ಬೆಂಗಳೂರು: ಭಾರತ್ ಇನ್ಫ್ರಾ ಎಕ್ಸ್ಪೋರ್ಟ್ಸ್ ಅಂಡ್ ಇಂಪೋರ್ಟ್ಸ್ ಸಂಸ್ಥೆಯ (Bharat Infra Exports & Imports) ಬೆಂಗಳೂರು ಹಾಗೂ ದಾವಣಗೆರೆ ಕಚೇರಿಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿ (ED Raid) ದಾಖಲೆಗಳನ್ನು ಪರಿಶೀಲಿಸಿರುವ ಸಂಗತಿ ಬೆಳಕಿಗೆ ಬಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ 113.38 ಕೋಟಿ ರೂ ಸಾಲ ಬಾಕಿ ಉಳಿಸಿಕೊಂಡ ಹಾಗೂ ಸಾಲದ ಹಣಕ್ಕಾಗಿ ಸುಳ್ಳು ದಾಖಲೆಗಳನ್ನು ಕೊಟ್ಟ ಆರೋಪ ಭಾರತ್ ಇನ್ಫ್ರಾ ಮೇಲಿದೆ. ಈ ಪ್ರಕರಣದ ಮೇಲೆ ಇಡಿ ಅಧಿಕಾರಿಗಳ ತಂಡಗಳು ಜೂನ್ 5ರಂದು ರೇಡ್ ನಡೆಸಿರುವುದು ತಿಳಿದುಬಂದಿದೆ. ಜೂನ್ 7ರಂದು ಇಡಿ ಈ ರೇಡ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
ಬೆಂಗಳೂರು ಮತ್ತು ದಾವಣಗೆರೆಯ ಭಾರತ್ ಇನ್ಫ್ರಾ ಸಂಸ್ಥೆಯ ಕಚೇರಿಗಳ ಮೇಲೆ ನಡೆದ ದಾಳಿಗಳಲ್ಲಿ 100 ಕೋಟಿ ರೂ ಮೌಲ್ಯದ ಚಿರಾಸ್ತಿಗಳನ್ನು ಇಡಿ ಅಧಿಕಾರಿಗಳು ಜಫ್ತಿ ಮಾಡಿಕೊಂಡಿವೆ. ಈ ವೇಳೆ 14.5 ಲಕ್ಷ ರೂ ನಗದು ಹಣ, ಹಲವು ದಾಖಲೆಗಳು, ಡಿಜಿಟಲ್ ಸಾಧನಗಳು ಹಾಗೂ ಸಂಬಂಧಿತ ಸಂಸ್ಥೆಗಳ ಬ್ಯಾಂಕ್ ಖಾತೆಗಳನ್ನೂ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂದು ಇಡಿ ಮಾಹಿತಿ ನೀಡಿದೆ.
ಎಸ್ಬಿಐನ ಬೆಂಗಳೂರು ಸಿಟಿ ಶಾಖೆಯಿಂದ ಭಾರತ್ ಇನ್ಫ್ರಾ ಸಂಸ್ಥೆ ವಿವಿಧ ರೂಪದಲ್ಲಿ ಸಾಲ ಪಡೆದಿತ್ತು. ಈ ಸಾಲ ತೀರದೇ ಹಾಗೆ ಉಳಿದಿದ್ದರಿಂದ 2017ರ ಜನವರಿ 17ರಂದು ಎಸ್ಬಿಐ ಈ ಸಾಲವನ್ನು ಅನುತ್ಪಾದಕ ಸಾಲ (ಎನ್ಪಿಎ) ಎಂದು ವರ್ಗೀಕರಿಸಿತ್ತು. ಆಗ ಸಾಲ ಬಾಕಿ ಉಳಿದದ್ದು ಒಟ್ಟು 113.38 ಕೋಟಿ ರೂ.
ಎಸ್ಬಿಐನಿಂದ ಪಡೆದ ಸಾಲದ ಹಣವನ್ನು ಭಾರತ್ ಇನ್ಫ್ರಾ ದುರುಪಯೋಗಿಸಿಕೊಂಡಿದ್ದು ಇಡಿ ತನಿಖೆಯಿಂದ ತಿಳಿದುಬಂದಿದೆ. ಅಂದರೆ ಈ ಸಾಲದ ಹಣವನ್ನು ಬೇರೆ ವ್ಯಕ್ತಿ ಮತ್ತು ಸಂಸ್ಥೆಗಳಿಗೆ ವರ್ಗಾವಣೆ ಮಾಡಲಾಗಿತ್ತು. ಬ್ಯಾಂಕಿಗೆ ನಕಲಿ ಇನ್ವಾಯ್ಸ್ ಮತ್ತು ದಾಖಲೆಗಳನ್ನು ನೀಡಿ ದಾರಿತಪ್ಪಿಸಲಾಗಿತ್ತು.
ಇದನ್ನೂ ಓದಿ: Gpay Aadhaar: ಡೆಬಿಟ್ ಕಾರ್ಡ್ ಇಲ್ಲದೇ ಆಧಾರ್ ಮೂಲಕ ಯುಪಿಐ ಆ್ಯಕ್ಟಿವೇಟ್ ಮಾಡಲು ಗೂಗಲ್ ಪೇ ಅವಕಾಶ
ಆರಾಧ್ಯ ವಯರ್ ರೋಪ್ಸ್ ಸಂಸ್ಥೆಗೆ ಎಸ್ಬಿಐ ನೀಡಿದ್ದ 10 ಎಲ್ಸಿ (ಲೆಟರ್ ಆಫ್ ಕ್ರೆಡಿಟ್) ಅನ್ನು ಭಾರತ್ ಇನ್ಫ್ರಾ ಸಂಸ್ಥೆ ಬೇರೆ ಬೇರೆ ಸಂಸ್ಥೆಗಳ ಹೆಸರಿನ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿಕೊಂಡಿತ್ತು. ಇದರ ಮೊತ್ತ 101.18 ಕೋಟಿ ರೂ ಎನ್ನಲಾಗಿದೆ. ಯಾವುದೇ ಸರಕು ಸಾಗಣಿ ಆಗದೇ ಇದ್ದರೂ ಟ್ರಾನ್ಸ್ಪೋರ್ಟ್ ಕಾಂಟ್ರಾಕ್ಟರುಗಳು ಮತ್ತು ಏಜೆಂಟ್ಗಳಿಂದ ನಕಲಿ ವಾಹನ ದಾಖಲೆ ಮತ್ತು ಇನ್ವಾಯ್ಸ್ಗಳನ್ನು ಪಡೆದು ಈ ಅಕ್ರಮ ಎಸಗಲಾಗಿದ್ದು ಇಡಿ ತನಿಖೆ ವೇಳೆ ಬಹಿರಂಗವಾಗಿತ್ತು.
ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಇನ್ನೂ ಮುಂದುವರಿಸುತ್ತಿದೆ.
(ಐಎಎನ್ಎಸ್ ಸುದ್ದಿ ಸಂಸ್ಥೆ ವರದಿ)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