GST Collection: ನವೆಂಬರ್​ನಲ್ಲಿ ಜಿಎಸ್​ಟಿ 1,31,526 ಕೋಟಿ ರೂ. ಸಂಗ್ರಹ; ಹೊಸ ತೆರಿಗೆ ಬಂದ ಮೇಲೆ ಎರಡನೇ ಅತ್ಯಧಿಕ ಮೊತ್ತ

Goods and Service Tax: 2021ರ ನವೆಂಬರ್​ನಲ್ಲಿ 1.32 ಲಕ್ಷ ಕೋಟಿ ರೂಪಾಯಿ ಜಿಎಸ್​ಟಿ ಸಂಗ್ರಹ ಆಗುವ ಮೂಲಕ ಈ ತೆರಿಗೆ ಪದ್ಧತಿ ಜಾರಿಯಾದ ನಂತರದ ಅತ್ಯಧಿಕ ಸಂಗ್ರಹ ಇದಾಗಿದೆ.

GST Collection: ನವೆಂಬರ್​ನಲ್ಲಿ ಜಿಎಸ್​ಟಿ 1,31,526 ಕೋಟಿ ರೂ. ಸಂಗ್ರಹ; ಹೊಸ ತೆರಿಗೆ ಬಂದ ಮೇಲೆ ಎರಡನೇ ಅತ್ಯಧಿಕ ಮೊತ್ತ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on:Dec 01, 2021 | 2:35 PM

2021ರ ನವೆಂಬರ್‌ನಲ್ಲಿ ಒಟ್ಟಾರೆ ಜಿಎಸ್‌ಟಿ ಆದಾಯವು 1,31,526 ಕೋಟಿ ರೂಪಾಯಿಗಳಾಗಿದ್ದು, ಎರಡನೇ ಅತ್ಯಧಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಈ ವರ್ಷದ ಏಪ್ರಿಲ್‌ನಲ್ಲಿ ಸಂಗ್ರಹವು ದಾಖಲೆಯ ಗರಿಷ್ಠ 139,708 ಕೋಟಿ ರೂಪಾಯಿ ಮುಟ್ಟಿತ್ತು. ಜಿಎಸ್‌ಟಿ ಸಂಗ್ರಹವು ಸತತ ಎರಡನೇ ತಿಂಗಳು 1.30 ಲಕ್ಷ ಕೋಟಿ ರೂಪಾಯಿ ಗಡಿ ದಾಟಿದೆ ಎಂದು ಹಣಕಾಸು ಸಚಿವಾಲಯದ ಅಂಕಿ- ಅಂಶಗಳು ತೋರಿಸಿವೆ. ನವೆಂಬರ್‌ನಲ್ಲಿ ಸಂಗ್ರಹಿಸಲಾದ ರೂ .131,526 ಕೋಟಿಯ ಒಟ್ಟು ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್‌ಟಿ ರೂ. 23,978 ಕೋಟಿ, ಎಸ್‌ಜಿಎಸ್‌ಟಿ ರೂ. 31,127 ಕೋಟಿ ಮತ್ತು ಐಜಿಎಸ್‌ಟಿ ರೂ 66,815 ಕೋಟಿಯಾಗಿದೆ. ನವೆಂಬರ್ 2021ರ ಆದಾಯವು ಒಂದು ವರ್ಷದ ಹಿಂದೆ ಬಂದಿದ್ದ ಜಿಎಸ್​ಟಿ ಆದಾಯಕ್ಕಿಂತ ಶೇ 25ರಷ್ಟು ಹೆಚ್ಚಾಗಿದೆ ಮತ್ತು 2019-20ನೇ ಸಾಲಿಗಿಂತ ಶೇ 27ರಷ್ಟು ಜಾಸ್ತಿಯಿದೆ.

