Toll Update: ಕೇಂದ್ರದಿಂದ ಸದ್ಯದಲ್ಲೇ ತಡೆರಹಿತ ಟೋಲ್ ಸಿಸ್ಟಂ; ಹೆದ್ದಾರಿ ಪ್ರಯಾಣ ಇನ್ನೂ ಸುಗಮ

|

Updated on: Aug 03, 2023 | 12:48 PM

Barrier-less Toll System: ಹೆದ್ದಾರಿಯಲ್ಲಿ ಸುಗಮ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತಡೆರಹಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರುತ್ತಿದೆ. ಇದು ಟೋಲ್ ಬೂತ್​ಗಳಲ್ಲಿ ನೀವು ಹೆಚ್ಚು ಹೊತ್ತು ಕಾಯುವ ಅವಶ್ಯಕತೆ ಇಲ್ಲದಂತೆ ಮಾಡುತ್ತದೆ.

Toll Update: ಕೇಂದ್ರದಿಂದ ಸದ್ಯದಲ್ಲೇ ತಡೆರಹಿತ ಟೋಲ್ ಸಿಸ್ಟಂ; ಹೆದ್ದಾರಿ ಪ್ರಯಾಣ ಇನ್ನೂ ಸುಗಮ
ಟೋಲ್ ಬೂತ್ ಸಾಂದರ್ಭಿಕ ಚಿತ್ರ
Image Credit source: Photo by Red John on Unsplash
Follow us on

ನವದೆಹಲಿ, ಆಗಸ್ಟ್ 3: ಫಾಸ್​ಟ್ಯಾಗ್ ಬಂದ ಬಳಿಕ ಹೆದ್ದಾರಿ ಟೋಲ್ ಬೂತ್​ಗಳಲ್ಲಿ (Toll Booth) ಕಾಯುವಿಕೆ ಅವಧಿ ಬಹಳಷ್ಟು ಕಡಿಮೆ ಆಗಿದೆ. ಈಗ ಇದನ್ನು ಇನ್ನೂ ಕಡಿಮೆಗೊಳಿಸಲು ಕೇಂದ್ರ ಸರ್ಕಾರ ಅಣಿಯಾಗಿದೆ. ಟೋಲ್ ಸಂಗ್ರಹ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆ ತರಲು ಹೊರಟಿರುವ ಸರ್ಕಾರ ತಡೆರಹಿತ ಟೋಲ್ ಸಿಸ್ಟಂ (Barrier-less Toll System) ಅನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ. ಪ್ರತೀ ಟೋಲ್​ನಲ್ಲಿ ನೀವು ನಿಗದಿತ ಟೋಲ್ ಕಟ್ಟುವ ಬದಲು, ಹೆದ್ದಾರಿಯಲ್ಲಿ ನೀವು ಎಷ್ಟು ದೂರ ಪ್ರಯಾಣ ಮಾಡುತ್ತೀರಿ ಅಷ್ಟಕ್ಕೆ ಮಾತ್ರ ಟೋಲ್ ಕಟ್ಟುವ ವ್ಯವಸ್ಥೆ ಬರಲಿದೆ. ಬಹಳ ದಿನಗಳಿಂದ ನಿರೀಕ್ಷಿಸುತ್ತಿರುವ ಈ ಯೋಜನೆ ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ.

ಆಗಸ್ಟ್ 2ರಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಖಾತೆ ರಾಜ್ಯ ಸಚಿವ ವಿ.ಕೆ. ಸಿಂಗ್, ತಡೆರಹಿತ ಟೋಲ್ ಸಂಗ್ರಹ ವ್ಯವಸ್ಥೆ ಸದ್ಯಕ್ಕೆ ಪ್ರಾಯೋಗಿಕ ಹಂತದಲ್ಲಿದ್ದು, ಬಹಳ ಬೇಗ ಅದನ್ನು ಸಾರ್ವತ್ರಿಕಗೊಳಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: America: ಎಚ್-1ಬಿ ವೀಸಾ, 2ನೇ ಸುತ್ತಿನ ಲಾಟರಿ; ಅಮೆರಿಕದಿಂದ ಬಹಿಷ್ಕಾರಗೊಂಡ ಕಂಪನಿಗಳು ಮತ್ತು ವ್ಯಕ್ತಿಗಳ ಹೊಸ ಪಟ್ಟಿ

