ಆದಾಯ ತೆರಿಗೆ ಇಲಾಖೆ ಮರುಪಾವತಿ ಮೊತ್ತವನ್ನು ಸ್ವೀಕರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಆದಾಯ ತೆರಿಗೆ ಮರುಪಾವತಿ ಸ್ಥಿತಿ (Income tax refund statuus) ಪರಿಶೀಲನೆಯು ಪ್ರಮುಖ ಪ್ರಕ್ರಿಯೆಯಾಗಿದೆ. ಆದರೂ ತೆರಿಗೆ ಇಲಾಖೆಯು ತೆರಿಗೆದಾರರ ITR ಪ್ರೊಸೆಸ್ (ಪ್ರಕ್ರಿಯೆ) ಮಾಡಿದ ನಂತರ ಮತ್ತು ಸೂಚನೆಯ ಮೂಲಕ ಅದನ್ನು ಖಚಿತಪಡಿಸಿದ ಮೇಲೆ ಮಾತ್ರ ಈ ಆದಾಯ ತೆರಿಗೆ ಮರುಪಾವತಿಯನ್ನು ಸ್ವೀಕರಿಸಬಹುದು. ಈ ವರ್ಷದ ರಿಟರ್ನ್‌ಗಳನ್ನು FY2020-21ಕ್ಕೆ ಸಲ್ಲಿಸಬೇಕು. ಇದಕ್ಕಾಗಿ ವಿಸ್ತರಣೆಯಾದ ಕೊನೆಯ ದಿನಾಂಕ ಸದ್ಯಕ್ಕೆ ಡಿಸೆಂಬರ್ 31, 2021 ಆಗಿದೆ. ಆದಾಯ ತೆರಿಗೆ ಮರುಪಾವತಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಪ್ರೊಸೆಸ್ ಮಾಡುತ್ತದೆ. ಮತ್ತು ಅದನ್ನು ಸಲ್ಲಿಸುವ ಸಮಯದಲ್ಲಿ ತೆರಿಗೆದಾರರು ITRನಲ್ಲಿ ತಿಳಿಸಿದ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಹೀಗಾಗಿ, ಸರಿಯಾದ ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ನಮೂದಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಮುಖ್ಯ. ಸರ್ಕಾರದ ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಬ್ಯಾಂಕ್ ಖಾತೆಯನ್ನು ಮೊದಲೇ ವ್ಯಾಲಿಡೇಟ್ ಮಾಡಬೇಕು ಮತ್ತು ಬ್ಯಾಂಕ್ ಖಾತೆಯೊಂದಿಗೆ PAN ಅನ್ನು ಜೋಡಣೆ ಮಾಡಬೇಕು ಎಂಬುದು ಗಮನಿಸಬೇಕಾದ ಸಂಗತಿ.
ಆದಾಯ ತೆರಿಗೆ ಮರುಪಾವತಿಯನ್ನು ಯಾವಾಗ ಕ್ಲೇಮ್ ಮಾಡಬಹುದು?
