Personal Finance: ಕೊರೊನಾ ಕಲಿಸಿದ ಪಾಠ: ಮುಂದಿನ ತಲೆಮಾರಿಗೆ ಆಸ್ತಿಯ ಸುಗಮ ವರ್ಗಾವಣೆಗೆ ಹಲವು ಮಾರ್ಗಗಳು

Personal Finance: ಕೊರೊನಾ ಕಲಿಸಿದ ಪಾಠ: ಮುಂದಿನ ತಲೆಮಾರಿಗೆ ಆಸ್ತಿಯ ಸುಗಮ ವರ್ಗಾವಣೆಗೆ ಹಲವು ಮಾರ್ಗಗಳು
ಇವತ್ತಿಗೆ 1.61 ಕೋಟಿ ರೂಪಾಯಿ

ಸಾವಿನ ಬಗ್ಗೆ ಸಮಾಜದಲ್ಲಿ ಮೊದಲಿನಂತೆ ಹೆದರಿಕೆ ಇಲ್ಲ. ನಮ್ಮ ನಂತರ ನಮ್ಮ ಮಕ್ಕಳು, ಮೊಮ್ಮಕ್ಕಳು ನೆಮ್ಮದಿಯಾಗಿ ಬದುಕಬೇಕು ಎಂಬ ಕಾಳಜಿ ಸಮಾಜದಲ್ಲಿ ವ್ಯಕ್ತವಾಗುತ್ತಿದೆ.

Ghanashyam D M | ಡಿ.ಎಂ.ಘನಶ್ಯಾಮ

|

Aug 02, 2021 | 9:31 PM

ಕೊರೊನಾದ ಎರಡೂ ಅಲೆಗಳನ್ನು ನೋಡಿರುವ ರಾಜ್ಯದ ಜನತೆಗೆ ಸಾವಿನ ಭೀಕರತೆ ಹಿಂದೆಂದಿಗಿಂತಲೂ ಈಗ ಚೆನ್ನಾಗಿ ಅರ್ಥವಾಗಿದೆ. ಬಹುಶಃ ಇದಕ್ಕೇ ಇರಬೇಕು, ಕೊರೊನಾ 2ನೇ ಅಲೆ ಇಳಿಕೆಯ ನಂತರ ರಾಜ್ಯದ ವಿವಿಧೆಡೆ ಉಯಿಲು ಪತ್ರ (ವಿಲ್) ಬರೆಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸಾವಿನ ಬಗ್ಗೆ ಸಮಾಜದಲ್ಲಿ ಮೊದಲಿನಂತೆ ಹೆದರಿಕೆ ಇಲ್ಲ. ನಮ್ಮ ನಂತರ ನಮ್ಮ ಮಕ್ಕಳು, ಮೊಮ್ಮಕ್ಕಳು ನೆಮ್ಮದಿಯಾಗಿ ಬದುಕಬೇಕು ಎಂಬ ಕಾಳಜಿ ಸಮಾಜದಲ್ಲಿ ವ್ಯಕ್ತವಾಗುತ್ತಿದೆ.

ಆಸ್ತಿ ವರ್ಗಾವಣೆಗೆ ನೆರವಾಗುವ 7 ಮಾರ್ಗದರ್ಶಿ ಸೂತ್ರಗಳು ಇಲ್ಲಿವೆ.

1) ಆಸ್ತಿಗಳ ಪಟ್ಟಿ ಮಾಡಿ: ನಿಮ್ಮ ನಂತರ ನಿಮ್ಮ ಆತ್ಮೀಯರು ಅನುಭವಿಸಬೇಕು ಎಂದು ನೀವು ಇಷ್ಟಪಡುವ ಆಸ್ತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿ. ಸ್ಥಿರಾಸ್ತಿಗಳ ಪಟ್ಟಿಯಿಂದ ಈ ಕೆಲಸ ಶುರು ಮಾಡುವುದು ಒಳಿತು. ನಂತರ ವಾಹನಗಳು, ಒಡವೆಗಳನ್ನು ಸೇರಿಸಿ.

