ಬ್ಯಾನ್ ಆದ 156 ಡ್ರಗ್ ಕಾಂಬಿನೇಶನ್ನಲ್ಲಿ ಇದೆ ಪ್ಯಾರಸಿಟಮಾಲ್, ನಿಮೆಸುಲೈಡ್; ನೀವು ಡೋಲೋ, ನೈಸ್ ತಗೊಳ್ಳಂಗಿಲ್ವಾ?
Can you use paracetamol, nimesulide, cetirizine?: ಆಗಸ್ಟ್ 24ರಂದು ಕೇಂದ್ರ ಸರ್ಕಾರ 156 ಔಷಧ ಸಂಯೋಜನೆಗಳನ್ನು ನಿಷೇಧಿಸಿದೆ. ಇದರಲ್ಲಿ ಪ್ಯಾರಸಿಟಮಾಲ್, ನಿಮೆಸುಲೈಡ್, ಸೆಟಿರಿಜೈನ್ ಇತ್ಯಾದಿ ಜನಪ್ರಿಯ ಮತ್ತು ಸಾಮಾನ್ಯ ಬಳಕೆಯ ಔಷಧಗಳಿರುವ ಸಂಯೋಜನೆಗಳು ಸೇರಿವೆ. ಕಾಲ್ಪೋಲ್, ಕ್ರೋಸಿನ್, ಡೋಲೋ ಇತ್ಯಾದಿ ಪ್ಯಾರಸಿಟಮಾಲ್ ಟ್ಯಾಬ್ಲೆಟ್ಗಳನ್ನು ನಿಷೇಧಿಸಲಾಗಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ.
ಬೆಂಗಳೂರು, ಸೆಪ್ಟೆಂಬರ್ 3: ಬಹಳ ಸಾಮಾನ್ಯವಾಗಿ ಬಳಕೆ ಆಗುವ ಪ್ಯಾರಸಿಟಮಾಲ್, ನಿಮೆಸುಲೈಡ್, ಸೆಟಿರಿಜೈನ್ ಮೊದಲಾದವುಗಳನ್ನು ಒಳಗೊಂಡ ಸುಮಾರು 156 ಔಷಧ ಸಂಯೋಜನೆಗಳನ್ನು 10 ದಿನಗಳ ಹಿಂದೆ ಸರ್ಕಾರ ನಿಷೇಧ ಮಾಡಿತ್ತು. ಇದೀಗ ಪ್ಯಾರಸಿಟಮಾಲ್ ಇತ್ಯಾದಿ ಔಷಧಗಳನ್ನೇ ಬ್ಯಾನ್ ಮಾಡಲಾಗಿದೆ ಎನ್ನುವಂತಹ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ, ವಾಸ್ತವದಲ್ಲಿ, ಕೆಲ ನಿರ್ದಿಷ್ಟ ಔಷಧ ಸಂಯೋಜನೆಗಳನ್ನು ಮಾತ್ರವೇ ನಿಷೇಧಿಸಲಾಗಿದೆ. ಹಲವು ಮಲ್ಟಿವಿಟಮಿನ್ ಔಷಧಗಳನ್ನೂ ನಿಷೇಧಿಸುವ ಸಾಧ್ಯತೆ ಇದೆ. ಆಗಸ್ಟ್ 24ರಂದು ಆರೋಗ್ಯ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ 156 ಡ್ರಗ್ ಕಾಂಬಿನೇಶನ್ ನಿಷೇಧಿಸಲಾಗಿರುವುದನ್ನು ತಿಳಿಸಿತ್ತು.
ಯಾಕಾಗಿ ಔಷಧಗಳನ್ನು ನಿಷೇಧಿಸಲಾಗಿದೆ?
ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ಬೇರೆ ಬೇರೆ ಕಾಯಿಲೆ ಬಂದಿದ್ದರೆ ಆಯಾ ಕಾಯಿಲೆಗೆ ಬೇರೆ ಬೇರೆ ಮಾತ್ರೆ ಕೊಡುವ ಬದಲು ಒಂದೇ ಮಾತ್ರೆಯಲ್ಲಿ ಅವೆಲ್ಲಾ ಔಷಧವನ್ನು ಅಡಕ ಮಾಡಿದರೆ ಎಲ್ಲಕ್ಕೂ ರಾಮಬಾಣದಂತಾಗುತ್ತದೆ ಎನ್ನುವ ಅಭಿಪ್ರಾಯ ಇದೆ. ಉದಾಹರಣೆಗೆ, ನಿಮಗೆ ಶೀತ, ಜ್ವರ, ಕೆಮ್ಮು, ಗಂಟಲು ನೋವು ಇತ್ಯಾದಿ ಇದ್ದರೆ ವಿವಿಧ ಸಂಯೋಜನೆಗಳ ಔಷಧಗಳನ್ನು ಕೊಡಬಹುದು. ಈ ರೀತಿಯ ಔಷಧಗಳು ಕೆಲಸ ಮಾಡಬಹುದಾದರೂ ಅವುಗಳ ಅಡ್ಡಪರಿಣಾಮ ಬಹಳಷ್ಟು ಬಾರಿ ಗಂಭೀರವಾಗಿರಬಹುದು. ಹೀಗಾಗಿ, ಅಪಾಯಕಾರಿ ಎನಿಸುವ ಔಷಧ ಸಂಯೋಜನೆಗಳನ್ನು ಗುರುತಿಸಿ ನಿಷೇಧಿಸಲಾಗಿದೆ.