ಒಂದು ವೇಳೆ ತೆರಿಗೆದಾರರು ತಾವು ಕೆಲಸ ಮಾಡುವ ಸಂಸ್ಥೆಗೆ ಎಲ್ಲ ಹೂಡಿಕೆ ಪುರಾವೆಗಳನ್ನು ಒದಗಿಸಿಲ್ಲದೆ ಪರಿಣಾಮವಾಗಿ, ಉದ್ಯೋಗದಾತರಿಂದ ಕಡಿತಗೊಳಿಸಲಾದ ತೆರಿಗೆ ಮೊತ್ತವು ಆ ನಿರ್ದಿಷ್ಟ ಹಣಕಾಸು ವರ್ಷಕ್ಕೆ ನಿಜವಾದ ತೆರಿಗೆ ಹೊಣೆಗಾರಿಕೆಗಿಂತ ಮೀರಿಹೋಗಿದೆ ಎಂದಾದಲ್ಲಿ. ಬ್ಯಾಂಕ್ ಎಫ್‌ಡಿಗಳು ಅಥವಾ ಬಾಂಡ್‌ಗಳಿಂದ ಬಡ್ಡಿ ಆದಾಯದ ಮೇಲೆ ಹೆಚ್ಚುವರಿ ಟಿಡಿಎಸ್ ಕಡಿತಗೊಳಿಸಿದ್ದಲ್ಲಿ. ಸ್ವಯಂ ಮೌಲ್ಯಮಾಪನದಲ್ಲಿ (Self Assessment) ಪಾವತಿಸಿದ ಮುಂಗಡ ತೆರಿಗೆಯು ನಿಯಮಿತ ಮೌಲ್ಯಮಾಪನದ ಪ್ರಕಾರ ಅನ್ವಯವಾಗುವ ಹಣಕಾಸು ವರ್ಷಕ್ಕೆ ತೆರಿಗೆ ಹೊಣೆಗಾರಿಕೆಯನ್ನು ಮೀರಿದ್ದಲ್ಲಿ. ಎರಡು ಬಾರಿ (ಡಬಲ್) ತೆರಿಗೆ ಪಾವತಿಯ ಸಂದರ್ಭದಲ್ಲಿ ಕ್ಲೇಮ್ ಮಾಡಬಹುದು.
ಆದಾಯ ತೆರಿಗೆ ಮರುಪಾವತಿಯನ್ನು ಹೇಗೆ ಕ್ಲೇಮ್ ಮಾಡುವುದು?
ಈ ಹಿಂದೆ, ಆದಾಯ ತೆರಿಗೆ ಮರುಪಾವತಿಯನ್ನು ಕ್ಲೇಮ್ ಮಾಡಲು ಆದಾಯ ತೆರಿಗೆ ಫಾರ್ಮ್ 30 ಅಗತ್ಯವಿತ್ತು. ಆದರೂ ಮರುಪಾವತಿಯ ಇ-ವರ್ಗಾವಣೆಯೊಂದಿಗೆ ಐಟಿಆರ್ ಅನ್ನು ಸಲ್ಲಿಸುವ ಮೂಲಕ, ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡುವ ಮೂಲಕ ಮತ್ತು ಬ್ಯಾಂಕ್ ಖಾತೆಯನ್ನು ವ್ಯಾಲಿಡೇಟ್ ಮಾಡುವ ಮೂಲಕ ಇದೀಗ ಕ್ಲೇಮ್ ಮಾಡಬಹುದು. ಐಟಿಆರ್ ಅನ್ನು ಫೈಲಿಂಗ್ ಮಾಡಿದ 120 ದಿನಗಳಲ್ಲಿ ಭೌತಿಕವಾಗಿ (Physical) ಅಥವಾ ಎಲೆಕ್ಟ್ರಾನಿಕಲ್ ಆಗಿ ಪರಿಶೀಲಿಸಬೇಕು. ಮರುಪಾವತಿ ಕ್ಲೇಮ್ ಮಾಡಲಾದ ಹೆಚ್ಚುವರಿ ತೆರಿಗೆಯನ್ನು ಫಾರ್ಮ್ 26ASನಲ್ಲಿ ತೋರಿಸಬೇಕು. ಅಲ್ಲದೆ, ಮರುಪಾವತಿಯು ಆದಾಯ ತೆರಿಗೆ ಇಲಾಖೆಯಿಂದ ಪರಿಶೀಲನೆಗೆ ಒಳಪಟ್ಟಿರುತ್ತದೆ. ಮರುಪಾವತಿ ಹಕ್ಕು ಇಲಾಖೆಗೆ ಇರುತ್ತದೆ. ರೀಫಂಡ್ ಮಾಡಬಹುದು ಎಂದಾದಲ್ಲಿ ಮಾತ್ರ ಅದನ್ನು ಖಾತೆಗೆ ಜಮಾ ಮಾಡಲಾಗುತ್ತದೆ.
