Bad loans: 2021-22ರ ಹಣಕಾಸು ವರ್ಷದಲ್ಲಿ ಶೇ 13ರಿಂದ 15ಕ್ಕೆ ಏರಬಹುದು ಬ್ಯಾಡ್ ಲೋನ್ ಅಂತಿದ್ದಾರೆ ವಿಶ್ಲೇಷಕರು
ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳ ಪಾಲಿಗೆ 2021-22ನೇ ಹಣಕಾಸು ವರ್ಷ ಕೂಡ ಕರಾಳವಾಗುವ ಎಲ್ಲ ಸೂಚನೆ ಕಾಣುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಬ್ಯಾಡ್ ಲೋನ್ ಪ್ರಮಾಣ ಶೇ 13ರಿಂದ ಶೇ 15ಕ್ಕೆ ಏರಿಕೆ ಆಗಬಹುದು ಎನ್ನಲಾಗುತ್ತಿದೆ.
ಕೊರೊನಾ ಎರಡನೇ ಅಲೆಯ ಕಾರಣಕ್ಕೆ ದೊಡ್ಡ ಬ್ಯಾಂಕ್ಗಳು ಮತ್ತು ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳು ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಎಲ್ಲ ವಲಯಗಳ ಮೇಲೂ ಒತ್ತಡ ಹೆಚ್ಚಾಗಿದ್ದರಿಂದ, ಸಾಲಗಾರರ ಮರುಪಾವತಿ ಸಾಮರ್ಥ್ಯದ ಮೇಲೆ ಪ್ರಭಾವ ಬೀರಿದೆ. ಇದರ ಪರಿಣಾಮವಾಗಿ ಬ್ಯಾಡ್ ಲೋನ್ನಲ್ಲಿ ಮತ್ತೆ ಏರಿಕೆ ಆಗುವ ಅಂದಾಜು ಮಾಡಲಾಗುತ್ತಿದೆ. ವಿಶ್ಲೇಷಕರು ಅಂದಾಜು ಮಾಡಿದ್ದಂತೆ, ಅನುತ್ಪಾದಕ ಆಸ್ತಿ ಪ್ರಮಾಣ (ಎನ್ಪಿಎ) ಈ ಹಿಂದಿ ಹಣಕಾಸು ವರ್ಷದಲ್ಲಿ ಶೇ 8ಕ್ಕಿಂತ ಸ್ವಲ್ಪ ಕಡಿಮೆ ಇರಬಹುದು ಎಂದುಕೊಳ್ಳಲಾಗಿತ್ತು. ಆದರೆ ನಂತರದಲ್ಲಿ ಸಾಲದ ರೀಸ್ಟ್ರಕ್ಚರಿಂಗ್ (ಮರುಹೊಂದಾಣಿಕೆ), ರೈಟ್ ಆಫ್ (ಲೆಕ್ಕಪುಸ್ತಕದಿಂದ ತಾಂತ್ರಿಕವಾಗಿ ಅಳಿಸಿ ಹಾಕುವುದು) ಮತ್ತು ನಿಯಂತ್ರಕ ಸಂಸ್ಥೆಯಿಂದ ನೀಡಿದ ಸಾಲ ವಿನಾಯಿತಿಯ ಕಾರಣಕ್ಕೆ ಅದು 2021-22ರಲ್ಲಿ ಶೇ 13ರಿಂದ 15ಕ್ಕೆ ಏರಿದೆ.