2) ಹಣಕಾಸು ದಾಖಲೆಗಳು: ಸ್ಥಿರಾಸ್ತಿಗಳ ಪಟ್ಟಿಯ ನಂತರ ಹಣಕಾಸು ಉತ್ಪನ್ನಗಳ ಕಡೆಗೆ ಗಮನ ಹರಿಸಿ. ಬ್ಯಾಂಕ್ ಖಾತೆಗಳು, ಎಫ್​ಡಿ, ಆರ್​ಡಿ, ಚೀಟಿ, ಮ್ಯೂಚುವಲ್ ಫಂಡ್, ಷೇರುಗಳು ವಿವರವನ್ನು ಪಟ್ಟಿ ಮಾಡಿಕೊಳ್ಳಿ. ನಿಮ್ಮ ಪ್ರೀತಿಪಾತ್ರರು ಆರ್ಥಿಕವಾಗಿ ನಿಮ್ಮ ಮೇಲೆ ಅವಲಂಬಿತರಾಗಿದ್ದರೆ, ನಿಮ್ಮ ಅನುಪಸ್ಥಿತಿಯಲ್ಲಿ ಇಂಥ ಹಣದಿಂದ ಅವರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನುವುದನ್ನು ಮರೆಯಬೇಡಿ.

3) ಸಾಲದ ಪಟ್ಟಿಯೂ ಇರಲಿ: ನಾವು ಯಾರಿಂದಲಾದರೂ ಸಾಲ ಪಡೆದಿದ್ದರೆ ನಮ್ಮ ಮರಣದ ನಂತರವೂ ಅದರ ಬಾಧ್ಯತೆಯಿಂದ ತಪ್ಪಿಸಿಕೊಳ್ಳಲು ಆಗದು ಎನ್ನುವುದನ್ನು ನೆನಪಿಟ್ಟುಕೊಳ್ಳಿ. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ತೊಂದರೆಯಾಗಬಾರದು ಎಂದಿದ್ದರೆ ಸಾಲದ ವಿವರಗಳನ್ನೂ ಬರೆದಿಡಿ. ಇದರಲ್ಲಿ ಗೃಹ ಸಾಲದಂಥ ದೀರ್ಘಾವಧಿ ಸಾಲಗಳ ಜೊತೆಗೆ ಕ್ರೆಡಿಟ್ ಕಾರ್ಡ್​, ಕೈಸಾಲಗಳ ಮಾಹಿತಿಯೂ ಇರಲಿ.

4) ವಿಮೆ ಪಾಲಿಸಿಗಳು: ಜೀವ ವಿಮಾ ಪಾಲಿಸಿಗಳನ್ನು ಖರೀದಿಸುವುದೇ ನಮ್ಮ ಅನುಪಸ್ಥಿತಿಯಲ್ಲಿ ನಮ್ಮ ಪ್ರೀತಿಪಾತ್ರರಿಗೆ ಆರ್ಥಿಕ ಅಭದ್ರತೆ ಕಾಡಬಾರದು ಎನ್ನುವ ಕಾರಣಕ್ಕೆ. ಆದರೆ ಎಷ್ಟೋ ಮನೆಗಳಲ್ಲಿ ಪತಿ ಅಥವಾ ಪತ್ನಿ ಮಾಡಿಸಿರುವ ವಿಮೆಯ ಮಾಹಿತಿ ಸಂಗಾತಿಗೆ ಇರುವುದೇ ಇಲ್ಲ. ಇದಕ್ಕಿಂತ ದೊಡ್ಡ ವಿಪರ್ಯಾಸ ಇನ್ನೊಂದು ಉಂಟೆ. ಕೆಲವೊಮ್ಮೆ ಬ್ಯಾಂಕ್​ಗಳಿಂದಲೂ ವಿಮಾ ಸೌಲಭ್ಯ ಕೊಡುಗೆಗಳಾಗಿ ಬಂದಿರುತ್ತವೆ. ಇಂಥವನ್ನೂ ವಿಮೆಯ ಪಟ್ಟಿಯಲ್ಲಿ ಸೇರಿಸಿಡಿ.

