ಧೂಮಪಾನಿಗಳಿಗೆ ಮತ್ತಷ್ಟು ಬಿಸಿ..! ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳ ಮೇಲೆ ಮತ್ತಷ್ಟು ತೆರಿಗೆ ಹಾಕಲು ಸರ್ಕಾರ ಯೋಜನೆ
Taxes on cigarettes: ಸಿಗರೇಟು ಬೆಲೆಗಳು ಸದ್ಯದಲ್ಲೇ ಹೆಚ್ಚುವ ನಿರೀಕ್ಷೆ ಇದೆ. ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಲು ಸರ್ಕಾರ ಯೋಜಿಸಿರುವುದು ವರದಿಯಾಗಿದೆ. ಸದ್ಯ ಸಿಗರೇಟ್ ಮೇಲೆ ಜಿಎಸ್ಟಿ, ಕಾಂಪೆನ್ಸೇಶನ್ ಸೆಸ್, ಎಕ್ಸೈಸ್ ಡ್ಯೂಟಿ ಸೇರಿ ಒಟ್ಟು ಶೇ. 53ರಷ್ಟು ತೆರಿಗೆ ಇದೆ. ಈಗ ಶೇ. 28ರಷ್ಟಿರುವ ಜಿಎಸ್ಟಿಯನ್ನು ಶೇ. 40ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ.

ನವದೆಹಲಿ, ಫೆಬ್ರುವರಿ 20: ಸಿಗರೇಟು ಸೇರಿದಂತೆ ಎಲ್ಲಾ ತಂಬಾಕು ಉತ್ಪನ್ನಗಳ ಮೇಲೆ ಜಿಎಸ್ಟಿಯನ್ನು ಏರಿಕೆ ಮಾಡಲು ಕೇಂದ್ರ ಸರ್ಕಾರ ಆಲೋಚಿಸುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಶೇ. 25ರಷ್ಟಿರುವ ಜಿಎಸ್ಟಿಯನ್ನು ಶೇ. 40ಕ್ಕೆ ಹೆಚ್ಚಿಸುವ ಇರಾದೆ ಇದೆ ಎನ್ನಲಾಗಿದೆ. ಸರ್ಕಾರಗಳಿಗೆ ಆದಾಯ ಕೊರತೆ ಬಂದಾಗೆಲ್ಲಾ, ಅಥವಾ ಹೆಚ್ಚಿನ ಆದಾಯ ಬೇಕೆನಿಸಿದಾಗೆಲ್ಲಾ ಮೊದಲು ದೃಷ್ಟಿ ನೆಡವುದು ಧೂಮಪಾನಿ ಮತ್ತು ಮದ್ಯಪಾನಿಗಳತ್ತಲೇ. ಹೀಗಾಗಿ, ಸರ್ಕಾರ ಈ ಕ್ರಮ ತೆಗೆದುಕೊಂಡರೆ ಅಚ್ಚರಿ ಇಲ್ಲ.
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಆದಾಯ ತೆರಿಗೆ ವಿನಾಯಿತಿಗಳನ್ನು ನೀಡಿದೆ. ಇದರಿಂದ ಸರ್ಕಾರಕ್ಕೆ ತೆರಿಗೆ ಸಂಗ್ರಹ ತುಸು ಕಡಿಮೆ ಆಗುವ ನಿರೀಕ್ಷೆ ಇದೆ. ಹಾಗೆಯೇ, ತಂಬಾಕು ಉತ್ಪನ್ನಗಳ ಮೇಲಿನ ಕಾಂಪೆನ್ಸೇಶನ್ ಸೆಸ್ ಅವಧಿ ಮುಂದಿನ ವರ್ಷ ಮುಗಿಯುತ್ತದೆ. ಇದರಿಂದಲೂ ಸರ್ಕಾರಕ್ಕೆ ತೆರಿಗೆ ಆದಾಯ ಸಂಕುಚಿತಗೊಳ್ಳಬಹುದು. ಇದನ್ನು ಸರಿದೂಗಿಸಲು ತಂಬಾಕು ಉತ್ಪನ್ನಗಳ ಮೇಲೆ ಜಿಎಸ್ಟಿ ಹೆಚ್ಚಿಸಲು ಸರ್ಕಾರ ಹೊರಟಿದೆ.
