ಪಿಯುಸಿಗೆ ಓದು ನಿಲ್ಲಿಸಿ, ಕತ್ತೆ ಹಾಲು ವ್ಯಾಪಾರಕ್ಕೆ ಕೈ ಹಾಕಿ ಭಾರೀ ಸಂಪಾದನೆ ಮಾಡುತ್ತಿದ್ದಾನೆ ಈ ಯುವಕ! ಕತ್ತೆ ಹಾಲು ಸರಬರಾಜು ಮಾಡುತ್ತಿರುವುದು ಯಾರಿಗೆ ಗೊತ್ತಾ?
Donkey Milk Business: ಈ ಯುವಕ ಧೈರ್ಯ ಮಾಡಿ ತಮಿಳುನಾಡಿನಲ್ಲಿ ಮೊದಲ ಕತ್ತೆ ಸಾಕಣೆ ಫಾರಂ ಸ್ಥಾಪಿಸಿದ್ದಾನೆ. ಬೆಂಗಳೂರಿನಲ್ಲಿರುವ ಕಾಸ್ಮೆಟಿಕ್ ಉತ್ಪನ್ನಗಳನ್ನು ತಯಾರಿಸುವ ಕಂಪನಿಗೆ 7,000 ರೂಪಾಯಿಗೆ ಒಂದು ಲೀಟರಿನಂತೆ ಕತ್ತೆ ಹಾಲನ್ನು ಸರಬರಾಜು ಮಾಡುತ್ತಿದ್ದಾನೆ. ಈ ಮಧ್ಯೆ, ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ಕತ್ತೆ ಹಾಲು ಬಳಕೆ ಏಕೆ ಹೇಗೆ ಎಂಬ ಕುತೂಹಲವೂ ಮೂಡುತ್ತದೆ.
ಕತ್ತೆಯ ಹಾಲಿನಲ್ಲಿ ಅನೇಕ ಔಷಧೀಯ ಗುಣಗಳು ಇವೆ. ಅದರಿಂದಲೇ ಕತ್ತೆ ಹಾಲಿಗೆ ಭಾರೀ ಬೇಡಿಕೆ ಇರುವುದು. ಕತ್ತೆಯಷ್ಟೇ ಅಲ್ಲ ಎಮ್ಮೆ, ಮೇಕೆ ಹಾಲಿಗೂ ಈಗೀಗ ಸಖತ್ ಬೇಡಿಕೆ ಇದೆ. ಹಾಗಾಗಿ ಅವುಗಳ ಸಾಕಣಿಕೆಗೆ ಈಗೀಗ ಹೆಚ್ಚು ಒತ್ತು ನೀಡಲಾಗುತ್ತಿದೆ. ಕತ್ತೆಗೂ ಒಂದು ಕಾಲ ಬಂದು ಈಗೀಗ ಕತ್ತೆಯನ್ನು ಸಾಕಲಾಗುತ್ತಿದೆ. ಅದಕ್ಕಾಗಿ ಕತ್ತೆ ಫಾರಂ ಅನ್ನೇ ತೆರೆಯಲಾಗಿದೆ. 1 ಲೀಟರ್ ಕತ್ತೆ ಹಾಲನ್ನು 7 ಸಾವಿರ ರೂಪಾಯಿಗೆ ಮಾರಾಟ ಮಾಡಿ, ಲಕ್ಷಾಂತರ ರೂಪಾಯಿ ಗಳಿಸುತ್ತಿರುವ (Donkey Milk Business) ತಮಿಳು ಯುವಕನ ಯಶೋಗಾಥೆ ಇಲ್ಲಿದೆ (Success Story). ಆತ ತನ್ನ ವಿದ್ಯಾಭ್ಯಾಸಕ್ಕೆ ಗುಡ್ಬೈ ಹೇಳಿ, ಕತ್ತೆ ಹಾಲು ಮಾರಾಟದಲ್ಲಿಯೇ ತನ್ನನ್ನು ಸಂಪೂರ್ಣ ತೊಡಗಿಸಿಕೊಂಡಿದ್ದಾನೆ. ಅನೇಕರಿಗೆ ಇದರಿಂದ ಉದ್ಯೋಗವನ್ನು ಕಲ್ಪಿಸಿದ್ದಾನೆ. ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಾಗ ಮನೆಯ ಹಿರಿ ತಲೆಗಳು ‘ಕತ್ತೆ ಮೇಯಿಸೋಕ್ಕೆ ಹೋಗು’ ಅನ್ನುವುದು ವಾಡಿಕೆ. ಆದರೆ ಇನ್ಮೇಲೆ ಹಾಗೆ ಅನ್ನುವ ಹಾಗಿಲ್ಲ ಎನ್ನುವಷ್ಟರ ಮಟ್ಟಿಗೆ ಯಶಸ್ಸು ಕಂಡಿದ್ದಾನೆ ಯು ಬಾಬು (Donkey Palace U. Babu) ಎಂಬ ಈ ಯುವಕ.
