2019ರಲ್ಲಿ ಭಾರತದಲ್ಲಿ ಮಾರಾಟವಾದ ಕಾರುಗಳಲ್ಲಿ ಇವಿಗಳ ಸಂಖ್ಯೆ ಶೇ. 1; 2030ರಲ್ಲಿ ಶೇ. 30ಕ್ಕೇರುವ ನಿರೀಕ್ಷೆ: ವರದಿ
EV penetration in Indian automobile market: 2019ರಲ್ಲಿ ಭಾರತದಲ್ಲಿ ಮಾರಾಟವಾದ ಒಟ್ಟು ವಾಹನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಪಾಲು ಶೇ. 1ರಷ್ಟಿತ್ತು. 2024ರಲ್ಲಿ ಪ್ರತೀ 100 ವಾಹನಗಳಲ್ಲಿ ಏಳಕ್ಕೂ ಹೆಚ್ಚು ವಾಹನಗಳು ಇವಿಗಳಾಗಿವೆ. 2030ರಲ್ಲಿ ಇದು 30-35ಕ್ಕೆ ಏರಬಹುದು ಎಂದು ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ನ ವರದಿಯೊಂದರಲ್ಲಿ ಹೇಳಲಾಗಿದೆ. ಹಾಗೆಯೇ, ಇವಿಗಳ ಬೆಳವಣಿಗೆಗೆ ತಕ್ಕುದಾಗಿ ಮೂಲಸೌಕರ್ಯಗಳ ಅಭಿವೃದ್ಧಿಯೂ ಆಗುವ ಅವಶ್ಯಕತೆ ಇದೆ ಎಂದು ಎಚ್ಚರಿಸಲಾಗಿದೆ.
ನವದೆಹಲಿ, ಜನವರಿ 26: ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಬಹಳ ವೇಗದಲ್ಲಿ ಹೆಚ್ಚುತ್ತಿದೆ. 2019ರಲ್ಲಿ ಭಾರತದಲ್ಲಿ ಮಾರಾಟವಾಗಿದ್ದ ಒಟ್ಟಾರೆ ವಾಹನಗಳಲ್ಲಿ ಇವಿಗಳ ಸಂಖ್ಯೆ ಶೇ. 1 ಮಾತ್ರ ಇತ್ತು. 2024ರ ಕ್ಯಾಲಂಡರ್ ವರ್ಷದಲ್ಲಿ ಇವಿಗಳ ಪಾಲು ಶೇ. 7.4ಕ್ಕೆ ಏರಿದೆ. ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ನ ವರದಿಯೊಂದರ ಪ್ರಕಾರ, 2030ರೊಳಗೆ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಅದ್ವಿತೀಯ ಎನಿಸುವ ಮಟ್ಟಕ್ಕೆ ಏರುವ ಸಾಧ್ಯತೆ ಇದೆ.
ಮುಂದಿನ ದಶಕದಲ್ಲಿ ಹೆಚ್ಚಿನ ವಾಹನಗಳು ಪೆಟ್ರೋಲ್, ಡೀಸಲ್ ಇಂಧನದ ಎಂಜಿನ್ ಇರುವಂಥವೇ ಆದರೂ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುವ ನಿರೀಕ್ಷೆ ಇದೆ. 2029-30ರ ಹಣಕಾಸು ವರ್ಷದಲ್ಲಿ ಮಾರಾಟವಾಗುವ ವಾಹನಗಳಲ್ಲಿ ಶೇ. 30-35ರಷ್ಟು ವಾಹನಗಳು ಎವಿಗಳಾಗಿರಬಹುದು ಎನ್ನುತ್ತದೆ ಎಸ್ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ನ ವರದಿ.
