Digital Transactions: ಡಿಜಿಟಲ್ ವಹಿವಾಟಿನಲ್ಲಿ ನಾವೇ ನಂಬರ್ ಒನ್: ಯುರೋಪ್​ಗೆ ಭಾರತದ ಹತ್ತಿರ ಕೂಡ ಸುಳಿಯಲಾಗುತ್ತಿಲ್ಲ

ಸದ್ಯ ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ಭಾರತವೇ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಭಾರತಕ್ಕಿಂತ ಹೆಚ್ಚು ಅಭಿವೃದ್ದಿ ಹೊಂದಿದ ದೇಶಗಳು ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಹಿಂದುಳಿದಿದೆ ಎಂದರೆ ನಂಬಲೇಬೇಕು. ಇದಕ್ಕೆ ಉತ್ತಮ ಉದಾಹರಣೆ ಜರ್ಮನಿ.

Digital Transactions: ಡಿಜಿಟಲ್ ವಹಿವಾಟಿನಲ್ಲಿ ನಾವೇ ನಂಬರ್ ಒನ್: ಯುರೋಪ್​ಗೆ ಭಾರತದ ಹತ್ತಿರ ಕೂಡ ಸುಳಿಯಲಾಗುತ್ತಿಲ್ಲ
digital transactions
Follow us
TV9 Web
| Updated By: Vinay Bhat

Updated on:Sep 01, 2022 | 12:06 PM

ಭಾರತದ ಡಿಜಿಟಲ್ ಪಾವತಿ ವಹಿವಾಟುಗಳು (Digital Transactions) ಇಂದು ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ ಎಂದರೆ ನಮ್ಮ ದೇಶದ ಹತ್ತಿರ ಕೂಡ ಇತರೆ ಯಾವುದೇ ದೇಶ ಬರಲು ಸಾಧ್ಯವಿಲ್ಲ. ಕಳೆದ ಐದು ವರ್ಷಗಳಲ್ಲಿ ಏರಿಕೆಯನ್ನು ಕಾಣುತ್ತಲೇ ಇರುವ ಡಿಜಿಟಲ್ ಪಾವತಿ ಕೊರೊನಾ ಬಂದ ಮೇಲಂತು ಹೆಚ್ಚು ಪ್ರಸಿದ್ಧಿ ಪಡೆಯಿತು. ಎರಡು ವರ್ಷಗಳಲ್ಲಿ ಕೊರೊನಾ ಸೋಂಕು (Corona) ಮತ್ತು ಲಾಕ್‌ಡೌನ್‌ನಿಂದಾದ ಹಿನ್ನಡೆಯ ನಡುವೆಯೂ ಭಾರತದಲ್ಲಿ ಆರ್‌ಟಿಜಿಎಸ್‌, ಡಿಜಿಟಲ್‌ ಪೇಮೆಂಟ್‌ ಸೇರಿದಂತೆ ಆನ್‌ಲೈನ್‌ ಪಾವತಿಯ ಪ್ರಮಾಣ ಮತ್ತು ಮೊತ್ತದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಭಾರತೀಯ ಗ್ರಾಹಕರು ಡಿಜಿಟಲ್ ತಂತ್ರಜ್ಞಾನಕ್ಕೆ (Technology) ಹೆಚ್ಚಿನ ಒಲವನ್ನು ಪ್ರದರ್ಶಿಸಿದ್ದಾರೆ. ಇದು ಡಿಜಿಟಲ್ ಪಾವತಿ ಮೂಲಸೌಕರ್ಯದಲ್ಲಿ ತ್ವರಿತ ಬೆಳವಣಿಗೆಗೆ ಕಾರಣವಾಗಿದೆ.

ಸದ್ಯ ಡಿಜಿಟಲ್ ಪಾವತಿ ವಹಿವಾಟುಗಳಲ್ಲಿ ಭಾರತವೇ ನಂಬರ್ ಒನ್ ಸ್ಥಾನದಲ್ಲಿದೆ. ಆದರೆ, ಭಾರತಕ್ಕಿಂತ ಹೆಚ್ಚು ಅಭಿವೃದ್ದಿ ಹೊಂದಿದ ದೇಶಗಳು ಡಿಜಿಟಲ್ ಪಾವತಿ ವಹಿವಾಟಿನಲ್ಲಿ ಹಿಂದುಳಿದಿದೆ ಎಂದರೆ ನಂಬಲೇಬೇಕು. ಇದಕ್ಕೆ ಉತ್ತಮ ಉದಾಹರಣೆ ಜರ್ಮನಿ. ಆರ್ಥಿಕತೆಯಲ್ಲಿ ಸಾಕಷ್ಟು ಮುಂದಿನರುವ ಜರ್ಮನಿ ಜನರಿಗೆ ಹಣ ತಲುಪಿಸುವಲ್ಲಿ ಮಾತ್ರ ಇನ್ನೂ ಹಿಂದುಳಿದಿದೆ. ಮತ್ತೊಂದೆಡೆ, ಕಿಸಾನ್ ಸಮ್ಮಾನ್ ನಿಧಿಯಿಂದ ಸರ್ಕಾರದ ಯೋಜನೆಗಳಲ್ಲಿ ಕೋಟಿಗಟ್ಟಲೆ ಹಣವನ್ನು ಜನರ ಬ್ಯಾಂಕ್ ಖಾತೆಗಳಿಗೆ ಕಳುಹಿಸುವಲ್ಲಿ ಯಾವುದೇ ಅಡತಡೆಯಿಲ್ಲದೆ ಭಾರತವು ಮುಂಚೂಣಿಯಲ್ಲಿದೆ ಎಂದು ಪತ್ರಕರ್ತರೊಬ್ಬರು ತಿಳಿಸಿದ್ದಾರೆ.

