ಕೊರೊನಾ ಕಾಣಿಸಿಕೊಂಡ ನಂತರ ದೈನಂದಿನ ಅಗತ್ಯಗಳಿಗೆ ಸಾರ್ವಜನಿಕರು ನಗದು ವಿಥ್ ಡ್ರಾ ಮಾಡುವ ಪ್ರಮಾಣ ಜಾಸ್ತಿ ಆಗಿದೆ. ಅದರ ಜತೆಗೆ ಈಗಿನ ಕೊರೊನಾ ಎರಡನೇ ಅಲೆಯ ಲಾಕ್ಡೌನ್ ಸಂದರ್ಭದಲ್ಲಿ ವೈದ್ಯಕೀಯ ತುರ್ತು ವೆಚ್ಚಗಳನ್ನು ಭರಿಸುವುದಕ್ಕೂ ನಗದು ಬೇಕೇಬೇಕು ಎಂಬ ಸ್ಥಿತಿ ಇದೆ. ಲಾಕ್ಡೌನ್ ಮತ್ತು ಕರ್ಫ್ಯೂ ಬಹುತೇಕ ರಾಜ್ಯಗಳಲ್ಲಿ ಇರುವುದರಿಂದ ಸಾರ್ವಜನಿಕರು ಮನೆಗಳಿಂದ ಹೊರಗೆ ಬರುವುದಕ್ಕೆ ಆಯ್ಕೆಗಳಿಲ್ಲದೆ, ನಗದಿಗೆ ಬೇಡಿಕೆ ಜಾಸ್ತಿ ಆಗಿದೆ. ಅದರಲ್ಲೂ ಮೇ 7, 2021ಕ್ಕೆ ಕೊನೆಯಾದ ಅವಧಿಗೆ ಸಾರ್ವಜನಿಕರ ಬಳಿಯಲ್ಲಿ ಇರುವ ಕರೆನ್ಸಿ ನೋಟಿನ ಪ್ರಮಾಣ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಮೇ 7, 2021ರ ಕೊನೆಯಾದ ಅವಧಿಗೆ ಸಾರ್ವಜನಿಕರ ಬಳಿಯಲ್ಲಿನ ಕರೆನ್ಸಿ 35,464 ಕೋಟಿ ರೂ. ಹೆಚ್ಚಳವಾಗಿ, ಸಾರ್ವಕಾಲಿಕ ಗರಿಷ್ಠ ಮೊತ್ತ ರೂ. 28.39 ಲಕ್ಷ ಕೋಟಿ ತಲುಪಿದೆ. ಇನ್ನೊಂದು ವಿಚಾರ ನಿಮಗೆ ಗೊತ್ತಿರಲಿ, ಮಾರ್ಚ್ 2020ರಲ್ಲಿ ಕೊರೊನಾ ಕಾಣಿಸಿಕೊಂಡಿತಲ್ಲಾ, ಅಲ್ಲಿಂದ 14 ತಿಂಗಳಲ್ಲಿ ಸಾರ್ವಜನಿಕರ ಬಳಿ ಇರುವ ಕರೆನ್ಸಿಯ ಪ್ರಮಾಣ 5.3 ಲಕ್ಷ ಕೋಟಿಗೂ ಹೆಚ್ಚಾಗಿದೆ.
