ದೆಹಲಿ: ಒಂದಕ್ಕಿಂತ ಹೆಚ್ಚು ಐಟಿ ಕಂಪನಿಗಳಲ್ಲಿ ಏಕಕಾಲಕ್ಕೆ ಕೆಲಸ ಮಾಡುತ್ತಿದ್ದ ತನ್ನ 300ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಿಪ್ರೋ (Wipro) ವಜಾ ಮಾಡಿದೆ. ಆದರೆ ಈ ಉದ್ಯೋಗಿಗಳು ‘ಮೂನ್ಲೈಟ್’ (Moonlighting) ಮಾಡುತ್ತಿದ್ದಾರೆ ಎಂದು ಅರಿವಾಗಿದ್ದು ಹೇಗೆ ಎಂಬ ಪ್ರಶ್ನೆಗೆ ವಿಪ್ರೋ ಈವರೆಗೆ ಉತ್ತರ ನೀಡಿಲ್ಲ. ಆದರೆ ಮೂನ್ಲೈಟಿಂಗ್ ಮಾಡುತ್ತಿದ್ದ ಉದ್ಯೋಗಿಗಳನ್ನು ಮಾತ್ರ ‘ಮೋಸಗಾರರು’ (Cheaters) ಎಂದು ಆರೋಪಿಸಿ, ಮನೆಗೆ ಕಳಿಸಿದೆ. ಕೊವಿಡ್ ಲಾಕ್ಡೌನ್ ಸಂದರ್ಭದಲ್ಲಿ ವರ್ಕ್ ಫ್ರಮ್ ಹೋಮ್ ಸಾಮಾನ್ಯ ಸಂಗತಿಯಾದಾಗ ಐಟಿ ವೃತ್ತಿಪರರು ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಆರಂಭಿಸಿದರು ಎಂದು ಷೇರು ಮಾರುಕಟ್ಟೆ ಹೂಡಿಕೆದಾರ ರಾಜೀವ್ ಮೆಹ್ತಾ ಟ್ವೀಟ್ ಮಾಡಿದ್ದಾರೆ. ಅವರು 20,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅವರು ಸಾಮಾನ್ಯವಾಗಿ ಷೇರುಪೇಟೆಯ ವ್ಯವಹಾರಗಳ ಬಗ್ಗೆ ಟ್ವೀಟ್ ಮಾಡುತ್ತಿರುತ್ತಾರೆ.
‘ಒಂದೇ ಸಾಮರ್ಥ್ಯ, ಡಬಲ್ ಡೆಲಿವರಿ, ಎರಡು ಲ್ಯಾಪ್ಟಾಪ್ಗಳು, ಒಂದೇ ವೈಫೈ, ಇಬ್ಬರು ಗ್ರಾಹಕರು, ನಿಮ್ಮದೇ ಸ್ವಂತ ಮನೆ, ಸ್ವಂತ ಊರು. ಮೂನ್ಲೈಟ್ ಮಾಡುವವರು ತಾವು ಹೀಗೆ ಮಾಡುತ್ತಿದ್ದೇವೆ ಎಂದು ಘೋಷಿಸಿಕೊಂಡಿರಲಿಲ್ಲ. ಆದರೂ ಅವರನ್ನು ಕಂಡುಹಿಡಿದಿದ್ದು ಹೇಗೆ’ ಎಂದು ಮೆಹ್ತಾ ಪ್ರಶ್ನಿಸಿದ್ದಾರೆ. ತಮ್ಮ ಪ್ರಶ್ನೆಗೆ ಉತ್ತರವನ್ನೂ ಕೊಟ್ಟುಕೊಂಡಿರುವ ಅವರು, ‘ಅತ್ಯಂತ ಮುಗ್ಧವಾಗಿ ಕಾಣುವ, ನಿರ್ಲಿಪ್ತ ಮನಃಸ್ಥಿತಿಯವರಂತೆ ಬಿಂಬಿಸಿಕೊಳ್ಳುತ್ತಿದ್ದವರು ಹಿಂಬಾಗಿಲಿನಲ್ಲಿ ಮತ್ತೊಂದು ಪಿಎಫ್ ಅಕೌಂಟ್ ತೆರೆದದ್ದು ಮುಳುವಾಯಿತು’ ಎಂದು ಹೇಳಿದ್ದಾರೆ.
ಪಿಎಫ್ ಎಂಬುದು ಸರ್ಕಾರದ ನಿವೃತ್ತಿ ಕಾರ್ಪಸ್ ಯೋಜನೆಯಾಗಿದ್ದು, ಇದರ ಅಡಿಯಲ್ಲಿ ಕಂಪನಿಗಳು ಉದ್ಯೋಗಿಯ ವೇತನದಿಂದ ಅದರ ಒಂದು ಭಾಗವನ್ನು ಕಡಿತಗೊಳಿಸುತ್ತವೆ ಮತ್ತು ಕಡ್ಡಾಯವಾಗಿ ವಂತಿಗೆಯನ್ನು ಸಹ ಹಾಕುತ್ತವೆ. “ಪಿಎಫ್ ಕೊಡುಗೆಯನ್ನು ನಿಯಮಿತವಾಗಿ (ಕಂಪನಿಯು) ಠೇವಣಿ ಇಡಬೇಕು ಮತ್ತು ಅದರ ಉಲ್ಲಂಘನೆ ಗಂಭೀರ ಅಪರಾಧವಾಗಿದೆ” ಎಂದು ಮೆಹ್ತಾ ಹೇಳಿದ್ದಾರೆ.
