Council) ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ. ಹರ್ಮೂಜ್ ಸ್ಟ್ರೇಟ್ ಅನ್ನು ಬಂದ್ ಮಾಡುವ ಇರಾನ್ ಬೆದರಿಕೆಯಿಂದ ಜಾಗತಿಕವಾಗಿ ಆತಂಕ ವ್ಯಕ್ತವಾಗುತ್ತಿದೆ. ಅಮೆರಿಕ ಕೂಡ ವ್ಯಗ್ರಗೊಂಡಿದೆ. ತೈಲ ಬೆಲೆಗಳು ದಾಖಲೆ ಮಟ್ಟಕ್ಕೆ ಹೋಗುವ ಸಾಧ್ಯತೆ ಕಾಣುತ್ತಿದೆ.
‘ಹಾರ್ಮೂಜ್ ಸ್ಟ್ರೇಟ್ ಅನ್ನು ತಡೆದರೆ ಅದು ಇರಾನ್ ಮಾಡುವ ಪ್ರಮಾದವಾಗುತ್ತದೆ. ಒಂದು ರೀತಿಯಲ್ಲಿ ಆರ್ಥಿಕ ಆತ್ಮಹತ್ಯೆ ಮಾಡಿಕೊಂಡಂತಾಗುತ್ತದೆ’ ಎಂದು ಅಮೆರಿಕದ ಗೃಹ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ.
ಏನಿದು ಹಾರ್ಮೂಜ್ ಸ್ಟ್ರೇಟ್?
ಇದು ವಿಶ್ವದ ಪ್ರಮುಖ ಜಲಮಾರ್ಗದ ಮಧ್ಯೆ ಸಿಗುವ ಒಂದು ಜಲಸಂಧಿ. ಪರ್ಷಿಯಲ್ ಗಲ್ಫ್ ಮತ್ತು ಓಮನ್ ಗಲ್ಫ್ ಮಧ್ಯೆ ಇದು ಇದೆ. ಕೇವಲ 33 ಕಿಮೀಯಷ್ಟು ಕಿರಿದಾಗಿದೆ. ಸೌದಿ ಅರೇಬಿಯಾ, ಯುಎಇ, ಇರಾಕ್, ಕುವೇತ್ ಮೊದಲಾದ ಪ್ರಮುಖ ಗಲ್ಫ್ ರಾಷ್ಟ್ರಗಳಿಂದ ತೈಲವನ್ನು ಈ ಮಾರ್ಗದಲ್ಲೇ ರಫ್ತು ಮಾಡಲಾಗುತ್ತದೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಬಿಕ್ಕಟ್ಟು: ಎಲ್ಪಿಜಿ ನಿಂತುಹೋದರೆ ಏನು ಗತಿ? ಭಾರತದಲ್ಲಿ LPG ಸಂಗ್ರಹ ಎಷ್ಟು ದಿನಗಳಿಗಿದೆ?
ಹಾರ್ಮೂಜ್ ಸ್ಟ್ರೇಟ್ನ ಗಡಿಯಾಗಿ ಹೊಂದಿರುವುದು ಇರಾನ್ ಮತ್ತು ಓಮನ್ ದೇಶಗಳು ಮಾತ್ರವೇ. ಯುಎಇ ಕೂಡ ಸಮೀಪದಲ್ಲೇ ಇದೆ. ಆದರೆ, ನೇರ ನಿಯಂತ್ರಣ ಇಲ್ಲ. ಜಲಸಂಧಿಯ ಉತ್ತರ ಭಾಗದ ನಿಯಂತ್ರಣವು ಇರಾನ್ಗೆ ಇರುತ್ತದೆ. ಖೇಶ್ಮ್ ಮತ್ತು ಹಾರ್ಮುಜ್ ಎನ್ನುವ ಪ್ರಮುಖ ದ್ವೀಪಗಳು ಇರಾನ್ ಅಧೀನದಲ್ಲಿವೆ. ಈ ಮಾರ್ಗದಲ್ಲಿ ಸಾಗುವ ಹಡಗುಗಳಿಗೆ ತೊಂದರೆ ಉಂಟು ಮಾಡಲು ಈ ದ್ವೀಪಗಳನ್ನು ಬಳಸಬಹುದು.
