Forbes Asia Philanthropy List: ಫೋರ್ಬ್ಸ್ ಏಷ್ಯಾ ದಾನಿಗಳ ಪಟ್ಟಿಯಲ್ಲಿ ಗೌತಮ್ ಅದಾನಿ ಸೇರಿ ಮೂವರು ಭಾರತೀಯರು
ಫೋರ್ಬ್ಸ್ ಏಷ್ಯಾ 16ನೇ ಆವೃತ್ತಿಯ ದಾನಿಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದ ಉದ್ಯಮಿ ಗೌತಮ್ ಅದಾನಿ, ಶಿವ ನಡಾರ್ ಹಾಗೂ ಅಶೋಕ್ ಸೂಟ ಸ್ಥಾನ ಪಡೆದಿದ್ದಾರೆ.
ಸಿಂಗಾಪುರ: ಫೋರ್ಬ್ಸ್ ಏಷ್ಯಾ 16ನೇ ಆವೃತ್ತಿಯ ದಾನಿಗಳ ಪಟ್ಟಿ (Forbes Asia Heroes of Philanthropy list) ಬಿಡುಗಡೆಯಾಗಿದ್ದು, ಭಾರತದ ಉದ್ಯಮಿ ಗೌತಮ್ ಅದಾನಿ (Gautam Adani), ಶಿವ ನಡಾರ್ (Shiv Nadar) ಹಾಗೂ ಅಶೋಕ್ ಸೂಟ (Ashok Soota) ಸ್ಥಾನ ಪಡೆದಿದ್ದಾರೆ. ಮಲೇಷ್ಯನ್-ಇಂಡಿಯನ್ ಉದ್ಯಮಿ ಬ್ರಹ್ಮಲ್ ವಾಸುದೇವನ್ ಹಾಗೂ ಅವರ ಪತ್ನಿ, ವಕೀಲೆ ಶಾಂತಿ ಕಂಡಿಯಾಹ್ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಶ್ರೇಯಾಂಕರಹಿತ ಈ ಪಟ್ಟಿಯು ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿನ ಪ್ರಮುಖ ಪರಹಿತಚಿಂತಕರನ್ನು ಗುರುತಿಸಿದೆ. ಅವರೆಲ್ಲ ಪರೋಪಕಾರ ವಿಚಾರದಲ್ಲಿ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ ಎಂದು ಫೋರ್ಬ್ಸ್ ಪ್ರಕಟಣೆ ತಿಳಿಸಿದೆ.
37 ಲಕ್ಷ ಜನರಿಗೆ ನೆರವಾಗುತ್ತಿರುವ ಅದಾನಿ ಫೌಂಡೇಶನ್
ಈ ವರ್ಷ ಜೂನ್ನಲ್ಲಿ 60ನೇ ವಯಸ್ಸಿಗೆ ಕಾಲಿಟ್ಟಿದ್ದ ಅದಾನಿ 60,000 ಕೋಟಿ ರೂ. ದಾನ ಘೋಷಿಸಿದ್ದರು. ಇದು ಅವರನ್ನು ಭಾರತದ ದೊಡ್ಡ ದಾನಿಯನ್ನಾಗಿ ಗುರುತಿಸಲು ಪ್ರಮುಖ ಕಾರಣವಾಗಿದೆ. ಇದಕ್ಕಾಗಿ ಅವರಿಗೆ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ ಎಂದು ಫೋರ್ಬ್ಸ್ ತಿಳಿಸಿದೆ. ಅದಾನಿ ಘೋಷಿಸಿರುವ ದಾನದ ಮೊತ್ತವು ಆರೋಗ್ಯ, ಶಿಕ್ಷಣ, ಕೌಶಲಾಭಿವೃದ್ಧಿಗೆ ಬಳಕೆಯಾಗಲಿದೆ. 1996ರಲ್ಲಿ ಸ್ಥಾಪನೆಯಾಗಿರುವ ಅದಾನಿ ಕುಟುಂಬದ ಅದಾನಿ ಫೌಂಡೇಶನ್ ಮೂಲಕ ದಾನದ ಹಣವು ಸದ್ವಿನಿಯೋಗವಾಗಲಿದೆ.
