ಇಂದು ಜುಲೈ 1 ಜಿಎಸ್ಟಿ ದಿನ. ಭಾರತದಲ್ಲಿ ಕಳೆದ ಆರು ವರ್ಷದಿಂದ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಿಎಸ್ಟಿ ಎಂದರೆ ಗೂಡ್ಸ್ ಅಂಡ್ ಸರ್ವಿಸಸ್ ಟ್ಯಾಕ್ಸ್. ಅಂದರೆ ಸರಕು ಮತ್ತು ಸೇವಾ ತೆರಿಗೆ. ಪರೋಕ್ಷ ತೆರಿಗೆ ವಿಧಾನಕ್ಕೆ (Indirect tax system) ಇದು ಸೇರುತ್ತದೆ. ಹಿಂದೆ ಅಸ್ತಿತ್ವದಲ್ಲಿದ್ದ ವಿವಿಧ ರೀತಿಯ ತೆರಿಗೆಗಳ ಬದಲು ಏಕ ರೀತಿಯ ಸರಳ ತೆರಿಗೆ ತೆರಿಗೆ ಪದ್ಧತಿಯಾಗಿದೆ ಜಿಎಸ್ಟಿ. ವಿಶ್ವಾದ್ಯಂತ ಭಾರತವೂ ಸೇರಿದಂತೆ 150ಕ್ಕೂ ಹೆಚ್ಚು ದೇಶಗಳು ಜಿಎಸ್ಟಿ ಹೊಂದಿವೆ. ಕೆಲ ದೇಶಗಳಲ್ಲಿ ಜಿಎಸ್ಟಿ ಬದಲು ಬೇರೆ ಹೆಸರಿನಲ್ಲಿ ಆ ತೆರಿಗೆ ಇದೆ. ಉದಾಹರಣೆಗೆ, ಐರೋಪ್ಯ ಒಕ್ಕೂಟದ ದೇಶಗಳು, ಬ್ರೆಜಿಲ್, ಚೀನಾ, ಅರ್ಜೆಂಟೀನಾ ಮೊದಲಾದ ದೇಶಗಳಲ್ಲಿ ವ್ಯಾಟ್ ಹೆಸರಿದೆ. ವ್ಯಾಟ್ ಆಗಲೀ ಜಿಎಸ್ಟಿ ಆಗಲೀ ಇನ್ಡೈರೆಕ್ಟ್ ಟ್ಯಾಕ್ಸ್ ಸಿಸ್ಟಂ.
ಭಾರತದಲ್ಲಿ ವಿವಿಧ ರೀತಿಯ ತೆರಿಗೆಗಳು ಸೇರಿ ಸಂಕೀರ್ಣತೆ ಸೃಷ್ಟಿಯಾಗಿತ್ತು. ಇದರಿಂದ ಸುಧಾರಣೆಗಳಿಗೆ ಮತ್ತು ಆರ್ಥಿಕ ಪ್ರಗತಿಗೆ ತುಸು ಹಿನ್ನಡೆಯಾಗುತ್ತಿತ್ತು. ಈ ತೆರಿಗೆ ಸಂಕೀರ್ಣತೆಯನ್ನು ನೀಗಿಸಿ ಸರಳಗೊಳಿಸುವ ನಿಟ್ಟಿನಲ್ಲಿ 2000ರಲ್ಲಿ ಜಿಎಸ್ಟಿ ಬಗ್ಗೆ ಆಲೋಚನೆ ಶುರುವಾಯಿತು. ಕೇಳ್ಕರ್ ಟ್ಯಾಸ್ಕ್ ಫೋರ್ಸ್ ಒಂದು ಸಮಗ್ರ ಪರೋಕ್ಷ ತೆರಿಗೆ ವ್ಯವಸ್ಥೆಗೆ ಶಿಫಾರಸು ಮಾಡಿತು.
ಇದನ್ನೂ ಓದಿ: ಜುಲೈ 1ಕ್ಕೆ ಚಾರ್ಟರ್ಡ್ ಅಕೌಂಟೆಂಟ್ ದಿನ; ಇದರ ಇತಿಹಾಸ, ಮಹತ್ವದ ಇತ್ಯಾದಿ ವಿಶೇಷತೆಗಳ ವಿವರ
ಹಲವು ವರ್ಷಗಳ ಬಳಿಕ 2016ರ ಆಗಸ್ಟ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹಕ್ಕೆ ಕೇಂದ್ರ ಸರ್ಕಾರಕ್ಕೆ ಅಧಿಕಾರ ಕೊಡುವಂತೆ ಸಂವಿಧಾನಕ್ಕೆ 101ನೇ ತಿದ್ದುಪಡಿ ಕಾಯ್ದೆ ತರಲಾಯಿತು. ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರ್ಕಾರಗಳ ಹಣಕಾಸು ಸಚಿವರನ್ನು ಒಳಗೊಂಡ ಜಿಎಸ್ಟಿ ಕೌನ್ಸಿಲ್ ಅನ್ನು ಸ್ಥಾಪಿಸಲಾಯಿತು. ಬಳಿಕ ಜಿಎಸ್ಟಿ ದರಗಳು ಹೇಗಿರಬೇಕೆಂದು ಹಲವು ಸಭೆಗಳನ್ನು ನಡೆಸಿ ಒಂದು ತೀರ್ಮಾನಕ್ಕೆ ಬರಲಾಯಿತು. 2017ರ ಜುಲೈ 1ರಂದು ಜಿಎಸ್ಟಿ ಜಾರಿಗೆ ಬಂದಿತು.
