Airport Privatisation: 2022ರಿಂದ 2025ರ ಮಧ್ಯೆ 25 ವಿಮಾನ ನಿಲ್ದಾಣ ಖಾಸಗಿಗೆ ವಹಿಸಲು ಕೇಂದ್ರದ ಯೋಜನೆ
ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ ಅಡಿಯಲ್ಲಿ 2022ರಿಂದ 2025ರ ಮಧ್ಯೆ 25 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರವು ಯೋಜನೆಯನ್ನು ರೂಪಿಸಿದೆ.
ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್ (National Monetization Pipeline) ಅಡಿಯಲ್ಲಿ 2022ನೇ ಇಸವಿಯಿಂದ 2025ನೇ ಇಸವಿ ಮಧ್ಯೆ ಒಟ್ಟು 25 ವಿಮಾನ ನಿಲ್ದಾಣಗಳನ್ನು ಖಾಸಗಿಗೆ ವಹಿಸುವುದಕ್ಕೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ. ಸಿಂಗ್ ಡಿಸೆಂಬರ್ 9ರಂದು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದ್ದಾರೆ. ಆಸ್ತಿ ನಗದೀಕರಣದ ಸರ್ಕಾರದ ಯೋಜನೆಗಳ ಭಾಗವಾಗಿ, ಸರ್ಕಾರವು ಆಯ್ಕೆ ಮಾಡಿದ 25 ವಿಮಾನ ನಿಲ್ದಾಣಗಳು ಹೀಗಿವೆ: ನಾಗ್ಪುರ, ವಾರಾಣಸಿ, ಡೆಹ್ರಾಡೂನ್, ತಿರುಚ್ಚಿ, ಇಂದೋರ್, ಚೆನ್ನೈ, ಕಲ್ಲಿಕೋಟೆ, ಕೊಯಮತ್ತೂರು, ಭುವನೇಶ್ವರ್ ಮತ್ತು ಪಾಟ್ನಾ… ಎಂದು ಸಚಿವರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಮದುರೈ, ತಿರುಪತಿ, ರಾಂಚಿ, ಜೋಧ್‌ಪುರ, ರಾಯ್‌ಪುರ, ರಾಜಮಂಡ್ರಿ, ವಡೋದರಾ, ಅಮೃತ್ಸರ, ಸೂರತ್, ಹುಬ್ಬಳ್ಳಿ, ಇಂಫಾಲ್, ಅಗರ್ತಲಾ, ಉದಯಪುರ, ಭೋಪಾಲ್ ಮತ್ತು ವಿಜಯವಾಡದಲ್ಲಿ ವಿಮಾನ ನಿಲ್ದಾಣಗಳನ್ನು ಖಾಸಗಿಗೆ ವಹಿಸುವುದಕ್ಕೆ ಸರ್ಕಾರ ಯೋಜನೆ ಮಾಡಿದೆ.
ವಾರ್ಷಿಕ ಸಂಚಾರ ಪ್ರಮಾಣದ ಟ್ರೆಂಡ್‌ಗಳನ್ನು ನೋಡಿದ ನಂತರ ವಿಮಾನ ನಿಲ್ದಾಣಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ವಾರ್ಷಿಕ 0.4 ಮಿಲಿಯನ್ ಪ್ರಯಾಣಿಕರನ್ನು ಹೊಂದಿರುವ ಎಲ್ಲ ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಪ್ರಸಾದ್ ಮೊಹಾಪಾತ್ರ ಅವರು 2019ರಲ್ಲಿ ಘೋಷಿಸಿದಂತೆ, ಮುಂದಿನ ಹಂತದ ಆಸ್ತಿ ನಗದೀಕರಣದಲ್ಲಿ 20-25ಕ್ಕೂ ಹೆಚ್ಚಿನ ವಿಮಾನ ನಿಲ್ದಾಣಗಳನ್ನು ಖಾಸಗಿಗೆ ವಹಿಸಲು ಸರ್ಕಾರ ಯೋಜಿಸಿದೆ ಮತ್ತು ವಿದೇಶೀ ವಿಮಾನ ನಿಲ್ದಾಣಗಳು ಗಮನಾರ್ಹವಾಗಿ ಭಾಗವಹಿಸುವ ನಿರೀಕ್ಷೆ ಇದೆ ಎನ್ನಲಾಗಿದೆ.
ಒಟ್ಟಾರೆ ನಷ್ಟ 2,882 ಕೋಟಿ ರೂಪಾಯಿ ದೇಶದಾದ್ಯಂತ 25 ವಿಮಾನ ನಿಲ್ದಾಣಗಳ ನಗದೀಕರಣ ಯೋಜನೆ ಮೂಲಕ ಮುಂದಿನ ನಾಲ್ಕು ವರ್ಷಗಳಲ್ಲಿ 20,782 ಕೋಟಿ ರೂಪಾಯಿ ಆದಾಯದ ಗುರಿ ಇದೆ ಎಂದು 2021ರಲ್ಲಿ ಕೇಂದ್ರ ಸರ್ಕಾರವು ತಿಳಿಸಿತ್ತು. 2020-21ರಲ್ಲಿ ಕೊರೊನಾ ಬಿಕ್ಕಟ್ಟಿನಿಂದಾಗಿ ದೇಶದ 136 ವಿಮಾನ ನಿಲ್ದಾಣಗಳಲ್ಲಿ 133 ಭಾರೀ ನಷ್ಟವನ್ನು ಅನುಭವಿಸಿವೆ ಎಂದು ಸಿಂಗ್ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಭಾರತದಲ್ಲಿನ 136 ವಿಮಾನ ನಿಲ್ದಾಣಗಳ ಗಳಿಕೆಯ ಮಾಹಿತಿಯು 2020-21ರಲ್ಲಿ ಒಟ್ಟಾರೆಯಾಗಿ 2,882.74 ಕೋಟಿ ರೂಪಾಯಿಗಳ ನಷ್ಟವನ್ನು ದಾಖಲಿಸಿದೆ ಎಂದು ತೋರಿಸಿದೆ. 2019-20ರಲ್ಲಿ 80.18 ಕೋಟಿ ರೂಪಾಯಿಗಳ ನಷ್ಟ ಮತ್ತು 2018-19ರಲ್ಲಿ 465.91 ಕೋಟಿ ರೂಪಾಯಿಗಳ ನಷ್ಟ ಮತ್ತು ಅದರ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ.