2020ರ ಜುಲೈನಿಂದ ಈಚೆಗೆ ಯಾವಾಗ ಕೊರೊನಾ ಸೋಂಕು ಪ್ರಕರಣಗಳು ಕಡಿಮೆ ಆಗುತ್ತಾ ಬಂದಿತ್ತೋ ನಗದು ಪ್ರಮಾಣ ಕೂಡ ಕಡಿಮೆ ಆಗುತ್ತಾ ಬಂದಿತ್ತು. ಆದರೆ 2021ರ ಫೆಬ್ರವರಿಯಿಂದ ಸೋಂಕು ಹೆಚ್ಚುತ್ತಾ ಹೋದಂತೆ ಸಾರ್ವಜನಿಕರ ಬಳಿಯಲ್ಲಿ ಇರುವ ನಗದು ಪ್ರಮಾಣ ಮತ್ತೆ ವೇಗ ಪಡೆಯಿತು. ಮಾರ್ಚ್ 1, 2021ರಿಂದ ಮೇ 7, 2021ರ ಮಧ್ಯದಲ್ಲಿ ಸಾರ್ವಜನಿಕರ ಬಳಿಯಲ್ಲಿನ ನಗದು ಪ್ರಮಾಣ 1.04 ಲಕ್ಷ ಕೋಟಿ ರೂ. ಜಾಸ್ತಿಯಾಗಿದ್ದು, ಮೇ 7, 2021ಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟದ ನಗದು ರೂ. 28.39 ಲಕ್ಷ ಕೋಟಿ ಜನರ ಬಳಿ ಇತ್ತು ಎಂದು ಅಂಕಿ- ಅಂಶಗಳು ಎದುರಿಗಿವೆ.
ಈ ಹಿಂದೆ ಮಾರ್ಚ್ 1, 2020 ಮತ್ತು ಜೂನ್ 19, 2020ರ ಮಧ್ಯೆ ಸಾರ್ವಜನಿಕರ ಬಳಿಯ ಕರೆನ್ಸಿ ನೋಟು 3.07 ಲಕ್ಷ ಕೋಟಿ ರೂ. ಹೆಚ್ಚಳವಾಗಿ, ಫೆಬ್ರವರಿ 28ನೇ ತಾರೀಕಿನಂದು ರೂ. 22.55 ಲಕ್ಷ ಕೋಟಿ ಇದ್ದದ್ದು ಜೂನ್ 19, 2020ಕ್ಕೆ 25.62 ಲಕ್ಷ ಕೋಟಿ ರೂಪಾಯಿಗೆ ತಲುಪಿತ್ತು. 2020ನೇ ಇಸವಿಯ ಮಾರ್ಚ್ ಮತ್ತು ಜೂನ್ ಮಧ್ಯೆ ಜನರು ಬ್ಯಾಂಕ್ಗಳಿಂದ ಮತ್ತು ಎಟಿಎಂಗಳಿಂದ ಭಾರೀ ಪ್ರಮಾಣದಲ್ಲಿ ನಗದು ವಿಥ್ ಡ್ರಾ ಮಾಡಿದ್ದಾರೆ. ಇದು ಕೊರೊನಾ ಲಾಕ್ಡೌನ್ನ ಪರಿಣಾಮ. ಆ ಸಂದರ್ಭದಲ್ಲಿ ನಗದು ವಹಿವಾಟಿನ ಮೇಲೆ ಅವಲಂಬನೆ ಜಾಸ್ತಿ ಇತ್ತು.
ಅದೇ 2020ರ ಜುಲೈನಿಂದ ಸೆಪ್ಟೆಂಬರ್ ತನಕದ ಅವಧಿಗೆ ಹೋಲಿಸಿದರೆ ಸಾರ್ವಜನಿಕರ ಬಳಿಯ ಕರೆನ್ಸಿ 22,305 ಕೋಟಿ ರೂ. ಹೆಚ್ಚಳವಾಗಿದೆ. ಮತ್ತು ಡಿಸೆಂಬರ್ ಮತ್ತು ಜನವರಿ ಮಧ್ಯೆ ರೂ. 33,500 ಸಾವಿರ ಕೋಟಿಯಾಗಿದೆ. ಇನ್ನು ಹಬ್ಬಗಳ ಸೀಸನ್ ಆದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಸಾರ್ವಜನಿಕರ ಬಳಿಯ ಕರೆನ್ಸಿ ರೂ. 88,300 ಕೋಟಿ ಹೆಚ್ಚಳವಾಗಿದೆ. ಆಸಕ್ತಿಕರವಾದ ಸಂಗತಿ ಏನು ಗೊತ್ತಾ? ನವೆಂಬರ್ 8, 2016ರಲ್ಲಿ ನೋಟು ನಿಷೇಧ ಘೋಷಿಸಿದ ನಂತರದಲ್ಲಿ ಸಾರ್ವಜನಿಕರ ಬಳಿ ಇರುವ ಕರೆನ್ಸಿ ಮೊತ್ತ 10.4 ಲಕ್ಷ ಕೋಟಿ ರೂಪಾಯಿ ಅಥವಾ ಶೇ 58ರಷ್ಟು ಹೆಚ್ಚಳವಾಗಿದೆ. ನವೆಂಬರ್ 4, 2016ರಲ್ಲಿ ಸಾರ್ವಜನಿಕರ ಬಳಿ ಇದ್ದ ಕರೆನ್ಸಿ ಮೊತ್ತ ರೂ. 17.97 ಲಕ್ಷ ಕೋಟಿ.
