ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 1300 ಕೋಟಿ ರೂಪಾಯಿ ಪಿಎಲ್​ಐ ಯೋಜನೆಗೆ ಕೇಂದ್ರ ಅನುಮೋದನೆ

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 1300 ಕೋಟಿ ರೂಪಾಯಿ ಪಿಎಲ್​ಐ ಯೋಜನೆಗೆ ಕೇಂದ್ರ ಅನುಮೋದನೆ
ಕೇಂದ್ರ ಸಚಿವ ಅನುರಾಗ್ ಠಾಕೂರ್ (ಸಂಗ್ರಹ ಚಿತ್ರ)

ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸಂಪುಟವು 1300 ಕೋಟಿ ರೂಪಾಯಿಯ ಪಿಎಲ್​ಐ ಯೋಜನೆಯನ್ನು ಅನುಮೋದಿಸಿದೆ.

TV9kannada Web Team

| Edited By: Srinivas Mata

Dec 15, 2021 | 6:47 PM

ರುಪೇ ಡೆಬಿಟ್ ಕಾರ್ಡ್ ಮತ್ತು ಭೀಮ್ ಯುಪಿಐ ಮೂಲಕ ಸಣ್ಣ ಮೊತ್ತದ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಪ್ರೋತ್ಸಾಹ ನೀಡುವ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಡಿಸೆಂಬರ್ 15ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಸುಮಾರು 1,300 ಕೋಟಿ ರೂಪಾಯಿ ವೆಚ್ಚ ಆಗಲಿದೆ ಎಂದು ತಿಳಿಸಿದ್ದಾರೆ. ಯೋಜನೆಯನ್ನು ಮತ್ತಷ್ಟು ವಿವರಿಸಿದ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್, ವ್ಯಾಪಾರಿ ರಿಯಾಯಿತಿ ದರದ (MDR) ಭಾಗವಾಗಿ ವ್ಯಾಪಾರಿಗಳಿಗೆ ವ್ಯಕ್ತಿಗಳು ಮಾಡಿದ ಡಿಜಿಟಲ್ ಪಾವತಿಗಳ ಮೇಲೆ ವಿಧಿಸಲಾದ ವಹಿವಾಟು ಶುಲ್ಕವನ್ನು ಸರ್ಕಾರ ಮರುಪಾವತಿ ಮಾಡುತ್ತದೆ ಎಂದು ಹೇಳಿದ್ದಾರೆ.

“ಮುಂಬರುವ ಒಂದು ವರ್ಷದಲ್ಲಿ ಸರ್ಕಾರವು ಸುಮಾರು 1,300 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇದರಿಂದ ಹೆಚ್ಚು ಹೆಚ್ಚು ಜನರು ಡಿಜಿಟಲ್ ಪಾವತಿಯತ್ತ ಸಾಗುತ್ತಾರೆ,” ಎಂದು ವೈಷ್ಣವ್ ಹೇಳಿದ್ದಾರೆ. ನವೆಂಬರ್‌ನಲ್ಲಿ 7.56 ಲಕ್ಷ ಕೋಟಿ ಮೌಲ್ಯದ 423 ಕೋಟಿ ಡಿಜಿಟಲ್ ವಹಿವಾಟು ನಡೆದಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಇನ್ನು ಇದರ ಜತೆಗೆ ಮೈಕ್ರೋಚಿಪ್‌ಗಳ ಕೊರತೆಯು ಕೈಗಾರಿಕಾ ಉತ್ಪಾದನೆಯನ್ನು ಘಾಸಿಗೊಳಿಸುವುದರಿಂದ ದೇಶವನ್ನು ಎಲೆಕ್ಟ್ರಾನಿಕ್ಸ್ ಹಬ್ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಸೆಮಿ ಕಂಡಕ್ಟರ್​ಗಳಿಗೆ ಉತ್ಪಾದನಾ ಸಂಬಂಧಿತ ಪ್ರೋತ್ಸಾಹ ಯೋಜನೆ (ಪಿಎಲ್‌ಐ) ಅನ್ನು ಸಹ ಕೇಂದ್ರ ಸಂಪುಟ ಅನುಮೋದಿಸಿತು.

“ಸೆಮಿಕಂಡಕ್ಟರ್‌ಗಳ ಸಂಪೂರ್ಣ ಎಕೋ ಸಿಸ್ಟಮ್ ಸ್ಥಾಪಿಸುವ ಮತ್ತು ಡಿಸ್​ಪ್ಲೇ ತಯಾರಿಕೆಯ ಮಹತ್ವಾಕಾಂಕ್ಷೆ ಯೋಜನೆಯನ್ನು ಮಂಜೂರು ಮಾಡಲಾಗಿದೆ. ಈ ಯೋಜನೆಗೆ 6 ವರ್ಷಗಳಲ್ಲಿ 76,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು,” ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸಂಪುಟ ಅನುಮೋದಿಸಿದ ಮತ್ತೊಂದು ಯೋಜನೆಯು 2021-26ರ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅನುಷ್ಠಾನವಾಗಿದೆ. ಈ ಯೋಜನೆಯು 2.5 ಲಕ್ಷ ಪರಿಶಿಷ್ಟ ಜಾತಿ ಮತ್ತು 2 ಲಕ್ಷ ಪರಿಶಿಷ್ಟ ಪಂಗಡದ ರೈತರು ಸೇರಿದಂತೆ ಸುಮಾರು 22 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: PLI Scheme: ಪಿಎಲ್​ಐ ಯೋಜನೆ ಅಡಿ ಸೆಮಿಕಂಡಕ್ಟರ್​ಗೆ 76 ಸಾವಿರ ಕೋಟಿ ರೂ. ಕೇಂದ್ರ ಸಂಪುಟ ಅನುಮೋದನೆ

Follow us on

Related Stories

Most Read Stories

Click on your DTH Provider to Add TV9 Kannada