ಡಿಸೆಂಬರ್ ತ್ರೈಮಾಸಿಕಕ್ಕೆ GDP ಶೇ 0.4 ಪ್ರಗತಿ; ರಿಸೆಷನ್​ನಿಂದ ಹೊರಬಂದ ಭಾರತ

2020- 21ನೇ ಸಾಲಿನ ಮೂರನೇ ತ್ರೈಮಾಸಿಕವಾದ ಅಕ್ಟೋಬರ್​ನಿಂದ ಡಿಸೆಂಬರ್​ನಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದು, 0.4 ಪರ್ಸೆಂಟ್ ವಿಸ್ತರಣೆ ಆಗಿದೆ. ಆ ಮೂಲಕ ಆರ್ಥಿಕ ಕುಸಿತದಿಂದ ಹೊರಬಂದಿದೆ.

  • TV9 Web Team
  • Published On - 19:02 PM, 26 Feb 2021
ಡಿಸೆಂಬರ್ ತ್ರೈಮಾಸಿಕಕ್ಕೆ GDP ಶೇ 0.4 ಪ್ರಗತಿ; ರಿಸೆಷನ್​ನಿಂದ ಹೊರಬಂದ ಭಾರತ
ಪ್ರಾತಿನಿಧಿಕ ಚಿತ್ರ

ಭಾರತದ ಆರ್ಥಿಕತೆಯು 2020- 21ನೇ ಸಾಲಿನ ಮೂರನೇ ತ್ರೈಮಾಸಿಕವಾದ ಅಕ್ಟೋಬರ್​ನಿಂದ ಡಿಸೆಂಬರ್​ನಲ್ಲಿ ಸಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದು, 0.4 ಪರ್ಸೆಂಟ್ ವಿಸ್ತರಣೆ ಆಗಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆರ್ಥಿಕ ವರ್ಷದ ಮೊದಲ ಎರಡು ತ್ರೈಮಾಸಿಕದಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆ ದಾಖಲಾಗಿತ್ತು. ಇದೀಗ ಮೂರನೇ ತ್ರೈಮಾಸಿಕದಲ್ಲಿ ಪ್ರಗತಿ ಕಂಡುಬಂದಿರುವುದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ದತ್ತಾಂಶದಿಂದ ಶುಕ್ರವಾರ ತಿಳಿದುಬಂದಿದೆ. ಈ ಮೂಲಕ ಭಾರತ ತಾಂತ್ರಿಕ ಆರ್ಥಿಕ ಕುಸಿತದಿಂದ ಹೊರಬಂದಂತೆ ಆಗಿದೆ.

ಕಳೆದ ತ್ರೈಮಾಸಿಕದಲ್ಲಿ ಶೇ 0.4 ಪ್ರಗತಿ ಕಾಣುವ ಮೂಲಕ ಭಾರತದ ತಾಂತ್ರಿಕ ಆರ್ಥಿಕ ಕುಸಿತ ಕೊನೆಯಾಗಿದೆ. ಎನ್​ಎಸ್​ಒದಿಂದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕವಾದ ಏಪ್ರಿಲ್​ನಿಂದ ಜೂನ್ ತನಕದ ಜಿಡಿಪಿಯನ್ನು -24.3% ಹಾಗೂ ಜುಲೈನಿಂದ ಸೆಪ್ಟೆಂಬರ್ ತನಕದ ಜಿಡಿಪಿಯನ್ನು -7.5%ಗೆ ಪರಿಷ್ಕೃತಗೊಳಿಸಲಾಗಿದೆ. ಈ ಹಿಂದೆ ಕ್ರಮವಾಗಿ -23.9% ಹಾಗೂ -7.5% ಅಂದಾಜು ಮಾಡಲಾಗಿತ್ತು. FY21ಕ್ಕೆ ಜಿಡಿಪಿ 8% ಕುಗ್ಗಬಹುದು ಎಂದು ಎನ್​​ಎಸ್​ಒ ಅಂದಾಜಿಸಿದೆ. ಈ ಹಿಂದೆ 7.7% ಕುಗ್ಗಬಹುದು ಎಂಬ ಅಂದಾಜು ಮಾಡಲಾಗಿತ್ತು. ಮಾರ್ಚ್ ತ್ರೈಮಾಸಿಕದಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದ ಚೇತರಿಕೆ ಕಂಡುಬರುವ ಸಾಧ್ಯತೆ ಇರುವುದರಿಂದ ಈ ಬದಲಾವಣೆ ಆಗಿದೆ.