ಸಾರ್ವಜನಿಕರು ಏಕೆ ನಗದು ಇಟ್ಟುಕೊಳ್ಳುವುದು ಹೆಚ್ಚಾಗಿದೆ?
ಸಾಂಪ್ರದಾಯಿಕವಾದ ಆಲೋಚನೆ ಏನು ಗೊತ್ತಾ? ಅನಿಶ್ಚಿತವಾದ ವಾತಾವರಣದಲ್ಲಿ ಸಾರ್ವಜನಿಕರಿಗೆ ನಗದನ್ನು ಇಟ್ಟುಕೊಳ್ಳಬೇಕು ಎಂಬ ಧಾವಂತ ಶುರುವಾಗುತ್ತದೆ. ಕೊರೊನಾ ಎರಡನೇ ಅಲೆಯಲ್ಲಿ ಏಪ್ರಿಲ್ ಮೊದಲ ವಾರ ದಿನಕ್ಕೆ 1 ಲಕ್ಷ ಹೊಸದಾದ ಕೊರೊನಾ ಸೋಂಕು ಪ್ರಕರಣಗಳು ಬರುತ್ತಿದ್ದದ್ದು ಮೇ ತಿಂಗಳ ಮೊದಲ ವಾರದಲ್ಲಿ 4 ಲಕ್ಷಕ್ಕೆ ಬಂದು ನಿಂತಿತು. ಕೇಂದ್ರ ಸರ್ಕಾರದಿಂದ ಕಠಿಣ ಲಾಕ್ಡೌನ್ ಘೋಷಿಸುವ ಬಗ್ಗೆ ಆತಂಕ ಶುರುವಾಯಿತು. ನಗದನ್ನು ಜಾಸ್ತಿ ವಿಥ್ಡ್ರಾ ಮಾಡಲು ಇದೊಂದು ಕಾರಣ. ಇನ್ನೂ ಕೆಲವರಿಗೆ ದಿಢೀರ್ ಅನಾರೋಗ್ಯ ಸಮಸ್ಯೆ ಎದುರಾಗಿಬಿಟ್ಟರೆ ಎಂಬ ಆತಂಕ. ನಗದಿಗೆ ಅಗತ್ಯ ಬಂದು, ಬೇಕಾದ ಪ್ರಮಾಣದಲ್ಲಿ ಸಿಗದೇ ಹೋದರೆ ಎಂಬ ಅನುಮಾನ.
