4G ಟೆಲಿಕಾಂ ತರಂಗಾಂತರ ರೂ. 77,814.80 ಕೋಟಿಗೆ ಹರಾಜು; ರಿಲಯನ್ಸ್ ಜಿಯೋ ರೂ. 57,122 ಕೋಟಿ ಬಿಡ್

4G ಸ್ಪೆಕ್ಟ್ರಂ ಹರಾಜಿನಲ್ಲಿ ಸರ್ಕಾರವು 77,814.80 ಕೋಟಿ ರೂಪಾಯಿ ಸಂಗ್ರಹಿಸಿದೆ. ಅತಿ ಹೆಚ್ಚಿನ ಪ್ರಮಾಣದ ಬಿಡ್ ಮಾಡಿರುವುದು ರಿಲಯನ್ಸ್ ಜಿಯೋ ಹಾಗೂ ಮೊತ್ತ 57,122 ಕೋಟಿ ರೂಪಾಯಿ.

  • TV9 Web Team
  • Published On - 17:24 PM, 3 Mar 2021
4G ಟೆಲಿಕಾಂ ತರಂಗಾಂತರ ರೂ. 77,814.80 ಕೋಟಿಗೆ ಹರಾಜು; ರಿಲಯನ್ಸ್ ಜಿಯೋ ರೂ. 57,122 ಕೋಟಿ ಬಿಡ್
ಸಾಂದರ್ಭಿಕ ಚಿತ್ರ

4G ಟೆಲಿಕಾಂ ತರಂಗಾಂತರ (ಸ್ಪೆಕ್ಟ್ರಮ್) 2021ರ ಹರಾಜು ಪ್ರಕ್ರಿಯೆ ಮಾರ್ಚ್ 2ನೇ ತಾರೀಕಿನಂದು ಮುಕ್ತಾಯ ಆಗಿದೆ. ಇದಕ್ಕಾಗಿ ಸರ್ಕಾರವು ರೂ. 77,814.80 ಕೋಟಿಯ ಬಿಡ್ ಪಡೆದುಕೊಂಡಿದೆ. 77,146 ಕೋಟಿ ರೂಪಾಯಿ ಮೌಲ್ಯದ ಬಿಡ್ ಮೊದಲ ದಿನವೇ ಸಂಗ್ರಹ ಆಗಿತ್ತು. ಎರಡನೇ ದಿನದಂದು ರೂ.668.20 ಕೋಟಿಯ ಬಿಡ್ ಬಂತು. ಎರಡೂ ದಿನದ್ದು ಒಟ್ಟು ಸೇರಿ ರೂ. 77,814.80 ಕೋಟಿ ಬಂದಿದೆ. ರಿಲಯನ್ಸ್ ಜಿಯೋದಿಂದ ಅತಿ ದೊಡ್ಡ ಪ್ರಮಾಣದ ಖರೀದಿ ಮಾಡಲಾಗಿದೆ. ಒಟ್ಟಾರೆ 488.35 MHz ಸ್ಪೆಕ್ಟ್ರಂ ಅನ್ನು ರೂ. 57,122.05 ಕೋಟಿಗೆ ಖರೀದಿ ಮಾಡಿದೆ. ಆ ನಂತರ ಭಾರ್ತಿ ಏರ್​ಟೆಲ್ 355.45 MHz ಸ್ಪೆಕ್ಟ್ರಂ ಅನ್ನು ರೂ. 18,698.75 ಕೋಟಿಗೆ ಹಾಗೂ ವೊಡಾಫೋನ್ ಐಡಿಯಾ 11.80 MHz ಸ್ಪೆಕ್ಟ್ರಂ ಅನ್ನು ರೂ. 1993.40 ಕೋಟಿಗೆ ಖರೀದಿಸಿವೆ ಎಂದು ದೂರಸಂಪರ್ಕ ಕಾರ್ಯದರ್ಶಿ ಅನ್ಶುಲ್ ಪ್ರಕಾಶ್ ಹೇಳಿದ್ದಾರೆ.