ಆದಾಯ ತೆರಿಗೆ ಮರುಪಾವತಿ ಸ್ಥಿತಿಯನ್ನು ಪರಿಶೀಲಿಸುವ ಮಾರ್ಗಗಳು?
1. NSDL ವೆಬ್‌ಸೈಟ್‌ನಲ್ಲಿ
ಹಂತ 1: ಮರುಪಾವತಿಯನ್ನು ಟ್ರ್ಯಾಕ್ ಮಾಡಲು NSDL ವೆಬ್‌ಸೈಟ್‌ಗೆ ತೆರಳಬೇಕು.
ಹಂತ 2: ವೆಬ್ ಪುಟವು ಕಾಣಿಸಿಕೊಳ್ಳುತ್ತದೆ. PAN ಮತ್ತು AY ಸೇರಿದಂತೆ ವಿವರಗಳನ್ನು ಭರ್ತಿ ಮಾಡಿ ಮತ್ತು ‘ಮುಂದುವರಿಸಿ’ ಎಂಬುದನ್ನು ಕ್ಲಿಕ್ ಮಾಡಬೇಕು.
ಹಂತ 3: ಆದಾಯ ತೆರಿಗೆ ಮರುಪಾವತಿ ಸ್ಥಿತಿಯು ಕಾಣಿಸುತ್ತದೆ.
2. ಇ-ಫೈಲಿಂಗ್ ಪೋರ್ಟಲ್‌ನಲ್ಲಿ:
ಹಂತ 1: ಇಲ್ಲಿ ಕ್ಲಿಕ್ ಮಾಡುವ ಮೂಲಕ ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗ್ ಇನ್ ಮಾಡಬೇಕು.
ಹಂತ 2: ರಿಟರ್ನ್ಸ್/ಫಾರ್ಮ್‌ಗಳನ್ನು ವೀಕ್ಷಿಸಿ ಆಯ್ಕೆ ಮಾಡಬೇಕು.
ಹಂತ 3: ‘My Account’ ಟ್ಯಾಬ್‌ಗೆ ತೆರಳಬೇಕು ಮತ್ತು ‘ಆದಾಯ ತೆರಿಗೆ ರಿಟರ್ನ್ಸ್’ ಆಯ್ಕೆ ಮಾಡಬೇಕು. ಆ ನಂತರ ಸಲ್ಲಿಸು ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
ಹಂತ 4: ಸ್ವೀಕೃತಿ ಸಂಖ್ಯೆಯ ಮೇಲೆ ಕ್ಲಿಕ್ ಮಾಡಬೇಕು.
ಹಂತ 5: ಆದಾಯ ತೆರಿಗೆ ಮರುಪಾವತಿ ಸ್ಥಿತಿಯೊಂದಿಗೆ ರಿಟರ್ನ್ ವಿವರಗಳನ್ನು ತೋರಿಸುವ ಪುಟವು ಕಾಣಿಸಿಕೊಳ್ಳುತ್ತದೆ.
