SBI Gold Loan: ಹಣದ ತುರ್ತು ಅಗತ್ಯಕ್ಕೆ ಚಿನ್ನದ ಮೇಲೆ ಸಾಲ ಏಕೆ ಬೆಸ್ಟ್?

ಹಣಕಾಸಿನ ತುರ್ತಿಗೆ ಚಿನ್ನವನ್ನು ಅಡಮಾನ ಮಾಡಿ ಸಾಲ ಪಡೆಯುವುದು ಉತ್ತಮ ಆಯ್ಕೆ. ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಕಡಿಮೆ ಬಡ್ಡಿ ದರಕ್ಕೆ ಹಾಗೂ ಮರುಪಾವತಿ ಸುಲಭ ಆಗುವ ಹಾಗೆ ಸಾಲ ನೀಡಲಾಗುತ್ತಿದೆ.

  • TV9 Web Team
  • Published On - 18:20 PM, 28 Feb 2021
SBI Gold Loan: ಹಣದ ತುರ್ತು ಅಗತ್ಯಕ್ಕೆ ಚಿನ್ನದ ಮೇಲೆ ಸಾಲ ಏಕೆ ಬೆಸ್ಟ್?
ಚಿನ್ನಾಭರಣ (ಸಾರ್ದರ್ಭಿಕ ಚಿತ್ರ)

ಯಾರಿಗೆ ಎಮರ್ಜೆನ್ಸಿ ಫಂಡ್ (ತುರ್ತು ನಿಧಿ) ಪ್ರಾಮುಖ್ಯದ ಬಗ್ಗೆ ಅಷ್ಟಾಗಿ ನಿಗಾ ಇರುವುದಿಲ್ಲವೋ ಅಂಥವರು ಬ್ಯಾಂಕ್​​ನಲ್ಲಿ ಹಣ ಇಟ್ಟುಕೊಂಡಿರುವುದಿಲ್ಲ. ಕೈಯಲ್ಲಿ ಹಣ ಇಲ್ಲದಾಗ ಹಾಗೂ ದಿಢೀರ್ ಖರ್ಚು ಎದುರಾದಾಗ ಪರ್ಸನಲ್ ಲೋನ್ ಅಥವಾ ಚಿನ್ನ ಅಡಮಾನ ಮಾಡುವ ಸಾಲ (ಗೋಲ್ಡ್ ಲೋನ್) ಪಡೆಯಬೇಕಾಗುತ್ತದೆ. ಏಕೆಂದರೆ, ತಾತ್ಕಾಲಿಕವಾಗಿ ನಗದು ಬೇಕಾದಲ್ಲಿ ತಕ್ಷಣಕ್ಕೆ ಸಿಗಬಹುದಾದ ಸಾಲಗಳೇ ಇವು. ಆದರೆ ನಿಮಗೆ ಗೊತ್ತಿರಲಿ, ಪರ್ಸನಲ್ ಲೋನ್​ಗಿಂತ ಗೋಲ್ಡ್ ಲೋನ್ ಪಡೆಯುವುದು ಉತ್ತಮ. ಬಡ್ಡಿ ದರ ಕಡಿಮೆ ಅನ್ನೋ ಕಾರಣಕ್ಕೆ ಮಾತ್ರವಲ್ಲ. ಮರುಪಾವತಿ ಕೂಡ ಸರಳವಾಗಿದೆ. ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಪರ್ಸನಲ್ ಗೋಲ್ಡ್ ಲೋನ್ ನೀಡುತ್ತಿದೆ. 18 ವರ್ಷಕ್ಕೆ ಮೇಲ್ಪಟ್ಟ ಯಾವುದೇ ಗ್ರಾಹಕರು 50 ಲಕ್ಷ ರೂಪಾಯಿ ತನಕ ಸಾಲ ಪಡೆಯಬಹುದು. ಆದಾಯಕ್ಕೆ ಪ್ರೂಫ್ ನೀಡಬೇಕು ಅಂತಲೂ ಇಲ್ಲ. ಚಿನ್ನದ ಶುದ್ಧತೆ ಎಷ್ಟಿದೆ ಎಂಬ ಆಧಾರದಲ್ಲಿ ಬ್ಯಾಂಕ್​​ನಿಂದ ಚಿನ್ನದ ಮೌಲ್ಯದ ಶೇ 75ರ ತನಕ ಸಾಲ ನೀಡಲಾಗುತ್ತದೆ.

