Evergrande: ಚೀನಾದ ಪೋಸ್ಟರ್​ಬಾಯ್​ ಎವರ್​ಗ್ರ್ಯಾಂಡ್​ ದಬ್ಬಾಕಿಕೊಂಡರೆ 171 ಬ್ಯಾಂಕ್​, 121 ಹಣಕಾಸು ಸಂಸ್ಥೆ ಅಡ್ಡಡ್ಡ

TV9 Digital Desk

| Edited By: Srinivas Mata

Updated on:Sep 24, 2021 | 11:20 PM

ಎವರ್​ಗ್ರ್ಯಾಂಡ್​ ಏನಾದರೂ ದಬ್ಬಾಕಿಕೊಂಡರೆ ಚೀನಾದ 171 ಬ್ಯಾಂಕ್​ಗಳು, 121 ಹಣಕಾಸು ಸಂಸ್ಥೆಗಳ ಗತಿ ಆ ದೇವರಿಗೇ ಪ್ರೀತಿ.

Evergrande: ಚೀನಾದ ಪೋಸ್ಟರ್​ಬಾಯ್​ ಎವರ್​ಗ್ರ್ಯಾಂಡ್​ ದಬ್ಬಾಕಿಕೊಂಡರೆ 171 ಬ್ಯಾಂಕ್​, 121 ಹಣಕಾಸು ಸಂಸ್ಥೆ ಅಡ್ಡಡ್ಡ
ಸಾಂದರ್ಭಿಕ ಚಿತ್ರ
Follow us

ಅವನತಿಯ ಅಂಚಿನಲ್ಲಿರುವ ಚೀನಾದ ಖಾಸಗಿ ವಲಯದ ಎರಡು ಬೃಹತ್ ಕಟ್ಟಡ ನಿರ್ಮಾಣ ಕಂಪೆನಿಗಳಲ್ಲಿ ಒಂದಾದ ಎವರ್​ಗ್ರ್ಯಾಂಡ್ ಈಗ ಎಲ್ಲರ ಆತಂಕ ತುಂಬಿದ ಕುತೂಹಲಕ್ಕೆ ಕಾರಣವಾಗಿದ್ದು, ಇಡೀ ವಿಶ್ವವೇ ಇದರತ್ತ ಗಮನ ಹರಿಸುವಂತಾಗಿದೆ. ಕಟ್ಟಡ ನಿರ್ಮಾಣ ಕ್ಷೇತ್ರ ಮಾತ್ರವಲ್ಲ, ಎಲೆಕ್ಟ್ರಿಕ್ ಕಾರು ತಯಾರಿಕೆ ಹಾಗೂ ಸಂಪತ್ತು ನಿರ್ವಹಣೆ (Asset Management) ಕ್ಷೇತ್ರಗಳಲ್ಲೂ ತುಂಬ ದೊಡ್ಡ ಮಟ್ಟದಲ್ಲಿ ತೊಡಗಿಸಿಕೊಂಡಿದ್ದ ಸಂಸ್ಥೆ Evergrande Properties. ಇದೀಗ ದಿವಾಳಿ ಆಗುವ ಹಂತ ತಲುಪಿದ್ದು, ಇದರೊಂದಿಗೆ ವ್ಯವಹಾರ ಹೊಂದಿರುವ ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿಯ ಮೇಲೂ ತೀವ್ರತರವಾದ ದುಷ್ಪರಿಣಾಮಗಳನ್ನು ಬೀರಲಿದೆ. ಈ ಸಂಸ್ಥೆಯ ವ್ಯವಹಾರದ ಅಗಾಧತೆ ಎಷ್ಟಿದೆ ಅಂದರೆ, ಇದು ಕಟ್ಟಡನಿರ್ಮಾಣ ವ್ಯವಹಾರದಲ್ಲೇ 1300ಕ್ಕೂ ಹೆಚ್ಚು ಹೊಸ ಬೃಹತ್ ಕಟ್ಟಡಗಳನ್ನು ಚೀನಾದ ಸುಮಾರು 280 ನಗರಗಳಲ್ಲಿ ನಿರ್ಮಾಣ ಮಾಡುತ್ತಿದ್ದು, ಆ ದೇಶದ ಸುಮಾರು ಶೇ 2ರಷ್ಟು ಯೋಜನೆಗಳು ಇದರದೇ ಆಗಿವೆ.

