ಈ ಬಾರಿ ಬೇಸಿಗೆಯಲ್ಲಿ ಬಿಸಿ ಬಹಳ ಅಧಿಕ ಮಟ್ಟದಲ್ಲಿ ಇದೆ. ಕರ್ನಾಟಕವೂ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಬಿಸಿಗಾಳಿಯ ಕಾಟ ತೀವ್ರವಾಗಿದೆ. ರೈತರ ಬೆಳೆಗಳಿಗೆ ಈ ಬಾರಿ ಹೆಚ್ಚು ಹಾನಿಯಾಗುವ (crop loss) ಸಾಧ್ಯತೆ ದಟ್ಟವಾಗಿದೆ. ಸಾಕಷ್ಟು ಖರ್ಚು ಮಾಡಿ ಬೆಳೆದ ಬೆಳೆ ಕೈಕೊಟ್ಟರೆ ರೈತರಿಗೆ ಚೇತರಿಸಿಕೊಳ್ಳಲು ಕಷ್ಟವಾಗುತ್ತದೆ. ಸಾಲದ ವಿಷವರ್ತುಲಕ್ಕೆ ಸಿಲುಕಬೇಕಾಗುತ್ತದೆ. ಅದಕ್ಕಾಗಿ ಸರ್ಕಾರ ಬೆಳೆ ವಿಮೆ ಯೋಜನೆಯನ್ನು ರೈತರಿಗಾಗಿ ಜಾರಿಗೆ ತಂದಿದೆ. ಪಿಎಂ ಫಸಲ್ ಬಿಮಾ ಯೋಜನೆ (PM Fasal Bima Yojana) 2016ರಲ್ಲಿ ಜಾರಿಗೆ ಬಂದಿದ್ದು, ಸಾಕಷ್ಟು ರೈತರಿಗೆ ಇದು ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದೆ.
ನೈಸರ್ಗಿಕ ವಿಕೋಪಗಳಿಂದ ಮತ್ತು ಅವಘಡಗಳಿಂದ ಬೆಳೆಗಳಿಗೆ ಹಾನಿಯಾದರೆ ವಿಮಾ ಯೋಜನೆ ಮೂಲಕ ಪರಿಹಾರ ಪಡೆಯಬಹುದು. ಅತಿವೃಷ್ಟಿ, ಅನಾವೃಷ್ಟಿ, ಬಿಸಿಗಾಳಿ, ಚಂಡಮಾರುತ, ಭೂಕುಸಿತ ಇತ್ಯಾದಿ ಪ್ರಾಕೃತಿಕ ಅವಘಡಗಳಿಂದ ಬೆಳೆ ನಾಶವಾದರೆ ರೈತರಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: ಕಡಿಮೆ ಸಂಬಳ ಇದ್ದರೆ, ಉದ್ಯೋಗ ಕಳೆದುಕೊಂಡರೆ ಸಿಬಿಲ್ ಸ್ಕೋರ್ ಕಡಿಮೆ ಆಗುತ್ತಾ? ಇಲ್ಲಿದೆ ವಾಸ್ತವಿಕ ಅಂಶಗಳು
ಪ್ರಾಕೃತಿಕ ಅವಘಡದಿಂದ ಬೆಳೆ ನಾಶವಾದರೆ, ಆ ಘಟನೆಯಾಗಿ 72 ಗಂಟೆಯೊಳಗೆ ಸಂಬಂಧಿತ ಇನ್ಷೂರೆನ್ಸ್ ಕಂಪನಿ ಅಥವಾ ಸ್ಥಳೀಯ ಕೃಷಿ ಕಚೇರಿಗೆ ಮಾಹಿತಿ ನೀಡಬೇಕು. ಆಗ ಸಂಬಂಧಿತ ಅಧಿಕಾರಿಗಳು ಹಾನಿ ಎಷ್ಟಾಗಿದೆ ಎಂದು ಅಂದಾಜಿಸಲು ಸಾಧ್ಯವಾಗುತ್ತದೆ. ಇದಾದ ಬಳಿಕ ಪರಿಹಾರ ಪ್ರಕ್ರಿಯೆ ಚಾಲನೆಗೊಳ್ಳುತ್ತದೆ. ಬಿಸಿಗಾಳಿಯಿಂದ ಬೆಳೆಗೆ ಹಾನಿಯಾಗಿದ್ದರೂ 72 ಗಂಟೆಯೊಳಗೆ ಕೃಷಿ ಕಚೇರಿಯ ಗಮನಕ್ಕೆ ತರಬೇಕಾಗುತ್ತದೆ.
ಇದನ್ನೂ ಓದಿ: 50 ರೂ ಇಟ್ಟುಕೊಂಡು ದೇಶ ಬಿಟ್ಟು, ಬ್ರೂನೇ ಸುಲ್ತಾನರಿಂದ ಶಭಾಷ್ಗಿರಿ ಪಡೆಯುವ ಮಟ್ಟಕ್ಕೆ ಬೆಳೆದ ರಿಯಲ್ ಎಸ್ಟೇಟ್ ಕಿಂಗ್
ರೈತರು ಪಿಎಂ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಬೆಳೆ ಪರಿಹಾರ ಪಡೆಯುವುದಾದರೆ, ಕನಿಷ್ಠ ಶೇ. 33ರಷ್ಟಾದರೂ ಬೆಳೆಗೆ ಹಾನಿಯಾಗಿರಬೇಕು. ಆಗ ಪರಿಹಾರ ಕ್ಲೈಮ್ ಮಾಡಲು ಅರ್ಹರಿರುತ್ತೀರಿ. ಸಾಮಾನ್ಯವಾಗಿ ನೀವು ಇನ್ಷೂರೆನ್ಸ್ ಕ್ಲೈಮ್ಗೆ ಅರ್ಜಿ ಸಲ್ಲಿಸಿದ 14 ದಿನದಲ್ಲಿ ಪರಿಹಾರ ಹಣ ನಿಮ್ಮ ಖಾತೆಗೆ ಬಂದಿರುತ್ತದೆ.
ಹೆಚ್ಚಿನ ಮಾಹಿತಿಗೆ ಫಸಲ್ ಬಿಮಾ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ನೋಡಬಹುದು: pmfby.gov.in/
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