Gold Loan Rates: ಬಹಳ ಆರಾಮವಾಗಿ ಸಿಗುವ ಗೋಲ್ಡ್ ಲೋನ್; ಅತಿ ಕಡಿಮೆ ಬಡ್ಡಿಗೆ ಸಾಲ ಕೊಡುವ ಬ್ಯಾಂಕುಗಳಿವು
ಚಿನ್ನದ ಮೇಲಿನ ಸಾಲಗಳಾದರೆ ಬ್ಯಾಂಕುಗಳು ಮೀನ ಮೇಷ ಎಣಿಸದೇ ನೀಡುತ್ತವೆ. ಬಹಳ ಸುರಕ್ಷಿತ ಸಾಲವಾಗಿದೆ ಗೋಲ್ಡ್ ಲೋನ್. ಬಹುತೇಕ ಎಲ್ಲಾ ಬ್ಯಾಂಕುಗಳು ಬಹಳ ಕಡಿಮೆ ಬಡ್ಡಿಗೆ ಗೋಲ್ಡ್ ಲೋನ್ ನೀಡುತ್ತವೆ. ಪ್ರೋಸಸಿಂಗ್ ಶುಲ್ಕವೂ ಕಡಿಮೆ. ಮರುಪಾವತಿ ವಿಧಾನದಲ್ಲೂ ಸಾಕಷ್ಟು ಸಡಿಲಿಕೆ ಇರುತ್ತದೆ.
ಬ್ಯಾಂಕುಗಳು ಸುರಕ್ಷಿತ ಎನಿಸುವ ಅಡಮಾನ ಸಾಲಗಳನ್ನು (secured loan) ಕಡಿಮೆ ಬಡ್ಡಿದರಕ್ಕೆ ನೀಡುತ್ತವೆ. ಅಡಮಾನವಲ್ಲದ ಅಸುರಕ್ಷಿತ ಎನಿಸುವ ವೈಯಕ್ತಿಕ ಸಾಲಗಳಿಗೆ ಹೆಚ್ಚು ಬಡ್ಡಿ ವಿಧಿಸುವುದು ಸಹಜ. ಚಿನ್ನದ ಮೇಲಿನ ಸಾಲವು ಬ್ಯಾಂಕುಗಳಿಗೆ ಬಹಳ ಸುರಕ್ಷಿತ ಲೋನ್ ಪ್ರಾಕಾರವಾಗಿದೆ. ಬಹಳ ಕ್ಷಿಪ್ರವಾಗಿ ನಿಮಗೆ ಸಾಲ ಸಿಗುತ್ತದೆ. ಗೃಹಸಾಲಕ್ಕೆ ಮನೆ ದಾಖಲೆಗಳನ್ನು ತೀವ್ರ ಪರಿಶೀಲನೆಗೊಳಪಡಿಸುವ ರಗಳೆ ಗೋಲ್ಡ್ ಲೋನ್ಗೆ ಇರುವುದಿಲ್ಲ. ಚಿನ್ನದ ಶುದ್ಧತೆಯ ಪರೀಕ್ಷೆ ಮಾಡಿದರೆ ಕೆಲವೇ ನಿಮಿಷಗಳಲ್ಲಿ ನಿಮಗೆ ಲೋನ್ ಸ್ಯಾಂಕ್ಷನ್ ಆಗುತ್ತದೆ.
ಚಿನ್ನದ ಸಾಲವು ಬ್ಯಾಂಕುಗಳಿಗೂ ಸೇಫ್ಟಿ, ಗ್ರಾಹಕರಿಗೂ ಸೇಫ್ಟಿ. ಬಹುತೇಕ ಕನಿಷ್ಠ ಬಡ್ಡಿದರಕ್ಕೆ ಗೋಲ್ಡ್ ಲೋನ್ ಸಿಗುತ್ತದೆ. ಅಡ ಚಿನ್ನದ ತೂಕಕ್ಕೆ ಅನುಗುಣವಾಗಿ ಸಾಲದ ಮೊತ್ತ ಇರುತ್ತದೆ. ಸಾಮಾನ್ಯವಾಗಿ ಚಿನ್ನದ ಬೆಲೆಯ ಶೇ. 70ರಷ್ಟು ಹಣವನ್ನು ಸಾಲವಾಗಿ ಕೊಡಲಾಗುತ್ತದೆ. ಕೆಲ ಬ್ಯಾಂಕುಗಳು ಶೇ. 90ರಷ್ಟು ಸಾಲ ಕೊಡಬಹುದು. 24 ಕ್ಯಾರಟ್ ಶುದ್ಧತೆ ಇರುವ ಗೋಲ್ಡ್ ಕಾಯಿನ್ ಇತ್ಯಾದಿ ಚಿನ್ನಕ್ಕೆ ಹೆಚ್ಚಿನ ಮೊತ್ತದ ಸಾಲ ಸಿಗುತ್ತದೆ.