ಇದನ್ನೂ ಓದಿ: Moonlighting: 300 ಉದ್ಯೋಗಿಗಳನ್ನು ವಜಾಗೊಳಿಸಿದ ವಿಪ್ರೋ
300 #Wipro employees sacked as they took advantage of work from home and worked parallely with another company.
How #Digital #India has precisely found the culprits is amazing. Kindly read the below article. Fantastic system in place in India.
— Rajiv Mehta (@rajivmehta19) October 10, 2022
ಅಲ್ಲಿಯೇ ದಾಖಲೆಗಳ ಡಿಜಿಟಲ್ ಲಿಂಕ್ ಬರುತ್ತದೆ ಎಂದು ಅವರು ಹೇಳಿದರು. ಎಲ್ಲಾ ಆಧಾರ್, ಪ್ಯಾನ್ ಸಂಖ್ಯೆಗಳನ್ನು ಬ್ಯಾಂಕುಗಳು ಸಂಬಳ ಖಾತೆಯನ್ನು ತೆರೆಯಲು ತೆಗೆದುಕೊಳ್ಳುವುದರಿಂದ, ಪಿಎಫ್ ಜಮಾ ಮಾಡಲು ಅವುಗಳನ್ನು ಬಳಸಲಾಗುತ್ತದೆ… ಬ್ಯಾಕ್ ಎಂಡ್ನಲ್ಲಿ ವ್ಯವಸ್ಥೆಗಳು ಎಷ್ಟು ಸುಂದರವಾಗಿ ಸಂಯೋಜಿಸಲ್ಪಟ್ಟಿವೆಯೆಂದರೆ, ಈ ಬೆಳದಿಂಗಳು ಆರ್ಥಿಕವಾಗಿ ಮತ್ತು ಜನಸಂಖ್ಯಾಶಾಸ್ತ್ರೀಯವಾಗಿ ಎರಡು ಗುರುತುಗಳನ್ನು ರಚಿಸುವುದು ಅಸಾಧ್ಯವಾಗಿತ್ತು” ಎಂದು ಶ್ರೀ ಮೆಹ್ತಾ ಹೇಳುತ್ತಾರೆ.
‘ಪಿಎಫ್ಗೂ ಮೂನ್ಲೈಟ್ಗೂ ಏನು ಸಂಬಂಧ ಗೊತ್ತೆ’ ಎಂದು ಕೇಳಿರುವ ಅವರು, ವಿಪ್ರೋದಲ್ಲಿ ಮೂನ್ಲೈಟ್ ಮಾಡುತ್ತಿರುವವರನ್ನು ಹೇಗೆ ಪತ್ತೆಹಚ್ಚಲಾಯಿತು ಎಂದು ವಿವರಿಸಿದ್ದಾರೆ. ‘ಯಾರಾದರೂ ಆಕಸ್ಮಿಕವಾಗಿ ದುಪ್ಪಟ್ಟು ವಂತಿಕೆ ಪಾವತಿಸಿದ್ದಾರೆಯೇ ಎಂದು ಪರಿಶೀಲಿಸಲು ದೈನಂದಿನ ಡಿ-ಡೂಪ್ಲಿಕೇಶನ್ ಅಲ್ಗರಿದಮ್ ಅನ್ನು ಪಿಎಫ್ ಅಧಿಕಾರಿಗಳು ರನ್ ಮಾಡುತ್ತಾರೆ. ಈ ವೇಳೆ ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿ ಎರಡು ಪಿಎಫ್ ಖಾತೆಗಳು ಇರುವ ಸಂಗತಿ ಬೆಳಕಿಗೆ ಬಂದಿತ್ತು. ಆದರೆ ಪಿಎಫ್ ಅಧಿಕಾರಿಗಳು ಈವರೆಗೆ ಈ ಅಂಶವನ್ನು ದೃಢಪಡಿಸಿಲ್ಲ’ ಎಂದು ಮೆಹ್ತಾ ಹೇಳಿದ್ದಾರೆ. ‘ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಪಿಎಫ್ ಖಾತೆಗಳಿರುವ ಕಂಪನಿಗಳಿಗೆ ವರದಿ ಮಾಡಿದ ನಂತರ ಮೂನ್ಲೈಟರ್ಗಳು ಕಟ್ಟಿಕೊಂಡಿದ್ದ ಭಾನುಮತಿ ಕಾ ಕುನಾಬಾ (ಕನಸಿನ ಗೋಪುರ) ಕುಸಿದು ಬಿತ್ತು’ ಎಂದು ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.
