Dhanteras 2021: 1 ರೂಪಾಯಿಗೂ ಚಿನ್ನ ಖರೀದಿಸಿ; ಶುದ್ಧತೆ, ತೆರಿಗೆ, ಆನ್​ಲೈನ್​ ಖರೀದಿ ಹೇಗೆಂದು ತಿಳಿಯಿರಿ

Gold at Re 1: ದೀಪಾವಳಿಯ ಆರಂಭದ ದಿನವಾದ ಧನ್​ತೇರಸ್​ನಂದು ಕನಿಷ್ಠ 1 ರೂಪಾಯಿಗೂ ಚಿನ್ನ ಖರೀದಿಸಬಹುದು. ಅದು ಹೇಗೆ ಎಂಬುದರ ವಿವರ ಇಲ್ಲಿದೆ.

Dhanteras 2021: 1 ರೂಪಾಯಿಗೂ ಚಿನ್ನ ಖರೀದಿಸಿ; ಶುದ್ಧತೆ, ತೆರಿಗೆ, ಆನ್​ಲೈನ್​ ಖರೀದಿ ಹೇಗೆಂದು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Nov 02, 2021 | 1:09 PM

ದೀಪಾವಳಿ ಮತ್ತು ಧನ್​ತೇರಸ್ ಸಮಯದಲ್ಲಿ ಚಿನ್ನವನ್ನು ಖರೀದಿಸುವುದು ಭಾರತದಲ್ಲಿ ಸಂಪ್ರದಾಯ. ಚಿನ್ನಕ್ಕೆ ಬೇಡಿಕೆ – ವಿಶೇಷವಾಗಿ ಆಭರಣ ಮತ್ತು ನಾಣ್ಯಗಳ ರೂಪದಲ್ಲಿ ಭೌತಿಕ ಚಿನ್ನಕ್ಕೆ ಈ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆದರೆ ಕೊರೊನಾ ಬಿಕ್ಕಟ್ಟಿನ ದೃಷ್ಟಿಯಿಂದ ಆಭರಣದ ಅಂಗಡಿಗೆ ಹೋಗುವುದನ್ನು ಅಪಾಯ ಎಂದು ಪರಿಗಣಿಸಲಾಗುತ್ತಿದೆ. ಭಾರತದಲ್ಲಿ ಹೆಚ್ಚು ಹೆಚ್ಚು ಜನರು ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮಾರಾಟಗಾರರು ಮತ್ತು ರಿಫೈನರ್‌ಗಳಿಂದ ಖರೀದಿದಾರರು ಡಿಜಿಟಲ್ ಚಿನ್ನವನ್ನು ಖರೀದಿಸಬಹುದು. ಡಿಜಿಟಲ್ ಚಿನ್ನವನ್ನು ನೀಡುವ ಮೂರು ಕಂಪೆನಿಗಳೆಂದರೆ – ಆಗ್ಮಾಂಟ್ ಗೋಲ್ಡ್; MMTC-PAMP ಇಂಡಿಯಾ ಪ್ರೈ. ಲಿ, ಸರ್ಕಾರದಿಂದ ನಡೆಯುವ MMTC ಲಿಮಿಟೆಡ್ ಮತ್ತು ಸ್ವಿಸ್ ಸಂಸ್ಥೆ MKS PAMP ಮಧ್ಯದ ಜಂಟಿ ಉದ್ಯಮ; ಮತ್ತು ಡಿಜಿಟಲ್ ಗೋಲ್ಡ್ ಇಂಡಿಯಾ ಪ್ರೈ. ಅದರ ಸೇಫ್‌ಗೋಲ್ಡ್ ಬ್ರ್ಯಾಂಡ್‌. ಪೇಟಿಎಂ, ಅಮೆಜಾನ್ ಪೇ, ಗೂಗಲ್ ಪೇ ಮತ್ತು ಫೋನ್​ಪೇ ಸೇರಿದಂತೆ ಜನಪ್ರಿಯ ವ್ಯಾಲೆಟ್‌ಗಳ ಮೂಲಕ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು.

