Cigarette Lighter Policy: ಧೂಮಪಾನಿಗಳ ಗಮನಕ್ಕೆ..! ಸಿಗರೇಟ್ ಲೈಟರ್ ಆಮದು ನೀತಿಯಲ್ಲಿ ಬದಲಾವಣೆ; ಲೈಟರ್ನಿಂದ ಅನಾಹುತಗಳೇನು?
How Cigarette Lighter Damages Economy: ಆಮದು ಮಾಡಿಕೊಳ್ಳಲಾಗುವ ಸಿಗರೇಟ್ ಲೈಟರ್ನ ಸಿಐಎಫ್ ಮೌಲ್ಯ 20 ರೂಗಿಂತ ಕಡಿಮೆ ಇದ್ದರೆ ಅದರ ಆಮದು ಮಾಡಿಕೊಳ್ಳುವಂತಿಲ್ಲ ಎಂದು ಕೇಂದ್ರದ ಡಿಜಿಎಫ್ಟಿ ಜೂನ್ 29ರಂದು ಅಧಿಸೂಚನೆ ಹೊರಡಿಸಿದೆ.
ನವದೆಹಲಿ: ಸಿಗರೇಟ್ ಲೈಟರ್ಗಳ (Cigarette Lighters) ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನೀತಿ ಪರಿಷ್ಕರಣೆ (Policy Revision) ಮಾಡಿದೆ. 20 ರೂಗಿಂತ ಕಡಿಮೆ ಬೆಲೆಯ ಲೈಟರ್ಗಳ ಆಮದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಜೂನ್ 29ರಂದು ಅಧಿಸೂಚನೆ ಹೊರಡಿಸಿರುವುದು ತಿಳಿದುಬಂದಿದೆ. ಒಂದು ಲೈಟರ್ಗೆ ಸಿಐಎಫ್ ಮೌಲ್ಯ (CIF Value) 20 ರೂಗಿಂತ ಹೆಚ್ಚು ಇದ್ದರೆ ಅದರ ಆಮದು ಮಾಡಿಕೊಳ್ಳಬಹುದು ಎಂದು ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (DGFT) ಹೇಳಿದೆ. ಇದು ಪಾಕೆಟ್ ಲೈಟರ್, ಗ್ಯಾಸ್ ಲೈಟರ್ಗಳಿಗೆ ಅನ್ವಯ ಆಗುತ್ತದೆ.
ಸಿಐಎಫ್ ಎನ್ನುವುದು ಕಾಸ್ಟ್, ಇನ್ಷೂರೆನ್ಸ್ ಮತ್ತು ಫ್ರೀಟ್ನ ಕಿರುರೂಪ. ಬೆಲೆ, ವಿಮೆ ಮತ್ತು ಸಾಗಣೆ ವೆಚ್ಚಕ್ಕೆ ಸಿಐಎಫ್ ಎನ್ನುತ್ತಾರೆ. ಅಂತಾರಾಷ್ಟ್ರೀಯ ವಾಣಿಜ್ಯೋದ್ಯಮದಲ್ಲಿ ಆಮದು ಮಾಡಿಕೊಳ್ಳಲಾಗುವ ಸರಕುಗಳ ಒಟ್ಟು ಮೌಲ್ಯ ಗಣಿಸಲು ಸಿಐಎಫ್ ನಿರ್ಧಾರ ಮಾಡಲಾಗುತ್ತದೆ.
2022-23ರ ಹಣಕಾಸು ವರ್ಷದಲ್ಲಿ 0.66 ಮಿಲಿಯನ್ ಡಾಲರ್ (ಸುಮಾರು 5.42 ಕೋಟಿ ರೂ) ಮೊತ್ತದಷ್ಟು ಲೈಟರ್ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಸ್ಪೇನ್, ಟರ್ಕಿ ಮತ್ತು ಯುಎಇ ದೇಶಗಳಿಂದ ಈ ಸಿಗರೇಟ್ ಲೈಟರ್ಗಳು ಹೆಚ್ಚಾಗಿ ಆಮದಾಗುತ್ತವೆ.
ಇದನ್ನೂ ಓದಿ: Rules Change in July 2023: ಎಲ್ಪಿಜಿ ಬೆಲೆ ಸೇರಿದಂತೆ ಜುಲೈ ತಿಂಗಳಲ್ಲಿ ನೀವು ಗಮನಿಸಬೇಕಾದ ಕೆಲ ಬದಲಾವಣೆಗಳು
ಸಿಗರೇಟ್ ಲೈಟರ್ಗಳಿಂದ ಏನು ಸಮಸ್ಯೆ?
ಕಳೆದ ವರ್ಷ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ಕೇಂದ್ರ ವಾಣಿಜ್ಯ ಮತ್ತು ವ್ಯಾಪಾರ ಸಚಿವಾಲಯಕ್ಕೆ ಬರೆದ ಒಂದು ಪತ್ರ ಬಹಳ ಪ್ರಸ್ತುತ ಎನಿಸುತ್ತದೆ. ಅದರಲ್ಲಿ ಅವರು ಸಿಗರೇಟು ಲೈಟರ್ಗಳ ಆಮದನ್ನೇ ನಿಷೇಧಿಸುವಂತೆ ಒತ್ತಾಯಿಸಿದ್ದರು. ಲೈಟರ್ಗಳಿಂದ ಭಾರತದ ಸಾಂಪ್ರದಾಯಿಕ ಬೆಂಕಿ ಕಡ್ಡಿ (ಮ್ಯಾಚ್ ಬಾಕ್ಸ್) ತಯಾರಕರಿಗೆ ಅದೆಷ್ಟು ಹೊಡೆತ ಬೀಳುತ್ತದೆ ಎಂದು ಅವರು ಆ ಪತ್ರದಲ್ಲಿ ವಿವರಿಸಿರುವುದು ಗಮನಾರ್ಹ.
ಭಾರತದ ಹೆಚ್ಚಿನ ಮ್ಯಾಚ್ ಬಾಕ್ಸ್ಗಳು ತಯಾರಾಗುವುದು ತಮಿಳುನಾಡಿನಲ್ಲೇ. ಲಕ್ಷಕ್ಕೂ ಹೆಚ್ಚು ಮಂದಿಗೆ ಈ ಉದ್ಯಮ ಕೆಲಸ ನೀಡಿದೆ. ಅದರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿದ್ದಾರೆ. ಪಟಾಕಿ ಹೆಚ್ಚಾಗಿ ತಯಾರಾಗುವ ಶಿವಕಾಶಿ ಜಿಲ್ಲೆಯಲ್ಲೇ ಅತಿಹೆಚ್ಚು ಮ್ಯಾಚ್ ಬಾಕ್ಸ್ ತಯಾರಕರು ಇರುವುದು. ಮದುರೈನಿಂದ ಕೆಳಗಿನ ಹಲವು ಪ್ರದೇಶಗಳಲ್ಲಿ ಈ ಉದ್ಯಮ ಹರಡಿದೆ. ಸ್ಥಳೀಯ ಆರ್ಥಿಕತೆ ವೃದ್ಧಿಗೆ ಸಹಾಯಕವಾಗಿದೆ. ಹಲವು ದೇಶಗಳಿಗೆ ಮ್ಯಾಚ್ ಬಾಕ್ಸ್ಗಳು ರಫ್ತಾಗಲಿದ್ದು ಅದರ ಮೌಲ್ಯ ವರ್ಷಕ್ಕೆ 400 ಕೋಟಿ ರೂ ಎನ್ನಲಾಗಿದೆ.
ಸಿಎಂ ಸ್ಟಾಲಿನ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ ಇನ್ನೊಂದ ಸಂಗತಿ ಎಂದರೆ ಸಿಗರೇಟ್ ಲೈಟರ್ನಿಂದ ಮ್ಯಾಚ್ ಬಾಕ್ಸ್ ಉದ್ಯಮ ಸಂಕಷ್ಟಕ್ಕೆ ಸಿಲುಕುತ್ತಿದೆ. 10 ರುಪಾಯಿಗೆ ಸಿಗುವ ಲೈಟರ್ 20 ಮ್ಯಾಚ್ಬಾಕ್ಸ್ಗಳಿಗೆ ಸಮವಾಗಿದೆ. ಅಲ್ಲದೇ ಸಿಗರೇಟ್ ಲೈಟರ್ನಿಂದ ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್ ಸೃಷ್ಟಿಯಾಗುತ್ತದೆ. ಈ ಲೈಟರ್ಗಳನ್ನು ಉತ್ತೇಜಿಸಿದರೆ ಆರ್ಥಿಕತೆಗೆ ಹೊಡೆತ ಬೀಳುವುದರ ಜೊತೆಗೆ ಪರಿಸರಕ್ಕೆ ಹಾನಿಯೂ ಆಗುತ್ತದೆ ಎಂದು ತಮಿಳುನಾಡು ಸಿಎಂ ವಾದಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:15 pm, Fri, 30 June 23