ಎನ್ಬಿಎಫ್ಸಿ ಮತ್ತು ಕಿರು ಹಣಕಾಸು ಸಂಸ್ಥೆಗಳಲ್ಲಿ ಒತ್ತಡ ಆಸ್ತಿ ಪ್ರಮಾಣವು ಭಾರೀ ಪ್ರಮಾಣದ ಹೆಚ್ಚಳ ಕಂಡಿದೆ. ಸಲೂನ್ ನಡೆಸುವಂಥವರು, ರೆಸ್ಟೋರೆಂಟ್ಗಳ ಮಾಲೀಕರು, ವರ್ತಕರು ಮತ್ತಿತರ ಅಗತ್ಯ ವಸ್ತುಗಳು ಅಲ್ಲದಿರುವಂಥದ್ದನ್ನು ಮಾರಾಟ ಮಾಡುವ ವರ್ಗದವರು ದೊಡ್ಡ ಪ್ರಮಾಣದಲ್ಲಿ ಪೆಟ್ಟು ತಿಂದಿದ್ದಾರೆ. ಈ ನಿರ್ದಿಷ್ಟ ಗುಂಪಿಗೆ ಯಾವುದೇ ಆರ್ಥಿಕ ಬೆಂಬಲ ದೊರೆಯುತ್ತಿಲ್ಲ. ಈ ವಿಭಾಗದಲ್ಲಿ ಎನ್ಪಿಎ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಬ್ಯಾಂಕಿಂಗ್ ವಲಯದ ಹೆಸರು ಹೇಳಲು ಇಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಒಂದು ವರ್ಷದ ನಂತರವೂ ಆದಾಯ ಸ್ಥಿತಿ ಸುಧಾರಿಸಿಲ್ಲದ ಕಾರಣಕ್ಕೆ ಅಲ್ಪ ಪ್ರಮಾಣದಲ್ಲಿ ಕಡಿತ ಅಥವಾ ರೈಟ್ಆಫ್ ಮಾಡದೆ ಬೇರೆ ವಿಧಿಯಿಲ್ಲ ಎನ್ನುತ್ತಾರೆ.
ಲಸಿಕೆ ಅಭಿಯಾನ ಯಾವ ಪ್ರಮಾಣದಲ್ಲಿ ನಡೆಯುತ್ತದೆ? ಉದಾಹರಣೆ ನೋಡುತ್ತಾ ಹೋದರೆ, ಬಂಧನ್ ಬ್ಯಾಂಕ್ ಲಾಭದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಶೇಕಡಾ 80ರಷ್ಟು ಕಡಿಮೆ ಲಾಭ, ಅಂದರೆ 103 ಕೋಟಿ ರೂ ದಾಖಲಾಗಿದೆ. ಅದಕ್ಕೆ ಕಾರಣ ಆಗಿರುವುದು ಹೆಚ್ಚಿನ ಪ್ರಮಾಣದಲ್ಲಿ ಎನ್ಪಿಎ ಮೀಸಲಿಟ್ಟಿರುವುದು. ಇನ್ನು ಬಜಾಜ್ ಫೈನಾನ್ಸ್ನಿಂದಲೂ ಹೆಚ್ಚಿನ ಎನ್ಪಿಎ ಅಂದಾಜು ಮಾಡಿ, ಪ್ರಾವಿಷನ್ ಹೆಚ್ಚಿಗೆ ಇಡಲಾಗಿದೆ. 2021-22ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇಎಂಐ ಪಾವತಿ ಆಗದಿರುವ ದರ ಹೆಚ್ಚಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳುವಂತೆ, ಕೊವಿಡ್ 19 ಪರಿಣಾಮವು ಬ್ಯಾಂಕ್ ಫಲಿತಾಂಶದ ಮೇಲೆ ಆಗಲಿದೆ. ಲಸಿಕೆ ಅಭಿಯಾನದ ಯಶಸ್ಸು ಮತ್ತಿತರ ಅಂಶಗಳ ಮೇಲೆ ಈಗ ಭವಿಷ್ಯ ಆಧಾರವಾಗಿದೆ ಎಂದಿದೆ. ಬ್ಯಾಂಕ್ಗಳಿಗೆ ಬರುವ ಹಣಕಾಸಿನ ಹರಿವು ಮತ್ತು ವರ್ಕಿಂಗ್ ಕ್ಯಾಪಿಟಲ್ ವಿಸ್ತರಣೆ ಮೇಲೆ ಪ್ರಭಾವ ಆಗಲಿದೆ ಎನ್ನುತ್ತಾರೆ.