“ಡಿಜಿಟಲ್ ಚಿನ್ನವು ಹೂಡಿಕೆದಾರರನ್ನು ಹೆಚ್ಚು ಸೆಳೆದಿದೆ. ಏಕೆಂದರೆ ಅದು ಚಿನ್ನದ ಎಲ್ಲ ಪ್ರಯೋಜನಗಳು ಮತ್ತು ಹೆಚ್ಚಿನದನ್ನು ನೀಡುತ್ತದೆ. ಇದು ಮೊಬೈಲ್ ಅಪ್ಲಿಕೇಷನ್ ಮೂಲಕ ಡಿಜಿಟಲ್ ಮತ್ತು ಸುಲಭವಾಗಿ ಖರೀದಿಸಿದ ಭೌತಿಕ ಚಿನ್ನವಾಗಿದೆ. ಇದಕ್ಕಾಗಿ ಅಂಗಡಿಗೆ ಹೋಗುವ ಅಗತ್ಯ ಇಲ್ಲ,” ಎಂದು ಸಂಬಂಧಪಟ್ಟ ಕ್ಷೇತ್ರದ ತಜ್ಞರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಚಿನ್ನದ ಅಪಾರ ಜನಪ್ರಿಯತೆಯ ಹಿಂದೆ ಸುಲಭ ಲಭ್ಯತೆ ಮತ್ತು ಕಡಿಮೆ ಬೆಲೆ ಎರಡೂ ಕಾರಣಗಳಿವೆ. ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯಗಳು ಇಲ್ಲಿವೆ.

1) ಶುದ್ಧತೆ: ಡಿಜಿಟಲ್ ಚಿನ್ನವನ್ನು ಖರೀದಿಸುವ ಮೊದಲು ಹೂಡಿಕೆದಾರರು ಪರಿಶೀಲಿಸಬೇಕಾದ ಮೊದಲ ವಿಷಯವೆಂದರೆ ಶುದ್ಧತೆ. “MMTC-PAMP ನಿಂದ ಖರೀದಿಸಿದ ಡಿಜಿಟಲ್ ಚಿನ್ನವು ಸೇಫ್‌ಗೋಲ್ಡ್ ಸಹಯೋಗದೊಂದಿಗೆ ಪ್ಲಾಟ್‌ಫಾರ್ಮ್‌ಗಳಿಂದ ಖರೀದಿಸುವುದಕ್ಕಿಂತ ಹೆಚ್ಚು ಶುದ್ಧವಾಗಿರುತ್ತದೆ,” ಎನ್ನುತ್ತಾರೆ.

2) ಬೆಲೆ ಕನಿಷ್ಠ ರೂ. 1ರಿಂದ ಪ್ರಾರಂಭ: ಡಿಜಿಟಲ್ ಚಿನ್ನದ ಬೆಲೆಯು ರೂ. 1ರಿಂದ ಪ್ರಾರಂಭವಾಗುತ್ತದೆ. ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡುವುದರಿಂದ ಗ್ರಾಹಕರು ಸಣ್ಣ ಹೂಡಿಕೆಗೆ ಭಾಗಶಃ ಭೌತಿಕ ಚಿನ್ನವನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ.

3) ಸಂಗ್ರಹ: “ಖರೀದಿಸಿದ ಚಿನ್ನವನ್ನು ಕೇಂದ್ರೀಕೃತ ವ್ಯವಸ್ಥೆಯಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಖರೀದಿದಾರರ ಒಡೆತನದಲ್ಲಿ ಇರುವುದನ್ನು ಗ್ರಾಂಗಳ ಸಂಖ್ಯೆಯ ಡಿಜಿಟಲ್ ವಾಲ್ಟ್ ಬ್ಯಾಲೆನ್ಸ್‌ನಂತೆ ತೋರಿಸಲಾಗುತ್ತದೆ. ಈ ಚಿನ್ನವನ್ನು ವಿತರಿಸಲು ಅಥವಾ ವಾಲ್ಟ್‌ನಿಂದ ನೇರವಾಗಿ ಅಪ್ಲಿಕೇಷನ್‌ನಲ್ಲಿ ಮಾರಾಟ ಮಾಡಲು ಆಯ್ಕೆ ಇದೆ,” ಎನ್ನುತ್ತಾರೆ ವಿಶ್ಲೇಷಕರು.