ಪ್ರಾರಂಭದಲ್ಲಿ ಸರ್ಕಾರದ ಸಂಪೂರ್ಣ ಸಹಕಾರ ಹಾಗೂ ಪ್ರೋತ್ಸಾಹಗಳಿಂದ ದೊಡ್ಡ ಮಟ್ಟದ ಬೆಳವಣಿಗೆಯನ್ನು ದಾಖಲಿಸುತ್ತಾ ನಡೆಯುತ್ತಿದ್ದ ಸಂಸ್ಥೆಯು ಕಟ್ಟಡ ನಿರ್ಮಾಣ ಮಾತ್ರವಲ್ಲದೇ ಕಾರು ತಯಾರಿಕೆ ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಪಾಲ್ಗೊಂಡು ನಿರ್ವಹಣೆಯಲ್ಲಿ ಸೋಲುತ್ತಾ ಬಂದ ಕಾರಣ ಇದೀಗ ದಿವಾಳಿ ಆಗುವ ಹಂತ ತಲುಪಿದೆ. ನಿರ್ಮಾಣ ಪೂರ್ವದಲ್ಲೇ ಗ್ರಾಹಕರಿಂದ ಹಣ ಪಡೆದ ಸಂಸ್ಥೆ ಸಕಾಲದಲ್ಲಿ ಜನರಿಗೆ ಮನೆಗಳನ್ನು ಹಸ್ತಾಂತರ ಮಾಡಲು ಸಾಧ್ಯವಾಗದೆ ತನ್ನ ಮುಖ್ಯ ವ್ಯವಹಾರವಾದ ಕಟ್ಟಡ ನಿರ್ಮಾಣದಲ್ಲೇ ಸೋಲುವಂತಾಗಿದೆ. ತನ್ನ ವ್ಯವಹಾರದ ಚೇತರಿಕೆಗಾಗಿ ಸಾರ್ವಜನಿಕರು ಹಾಗೂ ಸಂಸ್ಥೆಗಳಿಂದ ಅಪಾರ ಹಣ ಎತ್ತಿದ್ದು, ಈಗ ಯಾರಿಗೂ ಅವರ ಹಣ ತಿರುಗಿ ನೀಡಲು ಸಾಧ್ಯವಿಲ್ಲದ ಪರಿಸ್ಥಿತಿಗೆ ತಲುಪಿದೆ.

100ಕ್ಕೂ ಹೆಚ್ಚು ಕಾನೂನುಗಳು ಇದಲ್ಲದೇ, ಇತ್ತೀಚೆಗೆ ಚೀನಾದ ಆಡಳಿತವೂ ಕೂಡ ಖಾಸಗಿ ಸಂಸ್ಥೆಗಳನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವ ಸಲುವಾಗಿ 100ಕ್ಕೂ ಹೆಚ್ಚು ಕಾನೂನುಗಳನ್ನು ತಂದಿದ್ದು, ಸಾರ್ವಜನಿಕರಿಂದ ಹೆಚ್ಚಿನ ಹಣ ಸಂಗ್ರಹಣೆಯೂ ಸಾಧ್ಯವಿಲ್ಲ ಎಂಬಂತಾಗಿದೆ. ಇಲ್ಲಿಯವರೆಗೆ ಸಂಸ್ಥೆಯು ಸುಮಾರು 300 ಬಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಸಾರ್ವಜನಿಕ ವಲಯದಿಂದ ಕಲೆಹಾಕಿದ್ದು, ಅದನ್ನು ಹಿಂತಿರುಗಿಸಲಾಗದ ಸ್ಥಿತಿ ತಲುಪಿದೆ. ಈ ವಿದ್ಯಮಾನವು ಚೀನಾದ ಮೇಲೆ ಮಾತ್ರವಲ್ಲದೇ, ಅಲ್ಲಿನ ಕಟ್ಟಡ ನಿರ್ಮಾಣ ವಲಯಕ್ಕೆ ಉಕ್ಕು ಮತ್ತು ಇನ್ನಿತರ ಸಾಮಗ್ರಿಗಳ ಪೂರೈಕೆ ಮಾಡುತ್ತಿದ್ದ ಭಾರತದ ಉದ್ಯಮಗಳ ಮೇಲೂ ಬೀರುವುದರಲ್ಲಿ ಸಂಶಯವಿಲ್ಲ. ಹಾಗಾಗಿ, ಇದು ಭಾರತದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮ ಉಂಟುಮಾಡಿಯೇ ತೀರುತ್ತದೆ.

