Sovereign Rating: ಭಾರತದ ಸವರನ್ ರೇಟಿಂಗ್ ಸ್ಥಿರಕ್ಕೆ ಅಪ್​ಗ್ರೇಡ್​ ಮಾಡಿದ ಮೂಡೀಸ್; ಏನಿದು Baa3 ರೇಟಿಂಗ್?

TV9 Digital Desk

| Edited By: Srinivas Mata

Updated on: Oct 05, 2021 | 11:23 PM

ಭಾರತದ ಸವರನ್ ರೇಟಿಂಗ್ ಅನ್ನು ಮೂಡೀಸ್ ರೇಟಿಂಗ್ ಏಜೆನ್ಸಿ ಅಪ್​ಗ್ರೇಡ್​ ಮಾಡಿದೆ. ಏನಿದರ ಮಹತ್ವ, ಹೀಗಂದರೆ ಏನು ಎಂಬಿತ್ಯಾದಿ ವಿವರಗಳು ಈ ವರದಿಯಲ್ಲಿದೆ.

Sovereign Rating: ಭಾರತದ ಸವರನ್ ರೇಟಿಂಗ್ ಸ್ಥಿರಕ್ಕೆ ಅಪ್​ಗ್ರೇಡ್​ ಮಾಡಿದ ಮೂಡೀಸ್; ಏನಿದು Baa3 ರೇಟಿಂಗ್?
ಪ್ರಾತಿನಿಧಿಕ ಚಿತ್ರ
Follow us

ಭಾರತದ ಸವರನ್ ರೇಟಿಂಗ್ ದೃಷ್ಟಿಕೋನವನ್ನು “ಋಣಾತ್ಮಕ”ದಿಂದ “ಸ್ಥಿರ”ಕ್ಕೆ ಬದಲಾಯಿಸಿದೆ ರೇಟಿಂಗ್ ಏಜೆನ್ಸಿಯಾದ ಮೂಡೀಸ್. ಇನ್ನು ದೇಶದ ರೇಟಿಂಗ್ ಅನ್ನು “Baa3″ನಲ್ಲಿ ದೃಢಪಡಿಸಿದೆ. ನೈಜ ಆರ್ಥಿಕತೆ ಮತ್ತು ಹಣಕಾಸು ವ್ಯವಸ್ಥೆಯ ಮಧ್ಯೆ ಋಣಾತ್ಮಕ ಪ್ರತಿಕ್ರಿಯೆಯಿಂದ ಭಾರತದ ಕೆಳಮಟ್ಟದ ಅಪಾಯಗಳು ಕಡಿಮೆಯಾಗುತ್ತಿವೆ. ಆದ್ದರಿಂದ “ಸ್ಥಿರ” ದೃಷ್ಟಿಕೋನಕ್ಕೆ ಅಪ್‌ಗ್ರೇಡ್ ಆಗಿದೆ ಎಂದು ರೇಟಿಂಗ್ ಏಜೆನ್ಸಿ ಹೇಳುತ್ತದೆ. ಆದರೂ ಹೆಚ್ಚಿನ ಸಾಲದ ಹೊರೆಯಿಂದ ಉಂಟಾಗುವ ಅಪಾಯಗಳು ಮತ್ತು ದುರ್ಬಲ ಸಾಲದ ಕೈಗೆಟುಕುವುದು ಹಾಗೇ ಉಳಿದಿದೆ. S&P ಭಾರತದ ಮೇಲೆ ಸ್ಥಿರವಾದ ರೇಟಿಂಗ್ ದೃಷ್ಟಿಕೋನವನ್ನು ಹೊಂದಿದ್ದರೆ, ಫಿಚ್ ನಕಾರಾತ್ಮಕ ದೃಷ್ಟಿಕೋನವನ್ನು ಹೊಂದಿದೆ. ಈ ಮಧ್ಯೆ, Baa3 ರೇಟಿಂಗ್‌ ದೃಢೀಕರಣವು ಮೂಡೀಸ್ ಹೇಳುವಂತೆ, ಭಾರತದ ಪ್ರಮುಖ ಸಾಲ ಸಾಮರ್ಥ್ಯವನ್ನು ಸಮತೋಲನಗೊಳಿಸುತ್ತದೆ. ಇದರಲ್ಲಿ ಹೆಚ್ಚಿನ ಬೆಳವಣಿಗೆಯ ಸಾಮರ್ಥ್ಯ ಹೊಂದಿರುವ ದೊಡ್ಡ ಮತ್ತು ವೈವಿಧ್ಯಮಯ ಆರ್ಥಿಕತೆ ಹಾಗೂ ತುಲನಾತ್ಮಕವಾಗಿ ಬಲವಾದ ಬಾಹ್ಯ ಸ್ಥಾನವಿದೆ. ಸವರನ್​ ರೇಟಿಂಗ್ ಅಂದರೆ ಒಂದು ದೇಶದ ಸಾಲದ ಸಾಮರ್ಥ್ಯ (ಕ್ರೆಡಿಟ್ ವರ್ಥಿನೆಸ್). ಈ ಮೂಲಕ ಹೂಡಿಕೆದಾರರಿಗೆ ಒಂದು ಅಂದಾಜು ಸಿಗುವಂತಾಗುತ್ತದೆ. ಆ ದೇಶದಲ್ಲಿನ ಸಾಲಪತ್ರಗಳಲ್ಲಿ ಹೂಡಿಕೆ ಮಾಡುವುದರಿಂದ ಇರುವ ಅಪಾಯಗಳು ಈ ರೇಟಿಂಗ್​ನಿಂದ ನಿರ್ಧಾರ ಆಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ರಾಜಕೀಯ ಅಪಾಯಗಳು ಸಹ ಒಳಗೊಂಡಿರುತ್ತವೆ.