ಕಂದಲಾ, ಕಾನ್ಪುರ್ ಚಕೇರಿ, ಬರೇಲಿ ಮತ್ತು ಪೋರಬಂದರ್ ಹೊರತುಪಡಿಸಿ ಭಾರತದ ಎಲ್ಲ ವಿಮಾನ ನಿಲ್ದಾಣಗಳು 2020-21ರಲ್ಲಿ ಭಾರಿ ನಷ್ಟವನ್ನು ವರದಿ ಮಾಡಿದೆ ಎಂದು ಸಚಿವರು ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಕಾನ್ಪುರ್ ಚಕೇರಿ ವಿಮಾನ ನಿಲ್ದಾಣವು 6.07 ಕೋಟಿ ರೂಪಾಯಿಗಳ ಲಾಭವನ್ನು ವರದಿ ಮಾಡುವ ಮೂಲಕ ಭಾರತದ ಅತ್ಯಂತ ಲಾಭದಾಯಕ ವಿಮಾನ ನಿಲ್ದಾಣವಾಗಿದೆ. ಪೋರಬಂದರ್, ಬರೇಲಿ ಮತ್ತು ಕಂದಲಾದ ಇತರ ಮೂರು ಲಾಭದಾಯಕ ವಿಮಾನ ನಿಲ್ದಾಣಗಳು ಕ್ರಮವಾಗಿ 1.54 ಕೋಟಿ ರೂ., 0.68 ಕೋಟಿ ರೂ. ಮತ್ತು ರೂ 0.11 ಕೋಟಿ ಲಾಭವನ್ನು ವರದಿ ಮಾಡಿವೆ.
ಅತಿ ಹೆಚ್ಚು ನಷ್ಟ ಕಂಡ ಟಾಪ್ 5 ವಿಮಾನ ನಿಲ್ದಾಣಗಳು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು FY21ರಲ್ಲಿ 384.81 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದೆ ಎಂದು ಅಂಕಿಅಂಶಗಳು ತೋರಿಸಿವೆ. ಇದರಲ್ಲಿ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್ ವಿಮಾನ ನಿಲ್ದಾಣದಲ್ಲಿ ಶೇಕಡಾ 74ರಷ್ಟು ಪಾಲನ್ನು ಹೊಂದಿದೆ ಮತ್ತು AAI ಶೇಕಡಾ 26ರಷ್ಟು ಪಾಲನ್ನು ಹೊಂದಿದೆ. ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 317.41 ಕೋಟಿ ರೂಪಾಯಿ ನಷ್ಟವಾಗಿದೆ. ಮುಂಬೈ ಮತ್ತು ದೆಹಲಿ ವಿಮಾನ ನಿಲ್ದಾಣಗಳು ಕೊರೊನಾ ಬಿಕ್ಕಟ್ಟಿನಿಂದ ಹೆಚ್ಚು ಹಾನಿಗೊಳಗಾದವು. ಏಕೆಂದರೆ ಅವು ಅಂತರರಾಷ್ಟ್ರೀಯ ದಟ್ಟಣೆಯ ವಿಷಯದಲ್ಲಿ ಹೆಚ್ಚು ಜನನಿಬಿಡವಾಗಿದ್ದವು, ಇದು ಇನ್ನೂ ನಿಯಮಿತವಾಗಿ ಪುನರಾರಂಭಗೊಳ್ಳುವುದಿಲ್ಲ.
ಕಳೆದ ವರ್ಷದಲ್ಲಿ ಚೆನ್ನೈ, ತಿರುವನಂತಪುರ ಮತ್ತು ಅಹಮದಾಬಾದ್ ಮೊದಲ ಐದು ನಷ್ಟದ ವಿಮಾನ ನಿಲ್ದಾಣಗಳಾಗಿವೆ. ಏಪ್ರಿಲ್ 1, 2020ರಂದು ಪ್ರಾರಂಭವಾದ ಆರ್ಥಿಕ ವರ್ಷವು ಕೊವಿಡ್-19ರ ಹರಡುವಿಕೆಯನ್ನು ತಡೆಯಲು ಜಾರಿಯಲ್ಲಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನ ಮಧ್ಯದಲ್ಲಿ ಪ್ರಾರಂಭವಾಯಿತು.
ಇದನ್ನೂ ಓದಿ: Airport Privatisation: 13 ವಿಮಾನ ನಿಲ್ದಾಣಗಳ ಖಾಸಗೀಕರಣ ಮಾರ್ಚ್ ವೇಳೆ ಪೂರ್ಣಗೊಳಿಸಲು ಸರ್ಕಾರ ನಿರ್ಧಾರ