ಸ್ವಾತಂತ್ರ್ಯ ಬಂದಾಗ ಭಾರತದ ಆರ್ಥಿಕತೆ ಹೇಗಿತ್ತು? ಬ್ರಿಟಿಷರು ಬರುವ ಮುನ್ನ ಹೇಗಿತ್ತು?
Indian economy before Independence and before British rule: ಬ್ರಿಟಿಷರು ಭಾರತೀಯರಿಗೆ ಇಂಗ್ಲೀಷ್ ಭಾಷೆ ಕಲಿಸಿ ಹೋದರು. ಆಧುನಿಕತೆಯನ್ನು ತೋರಿಸಿದರು ಎಂದು ಹೇಳುವವರ ಮಾತುಗಳನ್ನು ಕೇಳಿರಬಹುದು. ಆದರೆ, ವಾಸ್ತವವಾಗಿ ಬ್ರಿಟಿಷರು ಬರುವ ಮುನ್ನ ಭಾರತದ ಪರಿಸ್ಥಿತಿ ಹೇಗಿತ್ತು? ಬ್ರಿಟಿಷರು ಬಂದ ಮೇಲೆ ಏನಾಯಿತು? ಅವರು ಭಾರತವನ್ನು ವಿಭಜಿಸಿ ಬಿಟ್ಟು ಹೋದಾಗ ಏನಾಗಿತ್ತು? ಇವೆಲ್ಲಾ ವಿವರ ಸಂಕ್ಷಿಪ್ತವಾಗಿ ಇಲ್ಲಿದೆ...
ಭಾರತ ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಅತಿವೇಗದಲ್ಲಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ನಮ್ಮನ್ನು ಇನ್ನೂರು ವರ್ಷ ಆಳ್ವಿಕೆ ಮಾಡಿದ ಬ್ರಿಟಿಷರನ್ನು ಆರ್ಥಿಕತೆಯಲ್ಲಿ ಹಿಂದಿಕ್ಕಿದ್ದೇವೆ. ಹಲವು ರಂಗಗಳಲ್ಲಿ ನಮ್ಮ ಬೆಳವಣಿಗೆ ಬಹಳ ಮಜಭೂತಾಗಿ ಆಗುತ್ತಿದೆ. ಇದೇ ಹೊತ್ತಲ್ಲಿ, ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ 1947ರಲ್ಲಿ ಮತ್ತು ಅದಕ್ಕೆ ಮುಂಚೆ ದೇಶದ ಆರ್ಥಿಕ ಪರಿಸ್ಥಿತಿ ಹೇಗಿತ್ತು? ಬ್ರಿಟಿಷರು ಬರುವ ಮುನ್ನ ಹೇಗಿತ್ತು ಎಂಬಿತ್ಯಾದಿ ಕುತೂಹಲದ ಪ್ರಶ್ನೆಗಳು ಯಾರಿಗಾದರೂ ಕಾಡುತ್ತಿರಬಹುದು.
ಬ್ರಿಟಿಷರು ಬರುವ ಮುನ್ನ ಹೇಗಿತ್ತು ಭಾರತ?
18ನೇ ಶತಮಾನದಲ್ಲಿ ಭಾರತದಲ್ಲಿ ಬ್ರಿಟಿಷರ ಪ್ರಾಬಲ್ಯ ಶುರುವಾಯಿತು. 19ನೇ ಶತಮಾನದಲ್ಲಿ ಪೂರ್ಣವಾಗಿ ಬ್ರಿಟಿಷರ ಆಳ್ವಿಕೆ ಆರಂಭವಾಯಿತು. ಇವರ ಆಳ್ವಿಕೆ ಆರಂಭವಾಗುವ ಮುನ್ನ ಭಾರತ ಅಂದಿನ ಕಾಲದಲ್ಲಿ ವಿಶ್ವದ ಪ್ರಮುಖ ಆರ್ಥಿಕತೆಯ ದೇಶವಾಗಿತ್ತು. ಇಲ್ಲಿಯ ಜವಳಿ ಉದ್ಯಮ, ಲೋಹ, ಹವಳಗಳಿಗೆ ಜಾಗತಿಕವಾಗಿ ಒಳ್ಳೆಯ ಮಾರುಕಟ್ಟೆ ಇತ್ತು. ಬೇರೆ ಕೆಲ ವಲಯಗಳಲ್ಲಿ ಭಾರತ ಬೆಳವಣಿಗೆ ಹೊಂದಿತ್ತು. ಭಾರತದ ಕರಕುಶಲ ಉದ್ಯಮ ಹುಲುಸಾಗಿ ಬೆಳೆದಿತ್ತು.
ಇದನ್ನೂ ಓದಿ: ಆ. 15ಕ್ಕೆ ಷೇರು ಮಾರುಕಟ್ಟೆಗೆ ರಜೆಯಾ? ಇಲ್ಲಿದೆ ಎನ್ಎಸ್ಇ, ಬಿಎಸ್ಇ ರಜಾ ದಿನಗಳ ಪಟ್ಟಿ
ಬ್ರಿಟಿಷರಿಂದ ಹಾನಿ ಆಗಿದ್ದೇನು?