ತಮಿಳುನಾಡಿನ ತಿರುನೆಲ್ವೇಲಿ (Tirunelveli) ಸಮೀಪ ಯು ಬಾಬು ಶಿಕ್ಷಣಕ್ಕೆ ಗುಡ್ಬೈ ಹೇಳಿ, ಕತ್ತೆ ಫಾರಂ ತೆರೆದು ಕೂತಿದ್ದಾನೆ. ಇಲ್ಲಿ ಕರೆಯುವ ಕತ್ತೆ ಹಾಲನ್ನು ಬೆಂಗಳೂರಿನಲ್ಲಿರುವ ಕಾಸ್ಮೆಟಿಕ್ಸ್ ಕಂಪನಿಗೆ ಒಂದು ಲೀಟರಿಗೆ 7,000 ರೂಪಾಯಿ ದರದಲ್ಲಿ ಸರಬರಾಜು ಮಾಡುತ್ತಿದ್ದಾನೆ. ವನ್ನಾರ್ಪೇಟೆ ಮೂಲದ (Vannarpet) ಯು ಬಾಬು ವ್ಯಾಸಂಗ ಮಾಡಿದ್ದು ಫಸ್ಟ್ ಪಿಯುಸಿ ಅಷ್ಟೆ. ಮುಂದೆ ಹೊಟ್ಟೆಪಾಡಿಗೆ ಎಂದು ಔಷಧ ಉತ್ಪನ್ನಗಳ ಸರಬರಾಜು, ಮಾರಾಟಕ್ಕೆನ ಇಳಿದ. 28 ಯುನಿಸೆಕ್ಸ್ ಕಾಸ್ಮೆಟಿಕ್ಸ್ ಉತ್ಪನ್ನಗಳ ತಯಾರಿಸುವ ಕಂಪನಿಯೊಂದಕ್ಕೆ ಪ್ರತಿ ತಿಂಗಳು 1,000 ಲೀಟರ್ ಕತ್ತೆ ಹಾಲು ಬೇಕಾಗಿದೆ ಎಂಬುದು ಈತನ ಕಿವಿಗೆ ಬೀಳುತ್ತದೆ, ಅಷ್ಟೇ… ಮುಂದಿನದೆಲ್ಲಾ ಈತನದ್ದೇ ಸಾಮ್ರಾಜ್ಯ!
ಬಾಬು ಮೊದಲು ಮಾಡಿದ ಕೆಲಸವೆಂದರೆ ತಮಿಳುನಾಡಿನಲ್ಲಿ ಎಷ್ಟು ಕತ್ತೆಗಳಿವೆ ಎಂದು ಸಮೀಕ್ಷೆ ಮಾಡಿದ್ದು. ರಾಜ್ಯದಲ್ಲಿ ಅಬ್ಬಬ್ಬಾ ಅಂದರೆ 2 ಸಾವಿರ ಕತ್ತೆಗಳು ಇರಬಹುದಷ್ಟೇ ಎಂಬ ಮಾಹಿತಿ ಆತನಿಗೆ ಸಿಗುತ್ತದೆ. ಅದರ ಜೊತೆಗೆ ಒಂದು ಕತ್ತೆ ದಿನವೊಂದಕ್ಕೆ ಅಬ್ಬಬ್ಬಾ ಅಂದರೆ 350 ಮಿಲಿ ಲೀಟರ್ ಹಾಲು ಕೊಡಬಹುದಷ್ಟೇ ಎಂಬ ಮಾಹಿತಿಯನ್ನೂ ಈತ ಕಲೆ ಹಾಕುತ್ತಾನೆ.
ಈ ಮಾಹಿತಿಯನ್ನು ಬೆನ್ನಿಗೆ ಕಟ್ಟಿಕೊಂಡು ಕತ್ತೆ ಮೇಯಿಸಲು ಆರಂಭಿಸುತ್ತಾನೆ ಬಾಬು. ಆಗಲೇ ಬಾಬು ಕತ್ತೆ ಫಾರಂ ಅಸ್ತಿತ್ವಕ್ಕೆ ಬರುವುದು! ಆದರೆ ಆತನ ಪತ್ನಿ ಸೇರಿದಂತೆ ನೆಂಟರಿಷ್ಟರು ಮುಸಿಮುಸಿ ನಗಲು ಆರಂಭಿಸುತ್ತಾರೆ. ಬಾಬು ಕತ್ತೆ ಸಾಕಾಣಿಕೆಗೆ ತಣ್ಣೀರು ಎರಚುತ್ತಾರೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಬಾಬು ಕತ್ತೆಗಳ ಹಿಂದೆ ಅಲೆದಾಡತೊಡಗುತ್ತಾರೆ.
ಕಡಲೂರು ಜಿಲ್ಲೆಯ ವೃದ್ಧಾಚಲಂ ಪಟ್ಟಣದಲ್ಲಿ (Virudhachalam)100 ಮಿಲಿ ಲೀಟರ್ ಕತ್ತೆ ಹಾಲಿಗೆ 50 ರೂಪಾಯಿಯಂತೆ ಕೆಲವರು ಮಾರಾಟ ಮಾಡುತ್ತಿದ್ದಾರೆ ಎಂಬ ವಿಷಯ ತಿಳಿದು ಬಾಬು ಅಲ್ಲಿಗೆ ಹೋಗುತ್ತಾರೆ. ಕತ್ತೆ ಹಾಲಿಗೆ ವೃದ್ಧಾಪ್ಯವನ್ನು ತಡೆಯುವ ಮತ್ತು ಚಿಕ್ಕಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ ಎಂದು ವೃದ್ಧಾಚಲಂ ಪಟ್ಟಣದಲ್ಲಿ ಹಿರಿಯರು ಹೇಳುತ್ತಾರೆ.
