Electricity Tariff Rules: ದಿನದ ಬೇರೆ ಬೇರೆ ಹೊತ್ತಿನಲ್ಲಿ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ಅನ್ವಯ: ಹೊಸ ಮಾದರಿ ಬಿಲ್ ವ್ಯವಸ್ಥೆಗೆ ಕೇಂದ್ರ ಕ್ರಮ

|

Updated on: Jun 23, 2023 | 6:50 PM

Changes In 2020 Electricity (Consumer Rights) Rules: ಕೇಂದ್ರ ಸರ್ಕಾರ 2020ರ ವಿದ್ಯುತ್ ಗ್ರಾಹಕರ ಹಕ್ಕು ನಿಯಮಕ್ಕೆ ತಿದ್ದುಪಡಿ ತಂದಿದ್ದು ಅದಕ್ಕೆ ಅನುಮೋದನೆ ಕೂಡ ಸಿಕ್ಕಿದೆ. ವಿದ್ಯುತ್ ಬಳಕೆ ವಿಚಾರದಲ್ಲಿ ದಿನದ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ದರ ವಿಧಿಸುವಂತೆ ನಿಯಮ ಬದಲಾಯಿಸಲಾಗಿದೆ.

Electricity Tariff Rules: ದಿನದ ಬೇರೆ ಬೇರೆ ಹೊತ್ತಿನಲ್ಲಿ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ಅನ್ವಯ: ಹೊಸ ಮಾದರಿ ಬಿಲ್ ವ್ಯವಸ್ಥೆಗೆ ಕೇಂದ್ರ ಕ್ರಮ
ವಿದ್ಯುತ್
Follow us on

ನವದೆಹಲಿ: ವಿದ್ಯುತ್ ಲೋಡಿಂಗ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾರ ಹೊಸ ಉಪಾಯ ಹುಡುಕಿದೆ. ಅದರಂತೆ ದಿನದಲ್ಲಿ ಬೇರೆ ಬೇರೆ ಸಮಯದಲ್ಲಿ ವಿದ್ಯುತ್ ಬಳಕೆಗೆ (Electricity Consumption) ಬೇರೆ ಬೇರೆ ದರ ಅನ್ವಯ ಮಾಡುವಂಥ ವ್ಯವಸ್ಥೆಯನ್ನು ಕೇಂದ್ರ ಜಾರಿ ಮಾಡುತ್ತಿದೆ. ಇದರಲ್ಲಿ ನೀವು ಬೆಳಗಿನ ನಿರ್ದಿಷ್ಟ ಅವಧಿಯಲ್ಲಿ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಬೆಳಗ್ಗೆ ಅಥವಾ ಸಂಜೆ ಬಳಸುವ ವಿದ್ಯುತ್​ಗೆ ಬೇರೆ ದರ ಇರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜೂನ್ 23, ಶುಕ್ರವಾರದಂದು ವಿದ್ಯುತ್ ಗ್ರಾಹಕರ ಹಕ್ಕು ನಿಯಮ 2020ಕ್ಕೆ ತಿದ್ದುಪಡಿಗೆ ಅನುಮೋದಿಸಿದೆ. ಇದರಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಯೂ ಒಳಗೊಂಡಿದೆ.

ಈಗಿರುವ ವ್ಯವಸ್ಥೆಯಲ್ಲಿ ನಾವು ದಿನದಲ್ಲಿ ಯಾವ ಹೊತ್ತಿನಲ್ಲಿ ಎಷ್ಟೇ ವಿದ್ಯುತ್ ಬಳಸಿದರೂ ಎಲ್ಲಕ್ಕೂ ದರ ಸಮಾನವಾಗಿ ಅನ್ವಯ ಆಗುತ್ತದೆ. ಒಟ್ಟು ಬಳಕೆ ಎಷ್ಟು ಎಂಬುದರ ಆಧಾರದ ಮೇಲೆ ಬಿಲ್ ಸಿದ್ಧಪಡಿಸಲಾಗುತ್ತದೆ. ಉಚ್ಛ್ರಾಯ ಅವಧಿಯಲ್ಲಿ ವಿದ್ಯುತ್ ಬಳಕೆಯನ್ನು ತಗ್ಗಿಸಲು ಸರ್ಕಾರ ಈಗ ಇಂಥದ್ದೊಂದು ಹೊಸ ಉಪಾಯ ಹುಡುಕಿದೆ.

ಸೋಲಾರ್ ಅವರ್ ಅಥವಾ ಸೌರ ಗಂಟೆ ಎಂದು ಕರೆಯಲಾಗುವ ಅವಧಿಯಲ್ಲಿ ವಿದ್ಯುತ್ ದರ ಶೇ. 10ರಿಂದ 20ರಷ್ಟು ಕಡಿಮೆ ಇರುತ್ತದೆ. ಪೀಕ್ ಅವರ್ ಅಥವಾ ಉಚ್ಛ್ರಾಯ ಅವಧಿಯಲ್ಲಿ ಶೇ. 10ರಿಂದ ಶೇ. 20ರಷ್ಟು ಹೆಚ್ಚು ದರ ಇರಲಿದೆ. ಈ ಅವಧಿಯನ್ನು ರಾಜ್ಯ ವಿದ್ಯುತ್ ಪ್ರಾಧಿಕಾರಗಳು ನಿರ್ಧರಿಸುತ್ತವೆ.

