ನವದೆಹಲಿ, ಫೆಬ್ರುವರಿ 29: ಭಾರತದ ಆರ್ಥಿಕತೆ ಮತ್ತೊಮ್ಮೆ ಎಲ್ಲರ ನಿರೀಕ್ಷೆಗಳನ್ನು ಮೀರಿಸಿ ವೇಗವಾಗಿ ಬೆಳೆದಿದೆ. 2023-24ರ ಹಣಕಾಸು ವರ್ಷದ ಮೂರನೇ ಕ್ವಾರ್ಟರ್ಗೆ (2023-24 Q3) ವಿವಿಧ ಆರ್ಥಿಕ ತಜ್ಞರ ಎಣಿಕೆ ತಲೆಕೆಳಗಾಗಿದೆ. ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಆರ್ಥಿಕತೆ (Indian Economy) ಶೇ. 8.4ರಷ್ಟು ಬೆಳೆದಿದೆ. ನಿನ್ನೆಯವರೆಗೂ ಹಲವು ಆರ್ಥಿಕ ತಜ್ಞರು ಆ ಕ್ವಾರ್ಟರ್ನಲ್ಲಿ ಶೇ. 6ರಿಂದ 7ರಷ್ಟು ಬೆಳೆಯಬಹುದು ಎಂದು ಅಂದಾಜು ಮಾಡಿದ್ದರು. ಆರ್ಬಿಐ ಮಾಡಿದ ಅಂದಾಜು ಕೂಡ ಶೇ. 7ರ ಆಸುಪಾಸು ಇತ್ತು. ಹೀಗಾಗಿ, ಭಾರತದ ನೈಜ ಜಿಡಿಪಿ ವೃದ್ಧಿ ಎಲ್ಲರನ್ನೂ ಅಚ್ಚರಿಗೊಳಿಸುವಷ್ಟು ಹೆಚ್ಚಿನ ಮಟ್ಟದಲ್ಲಿ ಇದೆ.
ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳೆದಿತ್ತು. ಎರಡನೇ ಕ್ವಾರ್ಟರ್ನಲ್ಲಿ ಶೇ. 7.6 ರಷ್ಟು ಬೆಳೆದಿದೆ. ಮೂರನೇ ಕ್ವಾರ್ಟರ್ ಇನ್ನೂ ಹೆಚ್ಚಿನ ಅಚ್ಚರಿ ಮೂಡಿಸಿದೆ. ಒಟ್ಟಾರೆ ಈ ಹಣಕಾಸು ವರ್ಷದ ಮೊದಲ ಮೂರು ಕ್ವಾರ್ಟರ್ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಸರಾಸರಿಯಾಗಿ ಶೇ. 7.93ರಷ್ಟು ಇದೆ. ಅಂದರೆ ಶೇ. 8ಕ್ಕೆ ಸಮೀಪ ಇದೆ.
ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆಗೆ 75,000 ಕೋಟಿ ರೂ ಅನುದಾನ; ಕೇಂದ್ರ ಸಂಪುಟ ಒಪ್ಪಿಗೆ; ಒಂದು ಕೋಟಿ ಮನೆಗಳಿಗೆ ಸೋಲಾರ್ ಗುರಿ
‘2023-24ರ ಮೂರನೇ ಕ್ವಾರ್ಟರ್ನಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ ಇದೆ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ 40.35 ಲಕ್ಷ ಕೋಟಿ ರೂ ಇತ್ತು. ಈ ಬಾರಿ ಶೇ. 8.4ರಷ್ಟು ಹೆಚ್ಚಾಗಿದೆ,’ ಎಂದು ಸರ್ಕಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ಸಿಜಿಎ (ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್) ಬಿಡುಗಡೆ ಮಾಡಿದ ಮತ್ತೊಂದು ವರದಿಯಲ್ಲಿ ಜನವರಿವರೆಗಿನ ವಿತ್ತೀಯ ಕೊರತೆಯ ವಿವರ ನೀಡಿದೆ. 2023ರ ಏಪ್ರಿಲ್ನಿಂದ 2024ರ ಜನವರಿವರೆಗೆ ವಿತ್ತೀಯ ಕೊರತೆ 11.03 ಲಕ್ಷ ಕೋಟಿ ರೂ ಇದೆ. ಇದು ಪರಿಷ್ಕೃತ ಗುರಿಯಲ್ಲಿ ಶೇ. 63.6ರಷ್ಟಿದೆ. ಈ ವರ್ಷದ ಅಂತ್ಯಕ್ಕೆ ಇನ್ನೂ ಎರಡು ತಿಂಗಳು ಇದೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ಟಾಟಾದ ಭಾರತದ ಮೊದಲ ವಾಣಿಜ್ಯ ಸೆಮಿಕಂಡಕ್ಟರ್ ಫ್ಯಾಬ್ ಘಟಕಕ್ಕೆ ಕೇಂದ್ರ ಅನುಮೋದನೆ
ವಿತ್ತೀಯ ಕೊರತೆ ಎಂದರೆ, ಸರ್ಕಾರಕ್ಕೆ ಬರುವ ಆದಾಯ ಮತ್ತು ಸರ್ಕಾರದಿಂದ ಆಗುವ ವೆಚ್ಚದ ನಡುವಿನ ಅಂತರ. ಹಣಕಾಸು ಶಿಸ್ತು ಕಾಯ್ದುಕೊಳ್ಳಲು ವಿತ್ತೀಯ ಕೊರತೆ ಪ್ರಮುಖ ಮಾನದಂಡವಾಗಿರುತ್ತದೆ.
ಎಪ್ರಿಲ್ನಿಂದ ಜನವರಿವರೆಗೆ ಒಟ್ಟು ಸ್ವೀಕೃತಿ 22.52 ಲಕ್ಷ ಕೋಟಿ ರೂ ಇದ್ದರೆ, ಒಟ್ಟು ವೆಚ್ಚ 33.55 ಲಕ್ಷ ಕೋಟಿ ರೂ ಇದೆ. ಸರ್ಕಾರಕ್ಕೆ ತೆರಿಗೆ ಇತ್ಯಾದಿ ಆದಾಯ ಹೆಚ್ಚಾದ ಹಿನ್ನೆಲೆಯಲ್ಲಿ ವಿತ್ತೀಯ ಕೊರತೆ ತುಸು ಕಡಿಮೆ ಆಗಲು ಕಾರಣವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:01 pm, Thu, 29 February 24