NPS Vs PPF Vs SSY Vs SCSS: ಸರ್ಕಾರದ ಬೆಂಬಲ ಇರುವ, ತೆರಿಗೆ ಉಳಿತಾಯ ಮಾಡಬಹುದಾದ, ಒಳ್ಳೆ ರಿಟರ್ನ್​ ನೀಡುವ ಯೋಜನೆಗಳಿವು

ತೆರಿಗೆ ಉಳಿತಾಯ ಆಗುವಂಥ, ಉತ್ತಮ ರಿಟರ್ನ್ ದೊರೆಯುವ, ಸರ್ಕಾರದ ಬೆಂಬಲ ಇರುವ ಸಣ್ಣ ಉಳಿತಾಯ ಯೋಜನೆ ಬಗ್ಗೆ ವಿವರವಾದ ಲೇಖನ ಇಲ್ಲಿದೆ.

NPS Vs PPF Vs SSY Vs SCSS: ಸರ್ಕಾರದ ಬೆಂಬಲ ಇರುವ, ತೆರಿಗೆ ಉಳಿತಾಯ ಮಾಡಬಹುದಾದ, ಒಳ್ಳೆ ರಿಟರ್ನ್​ ನೀಡುವ ಯೋಜನೆಗಳಿವು
ಸಾಂದರ್ಭಿಕ ಚಿತ್ರ
TV9kannada Web Team

| Edited By: Srinivas Mata

Jul 04, 2022 | 3:49 PM

ಇವತ್ತಿಗೆ ಷೇರು ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಎದ್ದು ಕಾಣುತ್ತಿದೆ. ಭಾರತವೊಂದೇ ಅಲ್ಲ, ಜಗತ್ತಿನಾದ್ಯಂತ ಅದೇ ಪರಿಸ್ಥಿತಿ. ಆದರೆ ಹಣ ಸಂಪಾದಿಸುವುದು ಎಷ್ಟು ಕಷ್ಟವೋ ಎಲ್ಲರಿಗೂ ತಿಳಿದಿದೆ. ಆದರೆ ಹೂಡಿಕೆದಾರರು ಈಕ್ವಿಟಿ ಮಾರುಕಟ್ಟೆಯಲ್ಲಿ ಕ್ಷಣಾರ್ಧದಲ್ಲಿ ಅದನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಥ ಅಪಾಯದ ವಿರುದ್ಧ ರಕ್ಷಣೆ ಪಡೆಯುವುದಕ್ಕೆ ಮತ್ತು ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು, ತೆರಿಗೆ-ಉಳಿತಾಯದ (Tax Savings) ಅನುಕೂಲಗಳ ಜತೆಗೆ ಉತ್ತಮ ಆದಾಯವನ್ನು ನೀಡುವುದರಿಂದ ಸರ್ಕಾರದ ಬೆಂಬಲಿತ ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ. ಹಣದುಬ್ಬರ ದರವು ತುಂಬ ಹೆಚ್ಚಿರುವ ಈಗಿನ ಸನ್ನಿವೇಶದಲ್ಲಿ ಹೂಡಿಕೆದಾರರು ತಮ್ಮ ಹಣವನ್ನು ಖಚಿತವಾದ ಆದಾಯವನ್ನು ನೀಡುವ ಯೋಜನೆಗಳಲ್ಲಿ ಹೂಡಲು ನೋಡುತ್ತಾರೆ. ಹೂಡಿಕೆದಾರರಿಗೆ ಖಾತ್ರಿ ಆದಾಯದ ಜೊತೆಗೆ ತೆರಿಗೆ-ಉಳಿತಾಯ ವೈಶಿಷ್ಟ್ಯವನ್ನು ನೀಡುವ, ಸರ್ಕಾರದ ಬೆಂಬಲ ಇರುವ ನಾಲ್ಕು ಅಂತಹ ಯೋಜನೆಗಳ ವಿವರವಾದ ನೋಟ ಇಲ್ಲಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆ (NPS)

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಸ್ವಯಂಪ್ರೇರಿತ ನಿವೃತ್ತಿ ಉಳಿತಾಯ ಯೋಜನೆಯಾಗಿದ್ದು, ಚಂದಾದಾರರು ತಮ್ಮ ಭವಿಷ್ಯವನ್ನು ಪಿಂಚಣಿ ರೂಪದಲ್ಲಿ ಭದ್ರಪಡಿಸಿಕೊಳ್ಳಲು ಅದಾಗಲೇ ನಿಗದಿ ಮಾಡಿಕೊಡಂಥ ಕೊಡುಗೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. ಸರ್ಕಾರಿ-ಬೆಂಬಲಿತ ಹೂಡಿಕೆ ಯೋಜನೆಯು ಚಂದಾದಾರರಿಗೆ ಈಕ್ವಿಟಿ ಮತ್ತು ಸಾಲಪತ್ರಗಳ ಇನ್​ಸ್ಟ್ರುಮೆಂಟ್​ಗಳಿಗೆ ಮಾನ್ಯತೆ ನೀಡುತ್ತದೆ. ಅಲ್ಲದೆ, ಇದು ವಿನಾಯಿತಿ-ವಿನಾಯಿತಿ-ವಿನಾಯಿತಿ (EEE) ಸಾಧನವಾಗಿದ್ದು, ಹೂಡಿಕೆದಾರರಿಗೆ ಮೆಚ್ಯೂರಿಟಿ ಮತ್ತು ಸಂಪೂರ್ಣ ಪಿಂಚಣಿ ಹಿಂತೆಗೆದುಕೊಳ್ಳುವ ಮೊತ್ತದ ಮೇಲೆ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತದೆ.

ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತದೆ. ಇದು ಸೆಕ್ಷನ್ 80 CCD (1) ಮತ್ತು 80CCD (1B) ಅಡಿಯಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳನ್ನು ನೀಡುತ್ತದೆ. ಚಂದಾದಾರರು ಆರ್ಥಿಕ ವರ್ಷದಲ್ಲಿ ಕನಿಷ್ಠ 6,000 ರೂಪಾಯಿಯನ್ನು, ಅಂದರೆ ಇದನ್ನು ಒಟ್ಟು ಮೊತ್ತವಾಗಿ ಅಥವಾ ಕನಿಷ್ಠ 500 ರೂಪಾಯಿಗಳ ಮಾಸಿಕ ಕಂತುಗಳಾಗಿ ಪಾವತಿಸಬಹುದು. NPSನ ಪ್ರಸ್ತುತ ಬಡ್ಡಿದರದ ಶ್ರೇಣಿಯು ನೀಡಿದ ಕೊಡುಗೆಯ ಮೇಲೆ ಶೇ 8ರಿಂದ 10ರಷ್ಟಿದೆ.

ಸಾರ್ವಜನಿಕ ಭವಿಷ್ಯ ನಿಧಿ (PPF)

ದೀರ್ಘಾವಧಿಯ ಹೂಡಿಕೆದಾರರಿಗೆ ಅತ್ಯಂತ ಜನಪ್ರಿಯ ಹೂಡಿಕೆ ಸಾಧನಗಳಲ್ಲಿ ಒಂದಾದ ಪಿಪಿಎಫ್​ ಅದರ ವಿನಾಯಿತಿ-ವಿನಾಯಿತಿ-ವಿನಾಯಿತಿ (EEE) ಕಾರಣದಿಂದಾಗಿ ಅನೇಕರಿಗೆ ಆದ್ಯತೆಯ ಆಯ್ಕೆಯಾಗಿದೆ. ಒಬ್ಬ ವಯಸ್ಕ ನಿವಾಸಿ ಭಾರತೀಯ ಅಥವಾ ಅಪ್ರಾಪ್ತ ವಯಸ್ಕ/ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಪೋಷಕರು ಕನಿಷ್ಠ ರೂ. 500 ಠೇವಣಿ ಮತ್ತು ಗರಿಷ್ಠ ರೂ. 1.5 ಲಕ್ಷದ ವಾರ್ಷಿಕ ಮೊತ್ತದೊಂದಿಗೆ ಪಿಪಿಎಫ್ ಖಾತೆಯನ್ನು ತೆರೆಯಬಹುದು. ಯೋಜನೆಯಡಿ ಠೇವಣಿಗಳು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80C ಅಡಿಯಲ್ಲಿ ಕಡಿತಕ್ಕೆ ಅರ್ಹವಾಗಿವೆ. ಪಿಪಿಎಫ್​ಗಳು 15 ವರ್ಷಗಳ ಮೆಚ್ಯೂರಿಟಿ ಅವಧಿಯನ್ನು ಹೊಂದಿವೆ. ಪಿಪಿಎಫ್​ನಲ್ಲಿ ನೀಡಲಾಗುವ ಬಡ್ಡಿ ದರವು ವಾರ್ಷಿಕ ಶೇ 7.1 (ವಾರ್ಷಿಕವಾಗಿ ಸಂಯೋಜಿತವಾಗಿದೆ). ಆದರೆ ಪ್ರತಿ ತ್ರೈಮಾಸಿಕದಲ್ಲಿ ಹಣಕಾಸು ಸಚಿವಾಲಯವು ಸೂಚಿಸಿದಂತೆ ಇದು ಅನ್ವಯಿಸುತ್ತದೆ, ಆದ್ದರಿಂದ ಬಡ್ಡಿ ದರವನ್ನು ಬದಲಾಯಿಸಬಹುದು.

