ಚೀನಾದ ಉಕ್ಕಿನ ಸರಬರಾಜಿಗೆ ಭಾರತದಲ್ಲಿ ನಿರ್ಬಂಧ; ಇನ್ನೂ ಐದು ವರ್ಷ ಸುರಿವಿರೋಧಿ ಸುಂಕ ಹೇರಿಕೆ
Anti-dumping Duty on Chinese steel Imports: ಭಾರತಕ್ಕೆ ಅತಿಹೆಚ್ಚು ಉಕ್ಕು ಉತ್ಪನ್ನಗಳನ್ನು ರಫ್ತು ಮಾಡುವ ಚೀನಾದಿಂದ ಸ್ಥಳೀಯ ಉಕ್ಕು ಉದ್ಯಮಕ್ಕೆ ಅಪಾಯ ಆಗುವುದನ್ನು ತಪ್ಪಿಸಲು ಸರ್ಕಾರ ಆ್ಯಂಟಿ ಡಂಪಿಂಗ್ ಡ್ಯೂಟಿ ಕ್ರಮ ಕೈಗೊಂಡಿದೆ. ಇನ್ನೂ 5 ವರ್ಷ ಕಾಲ ಚೀನಾದ ಕೆಲ ಉಕ್ಕು ಆಮದುಗಳ ಮೇಲೆ ಸುರಿವಿರೋಧಿ ಸುಂಕ ಹೇರಿದೆ. ಫ್ಲ್ಯಾಟ್ ಬೇಸ್ ಸ್ಟೀಲ್ ವೀಲ್ಗಳ ಮೇಲೆ ಪ್ರತೀ ಟನ್ಗೆ 613 ಡಾಲರ್ನಷ್ಟು ಸುಂಕ ವಿಧಿಸಲಾಗಿದೆ.
ನವದೆಹಲಿ, ಸೆಪ್ಟೆಂಬರ್ 12: ಭಾರತದ ಉಕ್ಕು ಉದ್ಯಮದ ಆರೋಗ್ಯ ಕಾಪಾಡುವ ಉದ್ದೇಶದಿಂದ ಭಾರತ ಉಕ್ಕು ಆಮದು ನಿರ್ಬಂಧಗಳನ್ನು ಮುಂದುವರಿಸಲು ನಿರ್ಧರಿಸಿದೆ. ಚೀನಾದ ಕೆಲ ಉಕ್ಕು ಉತ್ಪನ್ನಗಳ ಆಮದಿನ ಮೇಲೆ ಸುರಿ ವಿರೋಧಿ ಸುಂಕವನ್ನು (Andi Dumping Duty) ಭಾರತ ಮತ್ತೆ 5 ವರ್ಷ ಮುಂದುವರಿಸಿದೆ. ಚಪ್ಪಟೆ ಉಕ್ಕಿನ ಚಕ್ರಗಳ (Flat Base Steel Wheel) ಮೇಲೆ ಪ್ರತೀ ಟನ್ಗೆ 613 ಡಾಲರ್ ಸುರಿ ವಿರೋಧಿ ಸುಂಕವನ್ನು ಹೇರಲಾಗಿದೆ. 2018ರಲ್ಲೂ ಇಂಥ ಸ್ಟೀಲ್ ವ್ಹೀಲ್ಗಳ ಆಮದಿನ ಮೇಲೆ ಸರ್ಕಾರ ಆ್ಯಂಟಿ ಡಂಪಿಂಗ್ ಡ್ಯೂಟಿ ವಿಧಿಸಿತ್ತು. ಈಗ ಇನ್ನೂ ಐದು ವರ್ಷ ಆ ಕ್ರಮವನ್ನು ಮುಂದುವರಿಸಲು ನಿರ್ಧರಿಸಿದೆ.
ಏನಿದು ಆ್ಯಂಟಿ ಡಂಪಿಂಗ್ ಡ್ಯೂಟಿ?
ಬಹಳ ಅಗ್ಗದ ಆಮದು ವಸ್ತುಗಳಿಂದ ಸ್ಥಳೀಯ ಉದ್ಯಮ ನಾಶವಾಗುವುದನ್ನು ತಪ್ಪಿಸಲು ಸರ್ಕಾರ ಸುರಿ ವಿರೋಧಿ ಸುಂಕ ಕ್ರಮವನ್ನು ಕೈಗೊಳ್ಳುತ್ತದೆ. ಅದರ ಪ್ರಕಾರ, ಬೇರೊಂದು ದೇಶದಿಂದ ಆಮದು ಮಾಡಿಕೊಳ್ಳಲಾದ ವಸ್ತುವಿನ ಬೆಲೆ ಸ್ಥಳೀಯ ಉದ್ಯಮಗಳಿಂದ ತಯಾರಾದ ವಸ್ತುವಿನ ಬೆಲೆಗಿಂತ ಕಡಿಮೆ ಆಗಿದ್ದರೆ ಈ ಸುಂಕ ವಿಧಿಸಬಹುದು.
