ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಸರ್ಕಾರಿ ಸಂಸ್ಥೆಗಳ ಮಹತ್ವದ ಪಾತ್ರ ಎತ್ತಿತೋರಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ
Hardeep Singh Puri speaks at 12th PSE Summit: ಭಾರತ ಮುಂದಿನ ಐದು ವರ್ಷದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರಿ ಉದ್ದಿಮೆಗಳು ಮಹತ್ವದ ಪಾತ್ರ ವಹಿಸಿವೆ ಎಂದಿದ್ದಾರೆ ಸಚಿವರು. ಈ ಹಣಕಾಸು ವರ್ಷದಲ್ಲಿ ಭಾರತದ ರಫ್ತು ಗಣನೀಯವಾಗಿ ಹೆಚ್ಚುತ್ತಿದೆ. ಅಕ್ಟೋಬರ್ನಲ್ಲಿ ಒಟ್ಟಾರೆ ಟ್ರೇಡ್ ಡೆಫಿಸಿಟ್ ಕಡಿಮೆ ಆಗಿದೆ.
ನವದೆಹಲಿ, ನವೆಂಬರ್ 14: ಭಾರತ ಮುಂದಿನ ಐದು ವರ್ಷದಲ್ಲಿ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ 2047ರಷ್ಟರಲ್ಲಿ ಮುಂದುವರಿದ ದೇಶವಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. 12ನೆ ಸಾರ್ವಜನಿಕ ವಲಯ ಸಂಸ್ಥೆಗಳ ಶೃಂಗಸಭೆಯನ್ನು (PSE Summit) ಉದ್ದೇಶಿಸಿ ಮಾತನಾಡುತ್ತಿದ್ದ ಕೇಂದ್ರ ಸಚಿವರು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸರ್ಕಾರಿ ಸಂಸ್ಥೆಗಳು ಹೇಗೆ ಮಹತ್ವದ ಪಾತ್ರ ವಹಿಸುತ್ತಿವೆ ಎನ್ನುವುದನ್ನು ಈ ಸಂದರ್ಭದಲ್ಲಿ ಎತ್ತಿ ತೋರಿಸಿದ್ದಾರೆ. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಅವರು ಸರ್ಕಾರಿ ಸಂಸ್ಥೆಗಳ ಕಾರ್ಯಸಾಧನೆಯನ್ನು ಪ್ರಶಂಸಿಸಿದ್ದಾರೆ.
ಕೇಂದ್ರ ಸರ್ಕಾರಿ ಸಂಸ್ಥೆಗಳ (ಸಿಪಿಎಸ್ಇ) ಮೌಲ್ಯ 2013-14ರಲ್ಲಿ 9.5 ಲಕ್ಷ ಕೋಟಿ ರೂ ಇತ್ತು. ಈಗ 2022-23ರಲ್ಲಿ ಅದು 17.33 ಲಕ್ಷ ಕೋಟಿ ರೂ ಆಗಿದೆ. ಒಂಬತ್ತು ವರ್ಷದಲ್ಲಿ ಶೇ. 82ರಷ್ಟು ಮೌಲ್ಯ ವೃದ್ಧಿಸಿಕೊಂಡಿವೆ ಸರ್ಕಾರಿ ಸಂಸ್ಥೆಗಳು. ಅಬಕಾರಿ ಸುಂಕ, ತೆರಿಗೆ, ಡಿವಿಡೆಂಡ್ ಇತ್ಯಾದಿಗಳ ಮೂಲಕ ಸರ್ಕಾರದ ಖಜಾನೆಗೆ ಈ ಸರ್ಕಾರಿ ಸಂಸ್ಥೆಗಳು ನೀಡಿರುವ ಕೊಡುಗೆಯೂ ಈ ಒಂದು ದಶಕದಲ್ಲಿ ಡಬಲ್ ಆಗಿದೆ. 2013-14ರಲ್ಲಿ ಸರ್ಕಾರಕ್ಕೆ ಇವುಗಳ ಕೊಡುಗೆ 2.20 ಲಕ್ಷ ಕೋಟಿ ರೂ ಇತ್ತು. 2022-23ರಲ್ಲಿ ಅದು 4.58 ಲಕ್ಷ ಕೋಟಿ ರೂ ಆಗಿದೆ ಎನ್ನುವ ಮಾಹಿತಿಯನ್ನು ಹರ್ದೀಪ್ ಸಿಂಗ್ ಪುರಿ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: Trade Deficit: ಅಕ್ಟೋಬರ್ನಲ್ಲಿ ಭಾರತದ ಟ್ರೇಡ್ ಡೆಫಿಸಿಟ್ 27.14 ಬಿಲಿಯನ್ ಡಾಲರ್ಗೆ ಇಳಿಕೆ
ಕೇಂದ್ರ ಸರ್ಕಾರಿ ಉದ್ದಿಮೆಗಳ ನಿವ್ವಳ ಲಾಭ ಈ 9 ವರ್ಷದಲ್ಲಿ ಶೇ. 87ರಷ್ಟು ಹೆಚ್ಚಾಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿರುವ ಎಲ್ಲಾ 81 ಪಬ್ಲಿಕ್ ಸೆಕ್ಟರ್ ಉದ್ದಿಮೆಗಳ ಮಾರುಕಟ್ಟೆ ಬಂಡವಾಳ ಶೇ. 225ರಷ್ಟು ಬೆಳೆದಿದೆ ಎಂದು ಅವರು ಮಾಹಿತಿ ನೀಡಿದ್ಧಾರೆ.