ಹಾರ್ಮೂಜ್ ಮಾರ್ಗ ನಿಂತರೆ ಏಷ್ಯನ್ ಮಾರುಕಟ್ಟೆಗೆ ಹೆಚ್ಚು ನಷ್ಟ
ಹಾರ್ಮೂಜ್ ಸ್ಟ್ರೇಟ್ ಮೂಲಕ ದಿನವೂ 20 ಮಿಲಿಯನ್ ಬ್ಯಾರಲ್ ತೈಲ ಹಾದು ಹೋಗುತ್ತದೆ. ವಿಶ್ವದ ಶೇ. 20ರಷ್ಟು ತೈಲ ಸರಬರಾಜು ಇದು. ಇದರಲ್ಲಿ ಶೇ. 80ಕ್ಕೂ ಅಧಿಕ ತೈಲ ಮತ್ತು ನೈಸರ್ಗಿಕ ಅನಿಲವು ವಿವಿಧ ಏಷ್ಯನ್ ದೇಶಗಳಿಗೆ ಸರಬರಾಜಾಗುತ್ತದೆ. ಅದರಲ್ಲೂ ಹೆಚ್ಚಾಗಿ ಚೀನಾ, ಭಾರತ, ಜಪಾನ್ ಮತ್ತು ದಕ್ಷಿಣ ಕೊರಿಯಾ ದೇಶಗಳಿಗೆ ಹೋಗುತ್ತದೆ. ಭಾರತದ ಅರ್ಧದಷ್ಟು ಎಲ್ಎನ್ಜಿ ಆಮದು ಇದೇ ಹಾರ್ಮುಜ್ ಮಾರ್ಗದ ಮೂಲಕ ಬರಬೇಕು.
ಹೀಗಾಗಿ, ಭಾರತಕ್ಕೆ ಆತಂಕದ ಸಂಗತಿ ಇದು. ಆದರೆ, ಪೆಟ್ರೋಲಿಯಂ ಸಚಿವರ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಸಾಕಷ್ಟು ತೈಲ ಇದೆ. ಏನೂ ಆಗಲ್ಲ ಎನ್ನುತ್ತಾರೆ. ಹಾರ್ಮುಜ್ ಮಾರ್ಗ ನಿಂತರೆ ತೈಲ ಸರಬರಾಜು ನಿಲ್ಲದೇ ಹೋದರೂ ಬೇರೆ ಸುತ್ತುಬಳಸು ಮಾರ್ಗದ ಮೂಲಕ ಸಾಗಿಸಬೇಕು. ಸಾಗಣೆ ವೆಚ್ಚ ಹೆಚ್ಚುತ್ತದೆ. ಪರಿಣಾಮವಾಗಿ ಪೆಟ್ರೋಲ್ ಬೆಲೆಯೂ ಹೆಚ್ಚುತ್ತದೆ.
ಇದನ್ನೂ ಓದಿ: ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಸಚಿವರ ಜೊತೆ ಪುಟಿನ್ ಮಾತುಕತೆ; ರಷ್ಯಾದ ನಿಲುವೇನು?
ಇರಾನ್ ನಿಜಕ್ಕೂ ಈ ಹಾರ್ಮೂಜ್ ಮಾರ್ಗ ಬಂದ್ ಮಾಡುತ್ತಾ?
ಇರಾನ್ ಬಳಿ ಆ್ಯಂಟಿ ಶಿಪ್, ಸಬ್ಮರೀನ್ ಇತ್ಯಾದಿ ಶಸ್ತ್ರಾಸ್ತ್ರಗಳಿವೆ. ಹಾರ್ಮೂಜ್ ಸ್ಟ್ರೇಟ್ ಅನ್ನು ಬಂದ್ ಮಾಡುವ ಅವಕಾಶ ಇದೆ. ಆದರೆ, ಹಿಂದೆಂದೂ ಇರಾನ್ ಈ ನಿರ್ಧಾರ ತೆಗೆದುಕೊಂಡಿಲ್ಲ. ಹಿಂದೆ ಕೆಲ ಸಂದರ್ಭಗಳಲ್ಲಿ ಹಡಗುಗಳನ್ನು ತಡೆದಿರುವುದು, ವಶಕ್ಕೆ ತೆಗೆದುಕೊಂಡಿರುವ ನಿದರ್ಶನಗಳುಂಟು. ಪೂರ್ಣವಾಗಿ ಜಲಸಂಧಿ ತಡೆದಿಲ್ಲ.
ಒಂದು ವೇಳೆ ಇರಾನ್ ಈ ಜಲಸಂಧಿಯನ್ನು ತಡೆದರೆ ಅನೇಕ ದೇಶಗಳಿಂದ ವಿರೋಧ ಎದುರಿಸಬೇಕಾಗುತ್ತದೆ. ಚೀನಾಗೂ ಇದರಿಂದ ಬಾಧೆಯಾಗುವುದರಿಂದ ಇರಾನ್ ನೆರವಿಗೆ ಅದು ಬಾರದೇ ಹೋಗಬಹುದು. ಹೀಗಾಗಿ, ಇರಾನ್ ಇಂಥ ದುಸ್ಸಾಹಸಕ್ಕೆ ಕೈಹಾಕುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