2300 MHz ಬ್ಯಾಂಡ್​​ಗೆ ಅತಿ ಹೆಚ್ಚಿನ ಬೇಡಿಕೆ
ಅನ್ಶುಲ್ ಪ್ರಕಾಶ್ ಹೇಳಿದಂತೆ, 2308.80 MHz ಸ್ಪೆಕ್ಟ್ರಂ ಹರಾಜಿಗೆ ಇಡಲಾಗಿತ್ತು. ಸರ್ಕಾರದಿಂದ 855.60 MHz ಸ್ಪೆಕ್ಟ್ರಂಗೆ ಬಿಡ್ ಬಂದಿದೆ. 2300 MHz ಬ್ಯಾಂಡ್ ಅತಿ ಹೆಚ್ಚು ಬೇಡಿಕೆ ಪಡೆದಿದ್ದು, ಶೇ 89.29ರಷ್ಟು ಸ್ಪೆಕ್ಟ್ರಂ ಮಾರಾಟವಾಯಿತು. 2300 MHz ಬ್ಯಾಂಡ್ ಅಡಿಯಲ್ಲೇ 560 MHz ಸ್ಪೆಕ್ಟ್ರಂ ಕೂಡ ಹರಾಜಿಗೆ ಇಡಲಾಗಿತ್ತು ಎಂದು ಸಂಬಂಧಪಟ್ಟ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

800 MHz ಬ್ಯಾಂಡ್​ನಲ್ಲಿ ಲಭ್ಯವಿರುವ ಶೇ 65ರಷ್ಟು ಸ್ಪೆಕ್ಟ್ರಂ ಮಾರಾಟವಾಗಿದೆ. 1800 MHz ಬ್ಯಾಂಡ್ ಶೇ 43ರಷ್ಟು, 900 MHz ಬ್ಯಾಂಡ್ ಶೇಕಡಾ 39ರಷ್ಟು, 2100 MHz ಬ್ಯಾಂಡ್​​ನಲ್ಲಿ ಶೇ 9ರಷ್ಟು ಸ್ಪೆಕ್ಟ್ರಂ ಮಾರಾಟವಾಗಿದೆ. ಒಟ್ಟಾರೆ ಸ್ಪೆಕ್ಟ್ರಂ ಮಾರಾಟದಿಂದ ಕನಿಷ್ಠ 3.92 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗಬಹುದು ಎಂದು ದೂರಸಂಪರ್ಕ ಇಲಾಖೆಯು (DoT) ಗುರಿ ಹಾಕಿಕೊಂಡಿದೆ. ಈ ವರ್ಷ ಏರ್​​ಟೆಲ್, ವೊಡಾಫೋನ್ ಐಡಿಯಾ ಹಾಗೂ ರಿಲಯನ್ಸ್ ಜಿಯೋ ಮಾತ್ರ ಬಿಡಿಂಗ್​ನಲ್ಲಿ ಪಾಲ್ಗೊಂಡಿದ್ದವು.

700 MHz ಸ್ಪೆಕ್ಟ್ರಂ ಮೂಲ ಬೆಲೆ 2 ಲಕ್ಷ ಕೋಟಿ ರೂಪಾಯಿ ಹತ್ತಿರ:
ಕಳೆದ ಬಾರಿ ಸ್ಪೆಕ್ಟ್ರಂ 2016ರಲ್ಲಿ ಮಾರಾಟ ಆಗಿತ್ತು. ಈ ಬಾರಿ ದೂರಸಂಪರ್ಕ ಇಲಾಖೆಯು 700 MHz, 800 MHz, 900 MHz, 1800 MHz, 2100 MHz, 2300 MHz ಮತ್ತು 2500 MHz ಬ್ಯಾಂಡ್​ನ 2308 ಯೂನಿಟ್ ಸ್ಪೆಕ್ಟ್ರಂ ಅನ್ನು ಹರಾಜಿಗಿಟ್ಟಿತ್ತು. 800 MHz, 900 MHz, 1800 MHz, 2100 MHz ರೇಡಿಯೋ ತರಂಗಾತರಗಳಿಗೆ ಬಿಡ್​​ಗಳು ಬಂದವು. 700 MHz, 2500 MHz ಬ್ಯಾಂಡ್ ಮಾರಾಟ ಆಗದೆ ಉಳಿದವು. 700 MHz ಸ್ಪೆಕ್ಟ್ರಂ ಮೂಲ ಬೆಲೆ 2 ಲಕ್ಷ ಕೋಟಿ ರೂಪಾಯಿಗೆ ಹತ್ತಿರ ಇದ್ದುದರಿಂದ ಯಾರೂ ಅದರ ಖರೀದಿಗೆ ಮುಂದಾಗಲಿಲ್ಲ.

