ಸರ್ಕಾರದ ಸೇವೆ ಪಡೆಯಲು ಸಾಮಾನ್ಯ ಜನ ಪರದಾಡುವ ಕಾಲವೊಂದಿತ್ತು. ಆದ್ರೆ 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ (Narendra Modi government) ಅಧಿಕಾರಕ್ಕೇರಿತು. ಇಲ್ಲಿಂದ ಹೊಸ ಪರ್ವವೇ ಆರಂಭವಾಯಿತು. ದೇಶವಾಸಿಗಳು ಸುಲಭವಾಗಿ ಸರ್ಕಾರದ ಸೇವೆಗಳನ್ನು ಪಡೆದುಕೊಳ್ಳಲು ಅನುಕೂಲವಾಯಯ್ತು. ಹಳ್ಳಿ ಹಳ್ಳಿಗಳಿಗೂ, ಅತೀ ಹಿಂದುಳಿದ ಪ್ರದೇಶಗಳಿಗೂ ಸರ್ಕಾರದ ಸೇವೆಗಳು ತಲುಪತೊಡಗಿದವು. ಇದೇ ಸರ್ಕಾರ 2019ರಲ್ಲಿ ಮತ್ತೊಮ್ಮೆ ಆರಿಸಿಬಂದಿತು. ಒಟ್ಟು 10 ವರ್ಷ ಕಾಲ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆಡಳಿತ ನಡೆಸಿದೆ.
ಹತ್ತು ವರ್ಷದಲ್ಲಿ ಕೇಂದ್ರ ಸರ್ಕಾರ ದೇಶದ ಮೂಲೆ ಮೂಲೆಯಲ್ಲಿಯಲ್ಲಿರುವ ಜನರನ್ನು ಸಬಲೀಕರಣಗೊಳಿಸಲು ಪಟ್ಟುಬಿಡದೇ ಪ್ರಯತ್ನಿಸಿರುವ ವೇಗ ಮತ್ತು ಪ್ರಮಾಣ ಊಹಿಸಲು ಅಸಾಧ್ಯವಾದದ್ದು. ದೇಶದ ಜನರಿಗೆ ವಿಶ್ವದರ್ಜೆ ಮಟ್ಟದ ಡಿಜಿಟಲ್ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಈಗ, ಡಿಜಿಟಲ್ ಮಾಧ್ಯಮಗಳ ಮೂಲಕ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಕ್ರಾಂತಿಯ ನೇತೃತ್ವ ವಹಿಸಿದ್ದಾರೆ. ಜನಪರ ಯೋಜನೆಗಳು ದೇಶಾದ್ಯಂತ ಬಡ ಮತ್ತು ಅತ್ಯಂತ ಹಿಂದುಳಿದ ಸಮುದಾಯಗಳನ್ನು ಹೇಗೆ ತಲುಪುತ್ತಿವೆ ಅನ್ನೋದನ್ನ ಪ್ರಧಾನಿಯವರು ಪ್ರತಿ ಸಭೆಯಲ್ಲೂ ಇಂಚಿಂಚು ಮಾಹಿತಿ ಪಡೆಯುತ್ತಿರುತ್ತಾರೆ.