5) ಉಪಯುಕ್ತ ಮಾಹಿತಿಗಳನ್ನು ನಮೂದಿಸಿ: ಮೇಲಿನ ನಾಲ್ಕು ಪಟ್ಟಿ ಸಿದ್ಧಪಡಿಸಿದರೆ ಅರ್ಧ ಕೆಲಸವಾದಂತೆ. ಆದರೆ ಮಾಡಬೇಕಾದ ಮತ್ತೊಂದು ಮುಖ್ಯ ಕೆಲಸವಿದೆ. ಒಂದು ಹಾಳೆಯ ಮೇಲೆ ಬ್ಯಾಂಕ್ ಹೆಸರು, ಅದರಲ್ಲಿರುವ ಹಣ ಯಾರಿಗೆ ಸೇರಬೇಕೆಂದು ನೀವು ಬಯಸುತ್ತೀರಿ ಎಂದು ಬರೆದರೆ ಸಾಲದು. ಬ್ಯಾಂಕ್​ ಖಾತೆಯ ವಿವರ, ಅದರಲ್ಲಿರುವ ಹಣದ ಎಷ್ಟು ಪಾಲು ಯಾರಿಗೆ ಎಂಬ ಮಾಹಿತಿಯ ಜೊತೆಗೆ ನಿಮಗೆ ಪರಿಚಿತರಿರುವ ಅಥವಾ ಮ್ಯಾನೇಜರ್​ರ ಸಂಪರ್ಕ ಸಂಖ್ಯೆಯೂ ಇರಲಿ. ಇದೇ ರೀತಿ ಮ್ಯೂಚುವಲ್ ಫಂಡ್​ಗಳಲ್ಲಿ ಹೂಡಿಕೆಯಿದ್ದರೆ ಫೋಲಿಯೊ ಸಂಖ್ಯೆ, ಫಂಡ್ ಹೆಸರನ್ನು ನಮೂದಿಸಿ, ಷೇರುಪೇಟೆಯಲ್ಲಿದ್ದರೆ ಡಿಮಾಟ್ ಸಂಖ್ಯೆಯ ಜೊತೆಗೆ ಬ್ರೋಕರ್ ವಿವರ ಬರೆದಿಡಿ. ವಿಮಾ ಏಜೆಂಟರ ಮಾಹಿತಿಯೂ ನಿಮ್ಮ ಆಪ್ತರಿಗೆ ಸುಲಭದಲ್ಲಿ ಸಿಗುವಂತೆ ಇರಲಿ.

6) ನಾಮಿನಿ ವಿವರ ಸರಿಯಿದೆಯೇ ಗಮನಿಸಿ: ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಗಳಿಕೆ ಯಾರಿಗೆ ಸೇರಬೇಕು ಎಂಬುದನ್ನು ನಾಮ ನಿರ್ದೇಶನದ ಆಯ್ಕೆಯು ನಿರ್ಧರಿಸುತ್ತದೆ. ಹೂಡಿಕೆದಾರರು ನಿಧನರಾದರೆ ಅವರ ಹೂಡಿಕೆಯ ಮೊತ್ತವನ್ನು ಹಣಕಾಸು ಸಂಸ್ಥೆಗಳು ಅವಲಂಬಿತರಿಗೆ ಸುಲಭವಾಗಿ ವರ್ಗಾವಣೆ ಮಾಡಲು ನಾಮ ನಿರ್ದೇಶನ ಸೌಲಭ್ಯ ನೆರವಾಗುತ್ತದೆ. ‘ನಮ್ಮ ಮನೆಯವರು ದುಡ್ಡು ನಮಗೆ ಕೊಡಲು ಈ ಬ್ಯಾಂಕ್​ನವರು ಸತಾಯಿಸ್ತಾರೆ’ ಎಂದು ಬಹಳಷ್ಟು ಜನರು ನಿಂದಿಸುತ್ತಾರೆ. ಗ್ರಾಹಕರಿಗೆ ತೊಂದರೆ ಕೊಡಬೇಕು ಎನ್ನುವುದು ಖಂಡಿತ ಅವರ ಉದ್ದೇಶವಾಗಿರುವುದಿಲ್ಲ. ಆದರೆ ಕಠಿಣ ನಿಯಮಗಳ ಎದುರು ಅವರೂ ಅಸಹಾಯಕರಾಗಿರುತ್ತಾರೆ.