ICRA ಹಾಗೂ ಎಚ್​ಡಿಎಫ್​​ಸಿ ಬ್ಯಾಂಕ್ ಆರ್ಥಿಕ ಚಟುವಟಿಕೆ ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳಬಹುದು ಎಂದು ಅಂದಾಜು ಮಾಡಿದ್ದವು. ಅಷ್ಟೇ ಅಲ್ಲ, ಡಿಸೆಂಬರ್ ತ್ರೈಮಾಸಿಕಕ್ಕೆ ಕ್ರಮವಾಗಿ 0.7 ಪರ್ಸೆಂಟ್ ಹಾಗೂ 0.8 ಪರ್ಸೆಂಟ್ ಬೆಳವಣಿಗೆ ದಾಖಲಿಸುವ ಬಗ್ಗೆ ನಿರೀಕ್ಷೆ ಮಾಡಿದ್ದವು. ಇನ್ನು ಐಡಿಎಫ್​ಯಿಂದ 1.8% ಬೆಳವಣಿಗೆ ನಿರೀಕ್ಷೆ ಮಾಡಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಉತ್ಪಾದನೆ 1.6 ಪರ್ಸೆಂಟ್ ಬೆಳವಣಿಗೆ ಕಂಡಿದ್ದರೆ, ಸಾರ್ವಜನಿಕ ವೆಚ್ಚ 1.5% ಕುಸಿದಿದೆ. ಇದರಿಂದಾಗಿ ಒಟ್ಟಾರೆ ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಆಗುತ್ತದೆ. ವ್ಯಾಪಾರ, ಹೋಟೆಲ್, ಮಾಧ್ಯಮ, ಸಂವಹನ 7.7 ಪರ್ಸೆಂಟ್ ಕುಗ್ಗಿದೆ. ಇನ್ನು ಈ ತ್ರೈಮಾಸಿಕದಲ್ಲಿ ನಿರ್ಮಾಣ ಚಟುವಟಿಕೆ 6.2% ಬೆಳವಣಿಗೆಯೊಂದಿಗೆ ಮತ್ತೆ ಚೇತರಿಕೆ ಹಾದಿಗೆ ಮರಳಿದೆ.

ನಿರೀಕ್ಷೆಗಿಂತ ಜಿಡಿಪಿ ಬೆಳವಣಿಗೆ ಕಡಿಮೆ ಇರುವುದರಿಂದ ಹಣಕಾಸು ವರ್ಷ 2022ರ ಅಂದಾಜನ್ನು ವಿಶ್ಲೇಷಕರು ಪರಿಷ್ಕರಿಸಿಕೊಳ್ಳಬೇಕಾಗುತ್ತದೆ. ಈ ತನಕ FY22ಕ್ಕೆ ಮೂಡೀಸ್ ರೇಟಿಂಗ್ ಏಜೆನ್ಸಿ 13.7% ಆರ್ಥಿಕ ಬೆಳವಣಿಗೆ ಅಂದಾಜು ಮಾಡಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಆರ್ಥಿಕ ಸಮೀಕ್ಷೆಯು ಕ್ರಮವಾಗಿ 10.5% ಹಾಗೂ 11% ಬೆಳವಣಿಗೆ ದರವನ್ನು ಅಂದಾಜು ಮಾಡಿದ್ದವು. ಇದೇ ಅವಧಿಗೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) 11.5% ಜಿಡಿಪಿ ದರ ಅಂದಾಜಿಸಿದೆ.

ಇದನ್ನೂ ಓದಿ: Budget 2021 | ಮಂಡನೆಯಾಯ್ತು Economic Survey: ಕೃಷಿಯ ಭರವಸೆ, ಶೇ 11ರ ಜಿಡಿಪಿ ಪ್ರಗತಿ ನಿರೀಕ್ಷೆ