ದೇಶದ ಜನರ ದೈನಂದಿನ ಜೀವನದಲ್ಲಿ ಆಗಿರುವ ಬದಲಾವಣೆಗಳನ್ನ ಊಹಿಸಿಕೊಳ್ಳಿ. ಏಕೀಕೃತ ಪಾವತಿ ಇಂಟರ್ಫೇಸ್ ಅಂದ್ರೆ ಯುಪಿಐ ಮೂಲಕ ಬ್ಯಾಂಕ್ನ ಎಲ್ಲಾ ಕೆಲಸಗಳನ್ನು ಮನೆ, ಕಚೇರಿಗಳಲ್ಲಿ ಕುಳಿತು ಅಂಗೈನಲ್ಲೇ ಮಾಡುತ್ತಿದ್ದೇವೆ. ಇಷ್ಟೇ ಅಲ್ಲ ನಿಮ್ಮ ಪ್ರಮುಖ ಅಧಿಕೃತ ದಾಖಲೆಗಳನ್ನು ಡಿಜಿ ಲಾಕರ್ ಎಂಬ ಅತ್ಯಾಧುನಿಕ ಆ್ಯಪ್ ಮೂಲಕ ತೊಂದರೆ-ಮುಕ್ತ ರೀತಿಯಲ್ಲಿ ಸುರಕ್ಷಿತವಾಗಿ ಇಡಬಹುದಾಗಿದೆ. ದೇಶಕ್ಕೆ ಕೊರೊನಾ ಸಂಕಷ್ಟದ ಕಾಲದಲ್ಲಿ ಕೋವಿನ್ (Cowin) ಎಂಬ ಗೇಮ್ ಚೇಂಜರ್ ಅಪ್ಲಿಕೇಷನ್ನನ್ನು ಪರಿಚಯಿಸಿ ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಡ್ರೈವ್ ಅನ್ನು ನಿರ್ವಹಿಸಲಾಯ್ತು.
ಈಗ ಅಂತರ್ಜಾಲದಲ್ಲಿ ಹಲವಾರು ಸರ್ಕಾರಿ ಸೇವೆಗಳು ಲಭ್ಯವಿವೆ. ಆದ್ರೆ ಇದೇ ಒಂದು ದಶಕದ ಹಿಂದೆ ಇದು ಅಸಾಧ್ಯವಾಗಿತ್ತು. ತಂತ್ರಜ್ಞಾನವು ಸಮಯದೊಂದಿಗೆ ಅತಿ ವೇಗವಾಗಿ ಹೋಗುತ್ತಿತ್ತು. ಆದ್ರೆ ಮೋದಿ ಸರ್ಕಾರ ಅದರ ವೇಗ ಮತ್ತು ಪ್ರಮಾಣಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿ ಬೃಹತ್ ಡಿಜಿಟಲ್ ಕ್ರಾಂತಿಯನ್ನು ಮುನ್ನಡೆಸಿತು.
ದಾಖಲೆಗಳಿಗೆ ದೃಢೀಕರಣ ಮಾಡಲು ಜನ ಎಷ್ಟು ಪರದಾಡುತ್ತಿದ್ರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ವಸಾಹತುಶಾಹಿ ಯುಗದ ಅಭ್ಯಾಸವನ್ನು ಕೊನೆಗೊಳಿಸಲು ಪ್ರಧಾನಿ ಮೋದಿಯವರು ಅತ್ಯಂತ ಮಹತ್ವದ ಕ್ರಮ ಕೈಗೊಂಡ್ರು. ಈಗ ದಾಖಲೆಗಳಿಗೆ ದೃಢೀಕರಣ ಅತ್ಯಂತ ಸುಲಭವಾಗಿದೆ. ಇದು ಸಾಮಾನ್ಯ ನಾಗರಿಕರಿಗೆ ನೆಮ್ಮದಿ ತಂದಿದೆ. ಅಷ್ಟೇ ಅಲ್ಲ, ಒಂದು ದಶಕದಿಂದ ದೇಶದ ನಾಗರಿಕರಿಗೆ ಆಗಿರುವ ಪ್ರಯೋಜನಗಳು ದೊಡ್ಡದಾಗಿದೆ. ವಿಶೇಷವಾಗಿ ಹಿಂದುಳಿದವರಿಗೆ ಅಧಿಕಾರ ನೀಡಿರುವುದು ದೇಶದ ಕಟ್ಟಕಡೆಯ ವ್ಯಕ್ತಿಗೂ ಸಿಕ್ಕ ಗೌರವವಾಗಿದೆ.