ಇದನ್ನೂ ಓದಿ: ಹತ್ತು ವರ್ಷಗಳಲ್ಲಿ ಆಗಿರುವ ಸುಧಾರಣೆಗಳು ಭಾರತದ ಬೆಳವಣಿಗೆಗೆ ಶಕ್ತಿಯಾಗಲಿವೆ: ಅಮಿತಾಭ್ ಕಾಂತ್
ಜಾಗತಿಕವಾಗಿ ಐದು ವರ್ಷಗಳ ಹಿಂದೆ ಮಾರಾಟವಾದ ಪ್ರತೀ 40 ವಾಹನಗಳಲ್ಲಿ ಒಂದು ಇವಿಯಾಗಿತ್ತು. 2024ರಲ್ಲಿ ಅದು ಪ್ರತೀ ನಾಲ್ಕಕ್ಕೆ ಒಂದು ಸಂಖ್ಯೆಯಗೆ ಬಂದಿದೆ. ಭಾರತವೂ ಕೂಡ ಇವಿ ಅಳವಡಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಟೆಲಿಕಾಂ ಕ್ಷೇತ್ರದಲ್ಲಿ 3ಜಿಯಿಂದ 4ಜಿಗೆ ನೇರವಾಗಿ ಮತ್ತು ಕ್ಷಿಪ್ರವಾಗಿ ಪರಿವರ್ತನೆಗೊಂಡಂತೆ ಎಲೆಕ್ಟ್ರಿಕ್ ವಾಹನಗಳ ವಿಚಾರದಲ್ಲೂ ಭಾರತ ಗಮನಾರ್ಹವಾಗಿ ಪರಿವರ್ತನೆ ಹೊಂದಬಲ್ಲುದು ಎಂಬ ಅಂಶವನ್ನು ಈ ವರದಿಯಲ್ಲಿ ಎತ್ತಿತೋರಿಸಲಾಗಿದೆ.
ಸುಲಭ ಬ್ಯಾಟರಿ ವ್ಯವಸ್ಥೆ
ಅತಿಹೆಚ್ಚು ಮಾರಾಟವಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪಾಲು ಹೆಚ್ಚಿದೆ. ಕಡಿಮೆ ಬೆಲೆ, ಸಣ್ಣ ಬ್ಯಾಟರಿಗಳು ಇದಕ್ಕೆ ಕಾರಣ ಇರಬಹುದು. ಬ್ಯಾಟರಿ ತೆಗೆದು, ಮನೆಯಲ್ಲೇ ಚಾರ್ಜಿಂಗ್ ಮಾಡಿಕೊಳ್ಳಬಹುದು. ಈ ಅಂಶವು ಎಲೆಕ್ಟ್ರಿಕ್ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಜನಪ್ರಿಯತೆ ಹೆಚ್ಚಲು ಕಾರಣವಾಗಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಯುನಿಫೈಡ್ ಪೆನ್ಷನ್ ಸ್ಕೀಮ್ ಪ್ರಕಟಿಸಿದ ಸರ್ಕಾರ; ಏನಿದು ಪಿಂಚಣಿ ಯೋಜನೆ?
ಬ್ಯಾಟರಿ ಮತ್ತು ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ ಹೂಡಿಕೆ
ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿದಂತೆ ಅದಕ್ಕೆ ತಕ್ಕುದಾಗಿ ಬ್ಯಾಟರಿ ಮತ್ತು ಇನ್ಫ್ರಾಸ್ಟ್ರಕ್ಚರ್ ಲಭ್ಯ ಇರುವ ಅಗತ್ಯವಿದೆ. ಒಂದು ಅಂದಾಜು ಪ್ರಕಾರ 2029-30ರಲ್ಲಿ ಭಾರತಕ್ಕೆ 100 ಗೀಗಾವ್ಯಾಟ್ನಷ್ಟು ಇವಿ ಬ್ಯಾಟರಿ ಕೆಪಾಸಿಟಿ ಅವಶ್ಯಕತೆ ಬೀಳುತ್ತದೆ. ಇದನ್ನು ಸಾಧಿಸಬೇಕಾದರೆ ಇನ್ಫ್ರಾಸ್ಟ್ರಕ್ಚರ್ ಅಭಿವೃದ್ಧಿಗೆ 50,000 ಕೋಟಿ ರೂನಷ್ಟು ಬಂಡವಾಳ ವೆಚ್ಚದ ಅವಶ್ಯಕತೆ ಬೀಳಬಹುದು ಎಂದೂ ಹೇಳಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