18ನೇ ಶತಮಾನ ಜಾಗತಿಕವಾಗಿ ಕೈಗಾರಿಕೆಗಳ ಕ್ರಾಂತಿಯ ಕಾಲ ಘಟ್ಟವಾಗಿತ್ತು. ಬ್ರಿಟನ್ನಲ್ಲೂ ಕೈಗಾರಿಕಾ ಕ್ರಾಂತಿ ನಡೆದಿತ್ತು. ಅಲ್ಲಿನ ಕೈಗಾರಿಕೆಗಳಿಗೆ ಪುಷ್ಟಿ ನೀಡಲು ಭಾರತವನ್ನು ಬ್ರಿಟಿಷರು ಬಳಸಿಕೊಂಡರು. ಇಲ್ಲಿಂದ ಕಚ್ಛಾ ವಸ್ತುಗಳನ್ನು ಕೊಳ್ಳೆ ಹೊಡೆದು ಬ್ರಿಟನ್ನ ಕೈಗಾರಿಕೆಗಳಿಗೆ ಪೂರೈಸಲಾಗುತ್ತಿತ್ತು. ಚಿನ್ನ ಇತ್ಯಾದಿ ಯಾವುದನ್ನೂ ಬ್ರಿಟಿಷರು ಬಿಡಲಿಲ್ಲ.
ಇಷ್ಟು ಮಾತ್ರವಲ್ಲ, ಭಾರತದಿಂದ ಸಾಗಿಸಲಾದ ಕಚ್ಛಾ ವಸ್ತುಗಳನ್ನು ಬಳಸಿ ಬ್ರಿಟನ್ ಕೈಗಾರಿಕೆಗಳು ತಯಾರಿಸಿದ ಉತ್ಪನ್ನಗಳು ಭಾರತದ ಮಾರುಕಟ್ಟೆಗೆ ಬರತೊಡಗಿದವು. ಇವು ಸ್ಥಳೀಯ ಕರಕುಶಲ ಉದ್ದಿಮೆಗಳನ್ನು ನಾಶ ಮಾಡಿದವು.
ಭಾರತದ ಸಂಪತ್ತನ್ನೆಲ್ಲಾ ಬ್ರಿಟಿಷರು ದೋಚಿದರು. ಬರೀ ದಾರಿದ್ರ್ಯವೇ ನೆಲಸುವಂತೆ ಮಾಡಿದರು. ಭಾರತವನ್ನು ಬಿಟ್ಟು ಹೋಗುವಷ್ಟರಲ್ಲಿ ಬ್ರಿಟಿಷರು ಸಾಕಷ್ಟು ಹಿಂಡಿ ಹಿಪ್ಪೆ ಮಾಡಿಟ್ಟಿದ್ದರು.
ಇದನ್ನೂ ಓದಿ: ಭಾರತವನ್ನು ವಿಭಜನೆ ಮಾಡಿದ ಹೊಣೆ ಯಾರಿಗೆ ನೀಡಬೇಕು?
ಗಾಯದ ಮೇಲೆ ಬರೆ ಎಳೆದಂತೆ ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯ ನೀಡುವಾಗ ದೇಶದ ವಿಭಜನೆ ಮಾಡಿದರು. ಪಾಕಿಸ್ತಾನ ಪ್ರತ್ಯೇಕ ದೇಶವಾಯಿತು. ವಿಪರ್ಯಾಸ ಎಂದರೆ ಆಗಿನ ಬಹಳ ಫಲವತ್ತಾದ ನೆಲವು ಭಾರತದ ಕೈತಪ್ಪಿತ್ತು. ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದ ಸೆಣಬು ಅಥವಾ ಜೂಟ್ ಮ್ಯಾನುಫ್ಯಾಕ್ಚರಿಂಗ್ ಉದ್ಯಮ ಬಹುತೇಕ ಇಂದಿನ ಬಾಂಗ್ಲಾದೇಶದಲ್ಲಿ ನೆಲಸಿತ್ತು. ವಿಭಜನೆಯಾದಾಗ ಇದೂ ಹೋಯಿತು.
ಅಂತಿಮವಾಗಿ ಅರೆಜೀವದಲ್ಲಿದ್ದ ಆರ್ಥಿಕತೆಯನ್ನು ಬ್ರಿಟಿಷರು ಭಾರತೀಯರ ಕೈಗಿತ್ತು ಹೋಗಿದ್ದರು. ಕೈಗಾರಿಕೀಕರಣದ ಅವಕಾಶ ಬಿಟ್ಟರೆ ಭಾರತಕ್ಕೆ ಆಶಾದಾಯಕ ಎನಿಸುವ ದೃಶ್ಯ ಕಣ್ಮುಂದೆ ಇರಲಿಲ್ಲ. ಎಲ್ಲವನ್ನೂ ಆರಂಭದಿಂದ ಬೆಳೆಸಬೇಕಾದ ಸ್ಥಿತಿ ಸ್ವತಂತ್ರ ಭಾರತಕ್ಕೆ ಬಂದಿತ್ತು. ನಿಧಾನವಾದರೂ ಭಾರತ ಕ್ರಮೇಣವಾಗಿ ಬೆಳವಣಿಗೆ ಹೊಂದುತ್ತಾ ಬಂದು, ಇವತ್ತು ವಿಶ್ವದ ಅಗ್ರ ಆರ್ಥಿಕತೆಯ ದೇಶಗಳ ಸಾಲಿನಲ್ಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