ಇದನ್ನು ಕೇಳಿದ್ದೇ ತಡ ತಿರುನೆಲ್ವೇಲಿ ಸಮೀಪ ಬಾಬು ತನ್ನ ಗೆಳೆಯನಿಂದ 17 ಎಕರೆ ಜಮೀನನ್ನು ಲೀಸ್ಗೆ ಪಡೆಯುತ್ತಾರೆ. ‘ಡಾಂಕಿ ಪ್ಯಾಲೆಸ್’ ಎಂಬ ಕತ್ತೆ ಫಾರಂ ಅನ್ನು ಕಟ್ಟತೊಡಗುತ್ತಾರೆ. ಮೊದಲು 100 ಕತ್ತೆಗಳನ್ನು ಸಾಕತೊಡಗುತ್ತಾರೆ. ಕೆಲಸಕ್ಕೆಂದು ಕೆಲ ಸ್ಥಳೀಯರನ್ನು ನೇಮಿಸಿಕೊಳ್ಳುತ್ತಾರೆ. ಇದೀಗ ‘ಡಾಂಕಿ ಪ್ಯಾಲೆಸ್’ ಕತ್ತೆ ಫಾರಂ ನಲ್ಲಿ ಗುಜರಾತ್ ಮೂಲದ ಹಲಾರಿ ತಳಿ ಕತ್ತೆ (Gujarat Halari donkeys) ಮತ್ತು ಸ್ಥಳೀಯ ಕತ್ತೆ ತಳಿಗಳನ್ನು ಸಾಕುತ್ತಿದ್ದಾರೆ.
ದೇಶೀಯ ಕತ್ತೆ ತಳಿ ಬೆಲೆ ಸುಮಾರು 40,000 ರೂಪಾಯಿಯಷ್ಟಿದೆ. ಆದರೆ ದಿನಕ್ಕೆ 1 ಲೀಟರ್ ಹಾಲು ಕೊಡುವ ಹಲಾರಿ ತಳಿ ಕತ್ತೆಯಬ ಬೆಲೆ 1 ಲಕ್ಷ ರೂಪಾಯಿಯಷ್ಟಿದೆ ಎಂಬ ಮಾಹಿತಿ ನೀಡುತ್ತಾರೆ ಬಾಬು. ಇನ್ನು ಕತ್ತೆ ಹೊಟ್ಟೆಗೆ ಆಹಾರ ಒದಗಿಸಲು ಸ್ವತಃ ಮೇವು ಬೆಳೆಸುತ್ತಿದ್ದಾರೆ. ರಾಗಿ ಹಸಿರು ಮೇವು ಅಂತಹ ಅನೇಕ ಮಾವುಗಳ ಕೃಷಿ ಮಾಡುತ್ತಿದ್ದಾರೆ ಬಾಬು. ಕತ್ತೆಗಳ ದೇಖರೇಖಿಗೆ ಮತ್ತು ಹಾಲು ಕರೆಯಲು ಬಾಬು ಜನರನ್ನು ನೇಮಿಸಿಕೊಂಡಿದ್ದಾರೆ. ಇನ್ನು ಕತ್ತೆಗಳಿಗೆ ರೋಗ ಬಂದರೆ ಅದರ ಬಗ್ಗೆಯೂ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಸದ್ಯದಲ್ಲೇ ಯುರೋಪ್ ಮಾರ್ಕೆಟ್ಗೂ ತಮ್ನಮ ಕತ್ತೆ ಹಾಲನ್ನು ಸರಬರಾಜು ಮಾಡುವ ಮಾತುಕತೆಯಲ್ಲಿ ತೊಡಗಿದ್ದಾರೆ ಬಾಬು.
ಕತ್ತೆ ಹಾಲನ್ನು ಶೀತಲೀಕರಿಸಿ ಬಳಸುತ್ತಾರೆ. ಸ್ನಾನದ ಸೋಪು, ಚರ್ಮ ರಕ್ಷಣೆ, ತಲೆಗೂದಲು ಸಂರಕ್ಷಣೆಗಾಗಿ ಬಳಸುವ ಕ್ರೀಂ, ಲೋಷನ್ನಲ್ಲಿ ಕತ್ತೆ ಹಾಲು ಬಳಕೆಯಾಗುತ್ತದೆ. ಕತ್ತೆ ಹಾಲಿನಿಂದ ತಯಾರಾದ ಈ ಕಾಸ್ಮಟಿಕ್ ಉತ್ಪನ್ನಗಳ ಬೆಲೆಯೂ ಅಧಿಕವಾಗಿರುತ್ತದೆ.
To read in Telugu click the link here