ಎಕನಾಮಿಸ್ಟ್‌ನ ಸಂಪಾದಕ ಕ್ರಿಶ್ಚಿಯನ್ ಒಡೆನ್ಹಾಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ”ಜರ್ಮನ್ ಸರ್ಕಾರವು ತನ್ನ ನಾಗರಿಕರಿಗೆ ಹಣವನ್ನು ತಲುಪಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇಲ್ಲಿ ಬ್ಯಾಂಕ್ ಖಾತೆಗಳು ಮತ್ತು ತೆರಿಗೆ ಐಡಿಗಳನ್ನು ಸಮನ್ವಯಗೊಳಿಸಲು ಬರೋಬ್ಬರಿ 18 ತಿಂಗಳುಗಳು ತೆಗೆದುಕೊಳ್ಳುತ್ತದೆ. ಮತ್ತು ನಿರ್ವಾಹಕರು ಪ್ರತಿದಿನ 1 ಲಕ್ಷ ವಹಿವಾಟುಗಳನ್ನು ಮಾತ್ರ ಮಾಡಬಹುದು. ಹೀಗಾಗಿ ಜರ್ಮನಿಯಲ್ಲಿ ಸರ್ಕಾರ ಮತ್ತು ಎಲ್ಲ ನಾಗರಿಕರ ನಡುವೆ ಹಣ ವರ್ಗಾವಣೆ ಬಹುತೇಕ ಅಸಾಧ್ಯವಾದ ಪ್ರಕ್ರಿಯೆ,” ಎಂದು ಹೇಳಿಕೊಂಡಿದ್ದಾರೆ.

”ಜರ್ಮನಿಯಲ್ಲಿ ಡಿಜಿಟಲ್ ಪಾವತಿ ವಹಿವಾಟುಗಳು ಇನ್ನೂ ಬಂದಿಲ್ಲ. ಇಲ್ಲಿ ಕಾಗದದ ಕೆಲಸವೇ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅಲ್ಲದೆ ಅವರ ವ್ಯವಸ್ಥೆಯು ತ್ವರಿತ ವಹಿವಾಟು ನಡೆಸುತ್ತಿಲ್ಲ. ಆದರೆ, ಭಾರತ ದೇಶದಲ್ಲಿ ಪ್ರತಿದಿನ ಯುರೋಪ್​ನ ಒಟ್ಟು ಜನಸಂಖ್ಯೆಗಿಂತ ಹೆಚ್ಚು UPI ವಹಿವಾಟುಗಳು ನಡೆಯುತ್ತದೆ. ಕಿಸಾನ್ ಸಮ್ಮಾನ್ ನಿಧಿ ಮೂಲಕ ಭಾರತವು ಕೋಟಿಗಟ್ಟಲೆ ಹಣವನ್ನು ವರ್ಗಾಯಿಸುತ್ತಿದೆ. ಭಾರತದ ಬ್ಯಾಂಕಿಂಗ್ ವಹಿವಾಟುಗಳನ್ನು ನೋಡಿದರೆ, ಜುಲೈ 2022 ರ ಒಂದು ತಿಂಗಳ ಅವಧಿಯಲ್ಲೇ ಬರೋಬ್ಬರಿ 800 ಮಿಲಿಯನ್ NEFT ಮತ್ತು 3.8 ಕೋಟಿ RTGS ವಹಿವಾಟುಗಳನ್ನು ಮಾಡಲಾಗಿದೆ,” ಎಂಬ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಜರ್ಮನಿಯ ಒಟ್ಟು ಜನಸಂಖ್ಯೆ 90 ಮಿಲಿಯನ್ ಇದೆ. ಭಾರತದಲ್ಲಿ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನವನ್ನು ಪಡೆದ ರೈತರ ಸಂಖ್ಯೆ 14 ಕೋಟಿ. ಅಂದರೆ, ಭಾರತದ ಯೋಜನೆಯ ಲಾಭ ಪಡೆಯುವ ಒಟ್ಟು ಜನರ ಸಂಖ್ಯೆ ಜರ್ಮನಿಯ ಒಟ್ಟು ಜನಸಂಖ್ಯೆಗಿಂತ ಹೆಚ್ಚು. ಪ್ರತಿ 4 ತಿಂಗಳಿಗೊಮ್ಮೆ ಸರ್ಕಾರವು ಅನೇಕ ರೈತರ ಖಾತೆಗಳಿಗೆ ಹಣವನ್ನು ವರ್ಗಾಯಿಸುತ್ತದೆ. ಭಾರತ ಸರ್ಕಾರವು ವರ್ಷಕ್ಕೆ 3 ಬಾರಿ ಹೆಚ್ಚಿನ ಪ್ರಮಾಣದಲ್ಲಿ ನಗದು ವರ್ಗಾವಣೆ ಮಾಡುತ್ತದೆ. ಡಿಜಿಟಲ್ ವಹಿವಾಟಿನ ವಿಷಯದಲ್ಲಿ ಭಾರತ ಪ್ರಸ್ತುತ ವಿಶ್ವದ ಮುಂಚೂಣಿಯಲ್ಲಿದೆ. ಜುಲೈ 2022 ರಲ್ಲಿಯೇ, ದೇಶದಲ್ಲಿ ಪ್ರತಿದಿನ 200 ಮಿಲಿಯನ್ UPI ವಹಿವಾಟುಗಳು ನಡೆದಿದೆ. ಆ ತಿಂಗಳಲ್ಲಿ ಒಟ್ಟು ಯುಪಿಐ ಮೂಲಕ 628 ಕೋಟಿ ವಹಿವಾಟು ಆಗಿದೆ.

Published On - 12:06 pm, Thu, 1 September 22