Petrol- Diesel Price: ತೈಲ ಬೆಲೆ 7 ವರ್ಷದ ಗರಿಷ್ಠ, 4 ವಾರಗಳಲ್ಲಿ ಶೇ 25ರಷ್ಟು ಹೆಚ್ಚಳ; ಪೆಟ್ರೋಲ್, ಡೀಸೆಲ್ ದರ ಏರಿಕೆ ಸಾಧ್ಯತೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ 7 ವರ್ಷಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದ್ದು, ಭಾರತದಲ್ಲಿ ಪೆಟ್ರೋಲ್- ಡೀಸೆಲ್ ದರ ಹೆಚ್ಚಳ ಆಗುವ ಸಾಧ್ಯತೆ ಇದೆ.
ತಿಂಗಳುಗಳ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು (Petrol and Diesel Price) ಭಾರತದಲ್ಲಿ ಮತ್ತೊಂದು ಏರಿಕೆ ಕಾಣುವ ಸಾಧ್ಯತೆ ಇದೆ. ಏಕೆಂದರೆ, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ಏಳು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಅಂದರೆ ವರದಿಗಳ ಪ್ರಕಾರ, ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 88 ಡಾಲರ್ ಆಗಿದೆ. ಬ್ರೆಂಟ್ ಕಚ್ಚಾ ಫ್ಯೂಚರ್ಸ್ 87 ಸೆಂಟ್ಸ್ ಅಥವಾ ಶೇ 1ರಷ್ಟು ಮೇಲೇರಿ, 0543 GMTಯಲ್ಲಿ ಪ್ರತಿ ಬ್ಯಾರೆಲ್ಗೆ 88.38 ಡಾಲರ್ನಂತೆ ವ್ಯವಹಾರ ನಡೆಸುತ್ತಿತ್ತು. ಈ ಹಿಂದಿನ ಸೆಷನ್ಗೆ ಹೋಲಿಸಿದರೆ ಶೇ 1.2ರಷ್ಟು ಹೆಚ್ಚಳ ಆಗಿತ್ತು. ಸಾಮಾನ್ಯ ಹಣದುಬ್ಬರದ ಹಿನ್ನೆಲೆಯಲ್ಲಿ ಇದರಿಂದಾಗಿ ಭಾರತದಲ್ಲಿ ತೈಲ ಬೆಲೆಗೆ ಇನ್ನಷ್ಟು ಉತ್ತೇಜನ ನೀಡಬಹುದು. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಕಾರಣ ಆಗಬಹುದು. ಅಂದಹಾಗೆ ಕಳೆದ ವರ್ಷದ ನವೆಂಬರ್ನಲ್ಲಿ ಸರ್ಕಾರದಿಂದ ತೈಲ ಬೆಲೆಯ ಅಬಕಾರಿ ಸುಂಕ ಇಳಿಕೆ ಮಾಡಿದ ಮೇಲೆ ಬೆಲೆ ಸ್ಥಿರವಾಗಿಯೇ ಇದೆ. ಆದರೆ ಹೊಸ ವರ್ಷದ ಶುರುವಿನಿಂದಲೂ ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇದೆ. ವರದಿಗಳ ಪ್ರಕಾರ, ಕಳೆದ ನಾಲ್ಕು ವಾರದಲ್ಲಿ ಶೇ 25ರಷ್ಟು ಹೆಚ್ಚಳವಾಗಿದೆ.
ಡಿಸೆಂಬರ್ 1ನೇ ತಾರೀಕಿನಂದು ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲ ದರವು 69 ಡಾಲರ್ನಷ್ಟಿತ್ತು. ಬೆಲೆ ಏರಿಕೆ ಆಗುತ್ತಾ ಈಗ ನಾಲ್ಕು ವಾರ ಆಗಿದೆ. ಅಕ್ಟೋಬರ್ ನಂತರದಲ್ಲಿ ಇದು ದೀರ್ಘಾವಧಿ ಏರಿಕೆ ಓಟ ಆಗಿದೆ. ಇರಾಕ್ನಿಂದ ಟರ್ಕಿಗೆ ಪೈಪ್ಲೈನ್ ಪೂರೈಕೆಯಲ್ಲಿನ ವ್ಯತ್ಯಯದಿಂದ ಹೀಗಾಗಿದೆ. ಈಗಾಗಲೇ ರಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿನ ಜಾಗತಿಕ ರಾಜಕೀಯ ಬಿಕ್ಕಟ್ಟಿನ ಕಾರಣಕ್ಕೆ ತೈಲ ಪೂರೈಕೆಯಲ್ಲಿ ಬಿಗು ಆಗುವ ಆತಂಕ ಇದ್ದೇ ಇದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅಂದಹಾಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ದೊಡ್ಡ ಮಟ್ಟದಲ್ಲಿ ಅವಲಂಬಿತವಾಗಿರುವುದು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಮೇಲೆ. ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳಲ್ಲೂ ಪೆಟ್ರೋಲ್- ಡೀಸೆಲ್ ಬೆಲೆ ಲೆಕ್ಕಾಚಾರ ಆಗುವುದು ಕಚ್ಚಾ ತೈಲ ದರದ ಮೇಲೇ. ಏಕೆಂದರೆ ಪೆಟ್ರೋಲ್ ಹಾಗೂ ಡೀಸೆಲ್ನ ಮುಖ್ಯ ಮೂಲವೇ ಕಚ್ಚಾ ತೈಲ.