ಚೀನಾದ ಆರ್ಥಿಕತೆಯ ಮೇಲೆ ಇದು ಬೀರಬಲ್ಲ ಪರಿಣಾಮದ ತೀವ್ರತೆ ಎಷ್ಟಿದೆಯೆಂದರೆ, ಆ ದೇಶದ ಸುಮಾರು 171 ಬ್ಯಾಂಕ್​ಗಳು ಹಾಗೂ 121 ಹಣಕಾಸು ಸಂಸ್ಥೆಗಳು ತೀವ್ರ ನಷ್ಟ ಅನುಭವಿಸಿ, ದಿವಾಳಿಯಾಗುವ ಸಂಭವವಿದೆ. ಚೀನಾ ಸರ್ಕಾರವೇ ಇದನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು, ಇದರ ಸೂಕ್ತ ನಿರ್ವಹಣೆ ಮಾಡಿದರೆ ಮಾತ್ರ ಈ ಸಮಸ್ಯೆಗೊಂದು ಪರಿಹಾರ ನಿರೀಕ್ಷಿಸಬಹುದಾಗಿದೆ. ಚೀನಾದ ಪಾಲಿನ ಪೋಸ್ಟರ್​​ಬಾಯ್​ನಂತಿದ್ದ ಈ ರಿಯಲ್​ ಎಸ್ಟೇಟ್​ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲೇ ಸೃಷ್ಟಿಸಿರುವ ತಲ್ಲಣ ಎಂಥದ್ದು ಎಂಬುದು ಗೊತ್ತಾಗಬೇಕಾದರೆ ಆರಂಭದಿಂದ ಹೇಳಬೇಕಾಗುತ್ತದೆ.

ಆರಂಭದಿಂದ ಹೇಳಬೇಕು ಇಲ್ಲಿ ಆರಂಭ ಯಾವುದು ಅಂದರೆ, ಬಾಟಲಿ ನೀರಿನ ಮಾರಾಟ ಆರಂಭಿಸುವ ಮೂಲಕ 25 ವರ್ಷದ ಹಿಂದೆ ಖ್ಯಾತಿ ಪಡೆಯಲು ಶುರುವಾದ ಆ ದಿನಗಳಿಂದ ಹೇಳಬೇಕು. ಎವರ್​​ಗ್ರ್ಯಾಂಡ್​ ಆರಂಭ ಮಾಡಿದ್ದು ಬಾಟಲಿ ನೀರಿನ ಮಾರಾಟವನ್ನು ಮತ್ತು ಹಂದಿ ಸಾಕಣೆಯನ್ನು. ಆದರೆ ಕಂಪೆನಿಯು ಗುವಾಂಗ್ಝೌನಲ್ಲಿ ಫುಟ್​ಬಾಲ್​ ಕ್ಲಬ್​ ಅನ್ನು ಕೂಡ ಹೊಂದಿದೆ. ಮಧ್ಯಮ ವರ್ಗದವರ ಪಾಲಿಗೆ ಸ್ವಂತ ಮನೆ ಅಂದರೆ, ಅದು ಎವರ್​ಗ್ರ್ಯಾಂಡ್​ನಿಂದ ಎಂಬಷ್ಟರ ಮಟ್ಟಿಗೆ ಹೆಸರಾಗಿದೆ. ಎವರ್​ಗ್ರ್ಯಾಂಡ್​ನ ಇವತ್ತಿನ ಬಿಕ್ಕಟ್ಟಿಗೆ ಎರಡು ಮುಖ್ಯ ಕಾರಣಗಳು ಚೀನಾದ ನಿಯಂತ್ರಕ ಸಂಸ್ಥೆಗಳಿಂದ ಪ್ರಾಪರ್ಟಿ ಡೆವಲಪರ್​ಗಳು ಸಾಲಗಳ ಬಗ್ಗೆ ತನಿಖೆ ಶುರುವಾಯಿತು. ತನ್ನ ಉದ್ಯಮದಲ್ಲಿ ಸ್ವಲ್ಪ ಭಾಗವನ್ನು ಮಾರಿಬಿಟ್ಟು, ಈ ಸಮಸ್ಯೆಯಿಂದ ಹೊರಬಂದು ಬಿಡೋಣ ಅಂದುಕೊಂಡಿತು ಎವರ್​ಗ್ರ್ಯಾಂಡ್.