ಇಂಧನ ವಲಯದಲ್ಲಿ ಮೂರು ಪ್ರಮುಖ ಅಂಶಗಳು…
ಭಾರತದ ಇಂಧನ ವಲಯದ ಬಗ್ಗೆ ಮಾತನಾಡಿದ ಸಚಿವ ಹರ್ದೀಪ್ ಸಿಂಗ್ ಪುರಿ, ಮೂರು ಪ್ರಮುಖ ತತ್ವಗಳನ್ನು ಉಲ್ಲೇಖಿಸಿದ್ದಾರೆ. ಮೊದಲನೆಯದು ಲಭ್ಯ; ಎರಡನೆಯದು ಕೈಗೆಟುಕುವ ಬೆಲೆಯದ್ದು. ಮೂರನೆಯದು ಸುಸ್ಥಿರತೆ ಅಥವಾ ಸ್ವಾವಲಂಬನೆ, ಈ ಮೂರು ತತ್ವಗಳನ್ನು ಸಚಿವರು ಪ್ರಸ್ತಾಪಿಸಿದ್ದಾರೆ.
ಏಳು ತಿಂಗಳಲ್ಲಿ 468.27 ಬಿಲಿಯನ್ ಡಾಲರ್ನಷ್ಟು ರಫ್ತು…
ಇದೇ ವೇಳೆ ಸರ್ಕಾರದಿಂದ ಬಿಡುಗಡೆಯಾದ ದತ್ತಾಂಶದ ಪ್ರಕಾರ 2024ರ ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಅವಧಿಯಲ್ಲಿ ಒಟ್ಟಾರೆ ರಫ್ತು 468.27 ಬಿಲಿಯನ್ ಡಾಲರ್ನಷ್ಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಆದ ರಫ್ತು 436.48 ಬಿಲಿಯನ್ ಡಾಲರ್ನಷ್ಟಿತ್ತು. ಇದರೊಂದಿಗೆ ರಫ್ತಿನಲ್ಲಿ ಶೇ. 7.28ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಬಡ್ಡಿದರ ಕಡಿಮೆ ಮಾಡಬೇಕು: ಸಚಿವ ಪಿಯೂಶ್ ಗೋಯಲ್ ಒತ್ತಾಯಕ್ಕೆ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ರಿಯಾಕ್ಷನ್ ಇದು…
ಅಕ್ಟೋಬರ್ ತಿಂಗಳಲ್ಲಿ ಸರಕುಗಳ ರಫ್ತು 39.20 ಬಿಲಿಯನ್ ಡಾಲರ್ ಇದ್ದರೆ, ಆಮದು 66.34 ಬಿಲಿಯನ್ ಡಾಲರ್ ಇದೆ. ಸರ್ವಿಸ್ಗಳ ರಫ್ತು 34.02 ಬಿಲಿಯನ್ ಡಾಲರ್ ಇದ್ದರೆ ಆಮದು 17 ಬಿಲಿಯನ್ ಡಾಲರ್ನಷ್ಟಿದೆ. ಒಟ್ಟಾರೆ ಟ್ರೇಡ್ ಡೆಫಿಸಿಟ್ 10.12 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವರ್ಷದ ಅವಧಿಯಲ್ಲಿ ಟ್ರೇಡ್ ಡೆಫಿಸಿಟ್ 15 ಬಿಲಿಯನ್ ಡಾಲರ್ ಇತ್ತು. ಈ ವರ್ಷ ಈ ಅಂತರ ತಗ್ಗಿರುವುದು ಗಮನಾರ್ಹ.
ಆದರೆ, ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಸರಕು ಮತ್ತು ಸೇವೆಗಳ ಆಮದು ಮತ್ತು ರಫ್ತು ಪ್ರಮಾಣ ತೆಗೆದುಕೊಂಡರೆ ಟ್ರೇಡ್ ಡೆಫಿಸಿಟ್ ತುಸು ಹೆಚ್ಚಿದೆ. ಒಟ್ಟಾರೆ ರಫ್ತು 468.27 ಬಿಲಿಯನ್ ಯುಎಸ್ ಡಾಲರ್ ಇದೆ. ಆಮದು ಪ್ರಮಾಣ 531.51 ಬಿಲಿಯನ್ ಡಾಲರ್ ಇದೆ. ಟ್ರೇಡ್ ಡೆಫಿಸಿಟ್ 63.24 ಬಿಲಿಯನ್ ಡಾಲರ್ ಆಗುತ್ತದೆ. ಅದೇ ಹಿಂದಿನ ವರ್ಷದ ಇದೇ ಏಳು ತಿಂಗಳ ಅವಧಿಯಲ್ಲಿ ಇದ್ದ ಟ್ರೇಡ್ ಡೆಫಿಸಿಟ್ 60.02 ಬಿಲಿಯನ್ ಡಾಲರ್.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