ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರದಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರೈಲ್ವೆ ಸೇರಿ ಅನೇಕ ವಲಯಗಳು ನಿಧಾನವಾಗಿ ಖಾಸಗೀಕರಣಗೊಳ್ಳುತ್ತಿವೆ. ಈಗ ಕೇಂದ್ರ ಸರ್ಕಾರ ಬ್ಯಾಂಕ್ಗಳ ಮೇಲೆ ಕಣ್ಣಿಟ್ಟಿದೆ. ನಾಲ್ಕು ಮಧ್ಯಮ ಗಾತ್ರದ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಮುಂದಾಗಿದೆ ಎಂದು ವರದಿ ಹೇಳಿದೆ.
ಮೊದಲ ಹಂತದಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವನ್ನು ಮಾರಾಟ ಮಾಡಲು ಚಿಂತನೆ ನಡೆಸಲಾಗಿದೆ. ಆದರೆ, ಈ ವಿಚಾರದ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಖಾಸಗೀಕರಣದ ಮೊದಲ ಹಂತ ಇದಾಗಿದೆ. ಸರ್ಕಾರಿ ಸ್ವಾಮ್ಯದ ಮಧ್ಯಮ ಗಾತ್ರದ ಬ್ಯಾಂಕ್ ಹಾಗೂ ಸಣ್ಣ ಬ್ಯಾಂಕ್ಗಳನ್ನು ಮೊದಲು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ದೇಶದ ದೊಡ್ಡ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡುವ ಆಲೋಚನೆ ಕೇಂದ್ರ ಸರ್ಕಾರದ್ದು. ಈ ಬಗ್ಗೆ ಉತ್ತರ ನೀಡಲು ಹಣಕಾಸು ಸಚಿವಾಲಯ ನಿರಾಕರಿಸಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ 50,000 ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 33,000, ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ 26,000 ಹಾಗೂ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ 13,000 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಉದ್ಯೋಗಿಗಳನ್ನು ಹೊಂದಿರುವ ಸರ್ಕಾರಿ ಬ್ಯಾಂಕಿಂಗ್ ಕ್ಷೇತ್ರದ ಖಾಸಗೀಕರಣವು ರಾಜಕೀಯವಾಗಿ ಅಪಾಯಕಾರಿಯಾಗಿದೆ. ಇದರಿಂದ ಉದ್ಯೋಗ ನಷ್ಟ ಉಂಟಾಗಬಹದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಖಾಸಗೀಕರಣ ಹಾಗೂ ಎಲ್ಐಸಿ ಷೇರುಗಳ್ನು ಸರ್ಕಾರ ಮಾರಾಟ ಮಾಡುತ್ತಿರುವುದನ್ನು ವಿರೋಧಿಸಿ ಸೋಮವಾರ ಪ್ರತಿಭಟನೆ ನಡೆದಿದೆ.
ಇದನ್ನೂ ಓದಿ: HDFC ಬ್ಯಾಂಕ್ ಗ್ರಾಹಕರೇ ಎಚ್ಚರ: RBIನ ಈ ತೀರ್ಮಾನದಿಂದ ನಿಮ್ಮ ಹಣಕಾಸು ವ್ಯವಹಾರಕ್ಕೆ ತೊಂದರೆಯಾಗಬಹುದು..!