4) ಜಿಎಸ್‌ಟಿ ಮತ್ತು ಇತರ ಶುಲ್ಕಗಳು: ಭೌತಿಕ ಚಿನ್ನವನ್ನು ಖರೀದಿಸುವಂತೆಯೇ ಡಿಜಿಟಲ್ ಚಿನ್ನವನ್ನು ಖರೀದಿಸುವುದರಿಂದ ಚಿನ್ನದ ಬೆಲೆಯ ಮೇಲೆ ಶೇ 3ರಷ್ಟು ಜಿಎಸ್‌ಟಿ ಆಗುತ್ತದೆ. ಡಿಜಿಟಲ್ ಚಿನ್ನದ ಪೂರೈಕೆದಾರರು ಶೇಖರಣಾ ವೆಚ್ಚ, ವಿಮೆ ಮತ್ತು ಟ್ರಸ್ಟಿ ಶುಲ್ಕದಂತಹ ವೆಚ್ಚಗಳಿಗೆ ಶೇ 2ರಿಂದ 3 ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಾರೆ. ಗ್ರಾಹಕರು ಡಿಜಿಟಲ್ ಚಿನ್ನವನ್ನು ಭೌತಿಕ ಚಿನ್ನಕ್ಕೆ ಪರಿವರ್ತಿಸಲು ಬಯಸಿದರೆ ಪ್ರಮಾಣವನ್ನು ಅವಲಂಬಿಸಿ ಮೇಕಿಂಗ್ ಶುಲ್ಕಗಳು ಇರುತ್ತವೆ. ಅದನ್ನು ಮನೆ ಬಾಗಿಲಿಗೆ ತಲುಪಿಸಲು ಹೂಡಿಕೆದಾರರು ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗಬಹುದು.

5) ಗರಿಷ್ಠ ಹೋಲ್ಡಿಂಗ್ ಅವಧಿ: ಡಿಜಿಟಲ್ ಚಿನ್ನದ ಉತ್ಪನ್ನಗಳು ಗರಿಷ್ಠ ಹೋಲ್ಡಿಂಗ್ ಅವಧಿಯನ್ನು ಹೊಂದಿರುತ್ತವೆ. ನಂತರ ಹೂಡಿಕೆದಾರರು ಚಿನ್ನದ ಡೆಲಿವರಿ ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಅದನ್ನು ಮರಳಿ ಮಾರಾಟ ಮಾಡಬೇಕಾಗುತ್ತದೆ. ವಿಭಿನ್ನ ವ್ಯಾಪಾರಿಗಳು ಡಿಜಿಟಲ್ ಚಿನ್ನಕ್ಕಾಗಿ ವಿಭಿನ್ನ ಹೋಲ್ಡಿಂಗ್ ಅವಧಿಯ ಷರತ್ತುಗಳನ್ನು ವಿಧಿಸುತ್ತಾರೆ.

“MMTC-PAMP ಯೊಂದಿಗೆ 5 ವರ್ಷಗಳ ಕಾಲ ಡಿಜಿಟಲ್ ಚಿನ್ನವನ್ನು ಹೋಲ್ಡ್ ಮಾಡಿದ ನಂತರ ಚಿನ್ನವನ್ನು ಮಾರಾಟ ಮಾಡಬೇಕಾಗುತ್ತದೆ ಅಥವಾ ಅದನ್ನು ಚಿನ್ನದ ನಾಣ್ಯಗಳಾಗಿ ಪರಿವರ್ತಿಸಬೇಕು. ಆದ್ದರಿಂದ, ಡಿಜಿಟಲ್ ಚಿನ್ನವನ್ನು ಖರೀದಿಸುವ ಮೊದಲು FAQಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ವಿಶೇಷವಾಗಿ ಹೋಲ್ಡಿಂಗ್ ಅವಧಿ ಮತ್ತು ಹೂಡಿಕೆಯ ಮೇಲಿನ ಮಿತಿಯ ಬಗ್ಗೆ ಪರಿಶೀಲನೆ ಮಾಡಬೇಕು,” ಎಂದು ವಿಷಯ ತಜ್ಞರು ಹೇಳುತ್ತಾರೆ.