ನಾಮ ನಿರ್ದೇಶನ ಮತ್ತು ವಿಲ್ ಇಲ್ಲದೆ ಖಾತೆದಾರರು ಮೃತಪಟ್ಟವರೆ ಬಹುತೇಕ ಸಂದರ್ಭಗಳಲ್ಲಿ ವಾರಸುದಾರರು ನ್ಯಾಯಾಲಯದಿಂದ ಆದೇಶ ತಂದ ನಂತರವೇ ಹಣ ಬಿಡುಗಡೆ ಮಾಡಲಾಗುತ್ತದೆ. ಇಂಥ ಸಂದರ್ಭದಲ್ಲಿ ಕಾನೂನು ಪ್ರಕಾರ ವಾರಸುದಾರರಾಗಿರುವ ಎಲ್ಲರೂ ಹಣ ವರ್ಗಾವಣೆಗೆ ಒಪ್ಪಿಗೆ ಪತ್ರ ನೀಡುವ ಜೊತೆಗೆ ಮುಂದಿನ ದಿನಗಳಲ್ಲಿ ಈ ಕುರಿತು ಹಣಕಾಸು ಸಂಸ್ಥೆಯೊಂದಿಗೆ ವ್ಯಾಜ್ಯ ಮಾಡುವುದಿಲ್ಲ ಎಂಬ ಮುಚ್ಚಳಿಕೆ ಕೊಡಬೇಕಾಗುತ್ತದೆ.

7) ವಿಲ್ ಬರೆದಿಡಿ: ವಿಲ್​ ಎಂಬ ಇಂಗ್ಲಿಷ್ ಪದವನ್ನು ಕನ್ನಡಕ್ಕೆ ಅನುವಾದಿಸಿಕೊಂಡು ಯೋಚಿಸಿ. ‘ಇಚ್ಛಾಶಕ್ತಿ’ ಎಂಬ ಅದ್ಭುತ ಪದವೊಂದು ಹೊಳೆಯುತ್ತದೆ. ನಾವೆಲ್ಲರೂ ನಮ್ಮ ಇಚ್ಛಾಶಕ್ತಿಯನ್ನು ಅಂದರೆ ವಿಲ್​ ಪವರ್​ ಮೇಲೆಯೇ ಬದುಕುತ್ತಿದ್ದೇವೆ. ನಮ್ಮ ನಂತರವೂ ಇದು ಮುಂದುವರಿಯಬೇಕು ಎನ್ನುವುದೇ ವಿಲ್​ ದಾಖಲೆ ಅಥವಾ ಉಯಿಲು ಪತ್ರದ ಆಶಯವಾಗಿರುತ್ತದೆ. ಜೀವನದಲ್ಲಿ ಒಂದು ಹಂತ ದಾಟಿದ ನಂತರ ಸಿದ್ಧಪಡಿಸಲೇಬೇಕಾದ ಅನಿವಾರ್ಯ ದಾಖಲೆಯಿದು. ಕಾರು, ಒಡವೆಗಳು, ಮನೆ, ಭೂಮಿಗೆ ನಾಮನಿರ್ದೇಶನ ಸೌಲಭ್ಯವಿಲ್ಲ. ಇಂಥ ಸಂದರ್ಭದಲ್ಲಿ ವಿಲ್ (ಉಯಿಲು) ದಾಖಲೆ ಸೇರಬೇಕಾದವರಿಗೆ ಸೇರಬೇಕಾದ ಆಸ್ತಿಯನ್ನು ತಲುಪಿಸಲು ನೆರವಾಗುತ್ತದೆ. ನಾಮನಿರ್ದೇಶನ ಮಾಡಿದ್ದರೂ ವಿಲ್​ ಬೇರೆ ರೀತಿಯದ್ದಾಗಿದ್ದರೆ, ವಿಲ್ ದಾಖಲೆಯೇ ನ್ಯಾಯಾಲಯದಲ್ಲಿ ಊರ್ಜಿತವಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.

(ಮುಂದುವರಿಯಲಿದೆ)

ಇದನ್ನೂ ಓದಿ: stock market investor: ವ್ಯಕ್ತಿಯ ಸಾವಿನ ನಂತರ ಷೇರು ವರ್ಗಾವಣೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಇದನ್ನೂ ಓದಿ: Estate planning: ಏನಿದು ಎಸ್ಟೇಟ್ ಪ್ಲಾನಿಂಗ್ ಸಂಗತಿ, ಇದು ನಿಮಗೆ ಗೊತ್ತಿರಲೇಬೇಕಾದ ಮಾಹಿತಿ

(Importance of will and nominee to financial instruments smooth passing of assets)

Follow us on

Related Stories

Most Read Stories

Click on your DTH Provider to Add TV9 Kannada