ಬ್ರಿಟನ್ನಿಂದ ಗುಳೆ ಹೊರಟ ಶ್ರೀಮಂತರ ಪಟ್ಟಿಗೆ ಭಾರತ ಮೂಲದ ಶ್ರವಿಣ್ ಸೇರ್ಪಡೆ; ಸಾಹುಕಾರರು ಯುಕೆ ಬಿಡಲು ಏನು ಕಾರಣ?
Know why rich people exiting United Kingdom: ಭಾರ್ತಿ ಏರ್ಟೆಲ್ನ ಮುಖ್ಯಸ್ಥ ಸುನೀಲ್ ಮಿಟ್ಟಲ್ ಅವರ 37 ವರ್ಷದ ಮಗ ಶ್ರವಿನ್ ಭಾರ್ತಿ ಮಿಟ್ಟಲ್ ಅವರು ತಮ್ಮ ನಿವಾಸವನ್ನು ಬ್ರಿಟನ್ನಿಂದ ಯುಎಇಗೆ ವರ್ಗಾಯಿಸಿದ್ದಾರೆ. ಯುಕೆಯಿಂದ ನಿರ್ಗಮಿಸುತ್ತಿರುವ ಶ್ರೀಮಂತರ ಪಟ್ಟಿಗೆ ಟೆಲಿಕಾಂ ಉದ್ಯಮಿ ಶ್ರವಿನ್ ಹೊಸ ಸೇರ್ಪಡೆಯಾಗಿದ್ದಾರೆ. ನಾನ್ ಡಾಮಿಸೈಲ್ ಟ್ಯಾಕ್ಸ್ ಸಿಸ್ಟಂನಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದ ಪರಿಣಾಮವಾಗಿ ಅನೇಕ ಶ್ರೀಮಂತರು ಬ್ರಿಟನ್ ತೊರೆದುಹೋಗುತ್ತಿದ್ದಾರೆ.

ಲಂಡನ್, ಮೇ 25: ಬ್ರಿಟನ್ನ ಶ್ರೀಮಂತರು ದೇಶ ತೊರೆದು ಹೋಗುತ್ತಿರುವುದು (rich people exiting UK) ಮುಂದುವರಿದಿದೆ. ಈ ಉದ್ದನೆಯ ಪಟ್ಟಿಗೆ ಶ್ರವಿಣ್ ಭಾರ್ತಿ ಮಿಟ್ಟಲ್ (Shravin Bharti Mittal) ಸೇರ್ಪಡೆಯಾಗಿದ್ದಾರೆ. ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಭಾರ್ತಿ ಮಿಟ್ಟಲ್ ಫ್ಯಾಮಿಲಿಯ ವಾರಸುದಾರರಲ್ಲೊಬ್ಬರೆನಿಸಿರುವ ಶ್ರವಿಣ್ ಅವರು ತಮ್ಮ ನಿವಾಸವನ್ನು ಬ್ರಿಟನ್ನಿಂದ ಯುಎಇಗೆ ವರ್ಗಾಯಿಸಿದ್ದಾರೆ.
37 ವರ್ಷದ ಶ್ರವಿನ್ ಭಾರ್ತಿ ಮಿಟ್ಟಲ್ ಅವರು ಏರ್ಟೆಲ್ ಸಂಸ್ಥಾಪಕ ಸುನೀಲ್ ಭಾರ್ತಿ ಮಿಟ್ಟಲ್ ಅವರ ಮಗ. ಬ್ರಿಟನ್ನ ಟೆಲಿಕಮ್ಯೂನಿಕೇಶನ್ ಕಂಪನಿಯಾದ ಬಿಟಿ ಗ್ರೂಪ್ನ (BT group) ಅತಿದೊಡ್ಡ ಷೇರುದಾರರಾಗಿದ್ದಾರೆ. ಭಾರ್ತಿ ಮಿಟ್ಟಲ್ ಕುಟುಂಬದ ಶ್ರೀಮಂತಿಕೆ ಬರೋಬ್ಬರಿ 27.2 ಬಿಲಿಯನ್ ಡಾಲರ್ನಷ್ಟಿದೆ.