ಐಟಿಆರ್ ಮರುಪಾವತಿ ವಿಳಂಬ:
2019-20 ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಅನ್ನು ಮೊದಲೇ ಸಲ್ಲಿಸಿದ್ದರೆ ಮತ್ತು ಮರುಪಾವತಿಯನ್ನು ಇನ್ನೂ ಸ್ವೀಕರಿಸದಿದ್ದರೆ ಅದು ನಿಮ್ಮೊಬ್ಬರಿಗೆ ಮಾತ್ರ ಆಗಿದೆ ಅಂತಲ್ಲ. ತೆರಿಗೆ ರಿಟರ್ನ್‌ಗಳ ಶೀಘ್ರ ಪ್ರಕ್ರಿಯೆಗಾಗಿ ತಾಂತ್ರಿಕ ಅಪ್‌ಗ್ರೇಡ್ ಆಗುತ್ತಿರುವುದು ಈ ವಿಳಂಬದ ಹಿಂದಿನ ಕಾರಣಗಳಲ್ಲಿ ಒಂದಾಗಿರಬಹುದು. ಐಟಿಆರ್‌ಗಳ ಶೀಘ್ರ ಪ್ರಕ್ರಿಯೆಗಾಗಿ ಆದಾಯ ತೆರಿಗೆ ಇಲಾಖೆಯು ಹೊಸ, ತಾಂತ್ರಿಕವಾಗಿ ನವೀಕರಿಸಿದ ಪ್ಲಾಟ್‌ಫಾರ್ಮ್‌ಗೆ (CPC 2.0) ಬದಲಾಗುತ್ತಿದೆ. ಅಸೆಸ್ಮೆಂಟ್ ವರ್ಷ (AY) 2020-21ಗಾಗಿ ITRಗಳನ್ನು CPC 2.0ನಲ್ಲಿ ಪ್ರೊಸೆಸ್ ಮಾಡಲಾಗುತ್ತದೆ.
ವಿಷಯ ತಜ್ಞರ ಪ್ರಕಾರ, “CPC 2.0 ಅನ್ನು 2019 ರಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ಹೆಚ್ಚುತ್ತಿರುವ ಇ-ಫೈಲ್ ಮಾಡಿದ ರಿಟರ್ನ್‌ಗಳನ್ನು ನಿಭಾಯಿಸಲು ಮುಖ್ಯ ಕಾರಣ. ಸಾಮಾನ್ಯವಾಗಿ, ಮರುಪಾವತಿಗಳನ್ನು ಶೀಘ್ರವಾಗಿ ಮತ್ತು ಸರಾಗವಾಗಿ ಪ್ರೊಸೆಸ್ ಮಾಡಲಾಗುತ್ತದೆ. ಬಹುಪಾಲು ತೆರಿಗೆದಾರರಿಗೆ ಕೊವಿಡ್ ಜೊತೆಗೆ ಸರ್ಕಾರದ ಬಳಿ ಹಣದ ಕೊರತೆಯಿಂದಾಗಿ ರಿಟರ್ನ್ಸ್ ಪ್ರಕ್ರಿಯೆ ಸೇರಿದಂತೆ ಎಲ್ಲವೂ ವಿಳಂಬವಾಗಿದೆ. ಸುಮಾರು ಐದಾರು ತಿಂಗಳ ಹಿಂದೆ FY2019-20 ವರ್ಷಕ್ಕೆ ತಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿದ ಅನೇಕ ತೆರಿಗೆದಾರರು ಇನ್ನೂ ಮರುಪಾವತಿಯನ್ನು ಸ್ವೀಕರಿಸಿಲ್ಲ. ಮರುಪಾವತಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ವಾಸ್ತವವಾಗಿ, ಜೂನ್-ಜುಲೈನಲ್ಲಿ ತಮ್ಮ ಐಟಿಆರ್‌ಗಳನ್ನು ಸಲ್ಲಿಸಿದವರು ಇನ್ನೂ ಮರುಪಾವತಿಯನ್ನು ಸ್ವೀಕರಿಸಿಲ್ಲ. ಸಾಮಾನ್ಯವಾಗಿ ತೆರಿಗೆ ಮರುಪಾವತಿಯನ್ನು 2-4 ತಿಂಗಳ ಅವಧಿಯಲ್ಲಿ ನೀಡಲಾಗುತ್ತದೆ,” ಎಂದು ಅವರು ಹೇಳುತ್ತಾರೆ.