ಆದರೆ, ಇದೇ ಯೋಜನೆ ಉಲ್ಟಾ ಹೊಡೆದು, ಸಮಸ್ಯೆ ಹೆಚ್ಚಾಗುವುದಕ್ಕೆ ಮತ್ತೊಂದು ಕಾರಣ ಆಯಿತು. ಚೀನಾದ ಆಸ್ತಿ ಮಾರುಕಟ್ಟೆ ಹಿಂಜರಿತ ಆಗಿ ಮತ್ತು ಹೊಸ ಮನೆಗಳಿಗೆ ಬೇಡಿಕೆ ಇಳಿದುಹೋಯಿತು. ಇನ್ನು ನಗದು ಹರಿವು ಹೇಗೆ ಸಾಧ್ಯ? ನಿಮಗೆ ಊಹೆ ಮಾಡುವುದಕ್ಕೆ ಸಾಧ್ಯವಾ? ಎವರ್​ಗ್ರ್ಯಾಂಡ್​ಗೆ 30,000 ಕೋಟಿ ಅಮೆರಿಕನ್ ಡಾಲರ್​ ಸಾಲ ಇದೆ. ಇದನ್ನೇ ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 22,15,728 ಕೋಟಿ (22.15 ಲಕ್ಷ ಕೋಟಿ) ಆಗುತ್ತದೆ. ಸಾಲ ಇದೆ ಅಂತಷ್ಟೇ ಅಲ್ಲ, ಕಂಪೆನಿ ಷೇರು ಬೆಲೆ ಕುಸಿದಿದೆ ಹಾಗೂ ಜತೆಗೆ ಕ್ರೆಡಿಟ್​ ರೇಟಿಂಗ್ಸ್​ಗೆ ಪೆಟ್ಟು ಬಿದ್ದಿದೆ. ಪೂರೈಕೆದಾರರಿಗೆ ಕೊಡದೆ ಬಾಕಿ ಉಳಿಸಿಕೊಂಡ ದುಡ್ಡು, ಈಗಾಗಲೇ ಮನೆಯ ಸಲುವಾಗಿ ಭಾಗಶಃ ಹಣ ಪಾವತಿಸಿರುವ ಖರೀದಿದಾರರು ಸಹ ಇದ್ದಾರೆ.

ಇದನ್ನೂ ಓದಿ: Cryptocurrency Mining: ಕ್ರಿಪ್ಟೋಕರೆನ್ಸಿ ಮೈನಿಂಗ್​ಗೆ ದೇಶಾದ್ಯಂತ ನಿರ್ಬಂಧ ಹೇರುವುದಾಗಿ ಹೇಳಿದ ಚೀನಾದ ಕೇಂದ್ರ ಬ್ಯಾಂಕ್

(Evergrande Collapse May Lead To China’s 171 Banks And 121 Financial Institutions Crash)

ತಾಜಾ ಸುದ್ದಿ

Related Stories

Click on your DTH Provider to Add TV9 Kannada