Tax Evasion: ಪ್ಯಾನ್, ಆಧಾರ್ ಕದ್ದು ಶೆಲ್ ಕಂಪನಿ ಮೂಲಕ ತೆರಿಗೆ ವಂಚಿಸುತ್ತಿದ್ದ ಜಾಲಗಳು ಬೆಳಕಿಗೆ; 30,000 ಕೋಟಿ ರೂ ಕರ್ಮಕಾಂಡ ಬಯಲು
Rs 30,000 Cr Tax Evasion Found By GST Authorities: ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಮಾಹಿತಿ ಕದ್ದು ಅದನ್ನು ಬಳಸಿ ಶೆಲ್ ಕಂಪನಿಗಳ ಮೂಲಕ ನಕಲಿ ಇನ್ವಾಯ್ಸ್ ಸೃಷ್ಟಿಸಿ ಮಾರುತ್ತಿದ್ದ 3 ಬಹುರಾಜ್ಯ ತಂಡಗಳನ್ನು ಜಿಎಸ್ಟಿ ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ನವದೆಹಲಿ: ನಕಲಿ ಅಥವಾ ಕಳುವುಗೊಂಡ ಪ್ಯಾನ್ ನಂಬರ್ ಮತ್ತು ಆಧಾರ್ ಕಾರ್ಡ್ಗಳನ್ನು ಬಳಸುವುದೂ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ತೆರಿಗೆ ವಂಚಿಸುತ್ತಿದ್ದ ಪ್ರಕರಣಗಳನ್ನು ಜಿಎಸ್ಟಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 18,000ದಷ್ಟು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ಗಳನ್ನು ದುರುಪಯೋಗಿಸಿಕೊಂಡು 4,000ದಷ್ಟು ಶೆಲ್ ಕಂಪನಿಗಳು ಮತ್ತು 16,000 ನಕಲಿ ಜಿಎಸ್ಟಿ ನೊಂದಣಿಗಳನ್ನು ಮಾಡಲಾಗಿರುವುದು ಬೆಳಕಿಗೆ ಬಂದಿದೆ. 16 ರಾಜ್ಯಗಳಲ್ಲಿ ಈ ಅಕ್ರಮಗಳು ನಡೆದಿದ್ದು ಒಟ್ಟು ವಂಚನೆಯಾದ ತೆರಿಗೆಯ ಮೊತ್ತ 30,000 ಕೋಟಿ ರೂ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೇ 16ರಂದು ತೆರಿಗೆ ವಂಚನೆ ವಿರುದ್ಧ ಆರಂಭಗೊಂಡ ಜಿಎಸ್ಟಿ ಅಧಿಕಾರಿಗಳ ಕಾರ್ಯಾಚರಣೆ ಎರಡು ತಿಂಗಳು ನಡೆದಿತ್ತು. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಇತ್ಯಾದಿ ಸಂಸ್ಥೆಗಳ ಜೊತೆ ಸೇರಿ ಜಿಎಸ್ಟಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. 16 ರಾಜ್ಯಗಳಲ್ಲಿ ಬಹಳ ಯೋಜಿತವಾಗಿ ಕಾರ್ಯಾಚರಣೆ ನಡೆದಿದ್ದು, 7ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ: IIFL Securities: ಐಐಎಫ್ಎಲ್ ಸೆಕ್ಯೂರಿಟೀಸ್ ಮೇಲೆ ಸೆಬಿ ನಿರ್ಬಂಧ; ಷೇರುಬೆಲೆ ಶೇ. 18ಕ್ಕಿಂತ ಹೆಚ್ಚು ಕುಸಿತ
ಶೆಲ್ ಕಂಪನಿಗಳ ಮೂಲಕ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಬಯಸುವ ಬೇರೆ ಸಂಸ್ಥೆಗಳಿಗೆ ಅವನ್ನು ಮಾರಲಾಗುತ್ತಿತ್ತು. ಬಹುರಾಜ್ಯಗಳಲ್ಲಿ ಜಾಲಗಳನ್ನು ಹೊಂದಿರುವ ಮೂರು ತಂಡಗಳು ಈ ಕೃತ್ಯ ಎಸಗುತ್ತಿದ್ದುದನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಕದಿಯಲಾದ ಪ್ಯಾನ್ ಮತ್ತು ಆಧಾರ್ ಕಾರ್ಡ್ ಮಾಹಿತಿ ಮೂಲಕ ಶೆಲ್ ಕಂಪನಿಗಳನ್ನು ಸ್ಥಾಪಿಸಿ, ನಕಲಿ ಇ–ವೇ ಬಿಲ್ ಮತ್ತು ಇನ್ವಾಯ್ಸ್ಗಳನ್ನು ಈ ತಂಡಗಳು ಸೃಷ್ಟಿಸುತ್ತಿದ್ದವು. ಬಳಿಕ ಇನ್ವಾಯ್ಸ್ಗಳ ಅಗತ್ಯ ಇದ್ದ ಕಂಪನಿಗಳಿಗೆ ಅದನ್ನು ಮಾರಲಾಗುತ್ತಿತ್ತು.