ಒಂದು ದೇಶದ ಸಾಲದ ಸಾಮರ್ಥ್ಯವನ್ನು ಸ್ವತಂತ್ರವಾಗಿ ಕೆಲವು ಏಜೆನ್ಸಿಗಳು ಅಳೆಯುತ್ತವೆ. ಆ ನಂತರ ಅದನ್ನು ಪ್ರಕಟಿಸುತ್ತವೆ. ಅಂಥ ಏಜೆನ್ಸಿಗಳಲ್ಲಿ ಮೂಡೀಸ್​ಗೆ ಆದ್ಯತೆ ಇದೆ. “Baa3” ರೇಟಿಂಗ್ ಎಂಬುದು ಹೂಡಿಕೆಯಲ್ಲೇ ಕಡಿಮೆ ದರ್ಜೆಯದ್ದಾಗಿದೆ. ಇದು ಜಂಕ್ ಸ್ಥಿತಿಗಿಂತ ಸ್ವಲ್ಪ ಮೇಲಿರುತ್ತದೆ. ಮೂಡೀಸ್ ರೇಟಿಂಗ್​ ಏಜೆನ್ಸಿಯಿಂದ ಕಳೆದ ವರ್ಷ ಭಾರತದ ಸವರನ್ ರೇಟಿಂಗ್ ಅನ್ನು ‘Baa2’ನಿಂದ ‘Baa3’ಗೆ ಕಡಿಮೆ ಮಾಡಿತು. ಕಡಿಮೆ ಬೆಳವಣಿಯಿಂದ ನಿರಂತರವಾಗಿ ಸುಸ್ಥಿರವಾದ ಅವಧಿಗೆ ನೀತಿಯನ್ನು ಅನುಷ್ಠಾನಗೊಳಿಸುವುದಕ್ಕೆ ಇರುವ ಸವಾಲುಗಳ ಬಗ್ಗೆ ಮತ್ತು ಆರ್ಥಿಕ ಸ್ಥಿತಿ ಕುಸಿಯುತ್ತಿರುವ ಬಗ್ಗೆ ಹೇಳಲಾಗಿತ್ತು. ಕಳೆದ ತಿಂಗಳ ಆರಂಭದಲ್ಲಿ ಉನ್ನತ ಅಧಿಕಾರಿಗಳು ಅಖಾಡಕ್ಕೆ ಇಳಿದು, ಭಾರತದ ಸಾರ್ವಭೌಮ ರೇಟಿಂಗ್ ಮೇಲ್ನೋಟವನ್ನು ಪ್ರಸ್ತುತ ಇರುವ “ನಕಾರಾತ್ಮಕ” ದೃಷ್ಟಿಕೋನದಿಂದ ಅಪ್‌ಗ್ರೇಡ್ ಮಾಡಲು ಮುಂದಾದರು. ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ.ಸುಬ್ರಮಣಿಯನ್ ಸೇರಿದಂತೆ ಅಧಿಕಾರಿಗಳು ಮೂಡೀಸ್​ ಪ್ರತಿನಿಧಿಗಳನ್ನು ಭೇಟಿ ಮಾಡಿ, ಭಾರತದ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳ ಬಗ್ಗೆ ಚರ್ಚಿಸಿದರು.