‘ಎಸ್​ಬಿಐನಲ್ಲಿ ಗೋಲ್ಡ್ ಲೋನ್​ಗೆ ಶೇ 7.50 ಬಡ್ಡಿದರ, ಯಾವುದೇ ಪ್ರೊಸೆಸಿಂಗ್ ಶುಲ್ಕ ಇಲ್ಲ, ಇನ್ನೂ ಸೌಲಭ್ಯಗಳಿವೆ’ ಎಂದು ಎಸ್​​ಬಿಐ ಟ್ವೀಟ್ ಮಾಡಿದೆ. ಚಿನ್ನದ ಆಭರಣಗಳು, ಚಿನ್ನದ ನಾಣ್ಯಗಳನ್ನು ಬ್ಯಾಂಕ್​ನಲ್ಲಿ ಅಡಮಾನ ಮಾಡಿ, ಕನಿಷ್ಠ ಮಟ್ಟದ ಕಾಗದದ ವ್ಯವಹಾರ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚಿನ್ನದ ಸಾಲದ ಬಗ್ಗೆ ಗೊತ್ತಿರಬೇಕಾದ ಸಂಗತಿಗಳಿವು:
ಅರ್ಹತೆ ಮಾನದಂಡ:
ವಯಸ್ಸು: 18 ವರ್ಷ ಮತ್ತು ಮೇಲ್ಪಟ್ಟು
ವೃತ್ತಿ: ಯಾವುದೇ ವೈಯಕ್ತಿಕ (ಒಬ್ಬರು ಅಥವಾ ಜಂಟಿ) ಅರ್ಜಿದಾರರಿಗೆ ಸ್ಥಿರವಾದ ಆದಾಯ ಇರಬೇಕು. ಬ್ಯಾಂಕ್ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೂ ಸಾಲ ನೀಡಲಾಗುತ್ತದೆ (ಆದಾಯದ ಪ್ರೂಫ್ ಅಗತ್ಯ ಇಲ್ಲ).
ಗರಿಷ್ಠ ಸಾಲ: 50 ಲಕ್ಷ ರೂಪಾಯಿ
ಕನಿಷ್ಠ ಸಾಲ: 20 ಸಾವಿರ ರೂಪಾಯಿ

ಮಾರ್ಜಿನ್
ಚಿನ್ನದ ಸಾಲ: ಶೇ 25, ನಗದು ಚಿನ್ನದ ಸಾಲ: ಶೇ 25, ಬುಲೆಟ್ ಮರುಪಾವತಿ ಚಿನ್ನದ ಸಾಲ: ಶೇ 35

ಭದ್ರತೆ: ಚಿನ್ನವನ್ನು ಅಡಮಾನ ಮಾಡಬೇಕು. ಅದರ ಗುಣಮಟ್ಟ ಮತ್ತು ತೂಕವನ್ನು ಪರಿಶೀಲನೆ ಮಾಡಲಾಗುತ್ತದೆ.

ಪ್ರೊಸೆಸಿಂಗ್ ಶುಲ್ಕ: ಸಾಲದ ಮೊತ್ತದ ಮೇಲೆ ಶೇ 0.25+ ಅನ್ವಯ. ಜಿಎಸ್​ಟಿ: ಕನಿಷ್ಠ ₹ 250+ ಅನ್ವಯ. ಯೋನೋ ಮೂಲಕ ಅರ್ಜಿ ಹಾಕಿದರೆ ಯಾವುದೇ ಶುಲ್ಕ ಇಲ್ಲ.