ಇನ್ನೂ ಮುಂದುವರಿದು, “ತೆರಿಗೆ ಮರುಪಾವತಿಗಳನ್ನು ಪ್ರೊಸೆಸ್ ಮಾಡಲು ಸಾಮಾನ್ಯ ಕಾಲಾವಧಿ 2ರಿಂದ 4 ತಿಂಗಳು. ಆದರೆ ತೆರಿಗೆ ರಿಟರ್ನ್‌ಗಳ ಸಂಕೀರ್ಣದ ಆಧಾರದ ಮೇಲೆ ಬದಲಾಗಬಹುದು. ಸರಳವಾದ ಸಂಬಳದ ತೆರಿಗೆ ರಿಟರ್ನ್‌ಗಳಲ್ಲಿ ಹೆಚ್ಚಿನ ಆದಾಯವು ಕಾಣಿಸಿಕೊಳ್ಳುತ್ತದೆ. 26AS ಅನ್ನು ಶೀಘ್ರವಾಗಿ ಮತ್ತು ನಿಖರವಾಗಿ ಪ್ರೊಸೆಸ್ ಮಾಡಸಲಾಗುತ್ತದೆ. ಸಣ್ಣ ಮೊತ್ತದ ಮರುಪಾವತಿಯನ್ನು ಹೊಂದಿರುವ ತೆರಿಗೆದಾರರ (ಅಂದರೆ 5 ಲಕ್ಷಕ್ಕಿಂತ ಕಡಿಮೆ) ರೀಫಂಡ್ ವೇಗವಾಗಿ ಪ್ರೊಸೆಸ್ ಆಗುತ್ತದೆ. ಆದರೂ ಆಸ್ತಿ ಮಾರಾಟದ ಲಾಭದ ರೂಪದಲ್ಲಿ ತೆರಿಗೆ ರಿಟರ್ನ್ಸ್ ಕಾಣಿಸಿಕೊಂಡರೆ ಅಥವಾ ಒಪ್ಪಂದದ ಪರಿಹಾರವನ್ನು ಕ್ಲೇಮ್ ಮಾಡುವಲ್ಲಿ, ಪ್ರೊಸೆಸ್ ಮಾಡಲು ಸಮಯ ತೆಗೆದುಕೊಳ್ಳುತ್ತದೆ ಮತ್ತು ಪ್ರೊಸೆಸಿಂಗ್ಗೆ ಸಮಯ ನಿಖರವಾಗಿಲ್ಲ,” ಎನ್ನುತ್ತಾರೆ.
ರೀಫಂಡ್ ಪ್ರೊಸೆಸ್:
ಸಾಮಾನ್ಯವಾಗಿ ಐಟಿಆರ್ ಸಲ್ಲಿಸಿದ ಒಂದು ತಿಂಗಳ ಒಳಗಾಗಿ ಪ್ರೊಸೆಸ್ ಮಾಡಲಾಗುತ್ತದೆ. ಕೇಂದ್ರೀಕೃತ ಪ್ರೊಸೆಸ್ ಕೇಂದ್ರದಿಂದ ಮರುಪಾವತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಮರುಪಾವತಿಯನ್ನು 20ರಿಂದ 45 ದಿನಗಳಲ್ಲಿ ನೀಡಲಾಗುತ್ತದೆ. 5 ಲಕ್ಷದವರೆಗಿನ ಮರುಪಾವತಿಗೆ ಅರ್ಹರಾಗಿರುವ ತೆರಿಗೆದಾರರ ಮರುಪಾವತಿಗಳು ಪ್ರೊಸೆಸ್ ಆದ ವಾರದೊಳಗೆ ನೇರವಾಗಿ ಬ್ಯಾಂಕ್ಗೆ ಕ್ರೆಡಿಟ್ ಅನ್ನು ಪಡೆಯುತ್ತವೆ. ಆದರೆ ತೆರಿಗೆದಾರರು ಐಟಿಆರ್ ಅನ್ನು ಭರ್ತಿ ಮಾಡುವಲ್ಲಿ ತಪ್ಪು ಮಾಡಿದರೆ ವಿಳಂಬವಾಗುವ ಸಾಧ್ಯತೆಯಿದೆ. ITR ಮತ್ತು I-T ಇಲಾಖೆಯಲ್ಲಿ ಲಭ್ಯವಿರುವ ವಿವರಗಳಲ್ಲಿ ಹೊಂದಾಣಿಕೆ ಆಗದಿದ್ದಲ್ಲಿ ರೀಫಂಡ್ ತಡೆ ಹಿಡಿಯಲಾಗುತ್ತದೆ. ಪ್ರಶ್ನೆಯ ಸಂದರ್ಭದಲ್ಲಿ ತೆರಿಗೆದಾರರು ಅದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಬೇಕು.
