Taxation On Cryptocurrency: ಕ್ರಿಪ್ಟೋಕರೆನ್ಸಿ ವಹಿವಾಟಿನ ತೆರಿಗೆ ಲೆಕ್ಕಾಚಾರ ಹೇಗೆ? ಇಲ್ಲಿದೆ ಉದಾಹರಣೆ ಸಹಿತ ಮಾಹಿತಿ
ಭಾರತದಲ್ಲಿ ವಹಿವಾಟು ನಡೆಸುವುದಕ್ಕೆ ಕ್ರಿಪ್ಟೋಕರೆನ್ಸಿಗಳಿಗೆ ತೆರಿಗೆ ಲೆಕ್ಕ ಹಾಕುವುದು ಹೇಗೆ? ಇಲ್ಲಿದೆ ಉದಾಹರಣೆ ಸಮೇತ ವಿವರಣೆ. ಇದರಿಂದ ನಿಮಗೆ ಸಹಾಯ ಆಗಬಹುದು.
ಕ್ರಿಪ್ಟೋಕರೆನ್ಸಿಯೂ (Cryptocurrency) ಸೇರಿದಂತೆ “ವರ್ಚುವಲ್ ಡಿಜಿಟಲ್ ಆಸ್ತಿ” ಮೇಲಿನ ವಹಿವಾಟುಗಳಿಗೆ ಸಂಬಂಧಿಸಿದಂತೆ 2022ರ ಬಜೆಟ್ನಲ್ಲಿ ಕೇಂದ್ರ ಸರ್ಕಾರವು ತೆರಿಗೆ ವಿಚಾರದಲ್ಲಿ ಸ್ಪಷ್ಟತೆ ನೀಡಿದೆ. ಈ ಬೆಳವಣಿಗೆಯಿಂದಾಗಿ ಕ್ರಿಪ್ಟೋ ಹೂಡಿಕೆದಾರರು ಸಹಜವಾಗಿ ಸಂತೋಷವಾಗಿದ್ದಾರೆ. ಏಕೆಂದರೆ, ಭಾರತದಲ್ಲಿ ಪರೋಕ್ಷವಾಗಿ ಕ್ರಿಪ್ಟೋಕರೆನ್ಸಿಗಳಿಗೆ ಕಾನೂನು ಮಾನ್ಯತೆ ಸಿಕ್ಕಂತಾಗಿದೆ. ಆದರೆ ಹಣಕಾಸಿನ ಮಸೂದೆ- 2022ರಲ್ಲಿ ಇರುವಂಥ ಅಂಶಗಳನ್ನು ನೋಡುವುದಾದರೆ, ಸರ್ಕಾರದಿಂದ ಒಟ್ಟಾರೆಯಾಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ನಿಷೇಧ ಅಂತೇನೂ ಹೇರದಿರಬಹುದು. ಆದರೆ ಕ್ರಿಪ್ಟೋಕರೆನ್ಸಿಯಲ್ಲಿನ ಸಟ್ಟಾ ವ್ಯವಹಾರವನ್ನಂತೂ ತಡೆಯಲು ಬಿಗಿ ಕ್ರಮ ತೆಗೆದುಕೊಂಡಂತೆಯೇ ಆಗಿದೆ. ಹಾಗಿದ್ದರೆ ಉದಾಹರಣೆ ಸಮೇತ ನಿಮ್ಮೆದುರು ಲೆಕ್ಕಾಚಾರವನ್ನು ಇಡುತ್ತಿದ್ದೇವೆ, ಗಮನಿಸಿ.
– 2022ರ ಜುಲೈ 1ನೇ ತಾರೀಕು 1 ಲಕ್ಷ ಮೌಲ್ಯದ ಬಿಟ್ಕಾಯಿನ್ ಖರೀದಿಸಿದಿರಿ ಅಂದುಕೊಳ್ಳಿ. ಅದರ ಮೌಲ್ಯ ಕುಸಿದು, ಆಗಸ್ಟ್ 1ರ ಹೊತ್ತಿಗೆ 50 ಸಾವಿರ ರೂಪಾಯಿ ತಲುಪಿಬಿಟ್ಟಿತು. ನಿಮಗೆ ಅದು ಇನ್ನಷ್ಟು ಕಡಿಮೆ ಆಗಬಹುದು ಎಂಬ ಆತಂಕ ಸೃಷ್ಟಿಯಾಗಿ, 50 ಸಾವಿರ ರೂಪಾಯಿ ನಷ್ಟದಲ್ಲೇ ಹಣವನ್ನೇ ಹಿಂತೆಗೆದುಕೊಂಡಿರಿ. ಆಗ 50 ಸಾವಿರದ ಬದಲಿಗೆ ಶೇ 1ರಷ್ಟು ಟಿಡಿಎಸ್, ಅಂದರೆ 500 ರೂಪಾಯಿ ಕಡಿತವಾಗಿ, 49,500 ರೂಪಾಯಿ ಬರುತ್ತದೆ. ಅಂದರೆ ಲಾಭವೋ ನಷ್ಟವೋ ಅದರಲ್ಲಿ ಹಣ ಹಿಂಪಡೆಯುವಾಗ ಟಿಡಿಎಸ್ ಕಡಿತ ಆಗಿಬಿಡುತ್ತದೆ.