ವಾಹನಗಳಿಗೆ ಫಾಸ್​ಟ್ಯಾಗ್ ಅಳವಡಿಕೆಯಾದ ಬಳಿಕ ಹೆದ್ದಾರಿ ಟೋಲ್ ಬೂತ್​ಗಳಲ್ಲಿ ಪ್ರತೀ ವಾಹನದ ಸರಾಸರಿ ಕಾಯುವಿಕೆ ಅವಧಿ 47 ಸೆಕೆಂಡ್​ಗೆ ಇಳಿದಿದೆ. ಈಗ ಹೊಸ ಟೋಲ್ ಕಲೆಕ್ಷನ್ ಸಿಸ್ಟಂ ಬಂದ ಬಳಿಕ ಈ ಅವಧಿ 30 ಸೆಕೆಂಡ್​ಗೆ ಇಳಿಕೆಯಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಹೊಸ ಟೋಲ್ ಕಲೆಕ್ಷನ್ ಸಿಸ್ಟಂ ಹೇಗೆ ಕೆಲಸ ಮಾಡುತ್ತೆ?

ಹೆದ್ದಾರಿಯ ಆರಂಭ ಸ್ಥಳವೂ ಸೇರಿದಂತೆ ವಿವಿಧ ಕಡೆಗಳಲ್ಲಿ ಕ್ಯಾಮರಾಗಳನ್ನು ಇಡಲಾಗಿರುತ್ತದೆ. ಇಲ್ಲಿ ಸಾಗುವ ಪ್ರತಿಯೊಂದು ವಾಹನದ ರಿಜಿಸ್ಟ್ರೇಶನ್ ನಂಬರ್ ಅನ್ನು ಈ ಕ್ಯಾಮರಾಗಳು ಸ್ಕ್ಯಾನ್ ಮಾಡುತ್ತವೆ. ಹೆದ್ದಾರಿಯಲ್ಲಿ ಈ ವಾಹನ ಎಷ್ಟು ದೂರ ಸಾಗಿ ಹೋಗುತ್ತದೆ ಎಂಬುದನ್ನು ಲೆಕ್ಕ ಮಾಡಲಾಗುತ್ತದೆ. ಇದರಿಂದ ನೀವು ಪ್ರಯಾಣ ಮಾಡುವ ದೂರದಷ್ಟು ಮಾತ್ರ ಟೋಲ್ ಕಟ್ಟಿದರೆ ಸಾಕು.

ಇದನ್ನೂ ಓದಿ: Gaming Tax: ಪೂರ್ಣ ಬೆಟ್ಟಿಂಗ್ ಮೌಲ್ಯ ಮತ್ತು ಬಹುಮಾನಕ್ಕೆ ಜಿಎಸ್​ಟಿ ಇಲ್ಲ; ಗೇಮಿಂಗ್ ಕಂಪನಿಗಳು ನಿಟ್ಟುಸಿರು

ಸದ್ಯ ದೆಹಲಿ ಮೀರತ್ ಎಕ್ಸ್​ಪ್ರೆಸ್​ವೇನಲ್ಲಿ ಇದರ ಪ್ರಯೋಗ ನಡೆಯುತ್ತಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಸರ್ಕಾರ ಎಲ್ಲೆಡೆ ಅಳವಡಿಕೆ ಮಾಡುವ ಸಾಧ್ಯತೆ ಇದೆ. ಹೆದ್ದಾರಿಗಳಲ್ಲಿ ಸುಗಮ ಸಂಚಾರಕ್ಕೆ ಇದು ಇನ್ನಷ್ಟು ಅನುಕೂಲ ಮಾಡಿಕೊಡಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:45 pm, Thu, 3 August 23