ಸರ್ಕಾರವು ಅಬಕಾರಿ ಸುಂಕವನ್ನು ಇಳಿಕೆ ಮಾಡಿದ ಹೊರತಾಗಿಯೂ ಭಾರತದಲ್ಲಿ ತೈಲ ಬೆಲೆ ಈಗಲೂ ದುಬಾರಿಯೇ. ದೆಹಲಿಯಲ್ಲಿ ಸದ್ಯಕ್ಕೆ ಪೆಟ್ರೋಲ್ ದರ ಲೀಟರ್ಗೆ 95.41 ರೂಪಾಯಿ (ಬುಧವಾರ) ಇದ್ದರೆ, ಡೀಸೆಲ್ ಪ್ರತಿ ಲೀಟರ್ಗೆ ರೂ. 86.67 ಇದೆ. ಸರ್ಕಾರದಿಂದ ಬೆಲೆ ಇಳಿಸುವ ಮೊದಲು, 2021ರ ನವೆಂಬರ್ನಲ್ಲಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 100 ರೂಪಾಯಿ ಇತ್ತು. ತೈಲ ಬೆಲೆ ಏರಿಕೆಯ ಕಾರಣದಿಂದಾಗಿಯೇ ಭಾರತದ ಆರ್ಥಿಕ ಸಮತೋಲನದ ಮೇಲೆ ಪ್ರತಿಕೂಲ ಪರಿಣಾಮ ಆಯಿತು. ಉದಾಹರಣೆಗೆ, ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿದ್ದಂತೆ ಪದಾರ್ಥಗಳ ಬೆಲೆ ಜಾಸ್ತಿ ಆಯಿತು. ಆ ಮೂಲಕ ಹಣದುಬ್ಬರ ಹೆಚ್ಚಾಯಿತು. ಈಗಾಗಲೇ ಸಾಮಾನ್ಯ ನಾಗರಿಕರಿಗೆ ಬೆಲೆ ಏರಿಕೆ ಬಿಸಿ ತಗುಲಿದೆ. ಇದೀಗ ಕಚ್ಚಾ ತೈಲ ಬೆಲೆ ಹೆಚ್ಚಳವು ಇನ್ನಷ್ಟು ಸಮಸ್ಯೆ ತಂದೊಡ್ಡುತ್ತದೆ.
ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು, ಫೆಬ್ರವರಿ 1ನೇ ತಾರೀಕಿನಂದು ಮಂಡನೆ ಆಗುವ ಕೇಂದ್ರ ಬಜೆಟ್ನಲ್ಲಿ ತೈಲ ದರದ ಮೇಲೆ ಪರಿಣಾಮ ಆಗುವಂಥ ಘೋಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಮುಂಬರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು, ಸರ್ಕಾರವು ತೈಲ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳಬೇಕು ಎಂದು ನಿರೀಕ್ಷಿಸಲಾಗುತ್ತಿದೆ. ಒಪೆಕ್ ಅಧಿಕಾರಿಗಳು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿರುವಂತೆ, ತೈಲ ದರದ ಏರಿಕೆಯು ಮುಂದಿನ ಕೆಲ ತಿಂಗಳು ಮುಂದುವರಿಯಲಿದೆ. ಬೇಡಿಕೆಯಲ್ಲಿ ಚೇತರಿಕೆ ಹಾಗೂ ಒಪೆಕ್+ನಲ್ಲಿನ ಸೀಮಿತ ಸಾಮರ್ಥ್ಯದ ಕಾರಣಕ್ಕೆ ದರವು ಪ್ರತಿ ಬ್ಯಾರೆಲ್ಗೆ 100 ಡಾಲರ್ ದಾಟಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಅಬಕಾರಿ ಸುಂಕದಿಂದ FY21ರಲ್ಲಿ ಕೇಂದ್ರಕ್ಕೆ 3.7 ಲಕ್ಷ ಕೋಟಿ ರೂ., ರಾಜ್ಯಗಳಿಗೆ 20 ಸಾವಿರ ಕೋಟಿ ಸಂಗ್ರಹ
Published On - 5:53 pm, Thu, 20 January 22