– ಈಗ ಆಗಸ್ಟ್ 1ನೇ ತಾರೀಕಿನಂದೇ 49,500 ರೂಪಾಯಿಯನ್ನು ಎಥೆರಿಯಂನಲ್ಲಿ ಹೂಡಿಕೆ ಮಾಡಿದಿರಿ ಅಂದುಕೊಳ್ಳಿ. ಅದು ತುಂಬ ಚೆನ್ನಾಗಿ ವಹಿವಾಟು ನಡೆಸಿ, 2023ರ ಮಾರ್ಚ್ 1ರ ಹೊತ್ತಿಗೆ 80 ಸಾವಿರ ರೂಪಾಯಿ ಆಗುತ್ತದೆ. ಆಗ ಅದನ್ನು ಮಾರಾಟ ಮಾಡಿ, ಲಾಭ ಪಡೆಯುತ್ತೀರಿ. ಆಗ 800 ರೂಪಾಯಿ ಟಿಡಿಎಸ್ ಕಡಿತ ಆಗಿ 79,200 ರೂಪಾಯಿ ಸಿಗುತ್ತದೆ. ಅಲ್ಲಿಗೆ ಮಾರ್ಚ್ 1ರ ನಂತರದಲ್ಲಿ ನಿಮ್ಮ ಬಳಿ ಯಾವುದೇ ಕ್ರಿಪ್ಟೋಕರೆನ್ಸಿ ಇಲ್ಲ.
ಈಗ ಹಣಕಾಸು ವರ್ಷ 2023ಕ್ಕೆ ಕ್ರಿಪ್ಟೋ ಹೂಡಿಕೆ ಮಾಡಿದ್ದೇನು ಅಂತ ನೋಡೋಣ: 1. ಬಿಟ್ಕಾಯಿನ್ಸ್ನಲ್ಲಿ 50 ಸಾವಿರ ರೂಪಾಯಿ ನಷ್ಟ ಅನುಭವಿಸಿದರೂ 500 ರೂಪಾಯಿ ಟಿಡಿಎಸ್ ಪಾವತಿ ಮಾಡಿರುತ್ತೀರಿ. ಇನ್ನು ಎಥೆರಿಯಂನಲ್ಲಿ 30,500 ರೂಪಾಯಿ ಲಾಭ ಗಳಿಸಿ, 800 ರೂಪಾಯಿ ಟಿಡಿಎಸ್ ಪಾವತಿಸಿರುತ್ತೀರಿ. ಅಲ್ಲಿ ಒಟ್ಟಾರೆ ನಷ್ಟ 19,500 (-50,000+30,500) ಆಗಿರುತ್ತದೆ. ಮತ್ತು ಟಿಡಿಎಸ್ ರೂಪದಲ್ಲಿ 800+500= 1300 ರೂಪಾಯಿ ನೀಡಲಾಗಿರುತ್ತದೆ. ಹಾಗೆ ನೋಡಿದರೆ, ಒಟ್ಟಾರೆಯಾಗಿ ಕ್ರಿಪ್ಟೋ ಹೂಡಿಕೆಯಲ್ಲಿ ನಷ್ಟ ಅನುಭವಿಸಿರುವುದರಿಂದ ತೆರಿಗೆ ಪಾವತಿಸುವ ಅಗತ್ಯ ಇಲ್ಲ. 2022-23ನೇ ಸಾಲಿಗೆ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ 19,500 ರೂಪಾಯಿ ನಷ್ಟ ಆಗಿದೆ ಎಂದು ತೋರಿಸುವುದರಿಂದ 1300 ರೂಪಾಯಿ ಟಿಡಿಎಸ್ ರೀಫಂಡ್ ಆಗುತ್ತದೆ.