ಸಾಲುಸಾಲಾಗಿ ಬ್ರಿಟನ್ ತೊರೆದುಹೋಗುತ್ತಿರುವ ಸಾಹುಕಾರರು…
ಬ್ರಿಟನ್ನಿಂದ ನಿರ್ಗಮಿಸುತ್ತಿರುವವರಲ್ಲಿ ಶ್ರವಿನ್ ಮೊದಲಿಗರಲ್ಲ. ನೂರಾರು ಶ್ರೀಮಂತರು ಇತ್ತೀಚಿನ ತಿಂಗಳುಗಳಿಂದ ಯುಕೆಯಿಂದ ಬೇರೆಡೆಗೆ ವಾಸಸ್ಥಳ ಬದಲಿಸಿಕೊಂಡಿದ್ದಾರೆ. ಈಜಿಪ್ಟ್ ಮೂಲದ ಶ್ರೀಮಂತ ನಾಸಫ್ ಸಾವಿರಿಸ್ ಅವರು ಅಬುಧಾಬಿ ಮತ್ತು ಇಟಲಿಗೆ ನಿವಾಸ ಬದಲಿಸಿಕೊಂಡಿದ್ದಾರೆ. ಲಜಾರಿ ಕುಟುಂಬದ ಲಿಯೋನಿಡಾಸ್ ಮತ್ತು ನಿಕೋಲಾಸ್ ಅವರು ಸೈಪ್ರಸ್ಗೆ ಹೋಗಿದ್ದಾರೆ. ಉಕ್ಕು ಉದ್ಯಮಿ ಹಾಗೂ ಭಾರತ ಮೂಲದವರೇ ಆದ ಲಕ್ಷ್ಮೀ ಮಿಟ್ಟಲ್ ಅವರೂ ಕೂಡ ಬ್ರಿಟನ್ ತೊರೆಯುತ್ತಿದ್ದಾರೆ.
ಇದನ್ನೂ ಓದಿ: ಜಪಾನ್ ಅನ್ನು ಹಿಂದಿಕ್ಕಿರುವ ಭಾರತ ಈಗ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯ ದೇಶವೆನಿಸಿದೆ: ನೀತಿ ಆಯೋಗ್ ಸಿಇಒ
ಲಿವಿಂಗ್ಸ್ಟೋನ್ ಕುಟುಂಬ, ರಿಚರ್ಡ್ ನೋಡ್ಡೆ, ಚಾರ್ಲೀ ಮುಲಿನ್ಸ್, ಕ್ರಿಸ್ಟಿಯನ್ ಆಂಗರ್ಮೇಯರ್, ಅಲನ್ ಹೋವರ್ಡ್, ಆಸಿಫ್ ಅಜೀಜ್ ಸೇರಿದಂತೆ ಸಾವಿರಾರು ಶ್ರೀಮಂತರು ಬ್ರಿಟನ್ನಿಂದ ಗುಳೆ ಹೊರಟಿದ್ದಾರೆ.
ಹೆನ್ಲೀ ಅಂಡ್ ಪಾರ್ಟ್ನರ್ಸ್ ವರದಿ ಪ್ರಕಾರ 2024ರಲ್ಲಿ 10,800 ಮಂದಿ ಮಿಲಿಯನೇರ್ಗಳು ಬ್ರಿಟನ್ ಬಿಟ್ಟು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಬ್ರಿಟನ್ ನಿರ್ಗಮಿಸುವವರ ಸಂಖ್ಯೆ ಇನ್ನೂ ಹೆಚ್ಚಲಿದೆಯಂತೆ.
ಬ್ರಿಟನ್ ಬಿಟ್ಟು ಹೋಗಲು ನಾನ್ ಡಾಮಿಸೈಲ್ ಟ್ಯಾಕ್ಸ್ ಬದಲಾವಣೆ ಕಾರಣ?