ತಿಂಗಳ ಅವಧಿಯಲ್ಲಿ ಸರಕುಗಳ ಆಮದು ಆದಾಯವು ಶೇಕಡಾ 43ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ ಬಂದ ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇ 20ರಷ್ಟು ಹೆಚ್ಚಾಗಿದೆ. “ನವೆಂಬರ್ 2021ರ ಜಿಎಸ್​ಟಿ ಆದಾಯವು ಈ ತೆರಿಗೆ ಪದ್ಧತಿಯನ್ನು ಪರಿಚಯಿಸಿದ ನಂತರದ, ಅಂದರೆ ಇದು 2021ರ ಏಪ್ರಿಲ್ ನಂತರದಲ್ಲಿ ಎರಡನೆಯ ಎರಡನೇ ಅತ್ಯಧಿಕವಾಗಿದೆ. ಇದು ವರ್ಷಾಂತ್ಯದ ಆದಾಯಗಳಿಗೆ ಸಂಬಂಧಿಸಿದೆ ಮತ್ತು ಕಳೆದ ತಿಂಗಳ ಸಂಗ್ರಹಣೆಗಿಂತ ಹೆಚ್ಚಿನದಾಗಿದೆ. ಇದು ತ್ರೈಮಾಸಿಕವಾಗಿ ಸಲ್ಲಿಸಬೇಕಾದ ಆದಾಯದ ಪರಿಣಾಮವನ್ನು ಸಹ ಒಳಗೊಂಡಿದ್ದು, ಆರ್ಥಿಕ ಚೇತರಿಕೆಯ ಟ್ರೆಂಡ್​ಗೆ ಅನುಗುಣವಾಗಿದೆ,” ಎಂದು ಹಣಕಾಸು ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಹೆಚ್ಚಿನ ಜಿಎಸ್​ಟಿ ಆದಾಯದ ಇತ್ತೀಚಿನ ಟ್ರೆಂಡ್​ ನಿಯಮಾವಳಿಗಳನ್ನು ಸುಧಾರಿಸಲು ಹಿಂದೆ ತೆಗೆದುಕೊಂಡ ವಿವಿಧ ನೀತಿ ಮತ್ತು ಆಡಳಿತಾತ್ಮಕ ಕ್ರಮಗಳ ಪರಿಣಾಮವಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರವು 27,273 ಕೋಟಿ ರೂಪಾಯಿಗಳನ್ನು ಸಿಜಿಎಸ್‌ಟಿಗೆ ಮತ್ತು ರೂ.22,655 ಕೋಟಿಗಳನ್ನು ಐಜಿಎಸ್‌ಟಿಯಿಂದ ಎಸ್‌ಜಿಎಸ್‌ಟಿಗೆ ನಿಯಮಿತ ತೀರುವಳಿಯಾಗಿ ಇತ್ಯರ್ಥಪಡಿಸಿದೆ. ನವೆಂಬರ್ 2021ರಲ್ಲಿ ನಿಯಮಿತ ತೀರುವಳಿ ನಂತರ ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯವು ಸಿಜಿಎಸ್​ಟಿಗಾಗಿ 51,251 ಕೋಟಿ ರೂ. ಮತ್ತು ಎಸ್​ಜಿಎಸ್​ಟಿಗಾಗಿ 53,782 ಕೋಟಿ ರೂಪಾಯಿ ಆಗಿದೆ.

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಜಿಎಸ್‌ಟಿ ಪರಿಹಾರಕ್ಕಾಗಿ ಕೇಂದ್ರವು ನವೆಂಬರ್ 3ರಂದು 17,000 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಕಳೆದ ಒಂದು ವರ್ಷದಲ್ಲಿ ಸಿಸ್ಟಮ್ ಸಾಮರ್ಥ್ಯದ ವರ್ಧನೆ, ರಿಟರ್ನ್ಸ್ ಸಲ್ಲಿಸುವ ಕೊನೆಯ ದಿನಾಂಕದ ನಂತರ ನಾನ್-ಫೈಲರ್‌ಗಳನ್ನು ಗುರುತಿಸುವುದು, ರಿಟರ್ನ್‌ಗಳ ಸ್ವಯಂ-ಲೆಕ್ಕಾಚಾರ, ಇ-ವೇ ಬಿಲ್‌ಗಳನ್ನು ನಿರ್ಬಂಧಿಸುವುದು ಸೇರಿದಂತೆ ಹೆಚ್ಚಿನ ಸಂಖ್ಯೆಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ನಾನ್-ಫೈಲರ್‌ಗಳಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ರವಾನಿಸುವುದು ಕಳೆದ ಕೆಲವು ತಿಂಗಳಲ್ಲಿ ರಿಟರ್ನ್ಸ್ ಫೈಲಿಂಗ್‌ನಲ್ಲಿ ಸ್ಥಿರವಾದ ಸುಧಾರಣೆಗೆ ಕಾರಣವಾಗಿದೆ.

ಇದನ್ನೂ ಓದಿ: GST Filing: ಜಿಎಸ್​ಟಿ ಮರುಪಾವತಿಗೆ ಕ್ಲೇಮ್​ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ​

Published On - 2:33 pm, Wed, 1 December 21