ಈಗ ಎಥೆರಿಯಂನಲ್ಲಿನ ಯಶಸ್ಸು ನಿಮ್ಮ ಮನಸ್ಸನಲ್ಲಿ ಇರುತ್ತದೆ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಕ್ರಿಪ್ಟೋಕರೆನ್ಸಿಗಳಲ್ಲಿ ಅದೃಷ್ಟವನ್ನು ಮತ್ತೊಮ್ಮೆ ಪ್ರಯತ್ನಿಸಲು ನಿರ್ಧರಿಸುತ್ತೀರಿ. 1. ನೀವು ಎಪ್ರಿಲ್ 1, 2023ರಂದು 1 ಲಕ್ಷ ರೂಪಾಯಿ ಮೌಲ್ಯದ ಎಥೆರಿಯಂ ಅನ್ನು ಖರೀದಿಸುತ್ತೀರಿ. ಮಾರ್ಚ್ 1, 2024ರಂದು, ಇದರ ಮೌಲ್ಯ 1.4 ಲಕ್ಷ ರೂಪಾಯಿ ಆಗುತ್ತದೆ. ನೀವು ಅದನ್ನು ಮಾರಾಟ ಮಾಡಲು ಮತ್ತು ಲಾಭ ಮಾಡಿಕೊಳ್ಳಲು ನಿರ್ಧರಿಸುತ್ತೀರಿ.
2. ನೀವು ಈಗಾಗಲೇ ಊಹಿಸಿದಂತೆ, ರೂ 1,400ರ ಟಿಡಿಎಸ್ ನಂತರ ನಿಮ್ಮ ಖಾತೆಯಲ್ಲಿ ರೂ 1,38,600 ಅನ್ನು ಸ್ವೀಕರಿಸುತ್ತೀರಿ. ಈಗ ನೀವು 2023-24ಕ್ಕೆ ಐಟಿಆರ್ ಅನ್ನು ಫೈಲ್ ಮಾಡಿದಾಗ ಕ್ರಿಪ್ಟೋ ಹೂಡಿಕೆಗಳಿಗೆ ತೆರಿಗೆ ಜವಾಬ್ದಾರಿಯನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ.
3. ಕಳೆದ ವರ್ಷದ ರೂ. 40,000 ಲಾಭ ಕಳೆದು ರೂ 19,500 ನಷ್ಟ, ಅಂದರೆ ರೂ. 20,500. ನೀವು ರೂ 20,500 ಅಥವಾ ರೂ. 6,150ರಲ್ಲಿ ಶೇ 30ರ ತೆರಿಗೆಯಲ್ಲಿ ಪಾವತಿಸುತ್ತೀರಿ ಎಂದು ಅಂದಾಜಿಸುತ್ತೀರಿ.
4. ಆದರೆ, ಸರ್ಕಾರವು ಒಪ್ಪುವುದಿಲ್ಲ ಮತ್ತು ವರ್ಚುವಲ್ ಡಿಜಿಟಲ್ ಆಸ್ತಿ ವಹಿವಾಟುಗಳಿಂದ ನಷ್ಟವನ್ನು ಮುಂದಕ್ಕೆ ಹಾಕುವುದಕ್ಕೆ ಆಗಲ್ಲ ಎಂದು ಹೇಳುತ್ತದೆ. ವ್ಯವಹಾರಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಸ್ಟಾಕ್‌ಗಳಿಗೆ ಲಾಭವು ಲಭ್ಯವಿದೆ. ಆದರೆ ವರ್ಚುವಲ್ ಡಿಜಿಟಲ್ ಸ್ವತ್ತುಗಳಿಗೆ ಅಲ್ಲ.