ಗುಜರಾತ್ನ ಭಾವನಗರ್ ಮತ್ತು ಸೂರತ್ನಲ್ಲಿ ಆಧಾರ್ ಮತ್ತು ಪ್ಯಾನ್ ಕಾರ್ಡ್ ದುರ್ಬಳಕೆ ಮಾಡಿ ನಕಲಿ ಇನ್ವಾಯ್ಸ್ ತಯಾರಾಗುತ್ತಿದ್ದ ಪ್ರಕರಣ ಮೊದಲು ಬೆಳಕಿಗೆ ಬಂದಿದ್ದು. ಇದರ ಸುಳಿವು ಹಿಡಿದು ಹೊರಟ ಜಿಎಸ್ಟಿ ಅಧಿಕಾರಿಗಳಿಗೆ 16 ರಾಜ್ಯಗಳಲ್ಲಿ ಜಾಲ ಇರುವುದು ಗೊತ್ತಾಗಿತ್ತು. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಪಂಜಾಬ್, ಹರ್ಯಾಣ ಮೊದಲಾದ ರಾಜ್ಯಗಳಲ್ಲಿ ಈ ವಂಚಕರ ಜಾಲ ಹರಡಿತ್ತು.
ಇದನ್ನೂ ಓದಿ: Aadhaar PAN: ನಿಮ್ಮ ಪ್ಯಾನ್ ನಂಬರ್ ಬೇರೆಯವರ ಆಧಾರ್ಗೆ ಲಿಂಕ್ ಆಗಿದೆಯಾ? ಸರಿಪಡಿಸಲು ಹೀಗೆ ಮಾಡಿ
ಈ ಶೆಲ್ ಕಂಪನಿಗಳಿಗೆ ಯಾರ್ಯಾರನ್ನೋ ಡೈರೆಕ್ಟರ್ಗಳಾಗಿ ಹೆಸರಿಸಲಾಗುತ್ತಿತ್ತು. ತಮ್ಮ ನಿವಾಸಕ್ಕೆ ತೆರಿಗೆ ನೋಟೀಸ್ ಬಂದ ಬಳಿಕವಷ್ಟೇ ಆ ವ್ಯಕ್ತಿಗಳಿಗೆ ತಮ್ಮ ಹೆಸರು ಯಾವುದೋ ಕಂಪನಿಯ ಡೈರೆಕ್ಟರ್ ಸ್ಥಾನಕ್ಕೆ ಹಾಕಲಾಗಿದೆ ಎಂಬುದು ಗೊತ್ತಾಗಿತ್ತು. ಆ ರೀತಿಯಲ್ಲಿ ವಂಚಕರ ಜಾಲ ಕಾರ್ಯನಿರ್ವಹಿಸುತ್ತಿತ್ತು.
ಈ ಶೆಲ್ ಕಂಪನಿಗಳ ಮೂಲಕ ಸೃಷ್ಟಿಯಾಗಿದ್ದ ನಕಲಿ ಇನ್ವಾಯ್ಸ್ಗಳನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ಗೋಸ್ಕರ ಬಳಸಿದ ಕಂಪನಿಗಳಿಗೆ ಜಿಎಸ್ಟಿ ಅಧಿಕಾರಿಗಳು ನೋಟೀಸ್ ಕೊಡಲಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 1:40 pm, Tue, 20 June 23