ಇದನ್ನೂ ಓದಿ: Forbes 100 Richest Indians: ಫೋರ್ಬ್ಸ್ ಶ್ರೀಮಂತ ಭಾರತೀಯರ ಪಟ್ಟಿ; ಅಗ್ರ ಸ್ಥಾನದಲ್ಲಿ ಗೌತಮ್ ಅದಾನಿ, ಮುಕೇಶ್ ಅಂಬಾನಿ
ಪ್ರತಿ ವರ್ಷ ಅದಾನಿ ಫೌಂಡೇಶನ್ ಭಾರತದಾದ್ಯಂತ ಸುಮಾರು 37 ಲಕ್ಷ ಜನರಿಗೆ ನೆರವಾಗುತ್ತಿದೆ ಎನ್ನಲಾಗಿದೆ.
ಸಮಾಜದ ಸಬಲೀಕರಣಕ್ಕೆ ಶಿವ ನಡಾರ್ ಕೊಡುಗೆ
ಶತಕೋಟ್ಯಧಿಪತಿ ಶಿವ ನಡಾರ್ ಸಹ ಕೊಡುಗೈ ದಾನಿಗಳಲ್ಲಿ ಒಬ್ಬರು ಎಂದು ಪೋರ್ಬ್ಸ್ ಹೇಳಿದೆ. ಇವರು ಕಳೆದ ಕೆಲವು ದಶಕಗಳಲ್ಲಿ ತಮ್ಮ ಸಂಪತ್ತಿನ ಪೈಕಿ 1 ಶತಕೋಟಿ ಡಾಲರ್ ಅನ್ನು ಶಿವ ನಡಾರ್ ಫೌಂಡೇಶನ್ ಮೂಲಕ ವಿವಿಧ ಸಾಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸಿದ್ದಾರೆ. ಈ ವರ್ಷ ಅವರು 11,600 ಕೋಟಿ ರೂ. ದಾನ ಮಾಡಿದ್ದಾರೆ. ಶಿಕ್ಷಣದ ಮೂಲಕ ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಮತ್ತು ಜನರ ಸಬಲೀಕರಣಕ್ಕೆ ಫೌಂಡೇಶನ್ ಮೂಲಕ ಯತ್ನಿಸಿದ್ದಾರೆ.
ಎಚ್ಸಿಎಲ್ ಟೆಕ್ನಾಲಜೀಸ್ನ ಸಹ ಸಂಸ್ಥಾಪಕರಾಗಿರುವ ನಡಾರ್ 2021ರಲ್ಲಿ ಕಂಪನಿಯ ಪ್ರಮುಖ ಜವಾಬ್ದಾರಿಗಳಿಂದ ಹಿಂದೆ ಸರಿದಿದ್ದರು.
ಆರೋಗ್ಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ ಅಶೋಕ್
ಟೆಕ್ ಉದ್ಯಮಿ ಅಶೋಕ್ ಸೂಟ ವೈದ್ಯಕೀಯ ಸಂಶೋಧನೆಗಾಗಿ 600 ಕೋಟಿ ರೂ. ದಾನ ನೀಡಿದ್ದಾರೆ. ವಯಸ್ಸಾಗುವಿಕೆ ಮತ್ತು ನರರೋಗಗಳಿಗೆ ಸಂಬಂಧಿಸಿದ ಸಂಶೋಧನೆಗಾಗಿ ವೈದ್ಯಕೀಯ ಸಂಶೋಧನಾ ಟ್ರಸ್ಟ್ ಒಂದನ್ನು 2021ರಲ್ಲಿ ಸ್ಥಾಪಿಸಿದ್ದು, ಈ ಟ್ರಸ್ಟ್ಗೆ ದಾನ ನೀಡಿದ್ದಾರೆ. ಸೂಟ ಅವರು ಬೆಂಗಳೂರು ಮೂಲದ ಸಾಫ್ಟ್ವೇರ್ ಸೇವಾ ಸಂಸ್ಥೆ ‘ಹ್ಯಾಪಿಯೆಸ್ಟ್ ಮೈಂಡ್ ಟೆಕ್ನಾಲಜೀಸ್’ನಲ್ಲಿ ಹೆಚ್ಚಿನ ಪಾಲು ಹೊಂದಿದ್ದಾರೆ. ಇದರಿಂದಲೇ ಹೆಚ್ಚಿನ ಸಂಪತ್ತು ಗಳಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Tue, 6 December 22