ಮೋದಿ ಸರ್ಕಾರದ ಅವಧಿಯಲ್ಲಾದ ಮಹತ್ವದ ಬದಲಾವಣೆ ಅಂದ್ರೆ ಫಲಾನುಭವಿಗಳಿಗೆ ನೇರ ಹಣ ವರ್ಗಾವಣೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದೆ. ಜೊತೆಗೆ ಫಲಾನುಭವಿಗಳಿಗೆ ಹೆಚ್ಚು ಹಣ ಸಿಗುವಂತಾಗಿದೆ. ಸರ್ಕಾರ ಫಲಾನುಭವಿಗಳ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಹಾಕುತ್ತಿದೆ. ಸರ್ಕಾರದ ಯೋಜನೆಗಳಿಗೆ 2024ರ ಹಣಕಾಸಿನ ವರ್ಷದಲ್ಲಿ 7 ಟ್ರಿಲಿಯನ್ ಹಣ ವರ್ಗಾವಣೆ ಮಾಡಲು ನಿರೀಕ್ಷಿಸಲಾಗಿದೆ. 2023ರ ಹಣಕಾಸಿನ ವರ್ಷದಲ್ಲೂ ಇಷ್ಟೇ ಹಣ ವರ್ಗಾವಣೆಯಾಗಿದೆ.
ಬಡವರನ್ನು ತಲುಪಲು ಪ್ರತಿ ಹೆಜ್ಜೆಯಲ್ಲೂ ಮೋದಿ ಸರ್ಕಾರ ಹೆಚ್ಚಿನ ಪ್ರಯತ್ನ ಮಾಡಿದೆ. ಗ್ರಾಮೀಣ-ನಗರ ವಿಭಜನೆಯನ್ನು ಕಡಿಮೆ ಮಾಡುವಲ್ಲಿ ಯೋಜನೆಯು ಹೇಗೆ ಪ್ರಮುಖ ಪಾತ್ರ ವಹಿಸುತ್ತೆ ಅನ್ನೋದಕ್ಕೆ ಜನ್ ಧನ್ ಯೋಜನೆ ಉತ್ತಮ ಉದಾಹರಣೆಯಾಗಿದೆ. ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಮೂಲಕ 51 ಕೋಟಿ ಫಲಾನುಭವಿಗಳು ಇಲ್ಲಿಯವರೆಗೆ ₹2,11,290 ಕೋಟಿ ಹಣವವನ್ನು ಈ ಖಾತೆಗಳಲ್ಲಿ ಜಮಾ ಮಾಡಿದ್ದಾರೆ. ಇದು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲೂ ಪ್ರಮುಖ ಸಾಧನವಾಗಿದೆ.
ಇದನ್ನೂ ಓದಿ: ಕೊಚ್ಚಿ: ₹4,000 ಕೋಟಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಕಳೆದ 9 ವರ್ಷಗಳಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಮೂಲಕ ಸುಮಾರು 17 ಕೋಟಿ ಹೊಸ LPG ಸಂಪರ್ಕಗಳನ್ನು ಕೊಡಲಾಗಿದೆ. ಇನ್ನು ವಿದ್ಯುತ್ ವ್ಯವಸ್ಥೆ, ಶೌಚಾಲಯ ನಿರ್ಮಾಣ, ನಲ್ಲಿ ನೀರಿನ ವ್ಯವಸ್ಥೆ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಕೇಂದ್ರ ಸರ್ಕಾರ ಅಭೂತಪೂರ್ವ ಸಾಧನೆ ಮಾಡಿದೆ.
ಅಕ್ಟೋಬರ್ 2, 2014 ರಂದು ದೇಶಾದ್ಯಂತ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ರು. ಇದು ದೇಶಾದ್ಯಂತ ಮಹತ್ವದ ಬದಲಾವಣೆ ತಂದಿದೆ. ಪತ್ರಿ ಗ್ರಾಮಗಳು, ರೈಲು ನಿಲ್ದಾಣಗಳು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆ ಕಂಡು ಬರ್ತಿದೆ. ಒಟ್ಟಾರೆ, ದಶಕದ ಹಿಂದೆ ಊಹೆಗೂ ನಿಲುಕದ್ದು ಇಂದು ಸಾಧ್ಯವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