ಈ ನಿಲುವಿಗೆ ಬರಲು ಏನು ಕಾರಣ ಎಂಬ ಬಗ್ಗೆ ಮೆಹ್ತಾ ಯಾವುದೇ ವಿವರಣೆ ನೀಡಿಲ್ಲ. ಆದರೆ ಅವರ ಟ್ವೀಟ್ಗೆ ಕೇವಲ ಒಂದು ಗಂಟೆಯ ಒಳಗೆ 10,000 ಕ್ಕೂ ಹೆಚ್ಚು ಕಾಮೆಂಟ್ಗಳು ಬಂದು, ವೈರಲ್ ಆಯಿತು. ‘ವಿಪ್ರೋ ಕಂಪನಿಯಲ್ಲಿ ಮೂನ್ಲೈಟ್ ಬೆಳಕಿಗೆ ಬರಲು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮ ಮತ್ತು ಪರಸ್ಪರ ಸಂಪರ್ಕಗೊಂಡಿರುವ ದತ್ತಾಂಶಗಳೇ ಮುಖ್ಯ ಕಾರಣ. ಭ್ರಷ್ಟಾಚಾರ ನಿರ್ಮೂಲಗೊಳಿಸಲು ಇದು ನೆರವಾಗುತ್ತಿದೆ’ ಎಂದು ಮೆಹ್ತಾ ಹೇಳಿದ್ದಾರೆ.
ಮೂನ್ಲೈಟಿಂಗ್ ಬಗ್ಗೆ ವಿಪ್ರೋ ಮುಖ್ಯಸ್ಥ ರಿಷದ್ ಪೇಮ್ಜಿ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ‘ಇದು ಮೋಸ, ವಾರಾಂತ್ಯದಲ್ಲಿ ನೀವು ಸಂಗೀತ ಕಚೇರಿ ಕೊಡುವುದಕ್ಕೂ ನಮ್ಮ ಪ್ರತಿಸ್ಪರ್ಧಿಗಳೊಂದಿಗೆ ಕೆಲಸ ಮಾಡುವುದಕ್ಕೂ ವ್ಯತ್ಯಾಸವಿದೆ’ ಎಂಬ ನಿಲುವನ್ನು ಅವರು ಹಲವು ಬಾರಿ ಪುನರುಚ್ಚರಿಸಿದ್ದರು. ಇಂಥ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ ನಂತರ ದ್ವೇಷದ ಇಮೇಲ್ಗಳು ಬಂದಿವೆ ಎಂದು ಹೇಳಿಕೊಂಡಿದ್ದರು.
ಮೂನ್ಲೈಟಿಂಗ್ ಬಗ್ಗೆ ವಿಪ್ರೋ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ನಂತರ ಐಟಿ ಕ್ಷೇತ್ರದ ದಿಗ್ಗಜ ಕಂಪನಿಗಳಾದ ಐಬಿಎಂ ಮತ್ತು ಇನ್ಫೋಸಿಸ್ ಸಹ ಮೂನ್ಲೈಟಿಂಗ್ ಅನ್ನು ‘ಅನೈತಿಕ ಅಭ್ಯಾಸ’ ಎಂದು ಘೋಷಿಸಿದವು. ಕಳೆದ ಎರಡು-ಮೂರು ತಿಂಗಳುಗಳಿಂದ ಚಾಲ್ತಿಯಲ್ಲಿದ್ದ ಈ ಚರ್ಚೆಗೆ ಮೆಹ್ತಾ ಅವರ ವೈರಲ್ ಟ್ವೀಟ್ ಹೊಸ ತಿರುವು ಕೊಟ್ಟಿದೆ. ‘ಕಚೇರಿ ಅವಧಿ ಮುಗಿದ ನಂತರ ಸೃಜನಶೀಲತೆಯನ್ನು ಕಟ್ಟಿಹಾಕುವುದು ತಪ್ಪು. ತಮಗೆ ಸಾಮರ್ಥ್ಯವಿದ್ದು, ಹೆಚ್ಚುವರಿ ಕೆಲಸ ಮಾಡುವ ಮೂಲಕ ಕುಟುಂಬಗಳಿಗೆ ಉತ್ತಮ ಜೀವನ ದೊರಕಿಸಿಕೊಡಲು ವ್ಯಕ್ತಿಯೊಬ್ಬರು ಮುಂದಾದರೆ ಅದನ್ನು ಅನೈತಿಕ ಎಂದು ಕರೆಯುವುದು ತಪ್ಪಲ್ಲವೇ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Moonlight: ಅವಧಿ ಮೀರಿದ ಒತ್ತಾಯದ ದುಡಿಮೆ ಸರಿಯೇ; ಮೂನ್ಲೈಟ್ಗೆ ಕಂಪನಿಗಳ ವಿರೋಧದ ಬೆನ್ನಿಗೇ ಉದ್ಯೋಗಿಗಳಿಂದ ಮರುಪ್ರಶ್ನೆ