ಬಡ್ಡಿ ದರ:
ಒಂದು ವರ್ಷದ ಅವಧಿಯೊಳಗಾದರೆ- ಶೇ 7, ಒಂದು ವರ್ಷ ಮೇಲ್ಪಟ್ಟಲ್ಲಿ – ಶೇ 0.50 ಹೆಚ್ಚು, ಪರಿಣಾಮಕಾರಿ ಬಡ್ಡಿ ದರ- ಶೇ 7.50.

ಎಸ್​ಬಿಐನಲ್ಲಿ ಹೌಸಿಂಗ್ ಲೋನ್ ಪಡೆದವರಿಗಾಗಿಯೇ ಇರುವ ಸಾಲ
ಒಂದು ವರ್ಷದ ಅವಧಿಯೊಳಗಾದರೆ- ಶೇ 7, ಒಂದು ವರ್ಷ ಮೇಲ್ಪಟ್ಟಲ್ಲಿ – ಶೇ 0.30 ಹೆಚ್ಚು, ಪರಿಣಾಮಕಾರಿ ಬಡ್ಡಿ ದರ- ಶೇ 7.30.

ಸಾಲ ಮರುಪಾವತಿ: ಸಾಲ ವಿತರಣೆ ಮಾಡಿದ ಮರು ತಿಂಗಳಿನಿಂದಲೇ ಮರುಪಾವತಿ ಶುರು ಆಗುತ್ತದೆ.

ಲಿಕ್ವಿಡ್ ಗೋಲ್ಡ್ ಲೋನ್: ಓವರ್​​ಡ್ರಾಫ್ಟ್ ಖಾತೆ ಮತ್ತು ವಹಿವಾಟು ಅನುಕೂಲ ಮತ್ತು ತಿಂಗಳ ಬಡ್ಡಿ ಕಟ್ಟಲು ಅವಕಾಶ ನೀಡಲಾಗುತ್ತದೆ.

ಬುಲೆಟ್ ಮರುಪಾವತಿ ಚಿನ್ನದ ಸಾಲ: ಸಾಲದ ಅವಧಿ ಮುಗಿಯುವುದರೊಳಗಾಗಿ ಅಥವಾ ಖಾತೆ ಸ್ಥಗಿತ ಮಾಡುವಾಗ.

ಮರುಪಾವತಿ ಅವಧಿ
ಚಿನ್ನದ ಸಾಲ: 36 ತಿಂಗಳು, ಲಿಕ್ವಿಡ್ ಗೋಲ್ಡ್ ಲೋನ್: 36 ತಿಂಗಳು, ಬುಲೆಟ್ ಮರುಪಾವತಿ ಚಿನ್ನದ ಸಾಲ: 12 ತಿಂಗಳು

ಸಾಲಕ್ಕೆ ಅರ್ಜಿ ಹಾಕಲು ಬೇಕಾದ ದಾಖಲಾತಿಗಳು
ಚಿನ್ನದ ಸಾಲದ ಅರ್ಜಿ ಹಾಗೂ ಎರಡು ಫೋಟೋ, ಗುರುತು ಮಾತು ವಿಳಾಸ ದೃಢೀಕರಣದ ದಾಖಲೆ (ಅಡ್ರೆಸ್ ಮತ್ತು ಐ.ಡಿ. ಪ್ರೂಫ್), ಅನಕ್ಷರಸ್ಥ ಅರ್ಜಿದಾರರಿಗೆ ಸಾಕ್ಷಿ ಪತ್ರ.

ಇದನ್ನೂ ಓದಿ: ಸವರನ್ ಗೋಲ್ಡ್ ಬಾಂಡ್ ಸ್ಕೀಮ್: ಮಾರ್ಚ್ 1ರಿಂದ 5ರ ಮಧ್ಯೆ ಚಿನ್ನ ಖರೀದಿ, ಗ್ರಾಮ್​​ಗೆ ರೂ. 4662