ದೇಶದ ವಿದೇಶಿ ಕರೆನ್ಸಿ ಮತ್ತು ಸ್ಥಳೀಯ ಕರೆನ್ಸಿಯ ದೀರ್ಘಾವಧಿಯ ವಿತರಕರ ರೇಟಿಂಗ್‌ಗಳನ್ನು ಮೂಡೀಸ್ ಅತ್ಯಂತ ಕಡಿಮೆ ಹೂಡಿಕೆ ದರ್ಜೆಯಲ್ಲಿವೆ ಎಂದು ದೃಢಪಡಿಸಿದೆ. ಇದು ಭಾರತದ ಇತರ ಅಲ್ಪಾವಧಿಯ ಸ್ಥಳೀಯ ಕರೆನ್ಸಿ ರೇಟಿಂಗ್ ಅನ್ನು P-3ನಲ್ಲಿ ದೃಢಪಡಿಸಿದೆ. ಇನ್ನು ರೇಟಿಂಗ್ ಏಜೆನ್ಸಿಯು ಹೇಳುವಂತೆ, ಭಾರತದ ನೈಜ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಈ ಆರ್ಥಿಕ ವರ್ಷದಲ್ಲಿ 2019ರ ಮಟ್ಟವನ್ನು ಮೀರಿ, ಶೇ 9.3ರ ಬೆಳವಣಿಗೆ ದರಕ್ಕೆ ಮರಳುತ್ತದೆ. ಸರಾಸರಿ ಅವಧಿಯಲ್ಲಿ ಸರಾಸರಿ ಶೇ 6ರಷ್ಟು ಬೆಳವಣಿಗೆ ನಿರೀಕ್ಷಿಸಲಾಗಿದೆ.

ಆ ನಂತರದ ಕೊರೊನಾ ಸೋಂಕಿನ ಅಲೆಗಳಿಂದ ಬೆಳವಣಿಗೆಯ ಕೆಳಮಟ್ಟದ ಅಪಾಯಗಳು ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ ಎರಡನೇ ಅಲೆಯ ಸಮಯದಲ್ಲಿ ಕಂಡುಬಂದಂತೆ ಆಗಲಿಕ್ಕಿಲ್ಲ ಎಂಬ ನಿರೀಕ್ಷೆ ಇದೆ. ಅದಕ್ಕೆ ಕಾರಣ ಏನೆಂದರೆ. ಹೆಚ್ಚುತ್ತಿರುವ ಲಸಿಕೆ ಹಾಕುವ ಪ್ರಮಾಣ ಮತ್ತು ಆರ್ಥಿಕ ಚಟುವಟಿಕೆಯ ಮೇಲಿನ ಆಯ್ದ ನಿರ್ಬಂಧಗಳು. ಭಾರತದ ಜಿಡಿಪಿ ಹಣಕಾಸು ವರ್ಷ 2021-22ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ 20.1ರಷ್ಟು ಏರಿಕೆಯಾಗಿದೆ. ಇದು ಅತ್ಯುತ್ತಮ ತ್ರೈಮಾಸಿಕ ಅಂಕಿ- ಅಂಶವಾಗಿದೆ. ಮುಖ್ಯವಾಗಿ ಕಳೆದ ವರ್ಷ ಕಡಿಮೆ ಜಿಡಿಪಿ ಆಗಿದ್ದರಿಂದ ಇಷ್ಟು ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿದೆ. ಮುಂದಿನ ಕೆಲವು ವರ್ಷಗಳಲ್ಲಿ ಸರ್ಕಾರದ ಸಾಮಾನ್ಯ ಹಣಕಾಸಿನ ಕೊರತೆಯನ್ನು ಕ್ರಮೇಣವಾಗಿ ಕಡಿಮೆ ಮಾಡಲು ಆರ್ಥಿಕ ವಾತಾವರಣವು ಅವಕಾಶ ನೀಡುತ್ತದೆ ಎಂದು ಮೂಡೀಸ್ ಏಜೆನ್ಸಿ ನಿರೀಕ್ಷಿಸಿದೆ. ಇದರಿಂದ ಸವರ್ ಕ್ರೆಡಿಟ್ ಪ್ರೊಫೈಲ್ ಮತ್ತಷ್ಟು ಹದಗೆಡುವುದನ್ನು ತಡೆಯುತ್ತದೆ.

