Inflation: ಹಣದುಬ್ಬರ ನಿಯಂತ್ರಣಕ್ಕೆ ಸರ್ಕಾರದಿಂದ ಹಲವು ಕ್ರಮ: ನಿರ್ಮಲಾ ಸೀತಾರಾಮನ್
Nirmala Sitharaman Speaks: ಹಣದುಬ್ಬರ ಏರಿಕೆಯನ್ನು ತಹಬದಿಗೆ ತರಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಣದುಬ್ಬರ ನಿಯಂತ್ರಣದ ಮೇಲೆಯೇ ಸರ್ಕಾರದ ಗಮನ ನೆಟ್ಟಿರುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ನವದೆಹಲಿ: ಹಣದುಬ್ಬರ (Inflation) ನಿರೀಕ್ಷೆಮೀರಿ ಹೆಚ್ಚಾದ ಹಿನ್ನೆಲೆಯಲ್ಲಿ ದೇಶದ ಮುಂದಿನ ಆರ್ಥಿಕತೆಯ (Indian Economy) ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಈ ಆತಂಕ ದೂರ ಮಾಡುವ ಆಶ್ವಾಸನೆ ಪುನರುಚ್ಚರಿಸಿದ್ದಾರೆ. ಹಣದುಬ್ಬರವನ್ನು ತಹಬದಿಗೆ ತರಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಹಣದುಬ್ಬರ ನಿಯಂತ್ರಣದ ಮೇಲೆಯೇ ಸರ್ಕಾರದ ಗಮನ ನೆಟ್ಟಿರುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.
ಜನವರಿ ತಿಂಗಳಲ್ಲಿ ಭಾರತದಲ್ಲಿ ರೀಟೇಲ್ ಹಣದುಬ್ಬರ (Retail Inflation) ಶೇ. 6.52 ತಲುಪಿದೆ. ಕಳೆದ ಮೂರು ತಿಂಗಳಲ್ಲೇ ಇದು ಹೆಚ್ಚಿನ ಹಣದುಬ್ಬರ ಮಟ್ಟ. ಆರ್ಬಿಐ ನಿಗದಿಪಡಿಸಿದ ಹಣದುಬ್ಬರ ಮಟ್ಟಕ್ಕಿಂತ ಸತತವಾಗಿ ಮೇಲಿನ ಸ್ಥಿತಿಯಲ್ಲೇ ಇದೆ. ಕೆಲ ಪ್ರಮುಖ ಅಹಾರವಸ್ತುಗಳ ಬೆಲೆ ಏರಿಕೆಯಿಂದಾಗಿ ಹಣದುಬ್ಬರ ಈ ಬಾರಿ ಹೆಚ್ಚಾಗಿದೆ. ರೀಟೇಲ್ ಹಣದುಬ್ಬರ ಹೆಚ್ಚಾದರೂ ಸಗಟು ದರ ಆಧಾರಿತ ಹಣದುಬ್ಬರ ಜನವರಿ ತಿಂಗಳಲ್ಲಿ ಶೇ. 4.73ಕ್ಕೆ ಇಳಿದಿದೆ. ಇದು ಕಳೆದ ಎರಡು ವರ್ಷದಲ್ಲೇ ಅತಿ ಕಡಿಮೆ ಸಗಟು ಹಣದುಬ್ಬರ ದರವಾಗಿದೆ. ಇಂಧನ, ವಿದ್ಯುತ್ ಇತ್ಯಾದಿ ಉತ್ಪನ್ನಗಳ ಬೆಲೆ ಇಳಿದಿದ್ದರಿಂದ ಈ ದರ ತುಸು ಕಡಿಮೆ ಆಗಿದೆ. ಆದರೆ, ರೀಟೇಲ್ ಹಣದುಬ್ಬರ ದರ ಏರಿಕೆಯಾಗಿರುವುದು ಸದ್ಯ ಚಿಂತೆಯ ಸಂಗತಿ.
ರಾಜಸ್ಥಾನದ ಜೈಪುರದಲ್ಲಿ ಬಜೆಟ್ ನಂತರದ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸರ್ಕಾರ ತೆಗೆದುಕೊಳ್ಳುತ್ತಿರುವ ಕೆಲವಾರು ಕ್ರಮಗಳನ್ನು ವಿವರಿಸಿದರು.
ಇದನ್ನೂ ಓದಿ: Pakistan: ಪಾಕ್ ಬಾಧೆ ಒಂದಾ ಎರಡಾ..! ಬಾಗಿಲು ಮುಚ್ಚುತ್ತಿರುವ ಕಂಪನಿಗಳು, ಕಾಲುಕಿತ್ತ ಐಎಂಎಫ್; ಹಣದುಬ್ಬರ, ಫಾರೆಕ್ಸ್ ಸಮಸ್ಯೆ
ಬೇಳೆ ಕಾಳುಗಳನ್ನು ದೇಶೀಯವಾಗಿ ಬೆಳೆಯಲು ರೈತರಿಗೆ ಉತ್ತೇಜನ ಕೊಡಲಾಗುತ್ತಿದೆ. ಬೇಳೆ ಕಾಳುಗಳಿಗೆ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಅವುಗಳ ಆಮದು ಸುಂಕವನ್ನೂ ಕಡಿಮೆ ಮಾಡಲಾಗಿದೆ. ದೇಶೀಯವಾಗಿ ಹೆಚ್ಚು ಬೇಳೆ ಕಾಳು ಉತ್ಪಾದನೆ ಆಗುತ್ತದೆ. ಹಾಗೆಯೇ ಆಮದು ಕೂಡ ಹೆಚ್ಚು ಆಗುತ್ತದೆ. ಇದರಿಂದ ಸಾಕಷ್ಟು ಬೇಳೆ ಕಾಳುಗಳು ಸಂಗ್ರಹವಾಗಿ ಬೆಲೆ ದುಬಾರಿಯಾಗದಂತೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಹೆಸರು ಬೇಳೆ ಅಥವಾ ಯಾವುದೇ ಬೇಳೆ ಕಾಳಿನ ಆಮದಿನ ಮೇಲೆ ವಿಧಿಸಲಾಗುವ ಸುಂಕ ಡಬಲ್ ಅಂಕಿಗಿಂತ ಕಡಿಮೆ ಇದೆ. ಕೆಲವೊಮ್ಮೆ ಆಮದು ಸುಂಕವನ್ನೇ ತೆಗೆದುಹಾಕಲಾಗಿದೆ. ಇದರಿಂದ ಬಹಳ ಬೇಗ ಮತ್ತು ಕಡಿಮೆ ದರದಲ್ಲಿ ಭಾರತಕ್ಕೆ ಬೇಳೆಕಾಳುಗಳ ಆಮದು ಸಾಧ್ಯವಾಗುತ್ತದೆ. ಅಡುಗೆ ಎಣ್ಣೆಯ ಮೇಲೆ ಕಳೆದ ಮೂರು ವರ್ಷಗಳಿಂದ ಆಮದು ಸುಂಕವೇ ಇಲ್ಲ. ಪಾಮ್ ಆಯಿಲ್ (ತಾಳೆ ಎಣ್ಣೆ) ಮೊದಲಾದ ಲಭ್ಯತೆ ಹೆಚ್ಚಾಯಿತು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.