ಇದನ್ನೂ ಓದಿ: ಹೂಡಿಕೆ ಮಾಡುವ ಮುನ್ನ ಆ್ಯಕ್ಟಿವ್ ಮತ್ತು ಪಾಸಿವ್ ಫಂಡ್ಗಳೇನು, ಅವುಗಳ ವೆಚ್ಚವೆಷ್ಟು ಈ ವ್ಯತ್ಯಾಸ ತಿಳಿದಿರಿ…
ಸಿಗರೇಟ್ ಮೇಲೆ ವಿಶ್ವ ಆರೋಗ್ಯ ಸಂಸ್ಥೆ ನಿಗದಿ ಮಾಡಿದುದಕ್ಕಿಂತಲೂ ಕಡಿಮೆ ತೆರಿಗೆ
ಮನುಷ್ಯರ ಆರೋಗ್ಯಕ್ಕೆ ಮಾರಕವಾಗುವ ತಂಬಾಕು ಮತ್ತು ಮದ್ಯ ಉತ್ಪನ್ನಗಳನ್ನು ಸಿನ್ ಗೂಡ್ ಅಥವಾ ಪಾಪದ ಉತ್ಪನ್ನಗಳೆಂದು ಪರಿಗಣಿಸಲಾಗುತ್ತದೆ. ಈ ಸಿನ್ ಗೂಡ್ಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಜನರು ಅವುಗಳನ್ನು ಖರೀದಿಸುವುದಕ್ಕೆ ಕಡಿವಾಣ ಹಾಕಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸು ಪ್ರಕಾರ ಸಿಗರೇಟುಗಳಿಗೆ ಶೇ 75ರಷ್ಟು ತೆರಿಗೆ ಇರಬೇಕು.
ಭಾರತದಲ್ಲಿ ಶೇ. 28 ಜಿಎಸ್ಟಿ ಸೇರಿ, ಸಿಗರೇಟ್ಗೆ ಇರುವ ಒಟ್ಟು ತೆರಿಗೆ ಶೇ. 53 ಇದೆ. ಶೇ. 5ರಷ್ಟು ಕಾಂಪೆನ್ಸೇಶನ್ ಸೆಸ್ ಕೂಡ ಇದರಲ್ಲಿ ಒಳಗೊಂಡಿದೆ. ಅಬಕಾರಿ ಸುಂಕ, ರಾಷ್ಟ್ರೀಯ ವಿಪತ್ತು ನಿಧಿ ಸುಂಕವೂ ಸೇರಿ ಒಟ್ಟು ತೆರಿಗೆ ಶೇ. 52.7 ಆಗುತ್ತದೆ. ಈಗ 2026, ಮಾರ್ಚ್ 31ರವರ ಬಳಿಕ ಕಾಂಪೆನ್ಸೇಶನ್ ಸೆಸ್ ಇರೊಲ್ಲ. ಜಿಎಸ್ಟಿಯನ್ನು ಶೇ. 40ಕ್ಕೆ ಏರಿಸಿದರೆ, ಒಟ್ಟು ತೆರಿಗೆ ಶೇ. 60ರ ಆಸುಪಾಸಿಗೆ ಬರುತ್ತದೆ.
ಇದನ್ನೂ ಓದಿ: ಬಜೆಟ್ನಲ್ಲಿ ಸುಂಕ ಇಳಿಸಿದ್ದೇವೆ, ಗ್ರಾಹಕರಿಗೂ ಬೆಲೆ ಇಳಿಸಿ: ಔಷಧ ಕಂಪನಿಗಳಿಗೆ ಸರ್ಕಾರ ಸೂಚನೆ
ಒಂದು ಸಮೀಕ್ಷೆ ಪ್ರಕಾರ ದೇಶದಲ್ಲಿ ಸಿಗರೇಟ್ ಸೇದುವವರ ಸಂಖ್ಯೆ 27 ಕೋಟಿಗೂ ಅಧಿಕ ಇದೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯಿಂದ ಸರ್ಕಾರಕ್ಕೆ 80,000 ಕೋಟಿ ರೂಗೂ ಅಧಿಕ ಆದಾಯ ಸಿಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