6) ಡಿಜಿಟಲ್ ಚಿನ್ನದ ಮೇಲಿನ ತೆರಿಗೆ: ಡಿಜಿಟಲ್ ಚಿನ್ನದ ಹೋಲ್ಡಿಂಗ್ ಅವಧಿಯು ಹೂಡಿಕೆದಾರರು ಪಾವತಿಸಬೇಕಾದ ತೆರಿಗೆಗಳ ಮೊತ್ತವನ್ನು ನಿರ್ಧರಿಸುತ್ತದೆ. ಡಿಜಿಟಲ್ ಚಿನ್ನವನ್ನು 36 ತಿಂಗಳಿಗಿಂತ ಕಡಿಮೆ ಅವಧಿಗೆ ಇಟ್ಟುಕೊಂಡರೆ ಆದಾಯಕ್ಕೆ ನೇರವಾಗಿ ತೆರಿಗೆ ವಿಧಿಸುವುದಿಲ್ಲ. ಡಿಜಿಟಲ್ ಚಿನ್ನದಿಂದ ದೀರ್ಘಾವಧಿಯ ಬಂಡವಾಳ ಲಾಭಗಳಿಗೆ ಅನ್ವಯವಾಗುವ ಸರ್​ಚಾರ್ಜ್ ಮತ್ತು ಶೇ 4 ಸೆಸ್ ಜೊತೆಗೆ ಆದಾಯದ ಮೇಲೆ ಶೇ 20ರಷ್ಟು ತೆರಿಗೆ ವಿಧಿಸಲಾಗುತ್ತದೆ.

7) ಅನನುಕೂಲತೆ: “ಡಿಜಿಟಲ್ ಚಿನ್ನವನ್ನು ಖರೀದಿಸುವ ಪ್ರಮುಖ ಅನನುಕೂಲವೆಂದರೆ ಡಿಜಿಟಲ್ ಚಿನ್ನದ ಜಾಗದಲ್ಲಿ ಯಾವುದೇ ನಿಯಂತ್ರಕ ಕಾರ್ಯವಿಧಾನ ಇಲ್ಲ. ಆದರೆ ಚಿನ್ನದ ನಿಧಿಗಳು ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ನಿಯಂತ್ರಕ ಅಧಿಕಾರ ವ್ಯಾಪ್ತಿಗೆ ಬರುತ್ತವೆ. ಹೂಡಿಕೆದಾರರು ಚಿನ್ನದ ನಿಧಿಗಳಲ್ಲಿ ಸುಲಭವಾಗಿ ಹೂಡಿಕೆ ಮಾಡಬಹುದು ಮತ್ತು ಮೊಬೈಲ್ ಅಪ್ಲಿಕೇಷನ್‌ಗಳು ಅಥವಾ ವಿವಿಧ ಮ್ಯೂಚುವಲ್ ಫಂಡ್ ಹೌಸ್‌ಗಳು, ಹೂಡಿಕೆ ಪ್ಲಾಟ್​ಫಾರ್ಮ್​ಗಳು ಮತ್ತು ಮಾರುಕಟ್ಟೆ ಸ್ಥಳಗಳ ವೆಬ್‌ಸೈಟ್‌ಗಳ ಮೂಲಕ ಅವುಗಳನ್ನು ರಿಡೀಮ್ ಮಾಡಬಹುದು,” ಎಂದು ಮಾಹಿತಿ ನೀಡುತ್ತಾರೆ ಹೂಡಿಕೆ ತಜ್ಞರು.

ಇದನ್ನೂ ಓದಿ: Dhanteras 2021: ನವೆಂಬರ್ 2ರ ಧನ್​ತೇರಸ್​ನಂದು ಚಿನ್ನ ಖರೀದಿಗೆ ಶುಭ ಮುಹೂರ್ತದ ಮಾಹಿತಿ ಇಲ್ಲಿದೆ