ಆದಾಯ ತೆರಿಗೆ ಮರುಪಾವತಿಯ ವಿಳಂಬಕ್ಕೆ ಮತ್ತೊಂದು ಸಂಭವನೀಯ ಕಾರಣ ಅಂದರೆ ಐಟಿಆರ್ ಅನ್ನು ಪ್ರೊಸೆಸ್ ಮಾಡುವಾಗ ಆದಾಯ ತೆರಿಗೆ ಇಲಾಖೆಯ ಸಿಪಿಸಿ ಕೇಳಿದ ಪ್ರಶ್ನೆಗಳು ಅಥವಾ ಸ್ಪಷ್ಟೀಕರಣಗಳು, ಐಟಿಆರ್ ಮತ್ತು ಫಾರ್ಮ್ 26 ಎಎಸ್‌ನಲ್ಲಿ ಹೊಂದಿಕೆ ಆಗದಿರುವುದು, ತೆರಿಗೆ ಅಧಿಕಾರಿಗಳು ಪ್ರಾರಂಭಿಸಿದ ಮೌಲ್ಯಮಾಪನ ಪ್ರಕ್ರಿಯೆಗಳು, ಕೆಲವು ಕ್ಲೇಮ್‌ಗಳು ಐಟಿಆರ್‌ನಲ್ಲಿ ತೆರಿಗೆದಾರರಿಂದ ಮಾಡಲಾಗಿದೆ. ಇದು ಸಿಪಿಸಿಯು ವ್ಯಾಪ್ತಿಯ ತೆರಿಗೆ ಅಧಿಕಾರಿಯನ್ನು ಪರಿಶೀಲಿಸಲು ಬಯಸುತ್ತದೆ. ಅನೇಕ ಸಂದರ್ಭಗಳಲ್ಲಿ ಐಟಿಆರ್ ಫಾರ್ಮ್‌ನಲ್ಲಿ ತಪ್ಪಾದ ಬ್ಯಾಂಕ್ ಖಾತೆ ವಿವರಗಳನ್ನು ಒದಗಿಸುವಂತಹ ಸರಳ ತಪ್ಪುಗಳಿಂದಾಗಿ ರೀಫಂಡ್ ನೀಡಲಾಗುವುದಿಲ್ಲ ಅಥವಾ ತಿರಸ್ಕರಿಸಲಾಗುತ್ತದೆ. ಆ ಸಂದರ್ಭದಲ್ಲಿ ITRನಲ್ಲಿ ನಮೂದಿಸಿರುವ ಬ್ಯಾಂಕ್ ಖಾತೆ ವಿವರಗಳನ್ನು ಪರಿಶೀಲಿಸಬೇಕು. ಮರುಪಾವತಿ ಮರು-ವಿತರಣೆಗೆ ವಿನಂತಿ ಮಾಡಬಹುದು.
ಇದನ್ನೂ ಓದಿ: Income Tax: ಆದಾಯ ತೆರಿಗೆ ಜವಾಬ್ದಾರಿಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇಲ್ಲಿವೆ ಏಳು ವಿಧಾನಗಳು
Published On - 2:18 pm, Mon, 1 November 21