ಇದನ್ನೂ ಓದಿ: ಭಾರತದ ಇಂಧನ ಭದ್ರತೆಗೆ ಬ್ರೂನೆ ಮುಖ್ಯ; ಪ್ರಧಾನಿ ಮೋದಿ ಭೇಟಿಗೆ ಇದೆ ಮಹತ್ವ
ಇಲ್ಲಿ ಗಮನಿಸಬೇಕಾದ ಕೆಲ ಪ್ರಮುಖ ವಿಚಾರಗಳಿವೆ. ನಿಷೇಧಿಕ ಔಷಧ ಸಂಯೋಜನೆಗಳಲ್ಲಿ ಪ್ಯಾರಸಿಟಮಾಲ್, ನಿಮೆಸುಲೈಡ್, ಸಿಟ್ರಿಜೈನ್ ಇತ್ಯಾದಿ ಇವೆ. ಅಂದರೆ, ಇವುಗಳಿರುವ ಕೆಲ ಸಂಯೋಜನೆಗಳು ಮಾತ್ರವೇ ನಿಷೇಧಿತವಾಗಿರುವುದು.
ಉದಾಹರಣೆಗೆ, ಪ್ಯಾರಸಿಟಮಾಲ್ ಮಾತ್ರೆಯನ್ನು ಕಾಲ್ಪೋಲ್, ಡೋಲೋ ಇತ್ಯಾದಿ ಬ್ರ್ಯಾಂಡ್ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಕಾಲ್ಪೋನ್ ಅನ್ನಾಗಲೀ, ಡೋಲೋವನ್ನಾಗಲೀ ನಿಷೇಧಿಸಲಾಗಿಲ್ಲ. ನಿಷೇಧಿತವಾದ ಬಹಳಷ್ಟು ಡ್ರಗ್ ಸಂಯೋಜನೆಗಳಲ್ಲಿ ನಿಮೆಸುಲೈಡ್ ಇದೆ. ನೋವು ಶಮನಕ್ಕೆ ರಾಮಬಾಣ ಎನಿಸಿರುವ ನೈಸ್ ಮಾತ್ರೆ ನಿಮೆಸುಲೈಡ್ ಅನ್ನು ಒಳಗೊಂಡಿದೆ. ಆದರೆ, ನೈಸ್ ಮಾತ್ರೆಯನ್ನಾಗಲೀ, ನಿಮೆಸುಲೈಡ್ ಅನ್ನಾಗಲೀ ನಿಷೇಧಿಸಲಾಗಿಲ್ಲ. ನಿಮೆಸುಲೈಡ್ ಅನ್ನು ತಪ್ಪಾದ ಬೇರೊಂದು ಔಷಧದ ಜೊತೆ ಸಂಯೋಜನೆಯಾಗಿ ತಯಾರಿಸುವ ಔಷಧಕ್ಕೆ ನಿಷೇಧ ಇರುತ್ತದೆ.
ಪ್ಯಾರಸಿಟಮಾಲ್, ರಾಬೆಪ್ರಜೋಲ್, ಅಸಿಕ್ಲೋಫಿನಾಕ್ ಸಂಯೋಜನೆಯ ಔಷಧ ನಿಷೇಧಿತವಾಗಿದೆ. ಹಾಗೆಯೇ, ಪ್ಯಾರಸಿಟಮಾಲ್, ಸೆಟ್ರಿಜೈನ್ ಮತ್ತು ಕೆಫೀನ್ ಸಂಯೋಜನೆಯ ಔಷಧವೂ ನಿಷೇಧಿತವಾಗಿದೆ. ಈ ರೀತಿ 80ಕ್ಕೂ ಹೆಚ್ಚು ನಿಷೇಧಿತ ಸಂಯೋಜನೆಗಳಲ್ಲಿ ಪ್ಯಾರಸಿಟಮಾಲ್ ಇದೆ ಅಷ್ಟೇ.
ಇದನ್ನೂ ಓದಿ: ಕುಣಿಕೆಗೆ ಕೊರಳೊಡ್ಡಿದ್ದ ಮಹಿಳೆ, ಮೆಟಾ ಎಐನಿಂದ ಜೀವ ಉಳೀತು
ಮುಂದಿನ ದಿನಗಳಲ್ಲಿ ವಿವಿಧ ಮಲ್ಟಿವಿಟಮಿನ್ ಮಾತ್ರೆಗಳನ್ನೂ ನಿಷೇಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವೈದ್ಯಕೀಯ ಉದ್ಯಮದ ಬಹಳಷ್ಟು ಜನರು ಸರ್ಕಾರದ ಈ ಕ್ರಮವನ್ನು ಸ್ವಾಗತಿಸಿರುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