ಭಾರತದ ವಶವಾಗುತ್ತಿರುವ ಇರಾನ್ನ ಚಾಬಹಾರ್ ಪೋರ್ಟ್; ಪಾಕಿಸ್ತಾನ್, ಚೀನಾ ಅಸ್ತ್ರಕ್ಕೆ ಭಾರತದ ಪ್ರತ್ಯಸ್ತ್ರ
Iran's Chabahar port to be managed by India: ಇರಾನ್ನ ಚಾಬಹಾರ್ ಪೋರ್ಟ್ ಅನ್ನು 10 ವರ್ಷ ನಿರ್ವಹಿಸುವ ಗುತ್ತಿಗೆಯನ್ನು ಭಾರತ ಪಡೆಯಲಿದೆ. ಈ ಸಂಬಂಧ ಎರಡೂ ದೇಶಗಳ ಮಧ್ಯೆ ಇಂದು ಒಪ್ಪಂದವಾಗಲಿದೆ. ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ ಅವರು ಇರಾನ್ ದೇಶಕ್ಕೆ ಭೇಟಿ ನೀಡಲಿದ್ದು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಯೋಜನೆಯು ಪಾಕಿಸ್ತಾನದ ಗ್ವಾದರ್ ಪೋರ್ಟ್ ಅನ್ನು ಬಳಸಲಿದೆ. ಅದರ ಸಮೀಪದಲ್ಲೇ ಇರುವ ಚಾಬಹಾರ್ ಪೋರ್ಟ್ ಭಾರತಕ್ಕೆ ಬಹಳ ಮುಖ್ಯವಾಗಿದೆ.
ನವದೆಹಲಿ, ಮೇ 13: ಇರಾನ್ನಲ್ಲಿರುವ ಚಾಬಹಾರ್ ಬಂದರುವನ್ನು (chhabahar port) ಮುಂದಿನ 10 ವರ್ಷ ಕಾಲ ನಿರ್ವಹಣೆ ಮಾಡುವ ಭಾರತಕ್ಕೆ ಅವಕಾಶ ನೀಡುವಂತಹ ಒಪ್ಪಂದ ಆಗಲಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಕೇಂದ್ರ ಹಡಗು ಸಚಿವ ಸರ್ಬಾನಂದ ಸೋನೋವಾಲ್ (Central shipping minister Sarbanand Sonowal) ಅವರು ಇಂದು ಸೋಮವಾರ ಇರಾನ್ಗೆ ತೆರಳುತ್ತಿದ್ದಾರೆ. ಚಾಬಹಾರ್ ಪೋರ್ಟ್ ಸಂಬಂಧ ಇಂದೇ ಎರಡೂ ದೇಶಗಳ ಮಧ್ಯೆ ಒಪ್ಪಂದಕ್ಕೆ ಸಹಿ ಬೀಳಲಿದೆ. ಈ ಬೆಳವಣಿಗೆ ಆಗಿದ್ದೇ ಆದಲ್ಲಿ ಇದೊಂದು ಮಹತ್ವದ ಐತಿಹಾಸಿಕ ನಡೆಯಾಗಿರುತ್ತದೆ. ಭಾರತದ ಅಂತಾರಾಷ್ಟ್ರೀಯ ವಹಿವಾಟಿಗೆ (international trade) ಇದು ಪುಷ್ಟಿ ಕೊಡಲಿದೆ. ವಿದೇಶದಲ್ಲಿರುವ ಪೋರ್ಟ್ವೊಂದರ ಮ್ಯಾನೇಜ್ಮೆಂಟ್ ಅನ್ನು ಭಾರತ ಇದೇ ಮೊದಲ ಬಾರಿಗೆ ಪಡೆಯಲಿರುವುದು.
ಇರಾನ್ನ ಚಾಬಹಾರ್ ಪೋರ್ಟ್ ಭಾರತಕ್ಕೆ ಯಾಕೆ ಮುಖ್ಯ?
ಮಧ್ಯ ಏಷ್ಯನ್ ದೇಶಗಳು, ಯೂರೋಪ್ಗಳೊಂದಿಗೆ ಭಾರತ ವ್ಯಾಪಾರ ವಹಿವಾಟು ನಡೆಸಲು ಸರಕು ಸಾಗಣೆ ಮಾರ್ಗ ಬಹಳ ಮುಖ್ಯ. ಇದರಲ್ಲಿ ಬಂದರುಗಳು ಮಹತ್ವದ ಪಾತ್ರ ವಹಿಸುತ್ತವೆ. ಸಮುದ್ರ ಮಾರ್ಗ ಮತ್ತು ನೆಲ ಮಾರ್ಗಗಳ ಮೂಲಕ ಸರಕು ಸಾಗಣೆ ಆಗುತ್ತದೆ. ಮಧ್ಯ ಏಷ್ಯನ್ ದೇಶಗಳನ್ನು ತಲುಪಲು ಭಾರತಕ್ಕೆ ಈಗ ಚಾಬಹಾರ್ ಪೋರ್ಟ್ ಸಹಾಯವಾಗುತ್ತದೆ.