ಬ್ರಿಟನ್ ಸರ್ಕಾರ ನಾನ್ ಡಾಮಿಸೈಲ್ ಟ್ಯಾಕ್ಸ್ ಸಿಸ್ಟಂನಲ್ಲಿ (Non Domicile tax system) ಬದಲಾವಣೆ ತಂದಿರುವುದು ಹಲವು ಶ್ರೀಮಂತರ ವಲಸೆಗೆ ಕಾರಣವಾಗಿದೆ. ನಾನ್ ಡಾಮಿಸೈಲ್ ನಿವಾಸಿಗಳೆಂದರೆ ಎಂದರೆ ಬ್ರಿಟನ್ನಲ್ಲಿ ವಾಸಿಸುತ್ತಿದ್ದರೂ ಬೇರೆ ದೇಶಗಳಲ್ಲಿ ಖಾಯಂ ನಿವಾಸಿಗಳೆನಿಸಿದವರು. ಹಳೆಯ ಟ್ಯಾಕ್ಸ್ ಸಿಸ್ಟಂ ಪ್ರಕಾರ ಇವರು ಬ್ರಿಟನ್ನಲ್ಲಿ ಗಳಿಸಿದ ಆದಾಯಕ್ಕೆ ಮಾತ್ರ ಬ್ರಿಟನ್ ಟ್ಯಾಕ್ಸ್ ಸಿಸ್ಟಂ ಪ್ರಕಾರ ತೆರಿಗೆ ಕಟ್ಟಬಹುದು. ಅವರ ವಿದೇಶೀ ಆಸ್ತಿ ಮತ್ತು ಆದಾಯಗಳಿಗೆ ಇಲ್ಲಿ ಟ್ಯಾಕ್ಸ್ ಕಟ್ಟುವ ಅವಶ್ಯಕತೆ ಇರಲಿಲ್ಲ. ಬೇರೆ ದೇಶಗಳಿಂದ ಬ್ರಿಟನ್ನಲ್ಲಿರುವ ಇವರಿಗೆ ರೆಮಿಟೆನ್ಸ್ ಮೂಲಕ ಬರುವ ಹಣಕ್ಕೆ ರಿಯಾಯಿತಿಯೂ ನೀಡಲಾಗಿತ್ತು.
ಇದನ್ನೂ ಓದಿ: ಭಾರತ ಮಾತ್ರವಲ್ಲ, ಅಮೆರಿಕ ಬಿಟ್ಟು ಬೇರೆಲ್ಲೇ ಐಫೋನ್ ತಯಾರಿಸಿದ್ರೂ ಶೇ. 25 ಸುಂಕ: ಆ್ಯಪಲ್ಗೆ ಟ್ರಂಪ್ ಬೆದರಿಕೆ
ಆದರೆ, 2024ರ ಮಾರ್ಚ್ನಿಂದ ಬ್ರಿಟನ್ ಸರ್ಕಾರವು ಈ ನಾನ್ ಡಾಮಿಸೈಲ್ ಟ್ಯಾಕ್ಸ್ ಸಿಸ್ಟಂನಲ್ಲಿ ಬದಲಾವಣೆ ಮಾಡುತ್ತಾ ಬಂದಿದೆ. ಈಗ ಬಹುತೇಕ ಪೂರ್ಣವಾಗಿ ಈ ಸಿಸ್ಟಂ ಬದಲಾಗಿದೆ. 15 ವರ್ಷಗಳವರೆಗೆ ರೆಮಿಟೆನ್ಸ್ಗೆ ಟ್ಯಾಕ್ಸ್ ರಿಯಾಯಿತಿ ನೀಡಲಾಗುತ್ತಿದ್ದುದು ಈಗ 4 ವರ್ಷಕ್ಕೆ ಇಳಿಸಲಾಗಿದೆ. ಬ್ರಿಟನ್ನ ಸ್ಥಳೀಯ ನಿವಾಸಿಗಳಿಗೆ ಅನ್ವಯ ಆಗುವ ತೆರಿಗೆಯೇ ಈಗ ವಲಸಿಗ ನಿವಾಸಿಗಳಿಗೂ ಅನ್ವಯ ಆಗುತ್ತದೆ. ಇದರೊಂದಿಗೆ, ವಲಸಿಗರಿಗೆ ಬ್ರಿಟನ್ ನೀಡುತ್ತಿದ್ದ ಟ್ಯಾಕ್ಸ್ ಅನುಕೂಲ ನಿಂತಂತಾಗಿದೆ. ಇದು ಶ್ರೀಮಂತ ವಲಸಿಗರನ್ನು ಹೊರವಲಸೆಗೆ ಹೋಗಲು ಬಲವಂತಪಡಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Sun, 25 May 25