700 MHz ಬ್ಯಾಂಡ್ ಮಾರಾಟವಾಗದೆ ಉಳಿದುಕೊಂಡಿದೆ. ಇದನ್ನು 5G ಹರಾಜಿಗೆ ಬಳಸಿಕೊಳ್ಳಬಹುದು. ಹೊಸದಾಗಿ ರೆಫರೆನ್ಸ್​ಗೆ 700 MHz ಮತ್ತು 2500 MHz ಮತ್ತೆ ಭಾರತೀಯ ದೂರಸಂಪರ್ಕ ಪ್ರಾಧಿಕಾರಕ್ಕೆ (TRAI) ಕಳುಹಿಸಲಾಗುವುದು ಎಂದು ದೂರಸಂಪರ್ಕ ಕಾರ್ಯದರ್ಶಿ ಹೇಳಿದ್ದಾರೆ. ಮುಂದುವರಿದು, ಜಿಯೋದಿಂದ 800 MHz, 1800 MHz ಮತ್ತು 2300 MHz ಬ್ಯಾಂಡ್ ಖರೀದಿಸಲಾಗಿದೆ. ವೊಡಾಫೋನ್ ಐಡಿಯಾ 900 ಮತ್ತು 1800 MHz ಬ್ಯಾಂಡ್​ಗಳಿಗೆ ಮಾತ್ರ ಬಿಡ್ ಮಾಡಿದೆ. ಇನ್ನು ಭಾರ್ತಿ ಏರ್​ಟೆಲ್ ನಿಂದ 5 ಬ್ಯಾಂಡ್​ಗಳಾದ 800 MHz, 900 MHz, 1800 MHz, 2100 MHz ಮತ್ತು 2300 Mhzಗೆ ಬಿಡ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

20 ವರ್ಷಗಳ ಅವಧಿಗೆ ಖರೀದಿ
ಟೆಲಿಕಾಂ ಕಂಪೆನಿಗಳು ಖರೀದಿ ಮಾಡಿದ ಈ ಸ್ಪೆಕ್ಟ್ರಂಗಳು 20 ವರ್ಷಗಳ ಕಾಲಾವಧಿಯ ಮಾನ್ಯತೆ ಹೊಂದಿರುತ್ತವೆ. ಸರ್ಕಾರವು ಈ ಹರಾಜಿನಿಂದ ನಿರೀಕ್ಷೆ ಮಾಡಿದ್ದ ಆದಾಯಕ್ಕಿಂತ ಶೇ 50ರಷ್ಟು ಹೆಚ್ಚೇ ಹಣ ಬಂದಿದೆ. ಮುಂದಿನ ಏಳರಿಂದ ಹತ್ತು ದಿನದೊಳಗೆ ಹಣ ಪಾವತಿಗೆ ನೋಟಿಸ್ ನೀಡಲಾಗುತ್ತದೆ. ಅಲ್ಲಿಂದ 10 ದಿನದೊಳಗೆ ಆರಂಭದ ಕಂತನ್ನು ಪಾವತಿ ಮಾಡಬೇಕಾಗುತ್ತದೆ. 700 MHz, 800 MHz ಮತ್ತು 900 MHz ಬ್ಯಾಂಡ್​ಗಳನ್ನು ಖರೀದಿ ಮಾಡಿದವರು ಆರಂಭದಲ್ಲೇ ಶೇ 25ರಷ್ಟು ಮೊತ್ತ, ಉಳಿದ ಬ್ಯಾಂಡ್​​ಗಳಾದ 1800, 2100, 2300 ಮತ್ತು 2500 MHz ಬ್ಯಾಂಡ್ ಖರೀದಿ ಮಾಡಿದವರು ಶೇಕಡಾ 50ರಷ್ಟು ಹಣ ಆರಂಭದಲ್ಲೇ ನೀಡಬೇಕು. ಬಾಕಿ ಮೊತ್ತವನ್ನು 16 ವಾರ್ಷಿಕ ಕಂತುಗಳಲ್ಲಿ ಪಾವತಿಸಬೇಕು. ಮೊದಲಿಗೆ ಎರಡು ವರ್ಷ ಪಾವತಿಯಿಂದ ವಿನಾಯಿತಿ ಇರುತ್ತದೆ. ವೈರ್​ಲೆನ್ ಸೇವೆ ಆದಾಯ ಹೊರತುಪಡಿಸಿ ಸ್ಪೆಕ್ಟ್ರಂ ಬಳಕೆ ಶುಲ್ಕ (SUC) ಎಂದು ಈ ಹರಾಜಿನಲ್ಲಿ ಲೈಸೆನ್ಸ್​ನ ಶೇ 3ರ ದರದಲ್ಲಿ ಅಡ್ಜಸ್ಟಡ್ ಗ್ರಾಸ್ ರೆವೆನ್ಯೂ (ಎಜಿಆರ್) ಪಾವತಿಸಬೇಕಾಗುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Reliance Jioದಿಂದ ಗ್ರಾಹಕರಿಗೆ ಸಿಹಿ ಸುದ್ದಿ! ಜಿಯೋ ಪರಿಚಯಿಸಿದ ಮೂರು ವಿಶೇಷ ಆಫರ್​ಗಳಿವು