ಹಣಕಾಸು ವರ್ಷ 2024ಕ್ಕಾಗಿ ನೀವು ರೂ. 40,000ಕ್ಕೆ ಶೇ 30ರ ತೆರಿಗೆಯನ್ನು ಪಾವತಿಸಬೇಕು. ಅಂದರೆ ರೂ. 12,000. 1,400 ರೂಪಾಯಿಗಳನ್ನು ಈಗಾಗಲೇ ಕಡಿತಗೊಳಿಸಿರುವುದರಿಂದ 10,600 ರೂಪಾಯಿ ಪಾವತಿಸಬೇಕು. ಅದಕ್ಕಾಗಿಯೇ ಕ್ರಿಪ್ಟೋ ತೆರಿಗೆಯನ್ನು “ನಿಮ್ಮ ಲಾಭ ನಮ್ಮ ಲಾಭ, ನಿಮ್ಮ ನಷ್ಟ ನಿಮ್ಮ ನಷ್ಟ” ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಝೆರೋದ ಸಂಸ್ಥಾಪಕ ನಿತಿನ್ ಕಾಮತ್ ಗಮನ ಸೆಳೆದಂತೆ, ಪ್ರತಿ ವಹಿವಾಟಿನ ಮೇಲೆ ಶೇ 1ರಷ್ಟು ಟಿಡಿಎಸ್ ಕಡಿತಗೊಳಿಸಲಾಗುವುದು. ಯಾವುದೇ ಸಕ್ರಿಯ ಟ್ರೇಡರ್ಗೆ ಹಣಕಾಸು ವರ್ಷದಲ್ಲಿ 50 ವಹಿವಾಟುಗಳಿಗೆ ಲಾಭ ಅಥವಾ ನಷ್ಟd ಹೊರತಾಗಿ ಶೇ 50ರಷ್ಟು ಬಂಡವಾಳವನ್ನು ಟಿಡಿಎಸ್ನಲ್ಲಿ ಬ್ಲಾಕ್ ಮಾಡಲಾಗುತ್ತದೆ. ಯಾವುದೇ ಮಾರುಕಟ್ಟೆಯು ತನ್ನನ್ನು ತಾನು ಉಳಿಸಿಕೊಳ್ಳಲು ಸಕ್ರಿಯ ಟ್ರೇಡರ್ಗಳು ಬಹಳ ಮುಖ್ಯ. ಏಕೆಂದರೆ ಅವರು ಲಿಕ್ವಿಡಿಟಿ ಒದಗಿಸುತ್ತಾರೆ. ಅಲ್ಲದೆ ಖರೀದಿ ಬೆಲೆಯಾದ ಸ್ವಾಧೀನದ ವೆಚ್ಚವನ್ನು ಹೊರತುಪಡಿಸಿ ಪ್ಲಾಟ್‌ಫಾರ್ಮ್ ಶುಲ್ಕಗಳು, ಬ್ರೋಕರ್ ಶುಲ್ಕಗಳು ಮತ್ತು ಇಂಟರ್ನೆಟ್ ಶುಲ್ಕಗಳಂತಹ ಇತರ ವೆಚ್ಚಗಳನ್ನು ಲಾಭದಿಂದ ಖರ್ಚುಗಳಾಗಿ ಕಡಿತಗೊಳಿಸಲು ಸರ್ಕಾರವು ಅನುಮತಿಸುವುದಿಲ್ಲ. ಷೇರುಗಳು ಮತ್ತು ಉತ್ಪನ್ನಗಳ ವಹಿವಾಟಿನಲ್ಲಿ ಇದನ್ನು ಅನುಮತಿಸಲಾಗಿದೆ.
ಅಲ್ಲದೆ, ಕ್ರಿಪ್ಟೋ ವ್ಯಾಪಾರದಿಂದ ನಷ್ಟವನ್ನು ಯಾವುದೇ ಇತರ ಆದಾಯದ ವಿರುದ್ಧ ಸರಿದೂಗಿಸಲು ಸಾಧ್ಯವಿಲ್ಲ. ಒಟ್ಟಾರೆಯಾಗಿ, ಸರ್ಕಾರವು ಕ್ರಿಪ್ಟೋಕರೆನ್ಸಿಗಳನ್ನು ಕಾನೂನುಬದ್ಧಗೊಳಿಸಿಲ್ಲ ಅಥವಾ ನಿಷೇಧಿಸಿಲ್ಲ. ಆದರೆ ಅಲ್ಪಾವಧಿಯ ವಹಿವಾಟನ್ನು ನಿರುತ್ತೇಜನಗೊಳಿಸಲು ಇಂಥದ್ದೊಂದು ಕ್ರಮವನ್ನು ಮಾಡಿದೆ.
(ಮೂಲ: ಮನಿಕಂಟ್ರೋಲ್)
ಇದನ್ನೂ ಓದಿ: Cryptocurrency Index IC15: ಭಾರತದ ಮೊದಲ ಕ್ರಿಪ್ಟೋಕರೆನ್ಸಿಗಳ ಸೂಚ್ಯಂಕ ಐಸಿ15 ಪ್ರಾರಂಭಿಸಿದ ಕ್ರಿಪ್ಟೋವೈರ್
Published On - 12:33 pm, Fri, 11 March 22