ಇರಾನ್ನ ದಕ್ಷಿಣ ಭಾಗದಲ್ಲಿರುವ ಚಾಬಹಾರ್ ಪೋರ್ಟ್ ಮತ್ತು ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ಗ್ವಾದರ್ ಪೋರ್ಟ್ ಎರಡೂ ಬಹಳ ಸಮೀಪ ಇದೆ. ಗ್ವಾದರ್ ಪೋರ್ಟ್ ಚೀನಾದ ಮಹತ್ವಾಕಾಂಕ್ಷೆಯ ಬಿಆರ್ಐ ಯೋಜನೆಯ ಭಾಗವಾಗಿದೆ. ಭಾರತಕ್ಕೆ ಪರ್ಯಾಯ ಆಯ್ಕೆ ಎದರೆ ಚಾಬಹಾರ್ ಪೋರ್ಟ್. ಆಫ್ಘಾನಿಸ್ತಾನ್ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳನ್ನು ತಲುಪಲು ಈ ಪೋರ್ಟ್ ಸಹಕಾರಿ ಆಗುತ್ತದೆ.
ಇದನ್ನೂ ಓದಿ: ಷೇರುಪೇಟೆ ರಕ್ತದೋಕುಳಿ ಮಧ್ಯೆ ಶೇ. 45ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆದ ಬೆಂಗಳೂರಿನ ಇಂಡಿಜೀನ್ ಷೇರು
ಭಾರತ, ಸೌದಿ ಮತ್ತಿತರ ದೇಶಗಳು ಕೈಗೊಂಡಿರುವ ಇಂಟರ್ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್ಪೋರ್ಟ್ ಕಾರಿಡಾರ್ ಯೋಜನೆಯಲ್ಲಿ ಚಾಬಹಾರ್ ಕೂಡ ಸೇರ್ಪಡೆಯಾಗಬಹುದು. ಇರಾನ್ ಮೂಲಕ ರಷ್ಯಾ ಮತ್ತು ಭಾರತಕ್ಕೆ ಈ ಪೋರ್ಟ್ ಕೊಂಡಿಯಾಗಲಿದೆ. ಭಾರತವು ಅಫ್ಗಾನಿಸ್ತಾನಕ್ಕೆ ಹೋಗಬೇಕೆಂದರೆ ಪಾಕಿಸ್ತಾನದ ಮೂಲಕ ಹಾದುಹೋಗಬೇಕಿತ್ತು. ಈಗ ನೇರವಾಗಿ ಚಾಬಹಾರ್ ಪೋರ್ಟ್ಗೆ ಹೋಗಿ ಅಲ್ಲಿಂದ ಅಫ್ಗಾನಿಸ್ತಾನಕ್ಕೆ ಹೋಗಬಹುದು. ಬೇರೆ ಮಧ್ಯ ಏಷ್ಯನ್ ದೇಶಗಳನ್ನೂ ತಲುಪಬಹುದು.
ಹಲವು ವರ್ಷಗಳ ನಿರಂತರ ಮಾತುಕತೆಯ ಫಲಶೃತಿ ಚಾಬಹಾರ್ ಪೋರ್ಟ್
2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್ಗೆ ಭೇಟಿ ನೀಡಿದಾಗ ಚಾಬಹಾರ್ ಪೋರ್ಟ್ ನಿರ್ವಹಣೆ ಸಂಬಂಧ ಒಪ್ಪಂದ ಆಗಿತ್ತು. ಆ ಒಪ್ಪಂದದ ಪ್ರಕಾರ ಚಾಬಹಾರ್ ಪೋರ್ಟ್ನಲ್ಲಿರುವ ಶಾಹಿದ್ ಬೆಹೇಶ್ಟಿ ಟರ್ಮಿನಲ್ನ ನಿರ್ವಹಣೆಗೆ ಮಾತ್ರವೇ ಅವಕಾಶ ನೀಡಲಾಗಿತ್ತು. ಇದೀಗ ಇಡೀ ಬಂದರನ್ನು ಭಾರತವೇ 10 ವರ್ಷ ನಿರ್ವಹಿಸಲಿದೆ. ಮೂಲ ಒಪ್ಪಂದಂತೆ ಪ್ರತೀ ವರ್ಷ ನವೀಕರಿಸುವ ಅವಶ್ಯಕತೆ ಇರುವುದಿಲ್ಲ.
ಇದನ್ನೂ ಓದಿ: ರಷ್ಯಾದಿಂದ ಭಾರತ ಕಡಿಮೆ ಬೆಲೆಗೆ ತೈಲ ಖರೀದಿಸಲು ಅಮೆರಿಕ ಯಾಕೆ ಆಕ್ಷೇಪಿಸಲಿಲ್ಲ? ಇಲ್ಲಿದೆ ಅದರ ರಾಯಭಾರಿ ಕೊಟ್ಟ ಉತ್ತರ
ಕಜಕಸ್ತಾನ್, ಉಜ್ಬೆಕಿಸ್ತಾನ್ ಇತ್ಯಾದಿ ಸೆಂಟ್ರಲ್ ಏಷ್ಯನ್ ದೇಶಗಳು ಸದ್ಯ ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಕಷ್ಟವಾಗುತ್ತಿದೆ. ಈಗ ಚಾಬಹಾರ್ ಪೋರ್ಟ್ ಸಿದ್ಧವಾದಲ್ಲಿ ಭಾರತದ ಜೊತೆ ವ್ಯಾಪಾರ ವಹಿವಾಟು ನಡೆಸಲು ಅವುಗಳಿಗೆ ಸುಲಭವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