ಪ್ರವಾಸೋದ್ಯಮ, ಆತಿಥ್ಯ, ರೆಸ್ಟೋರೆಂಟ್ಗಳು, ಸಲೂನ್ಗಳು, ವಿಮಾನಯಾನ, ನಿರ್ಮಾಣ, ಟೆಕ್ಸ್ಟೈಲ್ಸ್ಗಳು ಮತ್ತು ಇತರ ಸೇವೆಗಳ ಮೇಲೆ ಭಾರೀ ಪರಿಣಾಮ ಆಗಿದೆ. ಕೇರ್ ರೇಟಿಂಗ್ನಿಂದ ಎನ್ಪಿಎ ಅನ್ನು ಶೇ 7.3 (ರೂ. 7.93 ಲಕ್ಷ ಕೋಟಿ) ಅಂದಾಜು ಮಾಡಲಾಗಿದೆ. ಇದು 2021ರ ಮಾರ್ಚ್ ಅಂದಾಜು. ಅದೇ ಮಾರ್ಚ್ 2020ಕ್ಕೆ ಶೇ 8.5 (ರೂ. 8.86 ಲಕ್ಷ ಕೋಟಿ) ಇತ್ತು. 2021-22ರಲ್ಲಿ ಈ ಸಂಖ್ಯೆ ಎರಡಂಕಿ ದಾಟಿ, ಶೇ 15 ಆಗುವ ಅಂದಾಜಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ 2021ರ ಸೆಪ್ಟೆಂಬರ್ ಹೊತ್ತಿಗೆ ಬ್ಯಾಡ್ ಲೋನ್ ಶೇ 13.5 ಆಗಬಹುದು ಎಂದಿದೆ. 2020ರ ಸೆಪ್ಟೆಂಬರ್ನಲ್ಲಿ ಶೇ 7.5 ಇತ್ತು. ಈ ಲೆಕ್ಕವನ್ನು ಹಣಕ್ಕೆ ಪರಿವರ್ತಿಸಿದರೆ, ಒಟ್ಟಾರೆ 108.33 ಲಕ್ಷ ಕೋಟಿ ರೂಪಾಯಿ ಸಾಲದ ಪೈಕಿ ರೂ. 14.6 ಲಕ್ಷ ಕೋಟಿ ಆಗುತ್ತದೆ.
ಸುಪ್ರೀಮ್ ಕೋರ್ಟ್ ನಿರ್ಧಾರದ ನಂತರ ಸ್ಪಷ್ಟತೆ ಒಂದು ವೇಳೆ ಸಾಲಗಾರರು ಮರುಪಾವತಿ ಮಾಡುವ ಸ್ಥಿತಿಯಲ್ಲಿ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ನೇರವಾಗಿ ಸಾಲ ವಸೂಲು ಮಾಡುವುದು ಸಹ ಬ್ಯಾಂಕ್ಗಳಿಗೆ ಹಾಗೂ ಎನ್ಬಿಎಫ್ಸಿಗಳಿಗೆ ಕಷ್ಟವಾಗಿ ಪರಿಣಮಿಸಿದೆ. ಇದರಿಂದ ಆದಾಯ ನಷ್ಟ ಅಥವಾ ಆದಾಯದಲ್ಲಿ ಇಳಿಕೆ ಆಗಿದೆ ಎನ್ನುತ್ತಾರೆ ವಿಶ್ಲೇಷಕರು. ಇನ್ನು ಬ್ಯಾಡ್ ಲೋನ್ ವಿಚಾರಕ್ಕೆ ಬಂದರೆ, ಸುಪ್ರೀಂ ಕೋರ್ಟ್ನಿಂದ ಒಂದು ನಿರ್ಧಾರ ಕೈಗೊಳ್ಳುವ ತನಕ ಸ್ಪಷ್ಟತೆ ಸಿಗಲ್ಲ. ಆಸ್ತಿ ವರ್ಗೀಕರಣ ವಿಚಾರವಾಗಿ ಸುಪ್ರೀಂ ಕೋರ್ಟ್ನಿಂದ ಯಥಾಸ್ಥಿತಿ ಕಾಯ್ದುಕೊಳ್ಳುವ ತೆರವು ಆದೇಶದ ನಂತರ ಬ್ಯಾಂಕ್ಗಳು, ಎನ್ಬಿಎಫ್ಸಿಗಳು 2020-21ನೇ ಸಾಲಿನ ಬಾಕಿಯನ್ನೂ ಸೇರಿಸಿಕೊಂಡು ಗ್ರಾಸ್ ಎನ್ಪಿಎ ದಾಖಲಿಸಬೇಕು. ಆ ಮೂಲಕವಾಗಿ ಒಟ್ಟಾರೆ 2020-21 ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಗ್ರಾಸ್ ಎನ್ಪಿಎ ಪಾರದರ್ಶಕತೆ ದೊರೆಯುತ್ತದೆ ಎನ್ನುತ್ತಾರೆ ತಜ್ಞರು.
(Due to corona virus impact bad loans in banks and NBFC expected to spike to 13- 15% in 2021- 22 financial year)