ಇದನ್ನೂ ಓದಿ: ಮಹತ್ವಾಕಾಂಕ್ಷಿ ಕಾರಿಡಾರ್ ಯೋಜನೆ; ಸೌದಿ ಅರೇಬಿಯಾ ಜೊತೆ ಕಾರ್ಯಾಚರಣೆಗಿಳಿದ ಭಾರತ; 8 ಒಪ್ಪಂದಗಳಿಗೆ ಸಹಿ
ಚೀನಾದ ಉಕ್ಕಿನ ಉತ್ಪನ್ನಗಳು ಬಹಳ ಅಗ್ಗದ ಬೆಲೆಗೆ ದೊರೆಯುವುದರಿಂದ ಭಾರತದ ಉಕ್ಕು ಸಂಸ್ಥೆಗಳು ದಶಕದ ಹಿಂದೆ ಭಾರೀ ಕಷ್ಟಕ್ಕೆ ಸಿಲುಕಿದ್ದವು. ಹೀಗಾಗಿ, ಏಳೆಂಟು ವರ್ಷಗಳಿಂದಲೂ ಭಾರತ ಉಕ್ಕು ಉತ್ಪನ್ನಗಳ ಆಮದಿನ ಮೇಲೆ ಈ ಸುಂಕ ಹೇರುತ್ತಾ ಬಂದಿದೆ.
‘ಚೀನಾದ ರಫ್ತುದಾರರು ಮೂರನೇ ದೇಶಗಳಿಗೆ ಬಹಳ ಅಪಾಯಕಾರಿ ಬೆಲೆಗಳಿಗೆ ರಫ್ತು ಮಾಡುತ್ತಿರುವುದು ಕಂಡುಬಂದಿದೆ,’ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹಾಗೆಯೇ, ಸುರಿ ವಿರೋಧಿ ಸುಂಕ ಹೇರಿಕೆಯಿಂದ ಭಾರತೀಯ ಉದ್ಯಮಕ್ಕೆ ಹೆಚ್ಚೇನೂ ಅನುಕೂಲವನ್ನೂ ತರುವುದಿಲ್ಲ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಷೇರುಮಾರುಕಟ್ಟೆಯಲ್ಲಿ ಮಿಂಚಿನ ಸಂಚಾರ; ನಿಫ್ಟಿ ದಾಖಲೆ ಓಟ ಮುಂದುವರಿಕೆ; ಸೆನ್ಸೆಕ್ಸ್ ಕೂಡ ಹೆಚ್ಚಳ
ಕುತೂಹಲದ ಸಂಗತಿ ಎಂದರೆ ಚೀನಾದಿಂದ ಭಾರತಕ್ಕೆ ಆಗುತ್ತಿರುವ ಉಕ್ಕಿನ ರಫ್ತು ಪ್ರಮಾಣ ಮಾತ್ರ ಕಡಿಮೆ ಆಗುತ್ತಿಲ್ಲ. 2023ರ ಏಪ್ರಿಲ್ನಿಂದ ಜುಲೈವರೆಗೆ ಚೀನಾದಿಂದ ಭಾರತ ಆಮದು ಮಾಡಿಕೊಂಡ ಉಕ್ಕಿನ ಪ್ರಮಾಣ ಶೇ. 62ರಷ್ಟು ಹೆಚ್ಚಾಗಿದೆ. ಇದರೊಂದಿಗೆ ಭಾರತಕ್ಕೆ ಉಕ್ಕಿನ ರಫ್ತಿನಲ್ಲಿ ದಕ್ಷಿಣ ಕೊರಿಯಾವನ್ನು ಚೀನಾ ಮೀರಿಸಿದೆ.
ಭಾರತಕ್ಕೆ ಅತಿಹೆಚ್ಚು ಉಕ್ಕು ರಫ್ತು ಮಾಡುವ ದೇಶವಾಗಿದ್ದುದು ದಕ್ಷಿಣ ಕೊರಿಯಾ. ಅದರ ನಂತರದ ಸ್ಥಾನ ಚೀನಾದ್ದಾಗಿತ್ತು. ಈಗ ಕೊರಿಯಾವನ್ನು ಚೀನಾ ಹಿಂದಿಕ್ಕಿದೆ. ಕೋಲ್ಡ್ ರೋಲ್ಡ್ ಕಾಯಿಲ್ ಮತ್ತು ಶೀಟ್ಗಳನ್ನು ಚೀನಾ ಭಾರತಕ್ಕೆ ಹೆಚ್ಚಾಗಿ ರಫ್ತು ಮಾಡುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