ಸರ್ಕಾರಗಳು ಆರಂಭದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ಡೌನ್ ಘೋಷಿಸಿದವು. ಆದರೆ ಕೊರೊನಾ ಹತೋಟಿಗೆ ಬರುತ್ತಿಲ್ಲ ಎಂದಾಗ ಕಠಿಣ ಲಾಕ್ಡೌನ್ ಹಾಗೂ ನಿರ್ಬಂಧ ಅನಿವಾರ್ಯ ಆಯಿತು. ಅದಕ್ಕೆ ತಕ್ಕಂತೆ ಜನರು ಸಹ ನಗದನ್ನು ಇಟ್ಟುಕೊಳ್ಳುವುದು ಹೆಚ್ಚಾಯಿತು. ಬ್ಯಾಂಕ್ಗಳು ಹೇಳುವ ಪ್ರಕಾರ, ಜನರು ಕೆಲಸಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಸಂಬಳ ಕಡಿತ ಆಗುತ್ತಿದೆ. ಆ ಕಾರಣಕ್ಕೆ ತಮ್ಮ ಉಳಿತಾಯದ ಹಣವನ್ನು ತೆಗೆದು, ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ. ಇದರಿಂದ ಕೂಡ ಸಾರ್ವಜನಿಕರ ಬಳಿಯಲ್ಲಿ ಕರೆನ್ಸಿ ಪ್ರಮಾಣ ಜಾಸ್ತಿ ಆಗಿದೆ.
ನಗದು ಪ್ರಮಾಣ ಇನ್ನಷ್ಟು ಹೆಚ್ಚಬಹುದಾ?
ಕೊರೊನಾ ಬಿಕ್ಕಟ್ಟು ಇನ್ನಷ್ಟು ಬದುಕುಗಳ ಮೇಲೆ ಪರಿಣಾಮ ಬೀರುತ್ತಿದ್ದಂತೆ ಮತ್ತು ಅನಿಶ್ಚಿತತೆ ಸೃಷ್ಟಿಸುತ್ತಿದ್ದಂತೆ ನಗದು ಇಟ್ಟುಕೊಳ್ಳಬೇಕು ಎಂಬ ಆಲೋಚನೆ ಮತ್ತಷ್ಟು ಬಲವಾಗುತ್ತದೆ. ಕೆಲವರು ಹೇಳುವಂತೆ ಮುಂದಿನ ಕೆಲ ತಿಂಗಳು ಜನರ ಬಳಿ ನಗದು ಇಟ್ಟುಕೊಳ್ಳುವುದು ವಿಪರೀತ ಹೆಚ್ಚಾಗುತ್ತದೆ. ವೈದ್ಯಕೀಯ ಕಾರಣಗಳಿಗೋ ಅಥವಾ ಮತ್ಯಾವುದಾದರೂ ಅನಿವಾರ್ಯಕ್ಕೆ ನಗದು ಇಟ್ಟುಕೊಳ್ಳಲಿದ್ದಾರೆ ಎಂಬ ಅಭಿಪ್ರಾಯ ಬಂದಿದೆ. ಆರ್ಬಿಐ ದತ್ತಾಂಶ ತೋರಿಸುವ ಪ್ರಕಾರ, ವರ್ಷದಿಂದ ವರ್ಷಕ್ಕೆ ಜನರ ಬಳಿ ಇಟ್ಟುಕೊಳ್ಳುವ ನಗದಿನ ಪ್ರಮಾಣ ಜಾಸ್ತಿಯಾಗುತ್ತಾ ಬಂದಿದೆ. ವ್ಯವಸ್ಥೆಯೊಳಗೆ ನಗದಿನ ಪ್ರಮಾಣ ಕಡಿಮೆ ಆಗಬೇಕು ಎಂಬ ಕಾರಣಕ್ಕೆ ಸರ್ಕಾರ ನೋಟು ನಿಷೇಧ ಘೋಷಣೆ ಆಯಿತು. ಅಲ್ಲಿಂದ ಈಚೆಗೆ ಜನರ ಬಳಿ ನಗದು ಇಟ್ಟುಕೊಳ್ಳುವ ಪ್ರಮಾಣ ಶೇ 58ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: Cash Transaction: ಈ 5 ವಹಿವಾಟಿನಲ್ಲಿ ನಗದು ಮಿತಿ ಮೀರಿದರೆ ಬಾಗಿಲು ತಟ್ಟುತ್ತದೆ ಐ.ಟಿ. ನೋಟಿಸ್
(Currency with people in India recorded all time high Rs 28.39 lakh crore as on fortnight end of May 7, 2021)
Published On - 6:03 pm, Sat, 22 May 21