AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Retail Inflation: ಮಾರ್ಚ್​ ವೇಳೆಗೆ ಶೇ 5ಕ್ಕೆ ಇಳಿಕೆಯಾಗಲಿದೆ ಚಿಲ್ಲರೆ ಹಣದುಬ್ಬರ; ಎಸ್​ಬಿಐ ವರದಿ

2023ರ ಜನವರಿ - ಮಾರ್ಚ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಸರಾಸರಿ ಶೇ 4.7 ಇರಲಿದೆ ಎಂದು ಎಸ್​ಬಿಐ ಸಂಶೋಧನಾ ವರದಿ ಅಂದಾಜಿಸಿದೆ.

Retail Inflation: ಮಾರ್ಚ್​ ವೇಳೆಗೆ ಶೇ 5ಕ್ಕೆ ಇಳಿಕೆಯಾಗಲಿದೆ ಚಿಲ್ಲರೆ ಹಣದುಬ್ಬರ; ಎಸ್​ಬಿಐ ವರದಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 14, 2023 | 7:33 PM

Share

ನವದೆಹಲಿ: ಗ್ರಾಹಕ ದರ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ (Retail Inflation) ಪ್ರಮಾಣ ಮಾರ್ಚ್​ ವೇಳೆಗೆ ಶೇ 5ಕ್ಕೆ ಇಳಿಕೆಯಾಗಲಿದೆ ಎಂದು ಎಸ್​ಬಿಐ ಸಂಶೋಧನಾ ವರದಿ (SBI Research) ತಿಳಿಸಿದೆ. ಚಿಲ್ಲರೆ ಹಣದುಬ್ಬರ ಪ್ರಮಾಣ 2022ರ ನವೆಂಬರ್​ನಲ್ಲೇ ಆರ್​ಬಿಐ (RBI) ಸಹನೆಯ ಮಟ್ಟಕ್ಕೆ ಇಳಿಕೆಯಾಗಿತ್ತು. ಡಿಸೆಂಬರ್​​ನಲ್ಲಿ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗುವ ಮೂಲಕ ಮತ್ತಷ್ಟು ಭರವಸೆ ಮೂಡಿಸಿದೆ. ಗ್ರಾಹಕ ದರ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರ ಪ್ರಮಾಣ ಡಿಸೆಂಬರ್​​ನಲ್ಲಿ ಶೇ 5.72ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಸಾಂಖ್ಯಿಕ, ಯೋಜನಾನುಷ್ಠಾನ ಸಚಿವಾಲಯ ಗುರುವಾರ ತಿಳಿಸಿತ್ತು. ನವೆಂಬರ್​ಗೆ ಹೋಲಿಸಿದರೆ ಡಿಸೆಂಬರ್​​ನಲ್ಲಿ ಹಣದುಬ್ಬರ ಮತ್ತಷ್ಟು ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗಲಿದೆ ಎಂದು ಸಚಿವಾಲಯ ತಿಳಿಸಿತ್ತು.

2023ರ ಜನವರಿ – ಮಾರ್ಚ್ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಸರಾಸರಿ ಶೇ 4.7 ಇರಲಿದೆ ಎಂದು ಎಸ್​ಬಿಐ ಸಂಶೋಧನಾ ವರದಿ ಅಂದಾಜಿಸಿದೆ. ಅಕ್ಟೋಬರ್​ ತಿಂಗಳಲ್ಲಿ ಶೇ 6.77 ಇದ್ದ ಚಿಲ್ಲರೆ ಹಣದುಬ್ಬರ ನಬವೆಂಬರ್​ನಲ್ಲಿ ಶೇ ನವೆಂಬರ್​ನಲ್ಲಿ ಶೇ 5.88ಕ್ಕೆ ಇಳಿಕೆಯಾಗಿತ್ತು. ಡಿಸೆಂಬರ್​​ನಲ್ಲಿ ಶೇ 5.72ಕ್ಕೆ ಇಳಿಕೆಯಾಗಿದೆ. ಇದರೊಂದಿಗೆ ಸತತ ಎರಡನೇ ತಿಂಗಳು ಆರ್​ಬಿಐ ಸಹನೆಯ ಮಟ್ಟವಾದ ಶೇ 6ಕ್ಕಿಂತ ಕೆಳಗಿದೆ.