ಇದನ್ನೂ ಓದಿ: MSMEs: ಭಾರತದ ಜಿಡಿಪಿಗೆ ಎಂಎಸ್ಎಂಇಗಳ ಕೊಡುಗೆ ಶೇ. 30; ಕರ್ನಾಟಕದಲ್ಲಿ ಎಷ್ಟಿವೆ ಸಣ್ಣ ಉದ್ದಿಮೆಗಳು?
ಚಿನ್ನದ ಸಾಲದ ಇನ್ನೊಂದು ವಿಶೇಷತೆ ಎಂದರೆ ಇದು ಸಾಂಪ್ರದಾಯಿಕ ಸಾಲದ ರೀತಿ ಇಎಂಐ ಕಟ್ಟುವ ಅನಿವಾರ್ಯತೆ ಇರುವುದಿಲ್ಲ. ಒಂದು ವರ್ಷದಲ್ಲಿ ಯಾವಾಗ ಬೇಕಾದರೂ, ಎಷ್ಟು ಬೇಕಾದರೂ ಮರುಪಾವತಿ ಮಾಡಬಹುದು. ಒಂದು ವರ್ಷದಲ್ಲಿ ಪೂರ್ತಿ ಮರುಪಾವತಿ ಸಾಧ್ಯವಾಗದೇ ಹೋದರೆ, ಸಾಲವನ್ನು ನವೀಕರಿಸಬಹುದು. ಇನ್ನೂ ಕೆಲ ಬ್ಯಾಂಕುಗಳು ಗೋಲ್ಡ್ ಲೋನ್ಗಳಿಗೂ ಇಎಂಐ ಇಟ್ಟಿರುವುದುಂಟು.
ಒಡವೆ ಸಾಲಕ್ಕೆ ಯಾವ್ಯಾವ ಬ್ಯಾಂಕುಗಳಲ್ಲಿ ಎಷ್ಟೆಷ್ಟು ಬಡ್ಡಿ ಇದೆ?
- ಕೋಟಕ್ ಮಹೀಂದ್ರ ಬ್ಯಾಂಕ್: ಬಡ್ಡಿದರ ಶೇ. 8ರಿಂದ ಆರಂಭ
- ಎಚ್ಡಿಎಫ್ಸಿ ಬ್ಯಾಂಕ್: ಶೇ. 8.50
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 8.45
- ಯುಕೋ ಬ್ಯಾಂಕ್: ಶೇ. 8.50
- ಇಂಡಿಯನ್ ಬ್ಯಾಂಕ್: ಶೇ. 8.65
- ಯೂನಿಯನ್ ಬ್ಯಾಂಕ್: ಶೇ. 8.65
- ಎಸ್ಬಿಐ: ಶೇ. 8.70
- ಬಂಧನ್ ಬ್ಯಾಂಕ್: ಶೇ. 8.75
- ಪಂಜಾಬ್ ಅಂಡ್ ಸಿಂದ್ ಬ್ಯಾಂಕ್: ಶೇ. 8.85
- ಫೆಡರಲ್ ಬ್ಯಾಂಕ್: ಶೇ. 8.99ರಷ್ಟು ಬಡ್ಡಿ
ಇದನ್ನೂ ಓದಿ: Sundar Pichai: ಎಂಜಿನಿಯರ್ ಅಲ್ಲ, ಕ್ರಿಕೆಟ್ ಆಟಗಾರನಾಗುವ ಆಸೆ ಹೊಂದಿದ್ದರು ಗೂಗಲ್ ಸಿಇಒ ಸುಂದರ್ ಪಿಚೈ
ಈ ಮೇಲಿನ ಬಡ್ಡಿದರ ಕನಿಷ್ಠ ಬಡ್ಡಿದರವಾಗಿದೆ. ಕೆಲವೊಮ್ಮೆ ಬ್ಯಾಂಕುಗಳು ಹೆಚ್ಚಿನ ಬಡ್ಡಿ ಹಾಕುವುದುಂಟು. ಇನ್ನು ಪ್ರೋಸಸಿಂಗ್ ಶುಲ್ಕ ಕೂಡ ಹೆಚ್ಚಿರುವುದಿಲ್ಲ. ಸಾಲದ ಮೊತ್ತದ ಶೇ. 0.5ರಿಂದ ಶೇ. 2ರವರೆಗಿನ ಹಣವನ್ನು ಪ್ರೋಸಸಿಂಗ್ ಶುಲ್ಕವಾಗಿ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