ಭಾರತದ ವಿತ್ತೀಯ ಕೊರತೆಯು 2021ರ ಏಪ್ರಿಲ್​ನಿಂದ ಆಗಸ್ಟ್ ಅವಧಿಯಲ್ಲಿ 4.68 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಇದು ಕೇಂದ್ರ ಬಜೆಟ್ ಅಂದಾಜಿನ ಶೇ 31.1ರಷ್ಟು ಮುಟ್ಟಿದೆ. ಸರ್ಕಾರವು ಸದ್ಯಕ್ಕೆ ತನ್ನ ವಿತ್ತೀಯ ಕೊರತೆಯನ್ನು ಕಳೆದ ವರ್ಷ ಶೇ 9.3ರಷ್ಟು ಇದ್ದದ್ದು ಶೇ 6.8ಕ್ಕೆ ತಗ್ಗಿಸುವ ಗುರಿಯನ್ನು ಹೊಂದಿದೆ. ತನ್ನ ಬಜೆಟ್ ಅಂದಾಜುಗಳಿಗೆ ಅನುಗುಣವಾಗಿ ಕೇಂದ್ರವು ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ 5.03 ಲಕ್ಷ ಕೋಟಿ ಸಾಲ ಪಡೆಯುವುದಾಗಿ ಘೋಷಿಸಿದೆ. 2021-22ರ ಬಜೆಟ್‌ನಲ್ಲಿ ಸರ್ಕಾರವು ತನ್ನ ಪ್ರಸ್ತುತ ಸಾಲದ ಗುರಿಯನ್ನು 12.5 ಲಕ್ಷ ಕೋಟಿ ರೂಪಾಯಿಗೆ ನಿಗದಿಪಡಿಸಿದೆ. ಈ ಮಧ್ಯೆ ಮೇ ತಿಂಗಳಿನಲ್ಲಿ S&P ಗ್ಲೋಬಲ್ ರೇಟಿಂಗ್ಸ್ ಮುಂದಿನ ಎರಡು ವರ್ಷಗಳವರೆಗೆ ಭಾರತದ ಸವರನ್ ರೇಟಿಂಗ್​ನಲ್ಲಿ ಯಾವುದೇ ಬದಲಾವಣೆಯನ್ನು ಕಾಣುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ: ಕೊರೊನಾ ಮೂರನೇ ಅಲೆ, ಸರ್ಕಾರದ ಪ್ಯಾಕೇಜ್, ಷೇರು ಮಾರುಕಟ್ಟೆ ತನಕ ಮುಖ್ಯ ಆರ್ಥಿಕ ಸಲಹೆಗಾರರು ಹೇಳಿದ್ದೇನು?

ತಾಜಾ ಸುದ್ದಿ

Related Stories

Click on your DTH Provider to Add TV9 Kannada