ಇದನ್ನೂ ಓದಿಗೃಹಜ್ಯೋತಿ ಯೋಜನೆ ಬಗ್ಗೆ ಇನ್ನೂ ಗೊಂದಲ ಇದೆಯೇ? ನಿಮ್ಮೆಲ್ಲ ಸಂದೇಹಗಳಿಗೆ ಬೆಸ್ಕಾಂ ನೀಡಿದ ಉತ್ತರ ಇಲ್ಲಿದೆ

ಹೊಸ ಮಾದರಿಯ ವಿದ್ಯುತ್ ದರ ವ್ಯವಸ್ಥೆಯು ಎಲ್ಲೆಡೆ ಸ್ಮಾರ್ಟ್​ಮೀಟರ್ ಅಳವಡಿಕೆ ಪೂರ್ಣಗೊಂಡ ಬಳಿಕ ಅನ್ವಯ ಆಗಬಹುದು. ಸರ್ಕಾರ 2024 ಏಪ್ರಿಲ್ 1ರಿಂದ ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಗುರಿ ಹೊಂದಿದೆ. ಮೊದಲಿಗೆ 10 ಕಿಲೋವ್ಯಾಟ್ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬೇಡಿಕೆ ಇರುವ ವಾಣಿಜ್ಯ ಮತ್ತು ಔದ್ಯಮಿಕ ಗ್ರಾಹಕರಿಗೆ ಇದು ಅನ್ವಯ ಆಗಲಿದೆ. ಒಂದು ವರ್ಷದ ಬಳಿಕ, 2025 ಏಪ್ರಿಲ್ 1ರಿಂದ ಕೃಷಿ ಗ್ರಾಹಕರನ್ನು ಹೊರತುಪಡಿಸಿ ಉಳಿದೆಲ್ಲಾ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಇದು ಜಾರಿಯಾಗುವ ನಿರೀಕ್ಷೆ ಇದೆ.

ಸೌರ ಗಂಟೆಯಲ್ಲಿ ಯಾಕೆ ವಿದ್ಯುತ್ ದರ ಕಡಿಮೆ?

ಪೀಕ್ ಅವಧಿ, ಸೌರ ಅವಧಿ ಮತ್ತು ಸಹಜ ಅವಧಿ ಹೀಗೆ ವಿದ್ಯುತ್ ದರಗಳನ್ನು ವಿಭಾಗಿಸುವುದರಿಂದ ಗ್ರಾಹಕರು ವಿದ್ಯುತ್ ಬಳಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ನಿಭಾಯಿಸಬಹುದು. ಇದರಿಂದ ಗ್ರಾಹಕರಿಗೂ ಲಾಭ, ವಿದ್ಯುತ್ ಸರಬರಾಜು ವ್ಯವಸ್ಥೆಗೂ ಹೊರೆ ತಗ್ಗುತ್ತದೆ ಎಂಬುದು ಸರ್ಕಾರದ ಎಣಿಕೆ.

ಇದನ್ನೂ ಓದಿಕರೆಂಟ್ ಬಿಲ್ ಪಾವತಿಸುವಾಗ ಈ ತಪ್ಪು ಮಾಡಬೇಡಿ; ಉಚಿತ ವಿದ್ಯುತ್ ಯೋಜನೆಯಿಂದ ವಂಚಿತರಾಗ್ತೀರಿ

ಸೌರ ಗಂಟೆಗಳೆಂದರೆ ಅದು ಸೂರ್ಯನ ಬಿಸಿಲು ಇರುವ ಕಾಲಾವಧಿ. ಈ ಸಂದರ್ಭದಲ್ಲಿ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿರುತ್ತದೆ. ಇದರ ಬೆಲೆ ಕಡಿಮೆ ಇರುವುದರಿಂದ ವಿದ್ಯುತ್ ಬಳಕೆದಾರರಿಗೆ ಈ ಅವಧಿಯಲ್ಲಿನ ಬಳಕೆಗೆ ದರ ಕಡಿಮೆಗೊಳಿಸಲು ಉದ್ದೇಶಿಸಲಾಗಿದೆ.

ಇನ್ನು ದಿನದ ಬೇರೆ ಕಾಲಾವಧಿಯಲ್ಲಿ ಜಲವಿದ್ಯುತ್ ಇತ್ಯಾದಿ ಮೂಲದಿಂದ ತಯಾರಾಗುವ ವಿದ್ಯುತ್ ಅನ್ನು ಬಳಸಲಾಗುತ್ತದೆ. ಇವು ಹೆಚ್ಚಿನ ಬೆಲೆ ಹೊಂದಿರುವುದರಿಂದ ಇದರ ಬಳಕೆಗೂ ಹೆಚ್ಚಿನ ದರ ಅನ್ವಯ ಮಾಡುವುದು ಸರ್ಕಾರದ ತಂತ್ರ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:46 pm, Fri, 23 June 23