ಜಿಎಸ್ಟಿಯಿಂದ ಆಗಿರುವ ಬಹುದೊಡ್ಡ ಸುಧಾರಣೆ ಅಂತರರಾಜ್ಯ ವಹಿವಾಟಿನ ವಿಚಾರದ್ದು. ಈ ಮುಂಚೆ ಎರಡು ರಾಜ್ಯಗಳ ಮಧ್ಯೆ ನಡೆಯುತ್ತಿದ್ದ ವ್ಯವಹಾರದಲ್ಲಿ ತೆರಿಗೆ ಪಡೆಯುವ ವಿಚಾರದಲ್ಲಿ ಗೊಂದಲ ಮತ್ತು ಸಂಕೀರ್ಣತೆ ಇತ್ತು. ಜಿಎಸ್ಟಿ ಇದನ್ನು ಸರಳಗೊಳಿಸಿತು.
ಜಿಎಸ್ಟಿಯಲ್ಲಿ ನಾಲ್ಕು ಭಾಗ ಇರುತ್ತದೆ. ಸಿಜಿಎಸ್ಟಿ, ಎಸ್ಜಿಎಸ್ಟಿ, ಐಜಿಎಸ್ಟಿ ಮತ್ತು ಯುಟಿಜಿಎಸ್ಟಿ. ಇಲ್ಲಿ ಸಿಜಿಎಸ್ಟಿ ಎಂದರೆ ಕೇಂದ್ರ ಸರ್ಕಾರಕ್ಕೆ ಸಲ್ಲುವ ಪಾಲು. ಎಸ್ಜಿಎಸ್ಟಿಯು ರಾಜ್ಯ ಸರ್ಕಾರಕ್ಕೆ ಹೋಗುತ್ತದೆ. ಐಜಿಎಸ್ಟಿ ಎಂಬುದು ಕೇಂದ್ರ ಮತ್ತು ಆಯಾ ರಾಜ್ಯಗಳ ಮಧ್ಯೆ ಹಂಚಿಕೆ ಆಗುತ್ತದೆ. ಯುಟಿಜಿಎಸ್ಟಿ ಎಂಬುದು ಕೇಂದ್ರಾಡಳಿತ ಪ್ರದೇಶಕ್ಕೆ ನೀಡಲಾಗುವ ತೆರಿಗೆ ಪಾಲು.
ಇದನ್ನೂ ಓದಿ: ಸಿಮ್ ಬದಲಾಯಿಸಲು, ನಂಬರ್ ಪೋರ್ಟ್ ಮಾಡಲು ಜುಲೈ 1ರಿಂದ ಹೊಸ ನಿಯಮ
ಕುತೂಹಲದ ಸಂಗತಿ ಎಂದರೆ ಭಾರತದ ಜಿಎಸ್ಟಿ ಸಿಸ್ಟಂ ಹೆಚ್ಚೂಕಡಿಮೆ ಕೆನಡಾದ ತೆರಿಗೆ ವ್ಯವಸ್ಥೆಯನ್ನು ಆಧರಿಸಿದೆ. ಭಾರತದಲ್ಲಿ ಸದ್ಯ ಐದು ಸ್ಲ್ಯಾಬ್ ಜಿಎಸ್ಟಿ ತೆರಿಗೆಗಳಿಗೆ. 0%, 5%, 12%, 18% ಮತ್ತು 28%. ಇದರಲ್ಲಿ ಬಹಳ ಅಗತ್ಯವಾದ ಸರಕು ಮತ್ತು ಸೇವೆಗಳಿಗೆ ಕಡಿಮೆ ಜಿಎಸ್ಟಿ ಇರುತ್ತದೆ. ಮಾರಾಟವಾಗುವ ಹೆಚ್ಚಿನ ಸರಕು ಮತ್ತು ಸೇವೆಗಳು 12% ಮತ್ತು 18% ಸ್ಲ್ಯಾಬ್ಗಳಿಗೆ ಸೇರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