ಹಣದುಬ್ಬರ ತಡೆಯುವ ಸಲುವಾಗಿ ಆರ್​ಬಿಐ ಹಣಕಾಸು ನೀತಿ ಸಮಿತಿಯು ಡಿಸೆಂಬರ್ 7ರಂದು ರೆಪೊ ದರವನ್ನು 35 ಮೂಲಾಂಶದಷ್ಟು ಹೆಚ್ಚಿಸಿ ಶೇಕಡಾ 6.25ಕ್ಕೆ ನಿಗದಿ ಮಾಡಿತ್ತು. 20206 ಮಾರ್ಚ್ ಒಳಗಾಗಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 2ರಿಂದ 4ರ ಮಟ್ಟದಲ್ಲಿ ಇರುವಂತೆ ಮಾಡುವುದು ಆರ್​ಬಿಐ ಗುರಿಯಾಗಿದೆ. ಆರ್​ಬಿಐ ಹಣಕಾಸು ನೀತಿ ಸಮಿತಿಯ ಮುಂದಿನ ಸಭೆ ಫೆಬ್ರವರಿ 6ರಿಂದ 8ರ ವರೆಗೆ ನಡೆಯಲಿದೆ. 8ರಂದು ಹಣಕಾಸು ನೀತಿ ಪ್ರಕಟಗೊಳ್ಳಲಿದ್ದು, ಮತ್ತೆ ರೆಪೊ ದರ ಹೆಚ್ಚಾಗಲಿದೆಯೇ ಅಥವಾ ಸ್ಥಿರವಾಗಿರಲಿದೆಯೇ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.

ಇದನ್ನೂ ಓದಿ: Retail Inflation: ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಚಿಲ್ಲರೆ ಹಣದುಬ್ಬರ

ಈ ಮಧ್ಯೆ, ಆರ್​ಬಿಐ ಬಡ್ಡಿ ದರ ಈಗಿರುವ ಹೆಚ್ಚಿನ ಮಟ್ಟದಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದು ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಸುಳಿವು ನೀಡಿದ್ದಾರೆ. ಚಿಲ್ಲರೆ ಹಣದುಬ್ಬರ ಪ್ರಮಾಣ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಬೆನ್ನಲ್ಲೇ, ಮುಂದಿನ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ರೆಪೊ ದರ ಹೆಚ್ಚಳ ಸ್ಥಗಿತಗೊಳಿಸಲಿದೆಯೇ ಆರ್​ಬಿಐ ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈಗಿನ ರಾಜಕೀಯ ಮತ್ತು ಹಣಕಾಸು ಪರಿಸ್ಥಿತಿಗಳು ಹೀಗೆಯೇ ಮುಂದುವರಿದರೆ ಬಡ್ಡಿ ದರ ಹೆಚ್ಚಿನ ಮಟ್ಟದಲ್ಲೇ ಮುಂದುವರಿಯಲಿದೆ. ಪ್ರಮುಖ ಹಣದುಬ್ಬರವನ್ನು ನಾವು ಗಮನದಲ್ಲಿ ಇಟ್ಟಿರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಆದರೆ ಬಡ್ಡಿ ದರವನ್ನು ಹೆಚ್ಚಿಸಲಾಗುತ್ತದೆಯೇ ಅಥವಾ ಈಗಿರುವ ಮಟ್ಟದಲ್ಲೇ ಮುಂದುವರಿಸಲಾಗುತ್ತದೆಯೇ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ಅವರು ಬಹಿರಂಗಪಡಿಸಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