ಸುಕನ್ಯಾ ಸಮೃದ್ಧಿ ಯೋಜನೆ (SSY)

ಹೆಸರೇ ಸೂಚಿಸುವಂತೆ, ಪೋಸ್ಟ್ ಆಫೀಸ್​ನ ಈ ಯೋಜನೆಯನ್ನು ಮಗಳ ಭವಿಷ್ಯಕ್ಕಾಗಿ ಹಣವನ್ನು ಉಳಿಸಲು ಬಯಸುವ ಪೋಷಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ಗಾರ್ಡಿಯನ್‌ಗಳು ತಮ್ಮ ಹತ್ತು ವರ್ಷದೊಳಗಿನ ಹೆಣ್ಣು ಮಗುವಿನ ಪರವಾಗಿ SSA ಖಾತೆಗಳನ್ನು ತೆರೆಯಬಹುದು ಮತ್ತು ಒಂದು ಕುಟುಂಬದಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಹೆಣ್ಣು ಮಗುವಿನ ಹೆಸರಿನಲ್ಲಿ ಭಾರತದಲ್ಲಿ ಒಂದು ಖಾತೆಯನ್ನು ಮಾತ್ರ ತೆರೆಯಬಹುದು. ಯೋಜನೆಯು ವಾರ್ಷಿಕವಾಗಿ ಶೇ 7.6ರ ಬಡ್ಡಿದರವನ್ನು ನೀಡುತ್ತಿದೆ. ಇದನ್ನು ವಾರ್ಷಿಕ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ ಮತ್ತು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ. ಕನಿಷ್ಠ 250 ರೂಪಾಯಿ ಮತ್ತು ಗರಿಷ್ಠ 1,50,000 ಠೇವಣಿಯೊಂದಿಗೆ SSA ಖಾತೆಯನ್ನು ತೆರೆಯಬಹುದು ಮತ್ತು ಖಾತೆಯನ್ನು ತೆರೆದ ನಂತರ ಗರಿಷ್ಠ 15 ವರ್ಷಗಳವರೆಗೆ ಠೇವಣಿ ಮಾಡಬಹುದು. ಸುಕನ್ಯಾ ಸಮೃದ್ಧಿ ಖಾತೆ ಠೇವಣಿಗಳಿಗೆ ತೆರಿಗೆ ವಿನಾಯಿತಿಯು ಸೆಕ್ಷನ್ 80C ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂ. ಪಡೆಯಬಹುದು.

ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS)

ವೃದ್ಧಾಪ್ಯದಲ್ಲಿ ಹಣವನ್ನು ಉಳಿಸುವ ವಿಷಯಕ್ಕೆ ಬಂದಾಗ, ಈ ಸಣ್ಣ ಉಳಿತಾಯ ಯೋಜನೆಯು NPS ಮತ್ತು PMVVY ಮಧ್ಯೆ ಜನಪ್ರಿಯ ಹೂಡಿಕೆಯ ಆಯ್ಕೆಯಾಗಿದೆ. ಹಿರಿಯ ನಾಗರಿಕರು, 55 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ನಾಗರಿಕ ನೌಕರರು ಆದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಮಿಲಿಟರಿ ಸಿಬ್ಬಂದಿ ಆದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು SCSS ಖಾತೆಯನ್ನು ಆರಂಭಿಸಬಹುದು. SCSS ವಾರ್ಷಿಕ ಶೇ 7.4ರ ಬಡ್ಡಿದರವನ್ನು ನೀಡುತ್ತದೆ. ರೂ. 1000ದ ಗುಣಕದಲ್ಲಿ ಗರಿಷ್ಠ, ರೂ. 15 ಲಕ್ಷ ಮೀರದಂತೆ ಠೇವಣಿ ಮಾಡಬಹುದು. 60 ವರ್ಷ ಮೇಲ್ಪಟ್ಟ ವ್ಯಕ್ತಿಯು ಬ್ಯಾಂಕ್‌ಗಳು ಅಥವಾ ಅಂಚೆ ಕಚೇರಿಗಳಲ್ಲಿ SCSS ಖಾತೆಯನ್ನು ತೆರೆಯಬಹುದು. ಈ ಖಾತೆಯ ಮುಕ್ತಾಯ ಅವಧಿಯು 5 ವರ್ಷಗಳು. ಆದರೆ ಅವಧಿಯನ್ನು ಮುಕ್ತಾಯ ದಿನಾಂಕದಿಂದ ಇನ್ನೂ 3 ವರ್ಷಗಳವರೆಗೆ, ವಿಸ್ತರಿಸಬಹುದು. ಆದರೆ ಖಾತೆ ಮುಕ್ತಾಯದ 1 ವರ್ಷದೊಳಗೆ ಇದನ್ನು ವಿಸ್ತರಿಸಬೇಕು.

ಇದನ್ನೂ ಓದಿ: Post Office Savings Account: ಈ ಯೋಜನೆಯಲ್ಲಿ ಹೂಡಿದ 10 ಲಕ್ಷ ರೂಪಾಯಿಯಿಂದ 5 ವರ್ಷದಲ್ಲಿ 14 ಲಕ್ಷ ರೂ., ಜತೆಗೆ ತೆರಿಗೆ ಉಳಿತಾಯ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada