ಭಾರತ ಮತ್ತು ಅಮೆರಿಕ ಆರ್ಥಿಕತೆ ಮಧ್ಯೆ ಎಷ್ಟೊಂದು ಸಾಮ್ಯತೆ ಇದೆ ಗೊತ್ತಾ? ಹುಳುಕು, ತಳುಕು, ಬಳುಕು ಒಂದೇ
Similarities in India and America economies: ಅಮೆರಿಕ ವಿಶ್ವದ ಅತಿಹಳೆಯ ಪ್ರಜಾಪ್ರಭುತ್ವದ ದೇಶ. ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಭಾರತ ಮತ್ತು ಅಮೆರಿಕ ದೇಶಗಳಲ್ಲಿ ಮೇಲಿನ ಶೇ. 10ರಷ್ಟು ಜನರ ಆದಾಯ ಮತ್ತು ಕೆಳಗಿನ ಶೇ. 90ರಷ್ಟು ಜನರ ಆದಾಯದ ಮಧ್ಯೆ ಬಹಳ ದೊಡ್ಡ ಅಂತರ ಇದೆ. ಕೋವಿಡ್ ನಿಂದ ಎರಡೂ ದೇಶಗಳು ಭಾರೀ ಬಾಧಿತವಾಗಿದ್ದವು. ಬಳಿಕ ಕ್ಷಿಪ್ರವಾಗಿ ಚೇತರಿಕೆ ಕಂಡವು.

ಭಾರತ ಮತ್ತು ಅಮೆರಿಕ ಮಧ್ಯೆ ಸಾಮ್ಯತೆಗಳೇನು ಎಂದು ಕೇಳಿದರೆ, ಯಾರಾದರೂ ಸರಿ ಈ ಎರಡೂ ದೇಶಗಳು ಪ್ರಜಾಪ್ರಭುತ್ವ ವ್ಯವಸ್ಥೆ (democracy) ಹೊಂದಿರುವುದನ್ನು ತಿಳಿಸಬಹುದು. ಅಮೆರಿಕ ವಿಶ್ವದ ಅತಿಹಳೆಯ ಪ್ರಜಾಪ್ರಭುತ್ವ ದೇಶ. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶ. ಈಗ ಎರಡೂ ಕಡೆ ಬಲಪಂಥೀಯರ ಆಳ್ವಿಕೆ ಇರುವುದು ರಾಜಕೀಯವಾಗಿ ಕಾಣುವ ಸಾಮ್ಯತೆ. ಆರ್ಥಿಕವಾಗಿಯೂ ಈ ಎರಡು ದೇಶಗಳ ಮಧ್ಯೆ ಸಾಮ್ಯತೆಗಳಿರುವುದನ್ನು ನಾವು ಗುರುತಿಸಬಹುದು. ಎಲ್ಲಿ 33 ಟ್ರಿಲಿಯನ್ ಡಾಲರ್ ಆರ್ಥಿಕತೆ, ಎಲ್ಲಿ 4 ಟ್ರಿಲಿಯನ್ ಆರ್ಥಿಕತೆ, ಎತ್ತಣದಿಂದೆತ್ತಣ ಸಂಬಂಧ ಎಂದನಿಸಬಹುದು. ಆದರೆ, ನಿಜವಾಗಿಯೂ ಈ ಎರಡು ದೇಶಗಳ ಆರ್ಥಿಕತೆ ಮತ್ತು ಆರ್ಥಿಕ ಪ್ರಗತಿ ವಿಚಾರದಲ್ಲಿ ಕೆಲ ಮಹತ್ವದ ಸಾಮ್ಯತೆಗಳಿವೆ.
ಶ್ರೀಮಂತರಿಂದಲೇ ಅತಿಹೆಚ್ಚು ಅನುಭೋಗ ಮತ್ತು ವೆಚ್ಚ
ಭಾರತ ಮತ್ತು ಅಮೆರಿಕದಲ್ಲಿ ಮೇಲಿನ ಶೇ. 10ರಷ್ಟು ಶ್ರೀಮಂತರಿಂದಲೇ ಬಹುಪಾಲು ಅನುಭೋಗ (consumption) ಬರುತ್ತಿದೆ. ಅತಿಹೆಚ್ಚು ಖರೀದಿ ಆಗುತ್ತಿರುವುದು ಇವರುಗಳಿಂದಲೇ. ಉಳಿದ ಶೇ 90ರಷ್ಟು ಜನರು ಖರ್ಚು ಮಾಡಲು ಸಾಕಷ್ಟು ಮೀನ ಮೇಷ ಎಣಿಸುತ್ತಾರೆ ಎಂಬುದು ವಿವಿಧ ಸಮೀಕ್ಷೆಗಳಿಂದ ತಿಳಿದುಬರುತ್ತದೆ.
ಇದನ್ನೂ ಓದಿ: ಅಮೆರಿಕಕ್ಕೆ ಹೋಗಲು ಇಬಿ-5 ವೀಸಾ ಬದಲು ಹೊಸ ಗೋಲ್ಡ್ ಕಾರ್ಡ್: ಬೆಲೆ 5 ಮಿಲಿಯನ್ ಡಾಲರ್
ಕೋವಿಡ್ ನಂತರದ ಆರ್ಥಿಕ ಚೇತರಿಕೆ
ಕೋವಿಡ್ ಸಾಂಕ್ರಾಮಿಕ ರೋಗದ ವಿಚಾರದಲ್ಲೂ ಭಾರತ ಮತ್ತು ಅಮೆರಿಕ ಮಧ್ಯೆ ಸಾಮ್ಯತೆಗಳಿದ್ದುವು. ಎರಡೂ ದೇಶಗಳು 2020-21ರಲ್ಲಿ ಆರ್ಥಿಕವಾಗಿ ಆಘಾತಗೊಂಡವು. ಸರ್ಕಾರಗಳು ಬಹಳ ತೀವ್ರ ರೀತಿಯಲ್ಲಿ ವೆಚ್ಚ ಮಾಡಿದವು. ಬ್ಯಾಂಕ್ ದರಗಳು ತೀರಾ ಕಡಿಮೆಗೊಂಡವು. ಈ ಕ್ರಮಗಳಿಂದಾಗಿ ಬ್ಯಾಂಕುಗಳಿಂದ ಸಾಲ ವಿತರಣೆ ಹೆಚ್ಚಾಯಿತು. ಜನರ ಕೈಯಲ್ಲಿ ಹೆಚ್ಚು ಹಣ ಹರಿದಾಡಿತು. ವೆಚ್ಚವೂ (spending) ಹೆಚ್ಚಾಯಿತು. ಹೀಗಾಗಿ, ಎರಡೂ ದೇಶಗಳ ಆರ್ಥಿಕತೆಗಳು ಕುಸಿದಷ್ಟೇ ವೇಗವಾಗಿ ಚೇತರಿಸಿಕೆ ಕಂಡವು.
ಹಣದುಬ್ಬರ ಮತ್ತು ಹಣಕಾಸು ಬಿಗಿ
ಕೋವಿಡ್ ನಂತರ ಸರ್ಕಾರಗಳು ಕೈಗೊಂಡ ಕ್ರಮಗಳ ಪರಿಣಾಮವಾಗಿ ಅನುಭೋಗ ಹೆಚ್ಚಾಯಿತು. ಹಣದ ಸರಬರಾಜು ಕೂಡ ಹೆಚ್ಚಾಯಿತು. ಇದರಿಂದಾಗಿ ಎರಡೂ ದೇಶಗಳಲ್ಲಿ ಹಣದುಬ್ಬರ ಏರಿಕೆ ಆಯಿತು. ಅದರ ಬೆನ್ನಲ್ಲೇ ಸೆಂಟ್ರಲ್ ಬ್ಯಾಂಕುಗಳು ಹಣಕಾಸು ಬಿಗಿತ (monetary tightening) ಮಾಡಿದವು. ರಿಪೋ ದರ ಅಥವಾ ಬ್ಯಾಂಕ್ ದರಗಳು ನಿರಂತರವಾಗಿ ಏರಿಕೆಯಾದವು. ಈ ಮೂಲಕ ಎರಡೂ ದೇಶಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಂದಿತು. ಈಗ ಎರಡೂ ಕಡೆ ಬಡ್ಡಿದರ ಸಡಿಲಿಕೆ ಕ್ರಮ ಆರಂಭವಾಗಿದೆ.
ಇದನ್ನೂ ಓದಿ: ಕೋಟಿ ಕೋಟಿ ಕುಬೇರನಿಗೆ ಚಿಲ್ಲರೆ ಕಾಟ; ಅಮೆರಿಕಕ್ಕೆ ಪೆನ್ನಿ ಸಂಕಟ
ದೇಶದೊಳಗೆ ಆಂತರಿಕವಾಗಿ ಆದಾಯ ಅಂತರ
ಭಾರತದಲ್ಲಿ ಮೇಲಿನ ಶೇ. 10ರಷ್ಟು ಜನರ ಕೈಯಲ್ಲಿ ಶೇ. 90ಕ್ಕಿಂತಲೂ ಹೆಚ್ಚು ಸಂಪತ್ತು ಇದೆ ಎಂದು ವಿವಿಧ ವರದಿಗಳು ಹೇಳುತ್ತವೆ. ಭಾರತ ಮಾತ್ರವಲ್ಲ, ಅಮೆರಿಕದಲ್ಲೂ ಇದೇ ಪರಿಸ್ಥಿತಿ ಇದೆ. ಹಾಗೆಯೇ, ದೇಶದಲ್ಲಿ ಅತಿಹೆಚ್ಚು ಅನುಭೋಗ ಆಗುತ್ತಿರುವುದು ಈ ಅತಿದೊಡ್ಡ ಶ್ರೀಮಂತರಿಂದಲೇ. ಆರ್ಥಿಕ ಚಟುವಟಿಕೆಯಲ್ಲಿ ಬಹುಸಂಖ್ಯಾ ಜನರ ಪಾಲ್ಗೊಳ್ಳುವಿಕೆ ಕಡಿಮೆಯೇ ಇರುವ ಲಕ್ಷಣ ಭಾರತ ಮತ್ತು ಅಮೆರಿಕ ದೇಶಗಳಲ್ಲಿ ತೋರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